Sunday, October 26, 2014

ದೀಪಾವಳಿ ಮತ್ತು ಬುದ್ಧಿಜೀವಿಗಳು !!!

ದೀಪಾವಳಿ ದಿನ.. ಅದೊಂದು ಅಭಿಯಾನ ಕೈಗೊಂಡಿದ್ದ ಕೆಲವಷ್ಟು ಮಂದಿ ಕಣ್ಣಿಗೆ ಬಿದ್ದರು..

"ಪಟಾಕಿ ಸುಡಬೇಡಿ .. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತದೆ.. ನಾವು ಮುಂದಿನ ಪೀಳಿಗೆಯ ಜನರಿಗೆ ಬದುಕಲು ಉತ್ತಮ ವಾತಾವರಣ ನಿರ್ಮಿಸಿಲಿಕ್ಕಾದರೂ ಈ ಪಟಾಕಿಗಳಿಗೆ ದೀಪಾವಳಿಯ ದಿವಸ ಅಂತ್ಯ ಹಾಡಬೇಕು .."
ಮನೆ ಮನೆಗೂ ತೆರಳಿ ಜನರಿಗೆ ಅವರು ತಿಳಿಹೆಳುತ್ತಿದ್ದರು..

ಮಧ್ಯಾನ್ನದ ಹೊತ್ತು.. ಗೆಳೆಯನನ್ನು ಬಸ್ಸ್ಟ್ಯಾಂಡ್ ತನಕ ಕಳುಹಿಸಿ ವಾಪಸು ಬರುತ್ತಿದ್ದಾಗ ಮತ್ತೆ ಅವರೇ ನನ್ನ ಕಣ್ಣಿಗೆ ಬಿದ್ದರು.. ಹೋಟೆಲೊಂದರಲ್ಲಿ ಗಡದ್ದಾಗಿ ಕೋಳಿ , ಕುರಿಯ ಊಟ ಮಾಡುತ್ತಿದ್ದರು ... ಒಂದು ಕ್ಷಣ ಅಲ್ಲೇ ನಿಂತೆ .. ಊಟ ಮುಗಿಸಿದ ಅವರಲ್ಲೊಬ್ಬ ಹೊರಗೆ ಬಂದು ಸಿಗರೇಟು ಹಚ್ಚಿಕೊಂಡ .. ಅದ್ಯಾಕೋ ಇವೆಲ್ಲವೂ ನನಗೆ ವಿಚಿತ್ರ ವಾಗಿ ಕಾಣತೊಡಗಿತ್ತು .. ಜನರಿಗೆ ಪಟಾಕಿಯ ಬಗ್ಗೆ ತಿಳಿಹೇಳುವ ಇವನಿಗೆ ತನ್ನ ಆರೋಗ್ಯದ ಬಗ್ಗೆಯೇ ಚಿಂತೆ ಇಲ್ಲವೇ ?
ಆತನನ್ನು ಮಾತನಾಡಿಸೋಣವೆಂದು ಆತನತ್ತ ಹೆಜ್ಜೆ ಹಾಕಿದೆ..

ನನ್ನನ್ನು ನೋಡಿದ ಆ ನಾಲ್ಕು ಮಂದಿಯಲ್ಲೊಬ್ಬ ನನಗೆ ಹಾಗೂ ಅಲ್ಲೇ ಇದ್ದ ಕೆಲವೊಂದು ಮಂದಿಗೆ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ವಿವರಿಸತೊಡಗಿದ .. ಪಟಾಕಿಯಿಂದ ಹೊರಸೂಸಿ ಗಾಳಿ, ಮಣ್ಣು ಸೇರುವ  ಇಂಗಾಲದ ಬಗ್ಗೆ ಅತೀ ಉತ್ತಮವಾಗಿ ಹೇಳಿದ .. ಆತನನ್ನು ಒಂದು ಕ್ಷಣ ತಡೆದು ಹೇಳಿದೆ, "ನನ್ನದೊಂದು ಪ್ರಶ್ನೆಯಿದೆ ನಿಮಗೆ"..

"ಕೇಳಿ ಸಾರ್"

"ಪಟಾಕಿ ಗಿಂತ ಹೆಚ್ಚು ಇಂಗಾಲ ದ ಪರಿಣಾಮ ಮಾಂಸಾಹರದಿಂದ ಉಂಟಾಗುತ್ತದೆ ಅಂತ ಕೇಳಿದ್ದೆ ಹೌದಾ?"..

ಆತ ಒಂದು ಕ್ಷಣ ದುರುಗುಟ್ಟಿ ನೋಡಿದ ..

"ಇರಬಹುದು ಸಾರ್.. ಆದರೆ ಈ ಮಾಂಸಾಹಾರ ಅನ್ನೋದು ವಿಶ್ವ ದಾದ್ಯಂತ ಇದೆ .. ಅದನ್ನು ನಿಲ್ಲಿಸುವುದು ಕಷ್ಟ .. ಹಾಗಾಗಿ ನಮ್ಮಿಂದ ಆಗುವ ಚಿಕ್ಕ ಪ್ರಯತ್ನ ನಾವು ಮಾಡುತ್ತಿದ್ದೇವೆ .. ದೀಪಾವಳಿ ಸಮಯದಲ್ಲಿ ಪಟಾಕಿ ಉಪಯೋಗಿಸದಂತೆ , ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಉಪಯೋಗಿಸದಂತೆ , ಚೌತಿಯ ಸಂದರ್ಭ ಗಣಪತಿ ನೀರಿನಲ್ಲಿ ವಿಸರ್ಜಿಸದಂತೆ ನಾವು ಅಭಿಯಾನ ಕೈಗೊಳ್ಳುತ್ತೇವೆ "

"ಒಳ್ಳೆಯ ಕೆಲಸ .. ಆದರೆ ಇಡೀ ಪ್ರಪಂಚಕ್ಕೆ ನಿಮ್ಮಿಂದ ತಿಳಿಸಲಾಗದ್ದು , ಆದರೆ ನಿಮಗೆ ತಿಳಿದದ್ದು ನೀವೂ ಮಾಡಬಹುದಲ್ಲ "..

