Sunday, October 26, 2014

ದೀಪಾವಳಿ ಮತ್ತು ಬುದ್ಧಿಜೀವಿಗಳು !!!

ದೀಪಾವಳಿ ದಿನ.. ಅದೊಂದು ಅಭಿಯಾನ ಕೈಗೊಂಡಿದ್ದ ಕೆಲವಷ್ಟು ಮಂದಿ ಕಣ್ಣಿಗೆ ಬಿದ್ದರು..

"ಪಟಾಕಿ ಸುಡಬೇಡಿ .. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತದೆ.. ನಾವು ಮುಂದಿನ ಪೀಳಿಗೆಯ ಜನರಿಗೆ ಬದುಕಲು ಉತ್ತಮ ವಾತಾವರಣ ನಿರ್ಮಿಸಿಲಿಕ್ಕಾದರೂ ಈ ಪಟಾಕಿಗಳಿಗೆ ದೀಪಾವಳಿಯ ದಿವಸ ಅಂತ್ಯ ಹಾಡಬೇಕು .."
ಮನೆ ಮನೆಗೂ ತೆರಳಿ ಜನರಿಗೆ ಅವರು ತಿಳಿಹೆಳುತ್ತಿದ್ದರು..

ಮಧ್ಯಾನ್ನದ ಹೊತ್ತು.. ಗೆಳೆಯನನ್ನು ಬಸ್ಸ್ಟ್ಯಾಂಡ್ ತನಕ ಕಳುಹಿಸಿ ವಾಪಸು ಬರುತ್ತಿದ್ದಾಗ ಮತ್ತೆ ಅವರೇ ನನ್ನ ಕಣ್ಣಿಗೆ ಬಿದ್ದರು.. ಹೋಟೆಲೊಂದರಲ್ಲಿ ಗಡದ್ದಾಗಿ ಕೋಳಿ , ಕುರಿಯ ಊಟ ಮಾಡುತ್ತಿದ್ದರು ... ಒಂದು ಕ್ಷಣ ಅಲ್ಲೇ ನಿಂತೆ .. ಊಟ ಮುಗಿಸಿದ ಅವರಲ್ಲೊಬ್ಬ ಹೊರಗೆ ಬಂದು ಸಿಗರೇಟು ಹಚ್ಚಿಕೊಂಡ .. ಅದ್ಯಾಕೋ ಇವೆಲ್ಲವೂ ನನಗೆ ವಿಚಿತ್ರ ವಾಗಿ ಕಾಣತೊಡಗಿತ್ತು .. ಜನರಿಗೆ ಪಟಾಕಿಯ ಬಗ್ಗೆ ತಿಳಿಹೇಳುವ ಇವನಿಗೆ ತನ್ನ ಆರೋಗ್ಯದ ಬಗ್ಗೆಯೇ ಚಿಂತೆ ಇಲ್ಲವೇ ?
ಆತನನ್ನು ಮಾತನಾಡಿಸೋಣವೆಂದು ಆತನತ್ತ ಹೆಜ್ಜೆ ಹಾಕಿದೆ..

ನನ್ನನ್ನು ನೋಡಿದ ಆ ನಾಲ್ಕು ಮಂದಿಯಲ್ಲೊಬ್ಬ ನನಗೆ ಹಾಗೂ ಅಲ್ಲೇ ಇದ್ದ ಕೆಲವೊಂದು ಮಂದಿಗೆ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ವಿವರಿಸತೊಡಗಿದ .. ಪಟಾಕಿಯಿಂದ ಹೊರಸೂಸಿ ಗಾಳಿ, ಮಣ್ಣು ಸೇರುವ  ಇಂಗಾಲದ ಬಗ್ಗೆ ಅತೀ ಉತ್ತಮವಾಗಿ ಹೇಳಿದ .. ಆತನನ್ನು ಒಂದು ಕ್ಷಣ ತಡೆದು ಹೇಳಿದೆ, "ನನ್ನದೊಂದು ಪ್ರಶ್ನೆಯಿದೆ ನಿಮಗೆ"..

