Thursday, January 28, 2010

ಗಡಂಗ್ ರದ್ದಾವಡ್ !!!!

ಅವಲಕ್ಕಿ ಬಾಬು... ಆತನ ನಿಜವಾದ ಹೆಸರು ಏನು ಅಂತ ಗೊತ್ತಿಲ್ಲ... ಆದರೆ ಎಲ್ಲರೂ ಆತನನ್ನು ಬಜಿಲ್ ಬಾಬು ಅಂತ ಕರೆಯುತ್ತಿದ್ದರು.. ಅಂದ ಹಾಗೆ ಬಜಿಲ್ ಅಂದ್ರೆ ತುಳು ಭಾಷೆಯಲ್ಲಿ ಅವಲಕ್ಕಿ ಅಂತ ಅರ್ಥ.. ಈತ ನಮ್ಮ ಊರಿನ ಒಬ್ಬ ವಿದೂಷಕ ಇದ್ದಂತೆ... ದಿನ ಕೂಲಿ ಮಾಡಿಕೊಂಡು, ದುಡಿದ ದುಡ್ಡನ್ನು ಅರ್ಧ ಮನೆಗೂ ಅರ್ಧ ಶರಾಬು ಅಂಗಡೀಗೂ  ಹಾಕುತ್ತಿದ್ದ... ಮಾತಿನಲ್ಲಿ ಭಾರಿ ಜಾಣ.. ಆತ ಸಂಜೆಯ ಹೊತ್ತಿಗೆ ಶರಾಬು ಕುಡಿದು ತೂರಾಡುತ್ತ ಅದೇನೇನೋ ಮಾತಾಡಿಕೊಂಡು ತಿರುಗುತ್ತಿದ್ದುದು ಸಾಮನ್ಯ.. ಆದರೆ ಮರುದಿನ ಆತನಿಗೆ ಕೇಳಿದರೆ ಆತ ಏನು ಮಾಡಿದ್ದೂ ನೆನಪಿರುತ್ತಿರಲಿಲ್ಲ..ಅಥವಾ ಹಾಗೆ ಮಾಡುತ್ತಿದ್ದನೋ ಗೊತ್ತಿಲ್ಲ...


ಹಾಗಿರಲೊಂದು ದಿನ ನಮ್ಮ ಊರಿಗೆ ಕಾಲಿಟ್ಟಿದ್ದೆ ಮದ್ಯಪಾನ ವಿರೋಧಿ ಚಳುವಳಿ...ತುಂಬಾ ಮಂದಿ ಅದರಲ್ಲಿ ಭಾಗವಹಿಸಿದ್ದು, ನಮ್ಮ ಅವಲಕ್ಕಿ ಬಾಬು ಕೂಡ ಸೇರಿ ಕೊಂಡಿದ್ದಾನೆ ಅನ್ನೋ ಸುದ್ದಿ ಬಂತು.. ಕೆಲವು ದಿನ ಕಳೆದವು.. ಆವತ್ತು ಈ ಮದ್ಯಪಾನ ವಿರೋಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ.. ಕಾರ್ಯಕ್ರಮ ಎಲ್ಲಾ ಮುಗಿದು ಎಲ್ಲರೂ ಘೋಷಣೆ ಕೂಗುತ್ತಿದ್ದರು... "ಗಡಂಗ್ ರದ್ದಾವಡ್, ಗಡಂಗ್ ರದ್ದಾವಡ್" (ಗಡಂಗ್ == ಶರಾಬು ಅಂಗಡಿ, ರದ್ದಾವಡ್==ರದ್ದಾಗಲಿ ಅಂತ ಅರ್ಥ) ಹಾಗಂತ ಎಲ್ಲರೂ ಅರಚಿದ್ದೆ ಅರಚಿದ್ದು..


ಕಾರ್ಯಕ್ರಮವೆಲ್ಲಾ ಮುಗಿದು ಸಂಜೆ ಆಯಿತು... ಸ್ವಲ್ಪ ಹೊತ್ತಿನಲ್ಲೇ ನಮ್ಮ ಬಜಿಲ್ ಬಾಬು ಶರಾಬು ಅಂಗಡಿಯಲ್ಲಿ ಪ್ರತ್ಯಕ್ಷ ನಾಗಿದ್ದ..."ಏನಯ್ಯ ಬಾಬು ಗಡಂಗ್ ರದ್ದಾವಡ್,ಗಡಂಗ್ ರದ್ದಾವಡ್ ಅಂತ ಭಾರಿ ಅರಚಿಕೊಳ್ತಿದ್ದೆ, ಈಗ್ಯಾಕೆ ಬಂದೆ ಇಲ್ಲಿಗೆ?" ಅದ್ಯಾರೋ ಕೇಳಿದ್ದಕ್ಕೆ ತಾನು ಹಾಗೆ ಹೇಳಲೇ ಇಲ್ಲ , ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಅಂತ ಬಜಿಲ್ ಬಾಬು ವಾದಿಸಿದ.. ನಾನು ಅರಚಿಕೊಂಡಿದ್ದು ಶರಾಬು ಅಂಗಡಿಗೆ ಬೆಂಬಲವಾಗಿ ಅಂತ ಆತನ ಅಳಲು .." ಅಲ್ಲ ಅದ್ಹೇಗೆ ಆಗ್ತದೆ? ನೀನೂ ಹೇಳಿದ್ದು ಗಡಂಗ್ ರದ್ದಾವಡ್ ಅಂತ ತಾನೇ ? ಅದು ನಮಗೆ ಹೇಗೆ ಬೆಂಬಲ ವಾಗ್ತದೆ" ಒಬ್ಬ ಕುಡುಕ ತರಾಟೆಗೆ ತೆಗೆದುಕೊಂಡ... "ಅಯ್ಯೋ ಸ್ವಾಮೀ, ನೀವೇನ್ ಅರಚಿಕೊಂಡ್ರೋ ನಂಗೊತ್ತಿಲ್ಲ .. ನಾನು ಮಾತ್ರ ಬೊಬ್ಬೆ ಹೊಡೆದದ್ದು ಗಡಂಗ್ ರಡ್ದಾವಾಡ್,   ಗಡಂಗ್ ರಡ್ದಾವಾಡ್ ಅಂತ" (ತುಳುವಿನಲ್ಲಿ ರಡ್ಡ್ ಅಂದ್ರೆ ಎರಡು. ಅಂದ್ರೆ ಆತ ಹೇಳಿದ್ದು ಗಡಂಗ್ ಯೆರಡಾಗ್ಲಿ !!)  ಆತನ ಮಾತಿಗೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದರೆ, ಶರಾಬು ಅಂಗಡಿಯಾತ ಆತನ ಬುದ್ಧಿಮತ್ತೆಗೆ ಬಹುಮಾನವಾಗಿ  ಆವತ್ತಿನ ಶರಾಬು ಉಚಿತವಾಗಿ ನೀಡಿದ್ದ!!!

