Wednesday, March 18, 2009

ಆ ಹಾಡು ಕೇಳಿದ ನಂತರ....

ಅದೇನೋ ಆಸ್ಕರ್ ಬಂತು ಅಂತ "ಸ್ಲಮ್ ಡಾಗ್ ಮಿಲಿಯನರ್" ಚಲನ ಚಿತ್ರದ "ಜಯ ಹೋ" ಹಾಡು ಮೊನ್ನೆ ಕೇಳಿಸಿಕೊಳ್ಳುತ್ತಿದ್ದೆ... ಆ ಹಾಡು ಕೇಳಿದ ನಂತರ ಕೆಲವಾರು ಪ್ರಶ್ನೆ ಗಳು ನನ್ನನ್ನು ಕಾಡತೊಡಗಿದವು... ಯಾರನ್ನೂ ಕೇಳೋದು ಬೇಡ, ಆಸ್ಕರ್ ಪ್ರಶಸ್ತಿ ಬಂದ ಹಾಡು ಅಂತ ಸುಮ್ಮನಿದ್ದೆ... ಆದರೆ ಅದ್ಯಾಕೋ ಇವತ್ತು ಸುಮ್ಮನಿರಲಾಗುತ್ತಿಲ್ಲ...
ಅಲ್ಲ, ಆ ಹಾಡು ಆಸ್ಕರ್ ಪ್ರಶಸ್ತಿ ಬರೋವಷ್ಟು ಚೆನ್ನಾಗಿದೆಯೇ? ಬೇರೆ ಯಾರೂ ಅಥವಾ ಖುದ್ದು ಏ.ಆರ್.ರೆಹಮಾನರು ಇದಕ್ಕಿಂತ ಉತ್ತಮ ಹಾಡು ಕೊಟ್ಟಿಲ್ಲವೆ? ಅದ್ಯಾಕೋ ಇಂಥ ತಲೆಬುಡ ಇಲ್ಲದ ಪ್ರಶ್ನೆಗಳು ನನ್ನನ್ನು ಕಾಡತೊದಗಿವೆ...
ಅಳಿದೂರಿಗೆ ಉಳಿದವನೆ ಅರಸ ಅನ್ನೋ ಹಾಗೆ ಬೇರೆ ಯಾವ್ದೇ ಹಾಡು ಈ ವರ್ಷ ಸ್ಪರ್ಧೆಯಲ್ಲಿ ಇಲ್ಲದ್ದಕ್ಕೆ ಬಹುಮಾನ ಕೊಟ್ರೋ? ಅಥವ ಬೇರೆ ಏನಾದ್ರು ಕಾರಣ ವಿದ್ದಿರಬಹುದೇ?
ನಿಮಗೆ ಗೊತ್ತಿದ್ರೆ ಸ್ವಲ್ಪ ಹೇಳ್ತೀರಾ???

ಹೀಗೂ ಇರ್ತಾರೆ ನೋಡಿ!!