"ಏನು? "... ಆತನಿಗೆ ಅರ್ಥ ವಾದಂತೆ ಕಾಣಲಿಲ್ಲ ..

"ಅದೇ ಮಾಂಸಾಹಾರ, ಅದನ್ನು ನಿಮಗೆ ತ್ಯಜಿಸಬಹುದು ಅಲ್ಲವೇ ?"

"ಹೇ ಹೇ .. ಎಲ್ಲವನ್ನು ಪಾಲಿಸುವುದು ಕಷ್ಟ , ಅದಕ್ಕೆ ನಾವು ನಮ್ಮಿಂದ ಆಗುವಂಥ ಚಿಕ್ಕ ಪ್ರಯತ್ನ ಮಾಡಿದ್ದೇವೆ .. ಹೋಳಿಯ ದಿನ ಬಣ್ಣ , ಗಣಪತಿ ವಿಸರ್ಜನೆ , ಪಟಾಕಿ ಇವೆಲ್ಲವನ್ನೂ ಬಿಟ್ಟಿದ್ದೇವೆ .."

"ನಾನು ಮಾಂಸಾಹಾರಿ ಅಲ್ಲ.. ಇದು ನನ್ನ ಚಿಕ್ಕ ಕೊಡುಗೆ ವಾತಾವರಣಕ್ಕಾಗಿ .. ಹಾಗಾಗಿ ನಾನು ಪಟಾಕಿ ಸಿಡಿಸಬಹುದೇ ? "

ಆತ ಮೌನವಾದ ..

"ಮತ್ತೆ ಈ ಸಿಗರೇಟು ಆ ಅಭ್ಯಾಸವೂ ನನಗಿಲ್ಲ .. ಬೀಡಿ , ಸಿಗರೇಟು ಇದರಲ್ಲೆಲ್ಲ ಅದೆಷ್ಟೊಂದು ಬಾಲ ಕಾರ್ಮಿಕರು ದುಡಿಯುತ್ತಾರೆ ಅಲ್ಲವೇ ?...  ಮತ್ತೆ ಈ ಕೆಟ್ಟ ಚಟಗಳು ಪಟಾಕಿ ಉಂಟುಮಾದುವುದಕ್ಕಿಂತ ಹೆಚ್ಚಿನ ಮಾಲಿನ್ಯ , ಸಾವು - ನೋವು  ಉಂಟುಮಾಡುತ್ತವೆ .. ಜನರಿಗೆ ಈ ಬಗ್ಗೆ ತಿಳಿಹೇಳಿ ದ್ದೀರ ?"

ಆತ ಮತ್ತೆ ಮೌನ ...

ನಾನೇ ಮತ್ತೆ ಮುಂದುವರಿಸಿದೆ .. " ಮಾಂಸಾಹರದಿಂದ ಆಗುವ ದುಷ್ಪರಿಣಾಮ , ವಾಹನಗಳಿಂದ ಆಗುವ ದುಷ್ಪರಿನಾಮಕ್ಕಿಂತ ಹೆಚ್ಚಂತೆ ಹೌದ? ಮತ್ತೆ ಈ ಕೈಗಾರಿಕೆಗಳು , ಕಲ್ಲಿದ್ದಲು , ಅದಿರು ಸಂಗ್ರಹ ಇವೆಲ್ಲವೂ ಸಹಾ ಸಾವಿರ ಪಟ್ಟು ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತವೆ ಅಂತ ಎಲ್ಲೋ ಓದಿದ ನೆನಪು  "

ಆತ ಮೆಲ್ಲನೆ ಬೆವರತೊದಗಿದ್ದ .. ತುಂಬಾ ಬಾಯಾರಿಕೆ ಆಗಿರಬೇಕು , ಬ್ಯಾಗಿನಿಂದ ತಂಪು ಪಾನಿಯದ ಬಾಟಲಿ ಹೊರತೆಗೆದು ಕುಡಿಯ ತೊಡಗಿದ ..
"ಈ ಪಾನೀಯ ಗಳಲ್ಲೂ ಕೆಮಿಕಲ್ ಇದ್ಯಲ್ಲ .. ಇದನ್ನು ತಯಾರಿಸುವ ಕಾರ್ಖಾನೆಗಳಿಂದ ದಿನಾ ಕಲ್ಮಶ ನದಿ ಸೇರುತ್ತದಲ್ಲಾ ? ಇದೂ ಕೆಟ್ಟದಲ್ಲವೇ? ಮತ್ತೆ ಈ ಪ್ಲಾಸ್ಟಿಕ್ ಬಾಟಲಿಗಳು .."