ಚಿತ್ರಕೃಪೆ : ಅಂತರ್ಜಾಲ

Friday, January 22, 2010

ಶೇಕ್ ಅಬ್ದುಲ್ಲ ಮತ್ತು ಸದಾನಂದ!!!

ಆಗಷ್ಟೇ ನಾವು ಗೋವಾ ದಿಂದ ಹಿಂದುರಿಗಿದ್ದೆವು... ಮಧ್ಯಾನ್ನದ ಸುಮಾರು ೧ ಘಂಟೆ.. ಮನೆಗೆ ಬಂದವರೇ  ಸ್ನಾನ ಮಾಡಿ ಊಟಕ್ಕೆ ಅಡುಗೆ ರಾತ್ರಿ ಮಾಡೋಣ ಅಂತ ನಿರ್ಧರಿಸಿ ಗಂಜಿ ಬೇಯಿಸಿಕೊಂಡೆವು.. ಇದ್ದಿದ್ದು ನಾವಿಬ್ಬರೇ, ನಾನು ಮತ್ತು ಸದಾನಂದ... ಹಿಂದಿನ ದಿನ ರಾತ್ರಿ ತುಂಬಾ ತಡವಾಗಿ ಮಲಗಿದ್ದೆವು... ಗೋವಾ ದ ಬೀಚ್ ಅಂದ ಮೇಲೆ ಕೇಳಬೇಕೆ.. ಇಡೀ ರಾತ್ರಿ ಅದು ನಿದ್ರಿಸುವುದಿಲ್ಲ... ಅಲ್ಲಿ ೨೪ ಘಂಟೆಯೂ ಮದ್ಯದ ಆರಾಧನೆ ನಡೆಯುತ್ತಲೇ ಇರುತ್ತದೆ... ಆ ಬೀಚಿನ ಬದಿಯಲ್ಲಿ ಕಳೆಯುವ ಕಾಲವೇ ಒಂಥರಾ ಮಜಾ..ಎಲ್ಲಿ ನೋಡಿದರೂ ಕಾಣುವ ಸಮುದ್ರದ ನೀರು, ಪಕ್ಕದಲ್ಲೇ ಮಲ್ಯನ ಬೀರು...

ನಾನು ಸದಾನಂದನೂ  ೪ ದಿನದ ಗೋವಾ ಪ್ರವಾಸದಿಂದಾಗಿ ಸೋತು ಹೋಗಿದ್ದೆವು.. ಅದ್ಯಾವಾಗ ಹಾಸಿಗೆ ಕಾಣಲಿಲ್ಲವೋ ಅಂತ ನನಗೆ ಅನಿಸತೊಡಗಿತು... ಸ್ನಾನ ಮುಗಿಸಿ , ಗೋವಾ ದಿಂದ ತಂದಿದ್ದ ಅಪರೂಪದ ತೀರ್ಥದ ಜೊತೆ ಗಂಜಿ ಊಟ ಮಾಡಿ ಮುಗಿಸಿದೆವು... ನನಗೋ ಕಣ್ಣು ಎಳೆಯ ಹತ್ತಿತು.. ಸರಿ ಇನ್ನು ಸ್ವಲ್ಪ ಹೊತ್ತು ಮಲಗೋಣ ಅಂತ ನಿರ್ಧರಿಸಿ ಸುಮಾರು ೩ ಗಂಟೆಯ ಹೊತ್ತಿಗೆ ಮಲಗಿದೆವು...

