Wednesday, April 7, 2010

ಮತ್ತೆ ಭೂತದ ಬೆನ್ನು ಹತ್ತಿ!!!

ಭಾಗ ಒಂದು ಇಲ್ಲಿ ಓದಿ..

"ಆವತ್ತೇ ನನಗೆ ಗೊತ್ತಾಗಿ  ಹೋಗಿತ್ತು ಇದು ನನ್ನ ಬೆನ್ನು ಬಿಡೋದಿಲ್ಲ ಅಂತ"  ಕುಮಾರ ತನ್ನ ಮಾತು ಮುಂದುವರಿಸಿದ..
"ಜ್ಯೋತಿಷಿ ಪಕ್ಕಾ ಹೇಳಿದ್ದ.. ನಿನ್ನ ಮನೆಯಲ್ಲಾಗಲೀ ಆಜು ಬಾಜಿನಲ್ಲಾಗಲಿ ಮಾಟ ಮಾಡಿ, ಭೂತವನ್ನು ಬಂಧಿಸಿ ಇಡಲಾಗಿದೆ ಅಂತ.. ತುಂಬಾ ಹುಡುಕಿದೆ ಆದ್ರೆ ಏನೂ ಸಿಗಲಿಲ್ಲ..ಸಾಮಾನ್ಯವಾಗಿ ಇಂಥದ್ದೆಲ್ಲಾ ತಾಮ್ರದ ತಗಡಿನಲ್ಲಿ ಮಂತ್ರಿಸಿ, ಅಥವಾ ತೆಂಗಿನಕಾಯಿ, ನಿಂಬೆ ಹಣ್ಣು ಮಂತ್ರಿಸಿ ಮಾಡುತ್ತಾರಂತೆ, ಮಾಟದ ಪ್ರಭಾವ ದಿಂದ ಹೊರ ಬರಬೇಕಾದರೆ ಅದನ್ನು ನಮ್ಮ ಜಾಗದಿಂದ ದೂರ ಎಸೆಯಬೇಕು.. ಆವತ್ತಿಂದ ಹುಡುಕಿ ಹುಡುಕಿ ಸಾಕಾಯಿತು..ನನಗೇನೂ ಸಿಗಲಿಲ್ಲ...  ಪೂಜೆ ಹವನ ಎಲ್ಲಾ ಮಾಡಿಸ್ದೆ.. ಇಗೀಗ ನನ್ನ ಮಗಳು ಸಹ ಮಂಕಾಗಿರುತ್ತಾಳೆ.. ಮಾತೆ ಆಡೋದಿಲ್ಲ .. ಅವಳಿಗೆ ಏನಾದ್ರು ಆದ್ರೆ ಅಂತ ಹೆದರಿಕೆ." ಒಂದು ಕ್ಷಣ ಕುಮಾರ ಮಾತು ನಿಲ್ಲಿಸಿದ..
"ಇದು ೨೧ನೆ ಶತಮಾನ.. ಮಾಟ ಮಂತ್ರ ಇದ್ಯೋ ಇಲ್ವೋ ನಂಗೊತ್ತಿಲ್ಲ.. ದರಬೆಸಿ ಜನಗಳಿಗಿಂತ ದೊಡ್ಡ ಭೂತಾನೂ ಇರಲಿಕ್ಕಿಲ್ಲ,,, ಆದರೆ ನೀನೇನೂ ಹೆದರಬೇಡ... ಇದಕ್ಕೊಂದು ಪರಿಹಾರ ಇದೆ.." ನನ್ನ ಮಾತು ಕೇಳುತ್ತಿದ್ದ ಕುಮಾರ ನೆಟ್ಟಗಾದ... ಆತನಲ್ಲಿ ಕುತೂಹಲ ಮೂಡಿತು.. ಏನಾದರೂ ಮಾಡಿ ಈ ಮಾಟ-ಭೂತದಿಂದ ಹೊರ ಬಂದರೆ ಸಾಕು ಅನ್ನುವಂತಿತ್ತು ಆತನ ನೋಟ.. ಏನೆ ಹೇಳಿದರೂ ಮಾಡಲು ತಯಾರಾದಂತೆ ಅನ್ನಿಸಿತು...
"ನನಗೆ ಗೊತ್ತಿರೋ ಒಬ್ರು ಇದ್ದಾರೆ.. ಅವರಲ್ಲಿ ಇದಕ್ಕೆ ಖಂಡಿತಾ ಪರಿಹಾರ ಸಿಗಬಹುದು.. ಯಾವುದಕ್ಕೂ ನಾನು ಅವರನ್ನು ಭೇಟಿಯಾಗಿ ೨ ದಿನದಲ್ಲಿ ಇಲ್ಲಿಗೆ ಬರುತ್ತೇನೆ.. ಯಾವುದೇ ಭೂತವೇ ಇರಲಿ ಅದ್ರ ಬೆನ್ನು ಹತ್ತೋದು ಅಂದ್ರೆ ನಂಗೆ ತುಂಬಾ ಇಷ್ಟ" ಹಾಗಂತ ಹೇಳಿ ಹೊರಡಲನುವಾದೆ..
ತಾನೂ ಬರುತ್ತೇನೆ ಅಂದ ಕುಮಾರನಿಗೆ ಬೇಡ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ..