ಆತ ತಟ್ಟನೆ ಬಾಟಲಿಯ ಬಿರಡೆ ಮುಚ್ಚಿ ಚೀಲದಲ್ಲಿ ಹಾಕಿಕೊಂಡ 

"ಮತ್ತೆ ಹೊಸ ವರ್ಷ , ಕ್ರಿಸ್ಮಸ್ ದಿನಾನು ಮೇಣದ ಬತ್ತಿ ಉರಿಸ್ತಾರೆ ,ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಇದೆ ರೀತಿ ಜನಕ್ಕೆ ತಿಳಿ ಹೇಳ್ತೀರಾ ? ಅದೆಲ್ಲ ಯಾಕೆ , ಅದ್ಯಾವನೋ ರಾಜಕಾರಣಿ ಜಯಗಳಿಸಿದಾಗ , ಜೈಲಿನಿಂದ ಬಿಡುಗಡೆಯಾದಾಗ ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಹೋಗಿ ತಿಳಿ ಹೆಳುತ್ತೀರ ?"

"ಅದೆಲ್ಲಾ ತುಂಬಾ ಚಿಕ್ಕ ಪ್ರಮಾಣದಲ್ಲಿ ಸಾರ್ " ಅವರಲ್ಲೊಬ್ಬ ಬಾಯಿ ಬಿಟ್ಟಿದ್ದ ..

"ಇರಬಹುದು , ಆದರೆ ಚಿಕ್ಕ ಪ್ರಮಾಣದಲ್ಲೇ ಪ್ರಾರಂಭಿಸಿದರೆ ಉತ್ತಮ ಅಂತ ನೀವೇ ತಾನೇ ಹೇಳಿದ್ದು "

ಆ ನಾಲ್ಕೂ ಮಂದಿ ನನ್ನನ್ನು ತಿಂದು ಬಿಡುವಂತೆ ದುರುಗುಟ್ಟಿ ನೋಡತೊಡಗಿದರು ..

"ದೀಪಾವಳಿ ನಮ್ಮ ಹಬ್ಬ .. ಹಬ್ಬದ ಆಚರಣೆಗಾಗಿ ವರ್ಷಕ್ಕೆ ಒಂದು ದಿನ ನಾವು ಪಟಾಕಿ ಬಿಡುತ್ತೇವೆ .. ಆದರೆ ಆಗ ಮಾತ್ರ ಬಂದು ಹಬ್ಬದ ಸಂತೋಷವನ್ನು ಕಿತ್ತುಕೊಳ್ಳುವುದಕ್ಕಿಂತ , ಪಟಾಕಿಗಿಂತ ಹೆಚ್ಚು ಮಾರಕವಾದ  ಬೀಡಿ , ಸಿಗರೇಟು , ಮಾಂಸ , ಕೈಗಾರಿಕೆ , ತಂಬಾಕು , ವಾಹನ ಇತ್ಯಾದಿಗಳ ಬಗ್ಗೆ ವರ್ಷ ಪೂರ್ತಿ ಅರಿವು ಮೂಡಿಸುವ ಕಾರ್ಯ ಒಳಿತಲ್ಲವೇ ?"

ನನ್ನನ್ನು ದುರುಗುಟ್ಟಿ ನೋಡಿದ ನಾಲ್ಕೂ ಮಂದಿ ದಡದಡನೆ ಅಲ್ಲಿದ್ದ ಅವರ ಕಾರು ಏರಿ ಕೂತರು .. ಕಪ್ಪು ಹೋಗೆ ಉಗುಳುತ್ತ ಸಾಗಿದ ಕಾರನ್ನೇ ನೋಡುತ್ತಾ ನಿಂತುಬಿಟ್ಟೆ ..

ಸೂಚನೆ : ಪಟಾಕಿಯ  ದುಷ್ಪರಿಣಾಮಗಳ ಬಗ್ಗೆ ನನಗೂ ತಿಳಿದಿದೆ .. ಅದಕ್ಕೇ ನಾನೂ ಪಟಾಕಿ ಉಪಯೋಗ ಕಮ್ಮಿ ಮಾಡಿದ್ದೇನೆ .. ಆದರೆ ಅದು ಹಬ್ಬದ ಸಂತೋಷವನ್ನು ಹಾಳುಗೆಡಹುವಷ್ಟಲ್ಲ ..


ಗೋರೆ ಉವಾಚ :

ಪಟಾಕಿ ಮತ್ತು ಹೆಂಡತಿಗಿರುವ ಒಂದೇ ಒಂದು ವ್ಯತ್ಯಾಸವೆಂದರೆ , ಪಟಾಕಿ ಹಳೆಯದಾದಷ್ಟು ಶಬ್ದ ಕಮ್ಮಿ !!!

 

Saturday, September 6, 2014

ಪುಸ್ತಕ !!

