Sunday, August 7, 2016

ದೆವ್ವದ ಕಾರು !! -೨

ಅಂದರೆ , ಕಾರು ನಿಂತಿದ್ದು ಹೊಸ್ಮಾರಿನಲ್ಲೇ !! ನಾನು ಹೊಸ್ಮಾರು ತಲುಪುವ ವರೆಗೂ ದೆವ್ವ ನನ್ನನ್ನು ಇಳಿಯಲು ಬಿಡಲಿಲ್ಲ .. ಮಳೆಗೆ ಒದ್ದೆಯಾದ ದೇಹ ಬೆವರಿನಲ್ಲೂ ಒದ್ದೆಯಾಗತೊಡಗಿತ್ತು ! ಸೇಸ ಕುಡಿಯಲು ನೀರು ಕೊಟ್ಟ .. ಆ ಒದ್ದೆ ಬಟ್ಟೆಯಲ್ಲಿಯೇ ನೀರು ಕುಡಿದು ಸುಧಾರಿಸಿಕೊಂಡೆ .. ಸೇಸ ಕೊಟ್ಟ ಬಟ್ಟೆಯಲ್ಲಿ ಮೈ ಒರೆಸಿಕೊಂಡೆ !!
"ಏನಾಯಿತು ಭಟ್ರೇ ? ಅಮೆರಿಕಾದಿಂದ ಯಾವಾಗ ಬಂದ್ರಿ " ಸೇಸನ ಪ್ರಶ್ನೆಗೆ ಮೆಲ್ಲನೆ ತಲೆ ಎತ್ತಿ ನೋಡಿದೆ .. ಸುತ್ತಲೂ ಅಂಧಕಾರ .. ಉರಿಯುತ್ತಿದ್ದ ಬಲ್ಬಿನ ಬೆಳಕಿನಲ್ಲಿ ೪ ಮುಖಗಳು ಕಂಡವು ..ಒಬ್ಬ ಸೇಸ , ಇನ್ನೊಬ್ಬ ಬಹುಶ ಈಶ್ವರ ಭಟ್ಟರ ಮಗ ಇರಬೇಕು .. ಇನ್ನಿಬ್ಬರು ಯಾರೆಂದು ತಿಳಿಯಲಿಲ್ಲ  ಅಲ್ಲೇ ಬಿದ್ದಿದ್ದ ಇಸ್ಪೀಟು ಎಲೆಗಳು, ಒದ್ದೆಯಾಗಿದ್ದ ನೆಲ , ಮೈಯಿಂದ ಅಲ್ಲಲ್ಲಿ ತರಚಿ ಒಸರುತ್ತಿದ್ದ ರಕ್ತ ..
"ಈಗಷ್ಟೇ ಬರ್ತಾ ಇದ್ದೀನಿ ಸೇಸ " ಹೇಳಿದವನಿಗೆ ನೆನಪಾಗಿತ್ತು .. ನನ್ನ ಚೀಲಗಳು !! ಅವು ಕಾರಿನಲ್ಲಿಯೇ ಉಳಿದಿವೆ .. ಮತ್ತಷ್ಟು ಗಾಬರಿಯಾಯಿತು !!!