"ಕೇಳಿ ಸಾರ್"

"ಪಟಾಕಿ ಗಿಂತ ಹೆಚ್ಚು ಇಂಗಾಲ ದ ಪರಿಣಾಮ ಮಾಂಸಾಹರದಿಂದ ಉಂಟಾಗುತ್ತದೆ ಅಂತ ಕೇಳಿದ್ದೆ ಹೌದಾ?"..

ಆತ ಒಂದು ಕ್ಷಣ ದುರುಗುಟ್ಟಿ ನೋಡಿದ ..

"ಇರಬಹುದು ಸಾರ್.. ಆದರೆ ಈ ಮಾಂಸಾಹಾರ ಅನ್ನೋದು ವಿಶ್ವ ದಾದ್ಯಂತ ಇದೆ .. ಅದನ್ನು ನಿಲ್ಲಿಸುವುದು ಕಷ್ಟ .. ಹಾಗಾಗಿ ನಮ್ಮಿಂದ ಆಗುವ ಚಿಕ್ಕ ಪ್ರಯತ್ನ ನಾವು ಮಾಡುತ್ತಿದ್ದೇವೆ .. ದೀಪಾವಳಿ ಸಮಯದಲ್ಲಿ ಪಟಾಕಿ ಉಪಯೋಗಿಸದಂತೆ , ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಉಪಯೋಗಿಸದಂತೆ , ಚೌತಿಯ ಸಂದರ್ಭ ಗಣಪತಿ ನೀರಿನಲ್ಲಿ ವಿಸರ್ಜಿಸದಂತೆ ನಾವು ಅಭಿಯಾನ ಕೈಗೊಳ್ಳುತ್ತೇವೆ "

"ಒಳ್ಳೆಯ ಕೆಲಸ .. ಆದರೆ ಇಡೀ ಪ್ರಪಂಚಕ್ಕೆ ನಿಮ್ಮಿಂದ ತಿಳಿಸಲಾಗದ್ದು , ಆದರೆ ನಿಮಗೆ ತಿಳಿದದ್ದು ನೀವೂ ಮಾಡಬಹುದಲ್ಲ "..

"ಏನು? "... ಆತನಿಗೆ ಅರ್ಥ ವಾದಂತೆ ಕಾಣಲಿಲ್ಲ ..

"ಅದೇ ಮಾಂಸಾಹಾರ, ಅದನ್ನು ನಿಮಗೆ ತ್ಯಜಿಸಬಹುದು ಅಲ್ಲವೇ ?"

"ಹೇ ಹೇ .. ಎಲ್ಲವನ್ನು ಪಾಲಿಸುವುದು ಕಷ್ಟ , ಅದಕ್ಕೆ ನಾವು ನಮ್ಮಿಂದ ಆಗುವಂಥ ಚಿಕ್ಕ ಪ್ರಯತ್ನ ಮಾಡಿದ್ದೇವೆ .. ಹೋಳಿಯ ದಿನ ಬಣ್ಣ , ಗಣಪತಿ ವಿಸರ್ಜನೆ , ಪಟಾಕಿ ಇವೆಲ್ಲವನ್ನೂ ಬಿಟ್ಟಿದ್ದೇವೆ .."

"ನಾನು ಮಾಂಸಾಹಾರಿ ಅಲ್ಲ.. ಇದು ನನ್ನ ಚಿಕ್ಕ ಕೊಡುಗೆ ವಾತಾವರಣಕ್ಕಾಗಿ .. ಹಾಗಾಗಿ ನಾನು ಪಟಾಕಿ ಸಿಡಿಸಬಹುದೇ ? "

ಆತ ಮೌನವಾದ ..