ನಾವು ಗೋವಾ ದಲ್ಲಿ ಉಳಿದು ಕೊಂಡಿದ್ದ ರೆಸಾರ್ಟ್ ನ ಈಜುಕೊಳ
ಟಿನ್ ಟಿನ್.. ಕಾಲಿಂಗ್ ಬೆಲ್ಲು ಕರ್ಕಶ ಶಬ್ದ ಮಾಡುವಾಗಲೇ ಎಚ್ಚರವಾದದ್ದು... ಮಲಗಿದ್ದಲ್ಲಿಂದಲೇ ಮೆಲ್ಲನೆ ಕಣ್ಣು ಬಿಟ್ಟು ನೋಡಿದೆ , ಸುಮಾರು ೪.೧೫ ರ ವೇಳೆ.. ಅದ್ಯಾರೋ ಪುಣ್ಯಾತ್ಮ ಬಂದು ನಮ್ಮ ಒಳ್ಳೆಯ ನಿದ್ದೆ ಹಾಳು ಮಾಡಿದ್ದ.. ನನಗೋ ಪೂರ್ತಿ ಎಚ್ಚರವಾಗಿರಲಿಲ್ಲ...ಅದೇನೋ ಮಂಪರು.. ಸುಮಾರು ನಾಲ್ಕು ದಿನದಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲವಲ್ಲ.. ನನಗೆ ಏಳಲೇ ಆಗದಷ್ಟು ಮಂಪರು.. ಮತ್ತೆ ಹೊದಿಕೆ ಸರಿ ಮಾಡಿ ಗಟ್ಟಿಯಾಗಿ ಮಲಗಿಬಿಟ್ಟೆ... ಟಿನ್ ಟಿನ್.. ಮತ್ತೆ ಕಾಲಿಂಗ್ ಬೆಲ್ಲು ಕರ್ಕಶವಾಗಿ ಶಬ್ದ ಮಾಡಿತ್ತು ... "ಯಾವನೋ ಅವನು ಲೋ..ನಂ ಮಗ" ಅನ್ನುತ್ತಲೇ ನಿಧಾನವಾಗಿ ಎದ್ದು ಕೂತಿದ್ದು ಸದಾನಂದ.. ನನ್ನ ಕಡೆ ನೋಡಿದ .. ನಾನು ಮಂಪರು ಕಣ್ಣಲ್ಲೇ ಆತನನ್ನೊಮ್ಮೆ ನೋಡಿ ಮತ್ತೆ ಕಣ್ಣು ಮುಚ್ಚಿದೆ...ನಿಧಾನಕ್ಕೆ ಸದಾನಂದ ಎದ್ದು ನಿಲ್ಲುವುದಕ್ಕೂ ಟಿನ್ ಟಿನ್ ಅಂತ ಬೆಲ್ಲು ಮತ್ತೆ ಶಬ್ದಮಾಡುವುದಕ್ಕೂ ಸರಿ ಹೋಯಿತು... ಗೊಣಗುತ್ತಾ , ಕಣ್ಣುಜ್ಜಿಕೊಂಡು ಸದಾನಂದ ಬಾಗಿಲು ತೆಗೆದ...ಎದುರಿಗೆ ಅದ್ಯಾರೋ ನಿಂತಿದ್ದವನನ್ನು ದುರುಗುಟ್ಟಿ ನೋಡಿದ..." ಸಾರ್ ಶೇಕ್ ಅಬ್ದುಲ್ಲ ಇದ್ದಾರ??" ಬಂದ ವ್ಯಕ್ತಿ ಕೇಳಿದ್ದು ನಂಗೆ ಅಸ್ಪಷ್ಟವಾಗಿ ಕೇಳಿಸಿತ್ತು...ಅದೆಲ್ಲಿತ್ತೋ ಸಿಟ್ಟು ಸದಾನಂದ ಬಿರ್ರನೆ ಆತನತ್ತ ಗುರಾಯಿಸಿ , ತಾನು ಉಟ್ಟು ಕೊಂಡಿದ್ದ ಲುಂಗಿ ಬಿಚ್ಚಿಬಿಟ್ಟ..!! "ಅಬ್ದುಲ್ಲಾ ಇಲ್ಲಿದ್ದಾನೆ, ಬೇಕಾದ್ರೆ ಶೇಕ್ ಮಾಡಿಕೊ" .. ಸದಾನಂದ ಅಬ್ಬರಿಸಿದ್ದೂ , ಬಂದ ವ್ಯಕ್ತಿ ದಡ ದಡ ನೆ ಮೆಟ್ಟಿಲು ಇಳಿದು ಹೋಗಿದ್ದು ನನಗೆ ನಿದ್ದೆಯ ಮಂಪರಿನಲ್ಲೂ ಕೇಳಿಸುತ್ತಲೇ ಇತ್ತು...!!!!!

Tuesday, January 19, 2010

ಗಡಿಯಾರ!!

ಅದೊಂದು ಹುಚ್ಚು ಹಿಡಿದುಬಿಟ್ಟಿತ್ತು .. ಇದೇನೂ ಹಳೆಯ ಹುಚ್ಚಲ್ಲ.. ಇತ್ತೀಚಿಗೆ ಹುಟ್ಟಿಕೊಂಡಿದ್ದು..ಚಿಕ್ಕವನಿರುವಾಗ ಹಾರ್ಮೋನಿಯಂ ಕಲಿಯಬೇಕು ಅನ್ನುವ ಹುಚ್ಚು ಒಂದು ಬಿಟ್ಟರೆ ಬೇರೆ ಏನೂ ಅಷ್ಟೊಂದು ತಿಳಿದಿರಲಿಲ್ಲ... ಆದರೆ ಹಳ್ಳಿಯಲ್ಲಿ ಇದಕ್ಕೆಲ್ಲ ಪರಿಸ್ತಿತಿ ಒಗ್ಗಿ ಬರದ ಕಾರಣ ಹಾರ್ಮೋನಿಯಂ ಕನಸಾಗಿಯೇ ಉಳಿದಿದೆ... ಆದರೆ ಅದ್ಯಾಕೋ ಕೆಲವು ದಿನಗಳಿಂದ ನನಗೆ ಹಳೆಯ ಮರಳಿನ ಗಡಿಯಾರ ಬೇಕು ಅನ್ನಿಸಿಬಿಟ್ಟಿತ್ತು... ಇದಕ್ಕಾಗಿ ತುಂಬಾ ಹುಡುಕಿದ್ದೂ ಆಯಿತು.. ಕೊನೆಗೊಂದು ಸಿಕ್ಕಿಯೇ ಬಿಟ್ಟಿತಲ್ಲ.. ಹೌದು ಸಾರ್ ನನ್ನತ್ರ ಒಂದು ಹಳೆಯ ಮರಳಿನ ಗಡಿಯಾರ ಇದೆ ಬೇಕಾದ್ರೆ ಕೊಡ್ತೀನಿ ಹಾಗಂತ ಬನ್ನೇರುಘಟ್ಟ ರೋಡ್ನಲ್ಲಿ ಸಿಕ್ಕಿದ ದಿವಾಕರ ಅನ್ನೋ ಪುಣ್ಯಾತ್ಮ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.. ಆ ಗಡಿಯಾರಕ್ಕೆ ಆತ ಕೇಳಿದ್ದು ಬರೋಬ್ಬರಿ ೮ ಸಾವಿರ ರುಪಾಯಿ.. ಛೆ.. ಏನ್ಮಾಡೋದು... ಸರಿ , ಏನೆ ಇರಲಿ ಒಮ್ಮೆ ನೋಡೋಣ ಅಂತ ಹೇಳಿ ಆತನ ಮನೆಗೆ ಹೋದೆ... ವೌ.. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ...

ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪  ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ  ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...

ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು



ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..

ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
  ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...

                                      
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ  ಒಂದಕ್ಕೆ ೪೫೦೦೦ ಕ್ಕೆ  ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!

Friday, January 15, 2010

Five Amazing Holes...

ಇದೊಂದು ಇಮೇಲ್ ಮೆಸೇಜ್ ಓದುತ್ತಿದ್ದಂತೆ ಏನು ಹೇಳಬೇಕಂತಲೇ ತಿಳಿಯಲಿಲ್ಲ... ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನಿಸಿತು ಅದಕ್ಕೆ ಇಲ್ಲಿ ಹಾಕಿದ್ದೇನೆ... ಇದರ ಮೂಲಕರ್ತ ಯಾರೋ ತಿಳಿದಿಲ್ಲ...
Five Amazing Holes...

1. Kimberley Big Hole - South Africa




Apparently the largest ever hand-dug excavation in the world, this 1097-meter-deep mine yielded over three tons of diamonds before being closed.
2. Glory Hole - Monticello Dam, California




This is the Glory Hole at Monticello Dam, and it's the largest in the world of this type of spillway, its size enabling it to consume 14,400 cubic feet of water every second.

A glory hole is used when a dam is at full capacity and water needs to be drained from the reservoir.

3 Great Blue Hole , Belize




This incredible geographical phenomenon known as a blue hole is situated 60 miles off the mainland of Belize .

There are numerous blue holes around the world but none as stunning as this one.
4 Sinkhole in Guatemala



This photo is of a sinkhole that occurred February 2007 in Guatemala . It swallowed two dozen homes and killed at least three people.

5. This Indian Parliament is the famous Rat Hole.



It is capable of swallowing Millions of Tax Payers Money annually, never to be heard from again! It is reputed to contain at least 534 + 250 ass"holes".
 
ಇದು ಯಾರಿಗೆ ಹೊಳೆದದ್ದೇ ಇರಲಿ... ನನಗಂತೂ ನಕ್ಕೂ ನಕ್ಕೂ ಸುಸ್ತಾಯಿತು... ಇದರ ಮೂಲ ಯಾರು ಎಂದು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ.. ಆತನಿಗೆ ಒಂದು ಪ್ರಶಸ್ತಿ ಕೊಡಲೇ ಬೇಕು!!!! :-)

Monday, January 11, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!! (ಭಾಗ ೨)

ದಿನಗಳು ಕಳೆದದ್ದೇ ತಿಳಿಯಲಿಲ್ಲ... ಸುನೀತಾ ಹಾಗು ನಮ್ಮ ಮಧ್ಯೆ ಮಾತು ಕತೆ ನಿಂತೇ ಹೋಗಿತ್ತು... ನಾವೂ ಆಕೆಗೆ ತಮಾಷೆ ಮಾಡೋದನ್ನ ಬಿಟ್ಟಿದ್ದರೆ, 'ಗರಗಸ' ತನ್ನ ಅಟ್ಟಹಾಸವನ್ನೂ ನಿಲ್ಲಿಸಿದ್ದ... ನಿಲ್ಲಿಸಿದ್ದ ಅನ್ನುವುದಕ್ಕಿಂತ, ನಾವೇ ಅವನಿಗೆ ಬಯ್ದು ಇನ್ನು ಹಾಗೆ ನಗಬಾರದು , ನಾವು ಸೇಡುತೀರಿಸಿಕೊಳ್ಳಲಿದ್ದೇವೆ ಎಂದು ತಾಕೀತು ಮಾಡಿದ್ದೆವು... ನಮ್ಮಗಳ ಮಧ್ಯೆ ಅದೊಂದು ತರಹದ ಶೀತಲ ಸಮರ... ಆದರೆ ನಾವು ಸೇಡು ತೀರಿಸಿಕೊಳ್ಳುವ ಪರಿ ಗೊತ್ತಿಲ್ಲದ ಸುನೀತ ಮಾತ್ರ ಹಾಯಾಗಿದ್ದಳೆನೋ.. ೫ ತಿಂಗಳು ಕಳೆದವು... ಮಧ್ಯವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ನಾವೆಲ್ಲರೂ  ರಜಾದಿನಗಳಿಂದ  ವಾಪಸು ಕಾಲೇಜ್ ಕಡೆ ತಲೆ ಹಾಕಿದ್ದೆವು... ಹಾಗಿರಲೊಂದು ದಿನ ನಮ್ಮ ಸೇಡು ತೀರಿಸಿಕೊಳ್ಳುವ ಕಾಲ ಪಕ್ವವಾಗಿದೆ ಎಂದು ನಮಗನ್ನಿಸತೊಡಗಿತ್ತು.."ಇನ್ನು ತಡ ಮಾಡೋದು ಬೇಡ, ತುಂಬಾ ಕಷ್ಟವಾಗ್ತಿದೆ" ಸದಾನಂದ ಅದೊಂದು ದಿನ ನನ್ನಲ್ಲಿ ಹೇಳಿಕೊಂಡ.. ಸರಿ ಎಂದು ನಾವೂ ಒಂದು ಒಳ್ಳೆಯ ದಿನಕ್ಕಾಗಿ ಹುಡುಕಾಟ ನಡೆಸಿದೆವು.. ಆಗ ಬಂದಿದ್ದೆ ಕುಮಾರನ ಹುಟ್ಟುಹಬ್ಬ...!!!