ಛೆ.. ಹೇಗಿದ್ದ ಕುಮಾರ ಹೇಗಾದ? ಆ ಪೋಲಿ ಕುಮಾರ ಇವತ್ತು ಪೋಲಿಯೋ ಬಡಿದಂತೆ ಮಂಕಾಗಿದ್ದಾನೆ.. ಮಾಟ ಮಂತ್ರ, ಭೂತ ಎಲ್ಲಾ ಇದೆಯೋ ಇಲ್ಲವೋ, ಆದರೆ ಅದು ಇದೆ ಮತ್ತು ಅದು ನನ್ನ ಮೇಲೆ ದಾಳಿ ಮಾಡುವಂತೆ ಯಾರೋ ಮಾಡಿದ್ದಾರೆ  ಅನ್ನೋ ಹೆದರಿಕೆಯೇ ಆತನನ್ನು ಅರ್ಧ ಕೊಂದು ಹಾಕಿತ್ತು.. ಆಮೇಲೆ ನಡೆದ ಕೆಲವೊಂದು ಘಟನೆಗಳು , ಬೆಂಕಿಗೆ ತುಪ್ಪ ಸುರಿದಂತೆ ಆತನ ಹೆದರಿಕೆಯನ್ನು ಇಮ್ಮಡಿಗೊಳಿಸಿದ್ದವು..  ಆತ ಇದೆ ಗುಂಗಿನಲ್ಲಿ ತನ್ನ ಕೆಲಸ ಎಲ್ಲಾ ಬಿಟ್ಟು ಜ್ಯೋತಿಷಿ ಗಳ ಹಿಂದೆ ಬಿದ್ದಿದ್ದ.. ಬಿ ಪಿ ಹೆಚ್ಚಿತ್ತು.. ಆಡಲು ಬರುತ್ತಿದ್ದ ಮಗುವಿಗೆ ಬಯ್ಯುವುದು ಸಾಮಾನ್ಯವಾಗಿತ್ತು... ಮಗು ಮಂಕಾಗದೆ ಇನ್ನೇನಾಗುತ್ತೆ.?.. ಭೂತದ ಬೆನ್ನು ಹತ್ತಲು ನಾನು ತಯಾರಾದೆ!!