ನಮ್ಮದು ಒಂದು ಚಿಕ್ಕ ಹಳ್ಳಿ... ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಿನ ಮಧ್ಯದಲ್ಲಿ ನಮ್ಮ ಮನೆ ಇತ್ತು (ಈವಾಗ ಅಲ್ಲಿ ನಕ್ಸಲೈಟ್ ಕಾಟ ಜಾಸ್ತಿ ಆಗಿ ತೋಟ ಮಾರಿ ನೆಲ್ಲಿಕಾರು ಅನ್ನೋ ಊರಲ್ಲಿ ಅಣ್ಣ ಮನೆಮಾಡಿಕೊಂಡಿದ್ದಾನೆ)... ಇನ್ನು ನಮ್ಮ ಪಕ್ಕದ ಮನೆ ಅಂದ್ರೆ ಸುಮಾರು ಅರ್ಧ ಕಿಲೋಮೀಟರು ದೂರ.. ನಮ್ಮ ಮನೆಯಿಂದ ಸುಮಾರು ೧ ಕಿಲೋಮೀಟರು ದೂರದಲ್ಲಿದ್ದದ್ದೆ ಅಚ್ಯುತ ಭಟ್ಟರ ಮನೆ... ನಾನು ಚಿಕ್ಕವನು ಅಂದ್ರೆ ೫-೬ ವರ್ಷದಿಂದ ಅವ್ರನ್ನು ನೋಡಿದ ನೆನಪು... ಬಹುಶ ಆಗ ಅವ್ರಿಗೆ ೬೫-೭೦ ವರ್ಷ ಇದ್ದಿರಬೇಕು... ಅವ್ರು ನಮ್ಮೂರಲ್ಲಿ ಭಾರಿ ಫೇಮಸ್ ಯಾಕಂದ್ರೆ ಅವ್ರಿಗೆ ಮದ್ವೇನೆ ಆಗಿರಲಿಲ್ಲ ಮತ್ತು ಆ ವಯಸ್ಸಿನಲ್ಲೂ ಮದ್ವೆ ಆಗ್ಬೇಕು ಅಂತ ಅವ್ರು ಹಾಕ್ತಿದ್ದ ಪ್ಲಾನ್...
ಅವ್ರ ಬಗ್ಗೆ ತುಂಬ ಕಥೆಗಳಿವೆ ಆದ್ರೆ ನಂಗೆ ತುಂಬ ಚೆನ್ನಾಗಿ ನೆನಪಿರೋದು ಅಂದ್ರೆ ಅವ್ರು ನಮ್ಮ ಇಡೀ ತಾಲೂಕಿಗೆ ಡಿಕ್ಲೆರೇಶನ್ ಕೊಟ್ಟಿದ್ದು... (ಡಿಕ್ಲರೇಶನ್ ಅಂದ್ರೆ ಉಳುವವನೇ ಭೂಮಿಯ ಒಡೆಯ ಅಂತ ಇಂದಿರಾ ಗಾಂಧಿಯವರು ತಂದ ಕಾನೂನು)...
ಇಂದಿರಾ ಗಾಂಧಿಯವರು ಅದ್ಯಾವಾಗ ಉಳುವವನೇ ಭೂಮಿಯ ಒಡೆಯ ಅಂತ ಕಾನೂನು ತಂದು ಅರ್ಜಿ ಹಾಕೋಕೆ ಹೇಳಿದರೋ ಆವಾಗ ಈ ಅಚ್ಯುತ ಭಟ್ಟರು ಇಡೀ ತಾಲುಕನ್ನೇ ಉಳುವವನು ನಾನು ಅಂತ ಅರ್ಜಿ ಹಾಕಿದರಂತೆ.... ಆದ್ರೆ ಅದು ಏನಾಯಿತು ಅಂತ ಕೇಳಿದ್ರೆ ಇನ್ನೊ ಏನೂ ಪ್ರತಿಕ್ರಿಯೆ ಬಂದಿಲ್ಲ ಅನ್ನುತ್ತಿದ್ದರು ಅಚ್ಯುತ ಭಟ್ಟರು!!!... ಮೊನ್ನೆ ಊರಿಗೆ ಹೋದಾಗ ಅವರನ್ನು ನೋಡ್ಕೊಂಡು ಬಂದೆ... ವಯಸ್ಸು ೮೫-೯೦ ರ ಆಸುಪಾಸು..ಈಗಲೋ ಆಗಲೋ ಅನ್ನುವಂತಿದ್ದಾರೆ ಆದ್ರೆ ನಂಗೆ ಇನ್ನೂ ಮದ್ವೆ ಆಗಿಲ್ಲ, ಕೊಟ್ಟ ಡಿಕ್ಲೆರೇಶನ್ ಅರ್ಜಿ ಏನಾಯಿತೋ ಏನೋ ಅಂತ ಮತ್ತೆ ಮೆಲ್ಲನೆ ಹೇಳಿಕೊಂಡರು ....ಬೆಂಗಳೂರಲ್ಲೇ ಇದ್ರೆ ನಂಗೊಂದು ಹುಡುಗಿ ಹುಡುಕ್ರಿ ಅಂದ್ರು ... ಎಷ್ಟು ವಯಸ್ಸಿನ ಹುಡುಗಿ ಬೇಕು ಅಂತ ಕೇಳ್ದೆ... ೪೦-೫೦ ಆಸುಪಾಸಿದ್ದು ತೊಂದ್ರೆ ಇಲ್ಲ ಅಂದ್ರು... ೪೦ ರ ವಯಸ್ಸಿನ ಹುಡುಗಿ ಸಿಕ್ಕಿಲ್ಲಂದ್ರೆ ೨೦ ರದ್ದು ಎರಡು ಆದಿತೋ ಅಂತ ಕೇಳಿದ್ದಕ್ಕೆ ಮೆಲ್ಲನೆ ನಕ್ಕರು... ವಯಸ್ಸು ಎಷ್ಟು ಅಂತ ಕೇಳಿದ್ದಕ್ಕೆ ೯೪- ೯೬ ಅಂತ ಏನೋ ಹೇಳಿದ್ರು.. ಸೆಂಚುರಿ ಬಾರ್ಸಿ ಅಜ್ಜಾ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ...