ಈ ಕುಮಾರ ನಮ್ಮ ಗುಂಪಿನವನೊಬ್ಬ.. ಆತನದೂ ಕೆಲವು ಇಂಟರೆಸ್ಟಿಂಗ್ ಕಥೆಗಳಿವೆ ಅದನ್ನು ಮುಂದೆ ಹೇಳುವೆ...
ಅದ್ಹೇಗೋ ಆತನ ಮನ ವೊಪ್ಪಿಸಿ, ನಾವೇ ಸ್ವಲ್ಪ ಸ್ವಲ್ಪ ದುಡ್ಡು ಹಾಕಿ ಆತನ ಹುಟ್ಟುಹಬ್ಬಕ್ಕೆ, ಕ್ಲಾಸ್ ನವರಿಗೆಲ್ಲ ಪಾರ್ಟಿ ಕೊಡೋದು ಅಂತ ನಿರ್ಧರಿಸಿದೆವು...ಆತನ ಹುಟ್ಟುಹಬ್ಬ ಶುಕ್ರವಾರ ವಾಗಿತ್ತು.. ಅದನ್ನು ಶನಿವಾರಕ್ಕೆ ಮುಂದೆ ಹಾಕೋಣ ಎಂದು ಯೋಚಿಸಿದರೋ ಸಾಧ್ಯವಾಗಲಿಲ್ಲ... ಸರಿ ಶುಕ್ರವಾರವೇ ಪಾರ್ಟಿ... ಎಲ್ಲರೂ ಒಂದು ಕಡೆ ಸೇರುವುದು ಎಂದು ನಿರ್ಧಾರವಾಯಿತು... ಇದ್ದ ವೊಂದೇ ಅಡ್ಡ ಅಮೃತ್ ಕ್ರೀಂ ಪಾರ್ಲರ್ .. ಹಾಗಾಗಿ ಎಲ್ಲರನ್ನೂ ಕುಮಾರ ಶುಕ್ರವಾರ ಸಂಜೆ ಬರಬೇಕೆಂದು ಆಹ್ವಾನಿಸಿದ.. ಸುನೀತಾಳಿಗೂ ಕರೆ ಕೊಡಲಾಯಿತು... ಆ ಶುಕ್ರವಾರ ಬಂದೆ ಬಿಟ್ಟಿತು...
ಎಲ್ಲರೂ ಅಲ್ಲಿ ಸಂಜೆ ೫ ಗಂಟೆಗೆ ಹಾಜರು... ಗಡದ್ದು ಪಾರ್ಟಿ ಆರಂಭವಾಯಿತು.. ಆದರೆ ಸದಾನಂದ ಮಾತ್ರ ಕಾಣೆಯಾಗಿದ್ದ.. ಎಷ್ಟು ಹೊತ್ತಾದರೂ ಆತನ ಪತ್ತೆಯಿಲ್ಲ... "ಸೇಡು ತೀರಿಸಿಕೊಳ್ಳುತ್ತೇವೆ  ಅಂದ್ರಿ , ಆದ್ರೆ ಹೆದರಿ ಆತನೇ ಪರಾರಿನಾ? "  'ಗರಗಸ' ನನ್ನಲ್ಲಿ ಕೇಳಿದ್ದಕೆ ಆತನನ್ನು ಸುಮ್ಮನಾಗಿಸಿದೆ... ಇನ್ನೇನು ಪಾರ್ಟಿ ಮುಗಿಯುವ ಹೊತ್ತಾಯಿತು ಅನ್ನುವಷ್ಟರಲ್ಲಿ ಸದಾನಂದ ಪ್ರತ್ಯಕ್ಷನಾಗೆಬಿಟ್ಟಿದ್ದ  .. ಆತನ ಕೈಯಲ್ಲಿ ದೊಡ್ಡ ಸರಪಳಿ.. ಅದಕ್ಕೆ ಕಟ್ಟಿದ್ದಿದ್ದು ಒಂದು ಸುಂದರ ಮಜಬೂತಾದ ನಾಯಿ!!!!!