"ಮತ್ತೆ ಈ ಸಿಗರೇಟು ಆ ಅಭ್ಯಾಸವೂ ನನಗಿಲ್ಲ .. ಬೀಡಿ , ಸಿಗರೇಟು ಇದರಲ್ಲೆಲ್ಲ ಅದೆಷ್ಟೊಂದು ಬಾಲ ಕಾರ್ಮಿಕರು ದುಡಿಯುತ್ತಾರೆ ಅಲ್ಲವೇ ?...  ಮತ್ತೆ ಈ ಕೆಟ್ಟ ಚಟಗಳು ಪಟಾಕಿ ಉಂಟುಮಾದುವುದಕ್ಕಿಂತ ಹೆಚ್ಚಿನ ಮಾಲಿನ್ಯ , ಸಾವು - ನೋವು  ಉಂಟುಮಾಡುತ್ತವೆ .. ಜನರಿಗೆ ಈ ಬಗ್ಗೆ ತಿಳಿಹೇಳಿ ದ್ದೀರ ?"

ಆತ ಮತ್ತೆ ಮೌನ ...

ನಾನೇ ಮತ್ತೆ ಮುಂದುವರಿಸಿದೆ .. " ಮಾಂಸಾಹರದಿಂದ ಆಗುವ ದುಷ್ಪರಿಣಾಮ , ವಾಹನಗಳಿಂದ ಆಗುವ ದುಷ್ಪರಿನಾಮಕ್ಕಿಂತ ಹೆಚ್ಚಂತೆ ಹೌದ? ಮತ್ತೆ ಈ ಕೈಗಾರಿಕೆಗಳು , ಕಲ್ಲಿದ್ದಲು , ಅದಿರು ಸಂಗ್ರಹ ಇವೆಲ್ಲವೂ ಸಹಾ ಸಾವಿರ ಪಟ್ಟು ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತವೆ ಅಂತ ಎಲ್ಲೋ ಓದಿದ ನೆನಪು  "

ಆತ ಮೆಲ್ಲನೆ ಬೆವರತೊದಗಿದ್ದ .. ತುಂಬಾ ಬಾಯಾರಿಕೆ ಆಗಿರಬೇಕು , ಬ್ಯಾಗಿನಿಂದ ತಂಪು ಪಾನಿಯದ ಬಾಟಲಿ ಹೊರತೆಗೆದು ಕುಡಿಯ ತೊಡಗಿದ ..
"ಈ ಪಾನೀಯ ಗಳಲ್ಲೂ ಕೆಮಿಕಲ್ ಇದ್ಯಲ್ಲ .. ಇದನ್ನು ತಯಾರಿಸುವ ಕಾರ್ಖಾನೆಗಳಿಂದ ದಿನಾ ಕಲ್ಮಶ ನದಿ ಸೇರುತ್ತದಲ್ಲಾ ? ಇದೂ ಕೆಟ್ಟದಲ್ಲವೇ? ಮತ್ತೆ ಈ ಪ್ಲಾಸ್ಟಿಕ್ ಬಾಟಲಿಗಳು .."

ಆತ ತಟ್ಟನೆ ಬಾಟಲಿಯ ಬಿರಡೆ ಮುಚ್ಚಿ ಚೀಲದಲ್ಲಿ ಹಾಕಿಕೊಂಡ 

"ಮತ್ತೆ ಹೊಸ ವರ್ಷ , ಕ್ರಿಸ್ಮಸ್ ದಿನಾನು ಮೇಣದ ಬತ್ತಿ ಉರಿಸ್ತಾರೆ ,ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಇದೆ ರೀತಿ ಜನಕ್ಕೆ ತಿಳಿ ಹೇಳ್ತೀರಾ ? ಅದೆಲ್ಲ ಯಾಕೆ , ಅದ್ಯಾವನೋ ರಾಜಕಾರಣಿ ಜಯಗಳಿಸಿದಾಗ , ಜೈಲಿನಿಂದ ಬಿಡುಗಡೆಯಾದಾಗ ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಹೋಗಿ ತಿಳಿ ಹೆಳುತ್ತೀರ ?"