ನನ್ನ ಗಾಬರಿ ಗಮನಿಸಿದ ಸೇಸ "ಹೆದರಬೇಡಿ ಭಟ್ರೆ .. ಬಹುಶ ರಾತ್ರಿ ಮಳೆ ಗುಡುಗಿಗೆ ಹೆದರಿ ಕೊಂಡಿದ್ದೀರಿ .. ಚಾ ಕೊಡಲೇ" ಕೇಳಿದ .. ಬೇಡ ಅಂದೆ ..
"ಅದು ಆ ದೆವ್ವದ ಕಾರು , ನನ್ನ ಚೀಲಗಳು ಅದರಲ್ಲಿಯೇ ಉಳಿದಿವೆ "... ನನ್ನ ಮಾತು ಕೇಳಿ ಎಲ್ಲರೂ ಬೆಚ್ಚಿ ಬಿದ್ದರು ..
"ದೆವ್ವದ ಕಾರೇ " ಅವರಲ್ಲೊಬ್ಬನ ಕೈಯಲ್ಲಿದ್ದ ಟಾರ್ಚು ಲೈಟು ಕೆಳಗೆ ಬಿದ್ದು  ಒಡೆದು ಹೋಗಿತ್ತು !!
೨-೩ ನಿಮಿಷ ಯಾರಲ್ಲೂ ಮಾತಿಲ್ಲ .. ಅಷ್ಟರಲ್ಲೇ ಯಾರೋ ಬಂದು ಕೈಗೆ ಚಾ ಕೊಟ್ಟರು .. ಏನು ಹೇಳಬೇಕೆಂದೇ ಅರ್ಥ ವಾಗಲಿಲ್ಲ .. ಅಷ್ಟರಲ್ಲೇ ಸೇಸ ಯಾರಿಗೋ ಫೋನ್ ಮಾಡತೊಡಗಿದ್ದ .. "ಭಟ್ರೆ , ನಿಮ್ಮ ತಮ್ಮ ಬಂದಿದ್ದಾರೆ ".. ಒಹ್ .. ಆತ ಫೋನ್ ಮಾಡುತ್ತಿದ್ದಿದು ನಮ್ಮ ಅಣ್ಣನಿಗೆ !! ಏನೇನೊ ಆಲೋಚನೆಗಳು ತಲೆಯಲ್ಲಿ ಓಡಾಡತೊಡಗಿದವು .. ಅಷ್ಟರಲ್ಲಿ ೧ ಗಂಟೆ ಎಂದು ಘಡಿಯಾರ ಜೋರಾಗಿ ಬಡಿದುಕೊಂಡಿತ್ತು .. ಮೆಲ್ಲನೆ ಮೊಬೈಲ್ ನೋಡಿದೆ .. ಘಂಟೆ ೧.೩೦ ಆಗಿತ್ತು ... ಸ್ವಲ್ಪ ಹೊತ್ತಿನಲ್ಲೇ ಹೊರಗಡೆ ಜೀಪು ಬಂದು ನಿಂತ ಶಬ್ದ !! ಅಣ್ಣನನ್ನು ನೋಡಿ ಅಳು ಬರುವುದೊಂದೇ ಬಾಕಿ .. ೧೦ ವರ್ಷಕ್ಕೆ ಹಿಂದೆ ಹೇಗಿದ್ದನೋ ಹಾಗೆ.. ಸ್ವಲ್ಪ ಕೂದಲು ಬಿಳಿಯಾಗಿದೆ , ಕನ್ನಡಕ ಬಂದಿದೆ .. ಅದು ಬಿಟ್ಟು ಇನ್ಯಾವ ವ್ಯತ್ಯಾಸವೂ ಇಲ್ಲ .. ನನ್ನನ್ನ ನೋಡಿ ಖಿಷಿಯಿಂದ ನಿಂತಲ್ಲೇ ನಿಂತು ಬಿಟ್ಟ ..
"ಯಾಕೋ ತುಂಬಾ ಹೆದರಿಕೊಂಡಿದ್ದಾರೆ .. ಏನೋ ದೆವ್ವ ನೊಡಿದ್ರಂತೆ " ಸೇಸ ಅಣ್ಣನಿಗೆ ಅದೇನೋ ಹೇಳುತ್ತಿದ್ದ .. ನನಗೆ ಸುಧಾರಿಸಲು ಗಂಟೆಯೇ ತಗುಲಿತ್ತು .. ನಿಧಾನಕ್ಕೆ ನಡೆದುದೆಲ್ಲವನ್ನೂ ಹೇಳಿದೆ .. ನನ್ನ ಮಾತು ಪೂರ್ತಿಯಾಗುವ ವರೆಗೂ ಕೇಳಿಸಿಕೊಂಡರು !!
"ಕುಯ್ ಕುಯ್ " ನನ್ನ ಮೊಬೈಲ್ನಲ್ಲಿ ಸಂದೇಶ ಬಂದ ಶಬ್ದ .. ನಡುಗುವ ಕೈಗಳಿಂದಲೇ ಮೆಲ್ಲನೆ ತೆರೆದು ನೋಡಿದೆ .. ೪೮೦ ರೂಪಾಯಿ ನಿಮ್ಮ ಮೊಬೈಲ್ ಬ್ಯಾಲೆನ್ಸ್ ನಿಂದ ಕಡಿತವಾಗಿದೆ ಅನ್ನುವ ಸಂದೇಶ !!