ಆತನ ಮನೆಗೆ ಮಾಡಿದ್ದ ಮಾಟ ತೆಗೆಸಲು ನಾನು ತಯಾರಾದೆ.. ಭೂತ ಓಡಿಸುವ ಬಗ್ಗೆ ಕೆಲವು ಬೇಕಾದ ಮಾಹಿತಿ ಕಲೆ ಹಾಕಿದೆ.. ಬೇಕಾದ ಸಿದ್ಧತೆ ಎಲ್ಲಾ ಮಾಡಿಕೊಂಡು ೨ ದಿನಗಳ ನಂತರ ನಾನು ಆತನ ಮನೆಯತ್ತ ಹೆಜ್ಜೆ ಹಾಕಿದೆ.. ಕೆಲವೊಂದು ಮಾತುಗಳ ನಂತರ ನಾನು ಆತನ ಮನೆಯೆಲ್ಲ ಒಮ್ಮೆ ಸುತ್ತು ಹಾಕಿದೆ.. ಮಲಗುವ ಕೋಣೆಯಲ್ಲಿ ಮಂಚವನ್ನು ಉತ್ತರ ದಿಕ್ಕಿನ ಕಡೆ ಹಾಕಲಾಗಿತ್ತು.. ಉತ್ತರ ದಿಕ್ಕಿಗೆ ಯಾಕೆ ತಲೆಹಾಕಿ ಮಲಗಬಾರದು ಅನ್ನೋ ಕಥೆ ನಮ್ಮ ಪುರಾಣಗಳಲ್ಲಿದೆ.. ಆದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ  ಶಕ್ತಿ ಹೆಚ್ಚು ಇದ್ದು ಅದು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲೊ ವಿಜ್ಞಾನ ಓದಿದ್ದು ನೆನಪಾಯಿತು.. ಕುಮಾರನಿಗೆ ಹೇಳಿ ಮಂಚವನ್ನು ಪೂರ್ವ ದಿಕ್ಕಿನ ಕಡೆ ತಿರುಗಿಸಿದೆ..ತೆಗೆದು ಕೊಂಡು ಹೋಗಿದ್ದ ಫೆಂಗ್ ಶುಇ ಅಂತ ಕರೆಯೋ ಕರ್ಕಶ ಶಬ್ದ ಮಾಡೋ ಸಾಮಾನೊಂದನ್ನು  ಚಾವಡಿಯಲ್ಲಿ ನೇತು ಹಾಕಿದೆ..
"ಮೊದಲಿಗೆ ಮಾಟ ಮಾಡಿದ ಅನುಭವ ನಿಮಗೆ ಹೇಗಾಯಿತು?" ಕುಮಾರನಿಗೆ ಪ್ರಶ್ನೆ ಹಾಕುತ್ತಿದ್ದಂತೆ, ಕುಮಾರ ಮತ್ತು ಆತನ ಹೆಂಡತಿ ನನ್ನನ್ನು ಒಬ್ಬ ಮಾಂತ್ರಿಕನನ್ನು ನೋಡುವಂತೆ ಬೆರಗು ಕಣ್ಣುಗಳಿಂದ ನೋಡತೊಡಗಿದರು.."ದನ ಒಂದು ಸತ್ತು ಹೋಯಿತು.. ಏನು ಅಂತ ಬಲಿಮೆ (ಭವಿಷ್ಯ) ಕೇಳಿದೆವು.. ಆಗ ತಿಳಿಯಿತು" ಕುಮಾರನ ಹೆಂಡತಿ ಹೇಳುತ್ತಿದ್ದಂತೆ, ಅವರಿಬ್ಬರನ್ನೂ ದನಗಳನ್ನು ಕಟ್ಟುತ್ತಿದ್ದ ಹಟ್ಟಿಯ ಬಳಿ ಹೋಗುವಂತೆ ಹೇಳಿದೆ..
"ಅಂದರೆ ಮಾಟ ಮಾಡಿದ್ದು ಇಲ್ಲೇ ಎಲ್ಲೊ ಇರಬೇಕು.. ಇಲ್ಲಿಂದ ಪ್ರಾರಂಭವಾಗಿದೆ.. ಈಗ ಹುಡುಕಿ.. ಹಟ್ಟಿಯ ಸಂದಿ ಸಂದಿಗಳನ್ನು ಹುಡುಕಿ.." ಹಾಗಂತ ಹೇಳಿ ನಾನು ಹೊರಬಂದೆ.. ಕುಮಾರ ಮತ್ತು ಆತನ ಹೆಂಡತಿ ಹುಡುಕಿದ್ದೇ ಹುಡುಕಿದ್ದು.. ಅಲ್ಲೇನಿದೆ ಮಣ್ಣಾಂಗಟ್ಟಿ ಸಿಗೋಕೆ.. ಬರುತ್ತಿದ್ದ ನಗು ತಡೆದುಕೊಂಡು ಕುಮಾರನ ಪುಟಾಣಿ ಮಗಳ ಜೊತೆ ಆಟವಾಡತೊಡಗಿದೆ... ಸುಮಾರು ಅರ್ಧ ಘಂಟೆ ಕಳೆಯಿತು..
"ಇಲ್ಲಿ , ಇಲ್ಲಿ ಏನೋ ಇದೆ!!!" ಕುಮಾರ ಕಿಟಾರನೆ ಕಿರುಚಿಕೊಂಡಿದ್ದು ನೋಡಿ ಥಟ್ಟನೆ ಅತ್ತ ಓಡಿದೆ..