"ಅದೆಲ್ಲಾ ತುಂಬಾ ಚಿಕ್ಕ ಪ್ರಮಾಣದಲ್ಲಿ ಸಾರ್ " ಅವರಲ್ಲೊಬ್ಬ ಬಾಯಿ ಬಿಟ್ಟಿದ್ದ ..

"ಇರಬಹುದು , ಆದರೆ ಚಿಕ್ಕ ಪ್ರಮಾಣದಲ್ಲೇ ಪ್ರಾರಂಭಿಸಿದರೆ ಉತ್ತಮ ಅಂತ ನೀವೇ ತಾನೇ ಹೇಳಿದ್ದು "

ಆ ನಾಲ್ಕೂ ಮಂದಿ ನನ್ನನ್ನು ತಿಂದು ಬಿಡುವಂತೆ ದುರುಗುಟ್ಟಿ ನೋಡತೊಡಗಿದರು ..

"ದೀಪಾವಳಿ ನಮ್ಮ ಹಬ್ಬ .. ಹಬ್ಬದ ಆಚರಣೆಗಾಗಿ ವರ್ಷಕ್ಕೆ ಒಂದು ದಿನ ನಾವು ಪಟಾಕಿ ಬಿಡುತ್ತೇವೆ .. ಆದರೆ ಆಗ ಮಾತ್ರ ಬಂದು ಹಬ್ಬದ ಸಂತೋಷವನ್ನು ಕಿತ್ತುಕೊಳ್ಳುವುದಕ್ಕಿಂತ , ಪಟಾಕಿಗಿಂತ ಹೆಚ್ಚು ಮಾರಕವಾದ  ಬೀಡಿ , ಸಿಗರೇಟು , ಮಾಂಸ , ಕೈಗಾರಿಕೆ , ತಂಬಾಕು , ವಾಹನ ಇತ್ಯಾದಿಗಳ ಬಗ್ಗೆ ವರ್ಷ ಪೂರ್ತಿ ಅರಿವು ಮೂಡಿಸುವ ಕಾರ್ಯ ಒಳಿತಲ್ಲವೇ ?"

ನನ್ನನ್ನು ದುರುಗುಟ್ಟಿ ನೋಡಿದ ನಾಲ್ಕೂ ಮಂದಿ ದಡದಡನೆ ಅಲ್ಲಿದ್ದ ಅವರ ಕಾರು ಏರಿ ಕೂತರು .. ಕಪ್ಪು ಹೋಗೆ ಉಗುಳುತ್ತ ಸಾಗಿದ ಕಾರನ್ನೇ ನೋಡುತ್ತಾ ನಿಂತುಬಿಟ್ಟೆ ..

ಸೂಚನೆ : ಪಟಾಕಿಯ  ದುಷ್ಪರಿಣಾಮಗಳ ಬಗ್ಗೆ ನನಗೂ ತಿಳಿದಿದೆ .. ಅದಕ್ಕೇ ನಾನೂ ಪಟಾಕಿ ಉಪಯೋಗ ಕಮ್ಮಿ ಮಾಡಿದ್ದೇನೆ .. ಆದರೆ ಅದು ಹಬ್ಬದ ಸಂತೋಷವನ್ನು ಹಾಳುಗೆಡಹುವಷ್ಟಲ್ಲ ..


ಗೋರೆ ಉವಾಚ :

ಪಟಾಕಿ ಮತ್ತು ಹೆಂಡತಿಗಿರುವ ಒಂದೇ ಒಂದು ವ್ಯತ್ಯಾಸವೆಂದರೆ , ಪಟಾಕಿ ಹಳೆಯದಾದಷ್ಟು ಶಬ್ದ ಕಮ್ಮಿ !!!