ಮರು ಕ್ಷಣ "ಹಹಹಹಹಹಹಹ " ಇದ್ದ ಮಂದಿಯೆಲ್ಲ ಬಿದ್ದು ಬಿದ್ದು ನಗುತ್ತಿದ್ದರು !! "ಅದು ದೆವ್ವದ ಕಾರಲ್ಲ ಭಟ್ರೇ ಅದು ನಮ್ಮ ಗಂಗಾಧರನ ಟ್ಯಾಕ್ಸಿ"  ಸೇಸನ ಮಾತು ಕೇಳಿ ಅರ್ಥವೇ ಆಗಲಿಲ್ಲ !!
"ಅದೇ ಭಟ್ರೇ , ಗೂಗಲ್ ಡ್ರೈವರ್ ಲೆಸ್ ಕಾರ್ ಅಂತ ಕೇಳಿಲ್ವೇ ? ನಿಮ್ಮ ಅಮೆರಿಕಾದಲ್ಲಿ ಇಲ್ವೇ? ನಮ್ಮ ಗಂಗಾಧರ ಇಂತಹ ೧೫ ಟ್ಯಾಕ್ಸಿ ಹಾಕಿದ್ದಾನೆ ಮಾರ್ರೆ .. ನಮ್ಮ ದೇಶ ತುಂಬಾ ಮುಂದೆ ಹೋಗಿದೆ.. ಯಾವುದಕ್ಕೂ ನಾಳೆ ಒಂದ್ಸಾರಿ ತಿರುಗಾಡಿ ನಿಮಗೆ ಗೊತ್ತಾಗುತ್ತೆ .. ಆಮೇಲೆ ನಿಮಗೆ ಅಮೇರಿಕಾ ಬೇಡ ನಮ್ಮ ದೇಶವೇ ಆದೀತು ಅಂತ ಅನ್ನಿಸಬಹುದು ನೋಡಿ  " ಹೇಳುತ್ತಿದ್ದ ಸೇಸ ಕೂಡ ದೆವ್ವದಂತೆ ಕಂಡಿದ್ದ .. ಮೆಲ್ಲನೆ ಎದ್ದು ಜೀಪಿನಲ್ಲಿ ಕೂತೆ .. "ಗಂಗಾಧರರೇ ನಿಮ್ಮ ಒಂದು ಟ್ಯಾಕ್ಸಿಯಲ್ಲಿ ನನ್ನ ೨ ಚೀಲಗಳು ಉಳಿದಿವೆ ನಾಳೆ ತಲುಪಿಸುತ್ತೀರಾ " ಅಣ್ಣ ಫೋನಿನಲ್ಲಿ ಕೇಳುತ್ತಿದ್ದ .. ಆತನನ್ನು ಮಧ್ಯದಲ್ಲಿಯೇ ತಡೆದು "ಈ ಜೀಪ್ ಕೂಡ ಡ್ರೈವರ್ ಲೆಸ್ಸಾ " ಕೇಳಿದೆ .. ಈ ಬಾರಿ ಜೀಪು ಅಣ್ಣ ಚಲಾಯಿಸುತ್ತಿದ್ದ .. ನಾನು ಕಣ್ಣು ಮುಚ್ಚಿಕೊಂಡೆ !!






ಗೋರೆ ಉವಾಚ :  ನಿಮ್ಮಷ್ಟೇ ಒಳ್ಳೆಯ ಹಾಗೂ ನಿಮ್ಮಷ್ಟೇ ಕೆಟ್ಟ ಸ್ನೇಹಿತರು ನಿಮಗೆ ಇದ್ದಾರೆ ಎಂದಾದರೆ ನೀವು ಅದೃಷ್ಟವಂತರೇ ಸರಿ !!

1 comment:

sunaath said...

ಅಬ್ಬಾ! ಹೆದರಿಕೆಯಲ್ಲ ಕರಗಿ, ಮನಸ್ಸು ನಿರಾಳವಾಯಿತು!