ಹೌದು ಅಲ್ಲೇನೋ ವಸ್ತುವೊಂದು ಹಟ್ಟಿಯ ಸಂದಿಯಲ್ಲಿತ್ತು.. ಕುಮಾರ ಅದನ್ನು ಹೊರ ತೆಗೆದಿದ್ದ.. ಪ್ಲಾಸ್ಟಿಕ್ ನಲ್ಲಿ ಕಟ್ಟಲಾಗಿದೆ.. ಆತನ ಕೈಯಿಂದ ಅದನ್ನು ತೆಗೆದುಕೊಂಡು ಮೆಲ್ಲನೆ ಬಿಚ್ಚಿದೆ.. ಪ್ಲಾಸ್ಟಿಕ್ ಗೆ ಮಣ್ಣೆಲ್ಲ ಅಂಟಿಕೊಂಡಿತ್ತು.. ಒಳಗಡೆ ನೋಡಿದವನೇ ಬೆಚ್ಚಿಬಿದ್ದೆ!!! ಅದರಲ್ಲಿತ್ತು ಒಂದು ತಾಮ್ರದ ತಗಡು, ಅದರ ತುಂಬಾ ಕುಂಕುಮ..!!!
ಪೂರ್ತಿ ಬಿಚ್ಚಲು ಧೈರ್ಯ ಸಾಲದೇ ಹಾಗೆ ಮತ್ತೆ ಕಟ್ಟಿದೆ.. "ದೂರ ದೂರಕ್ಕೆ ಎಸೆದು ಬಾ.. ಪೀಡೆ ತೊಲಗಲಿ.. ಹೋಗು.. ಬೇಗ ಹೋಗು.. ಯಾರಿಗೂ ತಿಳಿಯದಂತೆ ,ಯಾರ ಕೈಗೂ ಸಿಗದಂತಹ ಜಾಗಕ್ಕೆ ಎಸೆದು ಬಾ.."  ಬೆವರಿನಿಂದ ಒದ್ದೆಯಾಗಿದ್ದ ನಾನು ನಡುಗುವ ಧ್ವನಿಯಲ್ಲಿ ಕುಮಾರನಿಗೆ ಆಜ್ಞಾಪಿಸಿದೆ.. ಹಿಂದೂ ಮುಂದು ನೋಡದೆ, ನನ್ನ ಕೈಯಿಂದ ಪೊಟ್ಟಣ ತೆಗೆದುಕೊಂದವನೇ ತೋಟದತ್ತ ಓಡಿದ ಕುಮಾರ.. ಆತನ ತೋಟ ದಾಟಿದರೆ ಇರುವುದೇ ಕಪಿಲಾ ನದಿ.. ಅಲ್ಲಿಯೇ ಬಿಸಾಕುತ್ತೇನೆ ಅಂತ ಹೇಳಿ ಒಂದೇ ಓಟ ಕಿತ್ತ... ಅರ್ಧ ಘಂಟೆಯೊಳಗೆ ಎಲ್ಲವೂ ಮುಗಿದು ನಾನು ಹೊರಡಲನುವಾದೆ.. ಈ ವಿಷಯ ಯಾರಿಗೂ ಹೇಳಬಾರದು ಎಂದೂ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮ ವಾಗಿರಬೇಕೆಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ..ಕುಮಾರ ಮತ್ತು ಆತನ ಪತ್ನಿಯ ಮುಖದಲ್ಲಿ ಮಂದಹಾಸವಿತ್ತು.. ಕೆಲವು ದಿನಗಳ ನಂತರ ಆತ ತನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ,ಅದೂ ಇದೂ ಅಂತ ಕೆಲವೊಂದು ಪೂಜೆ ಮಾಡಿಸಿದ್ದ.. ನಾನೂ ಹೋಗಿ ಪ್ರಸಾದ ಸ್ವೀಕರಿಸಿ ಬಂದಿದ್ದೆ.. ಕುಮಾರನ ಸಂಸಾರ ಉಲ್ಲಾಸದಿಂದ ಇದ್ದಿದ್ದು ನೋಡಿ ಖುಷಿಯಾಯಿತು...