ರಾತ್ರಿ ೧೧ ಗಂಟೆ . ಜೋರಾಗಿ ನಿದ್ದೆ ಬರುತ್ತಿತ್ತು . ಮಲಗೋಣವೆಂದು  ಮನೆಯ ದೀಪಗಳನ್ನು ಆರಿಸೋಣವೆಂದು  ಅಂದು ಕೊಳ್ಳುವಷ್ಟರಲ್ಲಿ "ಟಿಂಗ್ ಟೋಂಗ್ " ಅನ್ನುವ ಶಬ್ದ.. ಯಾರೋ ಬಾಗಿಲ ಗಂಟೆ ಬಾರಿಸಿದ್ದರು.. ಅರ್ರೆ ಇಷ್ಟೊತ್ತಿನಲ್ಲಿ ಯಾರಿರಬಹುದು ? ಒಂದು ವಾರದ ಹಿಂದಷ್ಟೇ ಆ ಊರಿಗೆ ವರ್ಗವಾಗಿದ್ದೆ .. ಅಷ್ಟೊಂದು ಪರಿಚಯ ಯಾರದ್ದೂ ಇರಲಿಲ್ಲ .. ಗೊತ್ತಿದ್ದಿದು ಪಕ್ಕದ ಮನೆಯ ರಾಮ ಭಟ್ಟರು ಮಾತ್ರ . ರಾತ್ರಿ ಹನ್ನೊಂದು ಗಂಟೆಗೆ ಯಾರು ಬಂದಿರಬಹುದು ಅಂತ ಮೆಲ್ಲನೆ ಬಾಗಿಲು ತೆಗೆದೆ.. ಯಾರೋ ಹುಡುಗನೊಬ್ಬ ನಿಂತಿದ್ದ

"ಸಾರ್ ನಾನು ರಾಮಭಟ್ಟರ ಮಗ , ನಿದ್ದೆ ಬರ್ತಾ ಇರ್ಲಿಲ್ಲ ಅದಕ್ಕೆ ನಿಮ್ಮಲ್ಲಿ ಯಾವುದಾದರೂ ಒಳ್ಳೆಯ ಪುಸ್ತಕ ಇದ್ರೆ ಕೊಡ್ತೀರ . ಓದಿ ನಾಳೆ ಕೊಡ್ತೀನಿ " ಅಂದ ..
ಅಬ್ಬ , ಇದೆಂತ ಒಳ್ಳೆಯ ಕಾಲ.. ಮೊಬೈಲ್ ನಲ್ಲಿ, ಟಿ .ವಿ  ನೋಡುತ್ತಾ , ಇಲ್ಲವೇ ಹಾಳು  ಹರಟೆ ಹೊಡೆಯುತ್ತ ಕೂರುವ ಈ ಹುಡುಗರ ಮಧ್ಯೆ ಇದೆಲ್ಲಿಂದ ಬಂದ  ಅಂತ ಆಶ್ಚರ್ಯ ವಾಯಿತು ..

ಮನೆಯ ಸಾಮಾನು ಇನ್ನೂ ಜೋಡಿಸಿರಲಿಲ್ಲ ..

"ಹೆಸರೇನು ನಿಂದು "?

"ರಾಘವೇಂದ್ರ ಅಂತ ಸಾರ್, ಎಲ್ರೂ ರಘು ಅಂತ ಕರೀತಾರೆ "

"ಸರಿ, ಯಾವುದು ಬೇಕೋ ಅದು ತಗೋ " ಅಂತ ಹೇಳಿ ಪುಸ್ತಕ ಕಟ್ಟಿಟ್ಟಿದ್ದ ರಟ್ಟಿನ ಪೆಟ್ಟಿಗೆ ತೋರಿಸಿದೆ ..

ಸ್ವಲ್ಪ ಹೊತ್ತು ಹುಡುಕಾಡಿ ೨ ಪುಸ್ತಕ ತೆಗೆದುಕೊಂಡ .. "ಸಾರ್ , ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ತಗೊಂಡೆ  .. ನಾಳೆ ಕೊಡ್ತೀನಿ ಸಾರ್" ಅಂತ ಹೇಳಿ ಹೊರ ಹೋದ .. ನೇರವಾಗಿ ರಾಮ ಭಟ್ಟರ ಮನೆಯ ಗೇಟು ತೆಗೆದು ಒಳ ಹೋದವನನ್ನು ನೋಡಿ ಖುಷಿಯಾಯಿತು .. ನಿದ್ದೆ ಬರದೆ ಮೊಬೈಲ್ ನಲ್ಲಿ ಆಟ ಆಡುವ ಜನಾಂಗದ ಮಧ್ಯೆ ಇಂಥವರು ಇನ್ನೂ ಇದ್ದಾರೆ ಅಂದರೆ ಹೆಮ್ಮೆಯ ವಿಷಯವಲ್ಲವೇ ..