 ಎಲ್ಲರೂ ಆತನನ್ನೇ ನೋಡುತ್ತಿದ್ದರೆ, ಆ ನಾಯಿ ಹೆದರಿಕೆಯಿಂದ ಎಲ್ಲಾರನ್ನೂ ದುರುಗುಟ್ಟಿ ನೋಡುತ್ತಿತ್ತು...
" ನಾನು ಬರೋದು ಸ್ವಲ್ಪ ತಡವಾಯಿತು... ಇದು ನನ್ನ ನಾಯಿ, ತುಂಬಾ ಕಷ್ಟ ಪಟ್ಟು ಸಾಕಿ ಬೆಳೆಸಿದ್ದೇನೆ.. ಭಾರಿ ಬುದ್ಧೀನೂ ಇದೆ ಇದಕ್ಕೆ... ಯಾರು ಏನೆ ಹೇಳಿದ್ರೂ ಅದನ್ನ ಮಾಡುತ್ತೆ ಈ ನಾಯಿ" ಸದಾನಂದ ಪೀಠಿಕೆ ಹಾಕಿದ..."ಹೌದಾ!!" ಎಂದು ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರೆ "ಬೊಗಳೋ" ಅಂತ ನಾಯಿಗೆ ಆಜ್ನಾಪಿಸಿದ್ದು ಟೀನಾ.. ನಾಯಿ ಆಕೆಯನ್ನೊಮ್ಮೆ ದುರುಗುಟ್ಟಿ ಸುಮ್ಮನಾಯಿತು...
"ಕೈ ಕೊಡು" ಗರಗಸ ಆಜ್ಞಾಪಿಸಿದ... ಉಹುಂ ನಾಯಿ  ಏನೂ ಗೊತ್ತಿಲ್ಲದಂತೆ ಕುಳಿತಿತ್ತು..."ಏನೋ ಇದು ಏನ್ ಬೇಕಾದರೂ ಮಾಡುತ್ತೆ ಅಂದಿ, ಇದು ಸುಮ್ನೆ ಕುಳಿತುಬಿಟ್ಟಿದೆ" ಯಾರೋ ಮಧ್ಯದಲ್ಲಿ ಬಾಯಿಹಾಕಿದ್ದರು..."ಅದು ಹಾಗೆಲ್ಲ್ಲ ಆಗಲ್ಲ, ಅದರ ಹೆಸರು ಹೇಳಿ ಅದಕ್ಕೆ ಏನು ಮಾಡಬೇಕು ಅಂತ ಹೇಳಬೇಕು.. ಆಗ ಮಾತ್ರ ಅದು ಹೇಳಿದ್ದು ಮಾಡುತ್ತೆ" ಸದಾನಂದ ರಹಸ್ಯ ಬಿಟ್ಟುಕೊಟ್ಟ..."ಹೌದಾ, ಏನು ಇದರ ಹೆಸರೇನು" ಎಲ್ಲರೂ ತುಂಬಾ ಉತ್ಸಾಹದಿಂದ ಕೇಳಿದರು..."ಸುನೀತಾ ಅಂತ!!!" ಸದಾನಂದ ಹಾಗೆ ಹೇಳುತ್ತಿದ್ದಂತೆ ಎಲ್ಲಾರೂ ಅವಕ್ಕಾದರು...!!!
"ಸುನೀತಾ ಕೈ ಎತ್ತು" ಸದಾನಂದ ಹೇಳುತ್ತಿದ್ದಂತೆ ನಾಯಿ ತನ್ನ ಮುಂದಿನ ಕಾಲೆತ್ತಿ ಬಾಲ ಅಲ್ಲಾಡಿಸತೊಡಗಿತು!!! "ಸುನೀತಾ ಎರಡೂ ಕೈಯೆತ್ತು" ಈಗ ಅದು ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತು ಬಿಟ್ಟಿತ್ತು..."ಸುನೀತಾ ಮಲ್ಕೋ" ನಾಯಿ ಸಟ್ಟನೆ ಮಲಗಿಕೊಂಡಿತು...!!!! "ಸುನೀತಾ ಕೂತ್ಕೋ" ನಾಯಿ ಕುಳಿತು ಎಲ್ಲರನ್ನೂ ದಿಟ್ಟಿಸಿ ನೋಡತೊಡಗಿತು...!! ಎಲ್ಲರೂ ಅದನ್ನೇ ಗಮನಿಸುತ್ತಿದ್ದರೆ , ಸುನೀತಾಳ ಮುಖ ಮಾತ್ರ ಇಂಗು ತಿಂದ ಮಂಗನಂತಾಗಿತ್ತು...!! "ಹೇ ಇದು ಗಂಡು ನಾಯಿ ಅಲ್ವೇನೋ? ಇದಕ್ಕೆ ಸುನೀತಾ ಅಂತ ಹೆಣ್ಣಿನ ಹೆಸರ್ಯಾಕೆ ಇಟ್ಟೆ" ನಾನು ಒಂದು ಗೋಲಿ ಬಿಟ್ಟೆ..." ನಾಯಿ ಗಂಡಾಗಿರಲಿ ಹೆಣ್ಣಾಗಿರಲಿ , ಅದಕ್ಕೆ ಸುನೀತಾ ಅನ್ನೋ ಹೆಸರು ತುಂಬಾ ಚೆನ್ನಾಗಿ ಒಪ್ಪುತ್ತೆ" ಸದಾನಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದ್ದ... ಅಷ್ಟರಲ್ಲಾಗಲೇ ಅವಮಾನಕ್ಕೊಳಗಾದ ಸುನೀತಾ ಅಲ್ಲಿಂದ ಎದ್ದು ಹೊರಟೆ ಬಿಟ್ಟಳು...


"ಸುನೀತಾ ನಿಂತ್ಕೋ " ಸದಾನಂದ ಆಕೆಯ ಕಡೆ ಧಾವಿಸಿದ... ಆ ಮಾತಿಗೆ ನಾಯಿ ತನ್ನ ಮುಂದಿನ ಎರಡೂ ಕಾಲೆತ್ತಿ ನಿಂತಿದ್ದನ್ನು ಮಾತ್ರ ಯಾರೂ ಗಮನಿಸಲೇ ಇಲ್ಲ!!!.. ಎಲ್ಲರೂ ಸದಾನಂದ ಮತ್ತು ಸುನೀತಾಳನ್ನೇ ನೋಡುತ್ತಿದ್ದರು.. ಮುಂದೇನಾಗುತ್ತೋ ಅನ್ನೋ ಭಯ ಎಲ್ಲರಿಗೆ.."ಸುನೀತಾ ನೋಡು, ೫ ತಿಂಗಳ ಹಿಂದೆ ನಿನ್ನ ಮನೆಯಿಂದ ಒಂದು ನಾಯಿಮರಿ ಕಳುವಾಗಿತ್ತಲ್ಲ, ಅದೇ ಈ ನಾಯಿ.. ತಗೋ ನಿಂಗೆ ಇರ್ಲಿ.. ಚೆನ್ನಾಗಿ ಸಾಕಿದ್ದಿನಿ.. ಬುದ್ಧೀನೂ ಕಲಿಸಿದ್ದೀನಿ.. ಇನ್ನು ನೀನೆ ಸಂಭಾಳಿಸು.. ಆದ್ರೆ ನೆನಪಿಡು , ಅದ್ರ ಹೆಸರು ಕರೆದು ಹೇಳಿದ್ರೆನೆ ಅದು ಕೇಳೋದು . ಇಲ್ಲಾಂದ್ರೆ ಅದೂ ಏನೂ ಕೇಳಲ್ಲ..." ಸದಾನಂದ ತನ್ನ ಮಾತು ಮುಗಿಸಿ ನಾಯಿಯ ಸರಪಳಿಯನ್ನು ಆಕೆಯ ಕೈಗಿತ್ತ... ಸುನೀತಾ ಬಾ, ಸುನೀತಾ ಕೂತ್ಕೋ, ಸುನೀತಾ ಬೊಗಳು ಹೀಗೆಲ್ಲ ಸ್ವತಹ ಸುನೀತಾಳೆ ಹೇಳೋದನ್ನು ಕಲ್ಪಿಸಿಕೊಂಡು ನಾನು ಬಿದ್ದು ಬಿದ್ದು ನಗತೊಡಗಿದ್ದೆ... ಎಲ್ಲರಿಗೂ ಇದರ ಕಾರಣ ಅರ್ಥವಾಗಿ , ನಾವು ಸೇಡು ತೀರಿಸಿಕೊಂಡ ಪರಿ ನೋಡಿ ಒಳಗೊಳಗೇ ನಗತೊಡಗಿದರು..
ನಾಯಿಯನ್ನು ಸುನೀತಾಳ ಕೈಗೊಪ್ಪಿಸಿ, ಅದನ್ನು ಕದ್ದಿದ್ದಕ್ಕೆ ಆಕೆಯ ಕ್ಷಮೆ ಕೇಳಿ ನಾವು ಅಲ್ಲಿಂದ  ಮುಂದೆ ಹೆಜ್ಜೆ ಹಾಕಿದೆವು...!!!!