ಹಾಗಿರಲು, ಮೊನ್ನೆ ಕುಮಾರ ಫೋನ್ ಮಾಡಿದ್ದ.. ಕ್ಷೇಮ ಸಮಾಚಾರ ಮುಗಿದು "ನೀನು ಮಾಯವಾಗೋದು ಯಾವಾಗ" ಅಂತ ಆತನಿಗೆ ಕೇಳಿದೆ .. ಯಾಕೆ ಅಂದ.. ಅಲ್ಲ ನೀನು ಅಷ್ಟೊಂದು ಸಪೂರ ಆಗ್ಬಿಟ್ಟಿದ್ದೆ, ಹೀಗೆ ಆದ್ರೆ ಒಂದು ದಿನ ನೀನು ಮಾಯ ಆಗ್ಲೇ ಬೇಕಲ್ಲ ಅಂತ ನಕ್ಕೆ.. "ಇಲ್ವೋ ನಾನೀಗ ೬೫ ಕಿಲೋ ಗೊತ್ತ.." ಅಂತ ಪಕ ಪಕನೆ ನಕ್ಕ.. ಅದೇ ಕೆಲವೊಂದು ಪೋಲಿ ಜೋಕ್  ಮಾಡಿದ.. ಅಡಿಕೆ ಹೇಗಿತ್ತು ಈ ವರ್ಷ ಅಂತ ಕೇಳಿದ್ದಕ್ಕೆ "ಹೇಗಿರುತ್ತೆ?? ಪ್ರತಿ ಸಲದಂತೆ ಕೆಂಪಗೆ, ದುಂಡಗೆ ಹಾಗೆ ಇದೆ " ಅಂತ ಮತ್ತೆ ನಗಲು ಶುರು ಹಚ್ಚಿದ.. ಕುಮಾರ ಹಿಂದಿನಂತೆ ಆಗಿದ್ದು ನನಗೆ ಸಮಾಧಾನ ತಂದಿತ್ತು..ಮಾಟ ಮಂತ್ರ ಎಲ್ಲಾ ತೊಲಗಿ ಹೋಗಿದೆ ಅಂತ ಆತನಿಗೆ ಖಾತ್ರಿಯಾಗಿ ನಿರುಮ್ಮಳನಾಗಿದ್ದ... ಮಗಳನ್ನು ಈ ವರ್ಷ ಶಾಲೆಗೆ ಸೇರಿಸಬೇಕೆಂದು, ಇನ್ನೊಂದು ನಾಮಕರಣದ ಊಟಕ್ಕೆ  ನಾನು ಇನ್ನು ಕೆಲವೇ ತಿಂಗಳುಗಳಲ್ಲಿ ಆತನ ಮನೆಗೆ ಹೋಗಬೇಕಾಗುತ್ತೆ ಅಂತ ತಿಳಿದು ಸಂತೋಷವಾಯಿತು.. ಹಾಗೆ ಮಾತು ಮುಗಿಸಿದ ನಾನು,
ಆವತ್ತು ಹಟ್ಟಿಯಲ್ಲಿ ಸಿಕ್ಕಿದ್ದ ತಾಮ್ರದ ತಗಡನ್ನು ನಾನೇ ಶೆಣೈ ಅವರ ಅಂಗಡಿಯಿಂದ ತಂದಿದ್ದೆಂದೂ , ಅದರಲ್ಲಿ ಕುಂಕುಮ ಹಾಕಿ ಮಡಚಿ ಹಟ್ಟಿಯ ಹತ್ತಿರ ಹೋದಾಗ ಅವರಿಬ್ಬರಿಗೂ ತಿಳಿಯದಂತೆ ನಾನೇ ಇಟ್ಟಿದ್ದೆಂದೂ  , ಅದನ್ನೇ ಅವರಿಗೆ ಸಿಗುವಂತೆ ಮಾಡಿ ಮಾಟ ಎಲ್ಲಾ ಹೋಯ್ತು ಅನ್ನೋ ನಂಬಿಕೆ ಬರುವಂತೆ ಮಾಡಿದ್ದೆಂದೂ ,   ಕುಮಾರನಿಗೆ ಹೇಳಲೇ ಇಲ್ಲ!!!!!