Monday, March 16, 2009

ವ್ಯವಸಾಯ ಮತ್ತು ಸಾಫ್ಟ್ವೇರ್

ಅದ್ಯಾಕೋ ಈ ಕೆಲಸ ಸಾಕಾಗೋಗಿದೆ... ದಿನಾ ಬೆಳಿಗ್ಗೆ ಎದ್ದು ಅದೇ ಕಂಪ್ಯೂಟರ್ ಮುಂದೆ ಕೂತು ಸಂಜೆ ತನಕ ಕೀಬೋರ್ಡ್ ಒತ್ತಿ ಒತ್ತಿ ತಲೆ ಎಲ್ಲ ಹಾಳಾಗಿ ಹೋಗಿತ್ತು ಅಂತ್ಹೇಳಿ ಮೊನ್ನೆ ಊರಿನ ಕಡೆ ಹೊರಟೆ...
ಅದೆಷ್ಟು ಚೆಂದದ ಊರು... ಕಣ್ಣು ಹಾಯಿಸಿದಷ್ಟು ಹಸಿರು... ಸಂಜೆ ಹೊತ್ತಿಗೆ ಧಬೋ ಅಂತ ಸುರಿದ ಮಳೆ, ಕಾದ ಮನಸ್ಸನ್ನು ತಂಪಾಗಿಸಿದ್ದವು... ಬೆಳಿಗ್ಗೆ ಎದ್ದು ಕಾಫಿ ಕುಡಿದು ತೋಟದ ಕಡೆ ಹೆಜ್ಜೆ ಹಾಕಿದೆ... ೬-೭ ವರ್ಷಗಳ ಹಿಂದಿನ ದಿನಗಳು ನೆನಪಾದವು.... ಅದೇ ತೋಟ, ಅಲ್ಲಿ ಕಿತ್ತ ಸೊಪ್ಪು, ಹುಲ್ಲು, ಚಿಮ್ಮುವ ಸ್ಪ್ರಿಂಕ್ಲರ್, ಹೊತ್ತ ಗೊಬ್ಬರದ ವಾಸನೆ ಹಾಗೆಯೇ ಇದ್ದಂತ್ಹಿದ್ದವು ... ಹಕ್ಕಿಗಳ ಚಿಲಿಪಿಲಿ, ಪೇರಳೆ ಹಣ್ಣು (ಸೀಬೆ ಕಾಯಿ) , ಬೊಂಡ(ಸೀಯಾಳ), ಮಾವಿನ ಮಿಡಿ, ಪಪ್ಪಾಯಿ ಎಲ್ಲವನ್ನೂ ಸವಿದು ವಾಪಾಸು ಬೆಂಗಳೂರಿಗೆ ಹೊರಟಾಗ ಮನಸ್ಸು ಯಾಕೋ ಭಾರವಾಗಿತ್ತು... ಎಲ್ಲವನ್ನೂ ಬಿಟ್ಟು ಊರಲ್ಲಿ ಸ್ವಲ್ಪ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದರೆ ಹೇಗೆ ಅಂತ ಅದ್ಯಾವತ್ತಿನಿಂದಲೋ ಆಲೋಚಿಸುತ್ತಿದ್ದೇನೆ... ಆದರೆ ಯಾಕೋ ಎಲ್ಲವೂ ಏರುಪೇರು... ಇನ್ನೆಷ್ಟು ವರ್ಷಗಳು ಬೇಕೋ ನನ್ನ ಕನಸಿನ ಗೂಡಿಗೆ ವಾಪಸಾಗಲು... ಬೆಂಗಳೂರು ಅನ್ನೋದಂತೂ ನನಗ್ಯಾಕೋ ಚಕ್ರವ್ಯೂಹದ ಥರ ಅನ್ನಿಸ್ತಿದೆ... ಒಳಗೆ ಹೊಕ್ಕಾಗಿದೆ ಹೊರ ಬರುವ ದಾರಿ ಗೊತ್ತಾಗ್ತಿಲ್ಲ... ದಾರಿ ಕಾಣದಾಗಿದೆ ರಾಘವೆಂದ್ರನೆ...ಬೆಳಕ ತೋರಿ ನಡೆಸುವ.. ಅಂತ ಅತ್ತಿಗೆ ಮೊನ್ನೆ ಸಂಜೆ ಹೇಳುತ್ತಿದ್ದ ಭಜನೆ ಕಿವಿಯಲ್ಲಿ ಮತ್ತೆ ಮತ್ತೆ ಗುಯಿಗುಡುತ್ತಿದೆ...