Thursday, January 7, 2010

ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲೆಬೇಕಿತ್ತು!!

"ನೀವು ನಿಮ್ಮ ಶಿಕ್ಷಣ ಮುಗಿದ ಮೇಲೆ ಏನಾಗಬೇಕು ಅಂತ ಇದ್ದೀರಾ?" ನಮ್ಮ ಲೆಕ್ಚರೆರ್ ಈ ಪ್ರಶ್ನೆ ಕೆಳುತ್ತಿದಂತೆ ಒಬ್ಬೊಬ್ಬರಾಗಿ ಎದ್ದು ನಿಂತು  ಉತ್ತರಿಸುತ್ತಿದ್ದರು..."ನಾನು ಎಂ ಬಿ ಏ ಮಾಡಿ ಒಳ್ಳೆ ಕಂಪನಿಲಿ ಕೆಲ್ಸಕ್ಕೆ ಸೇರಬೇಕು, ಆಮೇಲೆ ಎರಡು ಉತ್ತಮ ಮಕ್ಕಳಿಗೆ ತಾಯಿಯಾಗಬೇಕು" ಹಾಗಂತ ಸುನಿತಾ ಹೇಳಿದಾಗ ಇಡೀ ಕ್ಲಾಸು ಆಕೆಯ ಕಡೆ ಬೆರಗಿನಿಂದ ನೋಡಿತ್ತು..."ನೀವೇನ್ ಆಗ್ಬೇಕೂ ಅಂತ ಇದ್ದೀರಾ ಬುದ್ಧಿವಂತರೇ" ಹಾಗಂತ ಲೆಕ್ಚರೆರ್ ಕೇಳಿದ್ದು ತರಲೆ ಟೀಂ ಎಂದೇ ಖ್ಯಾತವಾಗಿದ್ದ ನಮ್ಮನ್ನ... ಮೊದಲಿಗೆ ನಿಧಾನವಾಗಿ ಎದ್ದು ನಿಂತ ಸದಾನಂದ, "ಯೆನಾಗ್ಬೇಕೂ ಅಂತ ಗೊತ್ತಿಲ್ಲ ಸಾರ್ , ಆದ್ರೆ ಆ ಎರಡು ಮಕ್ಕಳ ಅಪ್ಪ ಆಗ್ಬೇಕೂ ಅಂತ ತುಂಬಾ ಆಸೆ ಆಗ್ತಿದೆ " ಅಂತ ಸುನೀತಾ ಕಡೆ ವಾರೆ ದೃಷ್ಟಿ ಬೀರಿದ್ದ.. ಇಡೀ ಕ್ಲಾಸಿಗೆ ಕ್ಲಾಸ್ ಗೊಳ್ಳನೆ ನಕ್ಕರೆ ಸುನಿತಾ ಬಗ್ಗಿ ಅಳತೊಡಗಿದ್ದಳು.. ಸದಾನಂದ ತಮಾಷೆಗೆ ಅಂತ ಹೇಳಿದ್ದು ಗಂಭೀರ ರೂಪ ಪಡೆದಿತ್ತು... " ಕ್ಲಾಸ್ ನಿಂದ ಹೊರಗೆ ಹೋಗಿ" ಲೆಕ್ಚರೆರ್ ನಮ್ಮಕಡೆ ನೋಡಿ ಬೊಬ್ಬಿಟ್ಟರು... ನಮಗೆ ಅದೇನೂ ಹೊಸತಲ್ಲ... ಯಾರೇ ಆಗಲಿ "ಗೆಟ್" ಅನ್ನೋವಷ್ಟರಲ್ಲಿ  ಬಾಗಿಲಿನ ಹತ್ರ "ಔಟ್" ಅನ್ನೋವಷ್ಟರಲ್ಲಿ  ಚಿತ್ರಮಂದಿರದಲ್ಲಿರುತ್ತಿದ್ದ ನಾವು ಅಂದೂ ಹಾಗೆಯೇ ಮಾಡಿದ್ದೆವು...

ಆದರೆ ಮರುದಿವಸದಿಂದ ನನ್ನ ಮತ್ತು ಸದಾನಂದನ ಕೆಟ್ಟ ದಿನಗಳು ಪ್ರಾರಂಭವಾಗಿದ್ದವು...ಸದಾನಂದನಿಗೆ ನಾನೇ ಹಾಗೆ ಹೇಳಲು ಕಲಿಸಿ ಕೊಟ್ಟಿದ್ದು ಅನ್ನೋದು ಅದಕ್ಕೆ ಕಾರಣ.. ಸುನೀತಾ ಹಿಂದಿನ ದಿನದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಳು... ನನ್ನ ಮತ್ತು ಸದಾನಂದನ ಮೇಲೆ ಇಲ್ಲ ಸಲ್ಲದ ದೂರು ಕೊಟ್ಟು ಪ್ರತಿ ದಿನ ನಮ್ಮನ್ನು  ಕ್ಲಾಸ್ ನಿಂದ ಹೊರ ಕಳಿಸುತ್ತಿದ್ದಳು... ಸದಾನಂದ , ತಾನು ಹೇಳಿದ್ದು ತಮಾಷೆಗೆಂದೂ ಆಕೆಯಲ್ಲಿ ಕ್ಷಮೆ ಕೇಳಿದರೂ ಆಕೆ ಕೇಳಲಿಲ್ಲ... ಇದರಿಂದಾಗಿ ಒಂದೇ ಚಿತ್ರಮಂದಿರವಿದ್ದ ಆ ಊರಿನಲ್ಲಿ , ನಾನು ಮತ್ತು ಸದಾನಂದ ದಿನವೂ ಒಂದೇ ಚಲನಚಿತ್ರ ನೋಡುವ ಶಿಕ್ಷೆ ಅನುಭವಿಸಬೇಕಾಯಿತು...