--ಮುಗಿಯಿತು.

16 comments:

PARAANJAPE K.N. said...

ಮನಸಿಗೆ ಹಿಡಿದಿದ್ದ ಭೂತ ಬಿಡಿಸಲು ನೀವು ಮಾಡಿದ ತ೦ತ್ರ ಫಲಿಸಿತು. ಚೆನ್ನಾಗಿದೆ. ಇಲ್ಲಿ ಒ೦ದಿಬ್ಬರು ಮಾಟ
ಮ೦ತ್ರ ಪೀಡಿತರು ಇದ್ದಾರೆ, ಅವರಿಗೆ ನಿಮ್ಮ ನ೦ಬರ್ ಕೊಡಲೇ ??

sunaath said...

ರವಿಕಾಂತ,
ಭೂತದ ಸಸ್ಪೆನ್ಸ್ ಬಯಲಾಗುತ್ತಿದ್ದತೆ ನಗು ಉಕ್ಕಿ ಬಂತು. ಭಲೇ ಕಿಲಾಡಿ ಕಣ್ರೀ ನೀವು!

Shashi jois said...

ರವಿಕಾಂತ ,
ನೀವು ಪತ್ತೇದಾರಿ ಕೆಲಸ ಚೆನ್ನಾಗಿ ಮಾಡಿದ್ರಿ.ನಿಮ್ಮ ಸ್ನೇಹಿತನ ಮನಸ್ಸಿನ ಭೂತ ವನ್ನು ಸಲೀಸಾಗಿ ಓಡಿಸಿದಿರಿ. ಅಡ್ಡಿಲ್ಲ ಮಾರಾಯರೇ !!!!!

Subrahmanya said...