 ಇದಾಗಿ ಎರಡು ಮೂರು ದಿನ ಕಳೆಯಿತು .. ನಾನು ಕೆಲಸಕ್ಕೆ ಹೋಗಿ ಬರುವುದೇ ರಾತ್ರಿಯಾಗುತ್ತಿದ್ದುದರಿಂದ ರಘು ಬಗ್ಗೆಯೂ ಮರೆತು ಹೋಯಿತು .. ಆದರೆ ನಾಲ್ಕನೇ ದಿನ ನನ್ನ ಗೆಳೆಯ ಸದಾನಂದ ಫೋನ್ ಮಾಡಿ ಒಂದು ಪುಸ್ತಕ ಕೊಡು ಅಂದಿದ್ದ .. ಆಗ ನೆನಪಾಯಿತು.. ರಘು ಪುಸ್ತಕ ತೆಗೆದುಕೊಂಡು ಹೋಗಿದ್ದ ವಿಶಯ.. ಅಲ್ಲಿಗೆ ಹೋಗಿ ಕೇಳೋಣ .. ಹೇಗೂ ರಾಮ ಭಟ್ಟರು ಮನೆಗೆ ಬರುವಂತೆ ಒತ್ತಯಿಸಿದ್ದೂ ಉಂಟು .. ಹೋದ ಹಾಗೆಯೂ ಆಯಿತು , ಪುಸ್ತಕ ವಾಪಸು ತಂದ ಹಾಗೆಯೂ ಆಯಿತು ಅಂತ ಅವರ ಮನೆ ಕಡೆ ಸಾಗಿದೆ..
"ಬನ್ನಿ ಬನ್ನಿ " ರಾಮ ಭಟ್ಟರು ಎಲೆ ಅಡಿಕೆ ತಿಂದು ಕೆಂಪಾಗಿದ್ದ ಬಾಯಿಯನ್ನು ಇಷ್ಟಗಲ ಮಾಡಿ ಸ್ವಾಗತಿಸಿದರು .. ಅವರ ಹೆಂಡತಿ ರುಕ್ಮಿಣಿ ಹಾಗೂ ಮಗಳ ಪರಿಚಯ ಮಾಡಿಕೊಟ್ಟರು .. ಭರ್ಜರಿ ಕಾಫಿ ತಿಂಡಿಯೂ ಮುಗಿಯಿತು.. ಇನ್ನು ಮನೆಗೆ ಹೋಗೋಣವೆಂದು ನಿಧಾನಕ್ಕೆ ಎದ್ದು ನಿಂತೆ ..
"ರಘು ಮನೆಯಲ್ಲಿ ಇಲ್ವೆ?"

ರಾಮ ಭಟ್ಟರು ಕಣ್ಣು ಚಿಕ್ಕದು ಮಾಡಿ "ಯಾರು?" ಎಂದು ಕೇಳಿದರು ..
"ಅದೇ ಭಟ್ರೇ ನಿಮ್ಮ ಮಗ ರಾಘವೇಂದ್ರ "

ಅದ್ಯಾಕೋ ರಾಮ ಭಟ್ಟರು ತಟ್ಟನೆ ಅವರ ಹೆಂಡತಿಯ ಮುಖ ನೋಡಿದರು .. ಅವರ ಮಗಳೂ ಸಹ ಅವಕ್ಕಾಗಿ ನಿಂತು ಬಿಟ್ಟಿದ್ದಳು ..  ಅವರ ಮುಖ ಚಹರೆಯೇ  ಬದಲಾಗಿ ಹೋಗಿತ್ತು ..

"ಭಟ್ರೇ , ಅದೇ ಮೊನ್ನೆ ನಿಮ್ಮ ಮಗ ರಘು ಬಂದಿದ್ದ .. ರಾತ್ರಿ ೧೧ ಗಂಟೆಗೆ .. ನಿಮ್ಮ ಮಗ ಅಂತ ಹೇಳಿದ .. ನಿದ್ದೆ ಬರ್ತಾ ಇಲ್ಲ, ಯಾವುದಾದರು ಪುಸ್ತಕ ಕೊಡಿ ಓದ್ತೀನಿ  ಅಂತ ಎರಡು ಪುಸ್ತಕ ತೆಗೊಂಡು ಹೊದ.. ಅದು ನನ್ನ ಗೆಳೆಯನಿಗೆ ಒಂದ್ಸಾರಿ ಕೊಡಬೇಕಾಗಿತ್ತು .. ಅದ್ಕೆ ತೆಗೊಂಡು ಹೋಗೋಣ ಅಂತ ಬಂದೆ "

ಮೂವರೂ ಮತ್ತಷ್ಟು ದಿಗ್ಭ್ರಾಂತ ರಾದರು .. " ನನ್ನ ಮಗನೆ? ನಿಮ್ಮ ಮನೆಗೆ ಬಂದಿದ್ನೆ?" ರಾಮ ಭಟ್ಟರು ತೊದಲಿದರು..

ಹೋ  , ನಾನು ಬಹುಶ ಮೋಸ ಹೋಗಿದ್ದೆ .. ಅದ್ಯಾರೋ ನನ್ನ ಪುಸ್ತಕ ಕದ್ದು ಬಿಟ್ಟರು \ಅಂತ ನನಗೆ ಅರ್ಥವಾಗಿತ್ತು ..

ಒಂದು ಕ್ಷಣ ಒಳ ಹೋದ ರಾಮಭಟ್ಟರು ಕೈಯಲ್ಲಿ ಒಂದು ಫೋಟೋ ಹಿಡಿದುಕೊಂಡು ಬಂದರು ..
"ನಿಮ್ಮ ಮನೆಗೆ ಬಂದಿದ್ದು ಈ ಹುಡುಗನಾ "

"ಹೌದು ಭಟ್ರೇ ಇವನೇ .. ನಿಮ್ಮ ಮಗ ಅಂತ ಹೇಳಿದ ಅದಕ್ಕೆ ಪುಸ್ತಕ ಕೊಟ್ಟೆ .. ನಿಮ್ಮ ಮಗ ಅಲ್ವೇ?" ಅಂತ ಕೇಳಿದೆ ..

"ನನ್ನ ಮಗನೇ , ಆದರೆ ಆತ ತೀರಿಕೊಂಡು ೪ ವರ್ಷ ಆಯಿತು"..

ಕಿವಿಗೆ ಕಾದ ಸೀಸ ಹೊಯ್ದ೦ತಾಯಿತು .. "ಏನು??" ನಾನು ದಿಗ್ಭ್ರಾಂತ ನಾದೆ ...