ಕೆಲವು ದಿನ ಹೀಗೆ ಕಳೆಯಿತು .. ಆಮೇಲೆ ಎಲ್ಲವೂ ಹತೋಟಿಗೆ ಬಂತು ಅಂತ ಅಂದುಕೊಂಡಿದ್ದೆವು... ಆದರೆ ಸುನೀತಾಳನ್ನು ನೋಡುತ್ತಿದ್ದಂತೆ ನನಗೆ ನಗು ಉಕ್ಕಿ ಬರುತ್ತಿತ್ತು...ಕಷ್ಟ ಪಟ್ಟು ಅದೆಲ್ಲವನ್ನೂ ತಡೆಹಿಡಿಯುತ್ತಿದ್ದೆ... ಉಬ್ಬುಹಲ್ಲಿನ ಗರಗಸ ಮಾತ್ರ  ಆಕೆ ಎದುರು ಬರುತ್ತಿದ್ದಂತೆ ಗಹಗಹಿಸಿ ನಗುತ್ತಿದ್ದುದು ಮಾತ್ರ ಅಸಹ್ಯವಾಗಿರುತ್ತಿತ್ತು... "ನಗಬೇಡವೋ   ಇಡಿಯಟ್" ಆವತ್ತೊಂದಿನ ಸಹನೆ ಕಳೆದುಕೊಂಡಿದ್ದ ಸದಾನಂದ  ಜೋರಾಗಿ ಕಿರುಚಿಬಿಟ್ಟ.. ಗರಗಸವೂ ಕಮ್ಮಿ ಇಲ್ಲ.." ಮತ್ತೆನ್ರೋ , ನೀವೆಲ್ಲ ವೇಸ್ಟ್.. ಒಂದು ಚಿಕ್ಕ ಪಿ ಜೆ  ಹೇಳಿದ್ದಕ್ಕೆ ಆಕೆ ನಿಮ್ಮನ್ನು ಅದೆಷ್ಟು ದಿನ ಕ್ಲಾಸ್ನಿಂದ ಹೊರಗೆ ಕಳಿಸಲಿಲ್ಲ.. ನಿಮಗೇನಾದರೂ ನಾಚಿಕೆ ಮಾನ ಮರ್ಯಾದೆ ಇದ್ಯಾ? ಒಂದು ಹೆಣ್ಣಿನ ಮುಂದೆ ತಲೆ ಬಾಗಿಸಿ ಬಿಟ್ರಲ್ಲೋ.. ಗಂಡಸ್ರಾಗಿದ್ರೆ ಆಕೆ ಮೇಲೆ ಸೇಡು ತೀರಿಸಿಕೊಳ್ಳಿ".. ಆತ ನಮಗೆ  ಸವಾಲು ಎಸೆದಿದ್ದ...ನಾನು ಒಂದು ಕ್ಷಣ ಬೆಚ್ಚಿಬಿದ್ದೆ... ತಮಾಷೆ ಮಾಡೋದು , ಆಮೇಲೆ ಅದನ್ನು ಮರ್ತು ಬಿಡೋದು ಅದಷ್ಟೇ ನಮಗೆ ಗೊತ್ತು.. ದ್ವೇಷ ವನ್ನು ವರ್ಷಾನುಗಟ್ಟಲೆ ನೆನಪಿಟ್ಟುಕೊಂಡು ಸೇಡು ತೀರಿಸಿಕೊಳ್ಳೋದು ಚಿತ್ರಗಳಲ್ಲಿ ನೋಡಿದ್ದೆವು ಅಷ್ಟೇ... ಆದರೆ ಅದ್ಯಾಕೋ ಸುನೀತ ಮೇಲೆ ಸೇಡು ತೀರಿಸಿಕೊಳ್ಳಲೇ  ಬೇಕು ಅಂತ ನನಗನ್ನಿಸಿತ್ತು...  "ಹೌದು ಸದಾನಂದ.. ಈಗೇನಾದರೂ ಮಾಡಲೇ ಬೇಕು" ನಾನು ಸದಾನಂದನತ್ತ ನೋಡಿದೆ... "ಗೋರೆ , ನೀನೆ ಪರ್ಮಿಶನ್  ಕೊಟ್ಟ ಮೇಲೆ ಮುಗೀತು... ಉಳಿದದ್ದು ನನಗೆ ಬಿಡು" ಸದಾನಂದ ಪಕ್ಕನೆ ನಕ್ಕು ಹೇಳಿದ... "ಏನು ಮಾಡ್ತಿಯಾ" ಅಂತ ನಾವೆಲ್ಲರೂ  ಕೇಳಿದ್ದಕ್ಕೆ ಸದಾನಂದ ಏನೂ ಮಾತಾಡದೆ ನನ್ನನ್ನು ಎಳೆದುಕೊಂಡು ರೂಮಿನತ್ತ ಸಾಗಿದ್ದ...
ಅದಾಗಿ ೪ ದಿನಗಳಲ್ಲಿ ಸುನೀತಾ ಮನೆಯಿಂದ ಆಕೆಯ ಪ್ರೀತಿಯ ಚಿಕ್ಕ ನಾಯಿಮರಿ ಕಳುವಾಗಿ ಹೋಗಿತ್ತು...!!!!!!!!

ಮುಂದುವರೆಯುವುದು...