ಮನಸಿನ ಭೂತವನ್ನು ಬಿಡಿಸೋದಿಕ್ಕೆ ಒಳ್ಳೆ ಉಪಾಯ ಮಾಡಿದ್ರಿ. ಚೆನ್ನಾಗಿತ್ತು.
ಹಾಗೇ ನಮ್ಮ ಮನೆಯಲ್ಲೊಂದು ಸೀಬೆ ಮರವಿದೆ. ಹಣ್ಣು ಬಿಡುವ ಕಾಲದಲ್ಲಿ ಕದ್ದು ಕೀಳುವವರು ಹೆಚ್ಚಾಗಿದ್ದರು. ಕಾಟ ತಡೆಯದೆ, ಒಂದು ದಿನ, ಒಂದು ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ, ದಾರ ಪೋಣಿಸಿ, ಮರಕ್ಕೆ ನೇತು ಹಾಕಿದೆ. ಅಂದಿನಿಂದ ಅತ್ತ ಯಾರ ಸುಳಿವೂ ಇಲ್ಲ ನೋಡಿ..!!
ಒಮ್ಮೊಮ್ಮೆ ಇಂತಹ ಐಡಿಯಾಗಳು ಕೆಲಸಕ್ಕೆ ಬರುತ್ತದೆ.

ದಿನಕರ ಮೊಗೇರ said...

ರವಿಕಾಂತ್,
ಈ ಸಾರಿ ಓದಲು ಶುರು ಮಾಡಲು, ಕೊನೆಯಲ್ಲಿ ಏನು ಬರೆದಿದೆ ಅಂತ ನೋಡಿಯೇ ಓದಲು ಶುರು ಮಾಡಿದೆ...... ಅಂತ್ಯ ಚೆನ್ನಾಗಿದೆ...... ಮಾಟಕ್ಕೆ ಹೆದರದೆ ಇರೋರು ಯಾರುಆಲ್ವಾ......

umesh desai said...

ಚೆನ್ನಾಗಿದೆ ನಿಮ್ಮ ಭೂತಪುರಾಣ....!

Manasaare said...

ರವಿಕಾಂತ ಅವರೇ ,
ಕಥೆ ತುಂಬಾ ಹಿಡಿಸಿತು . ಮನಸ್ಸಿಗೆ ಹಿಡಿದ ದೆವ್ವ ಬಿಡಿಸೋದು ಕಷ್ಟಕರ ಅನ್ನೋದು ನಿಮ್ಮ ಕಥೇಲಿ ಚೆನ್ನಾಗಿ ಮೂಡಿಬಂದಿದೆ . ಹಿಂದೆ ಒಮ್ಮೆ ನೋಡಿದ ಮನು ಅವರ ಕಿರು ಕಥೆ ನೆನಪಾಯಿತು . ಮನಸ್ಸು ನಮ್ಮ ಮೇಲೆ ಎಷ್ಟು ಪ್ರಭಾವಿ ಆಗಿ ಕೆಲಸ ಮಾಡುತ್ತೆ ಅನ್ನೋ ಪ್ರಯೋಗನ ಆ ಕಥೆ ಮೂಲಕ ತೋರಿಸಿದ್ದು . ಗಲ್ಲು ಶಿಕ್ಷೆಗೆ ಒಳಪಟ್ಟ ಕೈದಿಗೆ ನಿಂಗೆ ಗಲ್ಲು ಶಿಕ್ಷೆ ಬದಲು ಒಂದು ವಿಷದ injection ಕೊಡ್ತೀವಿ ಅಂತ ಹೇಳಿ , ಅವನಿಗೆ injection ಮಾಡ್ತಾರೆ . ಆಮೇಲೆ ೫-೧೦ ನಿಮಿಷದಲ್ಲಿ ಅವನ ಉಸಿರು ನಿಂತು ಹೋಗುತ್ತೆ . ಆದ್ರೆ ಅವನಿಗೆ ಕೊಟ್ಟ injection ನಲ್ಲಿ ವಿಷಾನು ಇರೋಲ್ಲ , ಏನು ಇರೋಲ್ಲ . ಅದರಲ್ಲಿ ಇದ್ದಿದ್ದು ಬರಿ distilled ವಾಟರ್ . ಅಂದ್ರೆ ಇದರ ಮೂಲಕ ನಾವು ನಂಬಿದ್ದು , ನಮ್ಮ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅಂತ ತೋರಿಸಿಕೊಡುತ್ತದೆ . ಇದನ್ನೇ ನಿಮ್ಮ ಕಥೆಲಿ ಚೆನ್ನಾಗಿ ಬಿಂಬಿಸಿದಿರ . ಇನ್ನು ಬರಲಿ ಇಂತಕಥೆಗಳು .