"ಹೌದು , ನಾಲ್ಕು ವರ್ಷದ ಹಿಂದೆ ನನ್ನ ಮಗ ಅಪಘಾತವೊಂದರಲ್ಲಿ ತೀರಿಕೊಂಡು ಬಿಟ್ಟ .. ಹಾಗಿರುವಾಗ ಆತ  ನಿಮ್ಮ ಮನೆಗೆ ಬಂದು ಪುಸ್ತಕ ಹೇಗೆ ತಗೆದುಕೊಂದಿರಲು ಸಾಧ್ಯ.. ಯಾರೋ ಬೇರೆಯವರು ಬಂದಿರಬೇಕು ..  ನೋಡಿ ಅಲ್ಲಿ ಮನೆ ಹಿಂದೆ ಮಂಟಪದ ಥರ ಕಾಣಿಸ್ತಿದೆಯಲ್ಲ  ಅಲ್ಲೇ ನನ್ನ ಮಗನ ಸಂಸ್ಕಾರ  ಮಾಡಿದ್ದು "

ರಾಮಭಟ್ಟರು ಕೈ ತೋರಿಸಿದ ಕಡೆ ಮೆಲ್ಲನೆ ಸಾಗಿದೆ .. ಗೊರಿಯೊಂದು ಕಟ್ಟಲಾಗಿತ್ತು .. ನನ್ನ ಹಿಂದೆಯೇ ರಾಮಭಟ್ಟರು ಬಂದರು ..
 "ನಂಗೆ ಗೊತ್ತಿರ್ಲಿಲ್ಲ ಭಟ್ರೇ, ಕ್ಷಮಿಸಿ.. ಬಹುಶ ಬೇರೆ ಯಾರೋ ಹುಡುಗರು ಬಂದಿರಬೇಕು .. ಆದರೆ ನಿಮ್ಮ ಮಗನ ಫೋಟೋ ನೋಡಿದ್ನಲ್ಲ ಅದೇ ಥರ ಇದ್ದ .. ಅದಕ್ಕೆ...." ಮುಂದೆ ಮಾತೆ ಹೊರಡಲಿಲ್ಲ ..

ಗೋರಿಯ ಪಕ್ಕದಲ್ಲಿ ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ಅನಾಥವಾಗಿ ಬಿದ್ದಿದ್ದವು!!!!



ಗೋರೆ ಉವಾಚ :

ಗ್ರಂಥಾಲಯದಲ್ಲಿರುವ  ಅತೀ ಕೆಟ್ಟ ಅಭಿರುಚಿಯ  ಪುಸ್ತಕಕ್ಕೆ ಯಾವತ್ತೂ ಧೂಳು ಇರುವುದಿಲ್ಲ !!!
 

Tuesday, April 29, 2014

ಒಂದು ನಾಣ್ಯ , ಎರಡು ಮುಖ!!!


ಆವತ್ತು ಗುರುವಾರ .. ಮೀಸೆ ಪರವ ಎಂದಿನಂತೆ ತನ್ನ ಕೆಲಸಗಳನ್ನು ಮುಗಿಸಿ ದೇವಸ್ತಾನದತ್ತ ಸಾಗಿದ್ದ.. ಜಾತಿಯಲ್ಲಿ ದಲಿತ.. ರಾಘವೇಂದ್ರ ಸ್ವಾಮಿಗಳ ದೊಡ್ಡ ಭಕ್ತ .. ಊರಿನಲ್ಲೇ ಇರುವ ರಾಯರ ಗುಡಿಗೆ ಹೋಗೋಣವೆಂದು ಅತ್ತ ಸಾಗಿದ್ದ.. ಆವತ್ತು ದೇವಸ್ತಾನದಲ್ಲಿ ಯಾವುದೋ ವಿಶೇಷ ಪೂಜೆ ನಡೆಯುತ್ತಿತ್ತು .. ದೇವರ ದರ್ಶನ ಪಡೆದವನೇ ಊಟದ ಛತ್ರದತ್ತ ಸಾಗಿದ್ದ.. ರಾಯರ ಪ್ರಸಾದ ಸ್ವೀಕರಿಸಿ ಹೋಗೋಣವೆಂದು ಊಟದ ಎಲೆ ಮುಂದೆ ಕೂತಿದ್ದವನಿಗೆ ಇಂಥ ಪರಿಸ್ತಿತಿ ಬರಬಹುದೆಂದು ಕನಸೋ ಬಿದ್ದಿರಲಿಕ್ಕಿಲ್ಲ!!

ಊಟದ ಎಲೆ ಮುಂದೆ ಕೂತಿದ್ದ  ಮೀಸೆ ಪರವ ಇನ್ನೇನು ಊಟದ ಎಲೆಗೆ ಕೈ ಹಾಕಬೇಕು ಅನ್ನುವಸ್ತರಲ್ಲಿ ಆತನ ಮುಂದೆ ಬಂದು ನಿಂತಿದ್ದರು ಶಾಸ್ತ್ರಿಗಳು , ಅವರ ಜೊತೆ ಇನ್ನೂ ೩-೪ ಜನರಿದ್ದರು.. ನೋಡಿದರೆ ಬ್ರಾಹ್ಮಣರೆಂದು ಗೊತ್ತಗುತ್ತಿತ್ತು..