ಮನಸಾರೆ

shivu.k said...

ಸರ್.

ಭೂತದ ಕತೆ ಚೆನ್ನಾಗಿದೆ. ಭೂತದ ನಿಮ್ಮ ಆಟವನ್ನು ನೋಡಿ ನಗು ಬಂತು. ಸಸ್ಪೆನ್ಸ್ ಸೃಷ್ಟಿಸಿ ಅಂತ ಚೆನ್ನಾಗಿ ಮಾಡಿದ್ದೀರಿ...

ಸುಧೇಶ್ ಶೆಟ್ಟಿ said...

oh!!!

olle kelsa maadiddeeri ravikaanth avare...

inthaha sanniveshagaLu iddare innu innu bareyiri... itteechege regular aagi baritha ideeri annuvudhu santhoshadha sangathi.... :)

ಬಾಲು said...

Priya Gore avare,

Nimmannu namma maaji pradhaani galige haagu haali mukya mantri galige "Maantrika Salahe gaara" raagi thegedu kollabekendu ottaayisi raashtra pathi galige patra barediruve :)

Unknown said...

ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು..



ಬಾಲು ಸಾರ್..

ಭೂತ -ಪ್ರೇತಗಳಿಗೆ ನೀವು ನನ್ನನ್ನು ಮಾಂತ್ರಿಕ ಸಲಹೆಗಾರರನ್ನಾಗಿ ಮಾಡಿಬಿಟ್ರಲ್ಲ... ಈ ಶಾಪ ನಿಮಗೆ ತಟ್ಟದೆ ಇರೋದಿಲ್ಲ..:-)

ಮನಸು said...

hahaha tumba chennagide ravikaanth olle kelasa maadiddeeri, neevu baari chaNaksharu...

Ittigecement said...

ರವಿಕಾಂತ್...

ನಿಮ್ಮ ಈ ಎರಡು ಭಾಗ ಓದಿ...
ನಾನು ಸಣ್ಣವನಿದ್ದಾಗಿನ ಒಂದು ಘಟನೆ ನೆನಪಾಯಿತು...
ಇದನ್ನ ಬ್ಲಾಗಿನಲ್ಲಿ ಬರೆಯುವೆ...

ನಿಮ್ಮ ಬರವಣಿಗೆ...
ಮನದೊಳಗಿನ ಭೂತ ಬಿಡಿಸಿದ್ದೂ ಸೊಗಸಾಗಿದೆ...

ನನಗೆ ಲೇಖನ ಬರೆಯಲು ಸ್ಪೂರ್ತಿ ಕೊಟ್ಟಿದ್ದಕ್ಕೆ ಧನ್ಯವಾದಗಳು...

ಜಲನಯನ said...

ರವಿಕಾಂತ್..ಮನಸಿನ ಭೂತದ ಕಾಟ ಬಹಳ ಕಷ್ಟ ಬಿಡಿಸೋದು,,,ಆದ್ರೂ ಒಪ್ಪ್ಕೋಬೇಕು ನಿಮ್ಮನ್ನ ಇದನ್ನು ಸಾಧಿಸಿದ್ದಕ್ಕೆ...

ದೀಪಸ್ಮಿತಾ said...

ಚೆನ್ನಾಗಿ ಸಸ್ಪೆನ್ಸ್ ಸೃಷ್ಟಿಸಿದ್ದೀರ. ಕೊನೆ ಚೆನ್ನಾಗಿದೆ

maanasa saarovra said...

ಕಥೆ ಇಷ್ಟವಾಯ್ತು.. ಭೂತದ ಕಾಟ ಇಂದಿಗೂ ಪ್ರಚಲಿತ...ಕೊನೆ ತುಂಬಾ ಇಷ್ಟವಾಯ್ತು..