"ಯಾರು ನೀನು??"  ಶಾಸ್ತ್ರಿಗಳು ಏರು ದನಿಯಲ್ಲಿ ಕೆಳಿದರು ..
"ನಾನು ಸ್ವಾಮೀ , ಮೀಸೆ ಪರವ"..
"ದಲಿತರ ಜಾತಿ ಅಲ್ವೇ "
"ಹೌದು "
"ಮತ್ತೆ ಏಕೆ ಬ್ರಾಹ್ಮಣರ ಜೊತೆ ಊಟಕ್ಕೆ ಕೂತೆ?" ಶಾಸ್ತ್ರಿಗಳ ಕಂಚಿನ ಕಂಠ ಅಲ್ಲಿ ಪ್ರತಿಧ್ವನಿಸಿತು ..
ಮೀಸೆ ಪರವನಿಗೆ ಮಾತೆ ಹೊರಡಲಿಲ್ಲ !! ನಾನೂ ಮನುಷ್ಯನಲ್ವೆ? ದಲಿತ ಅನ್ನುವುದಾದರೂ ಏನು?

"ಕಿವಿ ಕೆಳೋದಿಲ್ವೆ" ಶಾಸ್ತ್ರಿಗಳು ಮತ್ತೆ ಅಬ್ಬರಿಸಿದರು !!
"ಇವನನ್ನು ಎತ್ತಿ ಹೊರಗೆ ಹಾಕಿ" ಜೊತೆಯಲ್ಲಿದ್ದವರಿಗೆ ಶಾಸ್ತ್ರಿಗಳು ಆಜ್ಞಾಪಿಸಿದರು .. ಒಂದೇ ಕ್ಷಣ !! ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಮೀಸೆ ಪರವನನ್ನು ಎತ್ತಿ ದೇವಸ್ತಾನದಿಂದ ಹೊರ ಹಾಕಲಾಗಿತ್ತು !!!
ಅಲ್ಲಿದ್ದ ಯಾರೂ ಮಾತಾಡಲಿಲ್ಲ !! ಹೊರಗಿದ್ದ ದಲಿತರೂ ಸಹ !! ಕಾರಣ ಅವರ ಜಾತಿ !!!

-------------------------------------------------------------------------------------------------------------------

ಸುಬ್ಬಾ ಭಟ್ಟರಿಗೆ ಆವತ್ತು ಸ್ವರ್ಗಕ್ಕೆ ಮೂರೇ  ಗೇಣು !! ಅತೀ ಬಡತನದಲ್ಲಿ ಬದುಕಿದ್ದರೂ ಸಹ ಮಗ MBBS ಪಾಸು ಮಾಡಿದ ಕ್ಷಣ !!
"ಅಪ್ಪ , ಇವತ್ತು ಸಂದರ್ಶನವಿದೆ , ಆಶಿರ್ವಾದ ಮಾಡಿ" ಮಗ ಚಿದಂಬರ ಕಾಲಿಗೆ ಬಿದ್ದು ನಮಸ್ಕರಿಸಿದ ..
"ಒಳ್ಳೆದಾಗಲಿ ಮಗಾ" ಸುಬ್ಬ ಭಟ್ಟರ ಬಾಯಿಂದ ಇದಕ್ಕಿಂತ ಹೆಚ್ಚಿನ ಮಾತು ಹೊರಡಲಿಲ್ಲ .. ಕಣ್ಣಲ್ಲಿ ಆನಂದ ಬಾಷ್ಪ !! ಮಗನಿಗೆ ಇನ್ನೇನು ಸರ್ಕಾರಿ ನೌಕರಿ ಸಿಗಲಿದೆ .. ಎಲ್ಲ ಕಷ್ಟಗಳು ದೂರವಾದವು ಎಂದು ಸುಬ್ಬ ಭಟ್ಟರು ಆನಂದ ವಾಗಿದ್ದರು !!

ಆವತ್ತು ಡಾಕ್ಟರ್ ಗಳಿಗಾಗಿ ಸರಕಾರ ಅಭ್ಯರ್ಥಿ ಗಳಿಗೆ ಸಂದರ್ಶನ ಕರೆದಿತ್ತು .. ಚಿದಂಬರ ಅದೇ ಕೆಲಸಕ್ಕೆ ಅರ್ಜಿ ಹಾಕಿದ್ದ .. ಸಂದರ್ಶನಕ್ಕೆ ಕರೆ ಕೂಡ ಬಂದಿತ್ತು ... ೮೦ ಶೇಕಡಾ ಅಂಕ ಗಳಿಸಿದ ತನಗೆ ನೌಕರಿ ಶತಸಿದ್ಧ  ಆದರೆ ಅಲ್ಲಿ ನಡೆದದ್ದೇ ಬೇರೆ!!

ಸಂದರ್ಶನಕ್ಕೆ ಕರೆದ ಪಟ್ಟಿಯಲ್ಲಿ ಆತನ ಹೆಸರೇ ಮಾಯವಾಗಿತ್ತು !!!
ಈ ಹುದ್ದೆಗಳು ಮೀಸಲಾಗಿವೆ .. ಬ್ರಾಹ್ಮಣರಿಗೆ ಅವಕಾಶವಿಲ್ಲ !!! ಚಿದಂಬರ ಬೆಚ್ಚಿಬಿದ್ದ !!
೫೦ ಶೇಕಡಾ ಅಂಕ ಗಳಿಸಿದ ದಲಿತ , ಈ ಹುದ್ದೆ ಪಡೆಯಬಹುದು.. ಆತ ಜನರ ಜೀವ ರಕ್ಷಿಸುವ ವೈದ್ಯ !! ಅದೇ ೮೦ ಶೇಕಡಾ ಅಂಕ ಗಳಿಸಿದ ಚಿದಂಬರನಿಗೆ ಅವಕಾಶವಿಲ್ಲ.. ಕಾರಣ ಅವನ ಜಾತಿ !!!

-----------------------------------------------------------------------------------------------------------------------

ಗೋರೆ ಉವಾಚ !!!

ಎಲ್ಲರೂ ಸಮಾನರು!! ಕೆಲವರು ಮಾತ್ರ ಹೆಚ್ಚು ಸಮಾನರು !!! ಇನ್ನು ಕೆಲವರು ಅತೀ ಹೆಚ್ಚು ಸಮಾನರು !!!!!!!


 

Monday, February 3, 2014

ಸಣ್ಣ ಕಥೆಗಳು !!


ಫೋಟೊ !!

ರಾತ್ರಿ ಜೋರಾಗಿ ನಿದ್ದೆ ಬರುತ್ತಿತ್ತು . ಮನೆಯಲ್ಲಿ ಇದ್ದಿದ್ದ್ದು ನಾನೊಬ್ಬನೇ ..  ಮೊಬೈಲ್  ಫೋನ್  ಚಾರ್ಜ್ ಗೆ ಹಾಕಿದವನೇ ನಿದ್ದೆಗೆ ಜಾರಿ ಬಿಟ್ಟೆ .. ತಣ್ಣ ನೆಯ ಗಾಳಿ ಬೀಸುತ್ತಿತ್ತು .. ಬೆಳಿಗ್ಗೆ ಎದ್ದು ನೋಡಿದರೆ ನಾನು ಗಟ್ಟಿ ನಿದ್ದೆ ಹೊಡಿಯುತ್ತಿರುವ ನನ್ನ ಫೋಟೋ ಫೇಸ್ಬುಕ್ ನಲ್ಲಿ ರಾರಾಜಿಸುತ್ತಿತ್ತು !!
----------------------------------------------------------------------------------------------------------------------
ಆಗಂತುಕ !!

"ಅಪ್ಪಾ  ಹೊರಗೆ ಯಾರೋ ಬಾಗಿಲು ಬಡಿಯುತ್ತಿದ್ದಾರೆ" ಮಗನ ಮಾತಿಗೆ ಎಚ್ಚರವಾಯಿತು ..ಮಧ್ಯ ರಾತ್ರಿ ೧೨ ಗಂಟೆ !  ಮೆಲ್ಲನೆ ಬಂದು ಬಾಗಿಲು ತೆಗೆದವನೆ ದಂಗು ಬಡಿದಂತೆ ನಿಂತು ಬಿಟ್ಟೆ !! ಹೊರಗೆ ಮಗ ನಿಂತಿದ್ದ !! "ಅಪ್ಪಾ  ಒಳಗೆ ಮಂಚದ ಮೇಲೆ ಯಾರೋ ನನ್ನ ಜೊತೆ ಮಲಗಿದ್ದಾರೆ " ಮಗನ ಮಾತು ಕೇಳಿ ಮೂರ್ಚೆ ಹೋದೆ !!!
----------------------------------------------------------------------------------------------------------------------
ವಿಮಾನ !!

ಆಗಷ್ಟೇ ವಿಮಾನದಿಂದ ಇಳಿದು ಲಗೇಜ್ ಪಡೆದುಕೊಳ್ಳುವ ಜಾಗಕ್ಕೆ ಬಂದೆ .. ಆದರೆ ಅಲ್ಲಿ ನನ್ನ ಲಗಜೆ ಇರಲಿಲ್ಲ .. ಇದರ ಬಗ್ಗೆ ಸಿಬ್ಬಂದಿಗೆ ದೂರು   ಹೇಳೋಣವೆಂದು ಅವರ ಕೋಠ ಡಿಗೆ ಹೊದೆ.. "ಹೆದರಬೇಡಿ ಸಾರ್ ನಿಮ್ಮ ಬ್ಯಾಗ್ ಸಿಗುತ್ತದೆ "  ಹೇಳಿದ ಆಕೆ ಮುಂದುವರೆದು  "ಸಾರ್ ನಿಮ್ಮ ವಿಮಾನ ಬಂದು ತಲುಪಿದೆಯೇ " ಎಂದು ಕೇಳಿದಳು!!!
----------------------------------------------------------------------------------------------------------------------
ಉಸಿರು !!

"ಅಷ್ಟೊಂದು  ಜೋರಾಗಿ ಯಾಕೆ ಉಸಿರಾಡುತ್ತಿದ್ದೀರ ?"  ಆಕೆ ಕೇಳಿದಾಗ ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು !! ಯಾಕೆಂದರೆ ನನ್ನ ಉಸಿರು ನಿಂತು ಹೋಗಿ ೩೦ ನಿಮಿಷವಾಗಿತ್ತು !!!!

---------------------------------------------------------------------------------------------------------------------

ಗೋರೆ ಉವಾಚ !!

ಭಯಾನಕ ಕಥೆಗಳು ಹೆಚ್ಚಾಗಿ ಇಷ್ಟವಾಗುವುದು ಮದುವೆಯಾದವರಿಗೆ.. ಕೇಳಿದ್ದು , ನಿಜ ಜೀವನದಲ್ಲಿ ಹೊಂದಿಕೊಳ್ಳ ಲಿಕ್ಕೆ ಸಹಾಯ ವಾಗುತ್ತವೆ!!!