Monday, November 30, 2009

ಶಾಪ...

"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...

ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!

24 comments:

ಚುಕ್ಕಿಚಿತ್ತಾರ said...

ಚನಿಯನ ಕ್ಷಣಿಕ ಮತ್ತಿಗೆ ಭಾರೀ ಬೆಲೆ ತೆರಬೇಕಾಯಿತು. ಇಬ್ಬರೂ ಪರಸ್ಪರ ಹೊ೦ದಿಕೊ೦ಡಿದ್ದಿದ್ದರೆ ತೊ೦ದರೆ ಇರಲಿಲ್ಲ. ನೀತಿಯಿದೆ ನಿಮ್ಮ ಕಥೆಯಲ್ಲಿ... ವ೦ದನೆಗಳು.

umesh desai said...

ಗೋರೆ ಸರ ನಿಮ್ಮ ಕತೆಯಲ್ಲಿ ಬರೋ ಭಟ್ರು, ಚನಿಯ ಇಂದಿಗೂ ಕಾಣಸಿಗೋ ವ್ಯಕ್ತಿಗಳಾ ಇದು ನನ್ನ ಸಂಶಯ. ನನಗೆ
ಈ ಸಂಶಯ ಬರಲಿಕ್ಕೆ ಬೇರೆನೂ ಕಾರಣ ಅದ.ನೀವು ಕೊನೆಯಲ್ಲಿ ಚನಿಯನನ್ನು ದೋಷಿಸ್ಥಾನದಲ್ಲಿ ನಿಲ್ಲಿಸಿದ್ದು ಸರಿಕಾಣಲಿಲ್ಲ
ಈ ಪುರೋಹಿತರು,ಪುಣ್ಯಾತ್ಮರು ದೇಶ ಹಾಳುಮಾಡುತ್ತಲೆ ಇದ್ದಾರೆ ನೀವಾದರೂ ಅಂತ್ಯ ಹೇಳಿಸಬಹುದಾಗಿತ್ತು..!

Dileep Hegde said...

ರವಿಕಾಂತ ಸರ್..
ಮನುಷ್ಯ ಸಂಬಂಧಗಳ ನಡುವೆ ಹಮ್ಮು ಜಾಸ್ತಿ ಆದ್ರೆ ಇದೇ ಆಗೋದು.. ತಪ್ಪು ಇಬ್ರದ್ದೂ ಇದೆ.. ಗಲೀಜು ಮಾಡಿದ್ದು, ಮಾಡಿದ್ದು ತಪ್ಪು ಅಂತ ಪುರೋಹಿತರು ಹೆಳ್ದಾಗ ಅವರಿಗೆ ತಿರುಗಿ ಬೈದದ್ದು ಚನಿಯನ ತಪ್ಪು.. ಆದರೆ ಅದೇ ಸಿಟ್ಟನ್ನು ಮೀನು ಕಾಲಿ ಮಾಡಿಸುವದಾರ ಮೂಲಕ ತೀರಿಸಿಕೊಂಡಿದ್ದು, ಮತ್ತು ಆ ಮೂಲಕ ಚನಿಯನ ಆದಾಯ ಮೂಲವನ್ನೇ ಇಲ್ಲವಾಗಿಸಿದ್ದು ಪುರೋಹಿತರ ತಪ್ಪು.. Ego ಎಷ್ಟೆಲ್ಲಾ ಸಂಬಂಧಗಳನ್ನ ಹಾಳು ಮಾಡುತ್ತೆ ನೋಡಿ.. ಮತ್ತೆ ದೇಸಾಯಿವರು ಹೇಳಿದ ಹಾಗೆ ದೇಶ ಹಾಳಾಗ್ತಿರೊದು ಕೇವಲ ಪುರೋಹಿತರುಗಳಿಂದಲ್ಲ... ಎಲ್ಲರಿಂದ..

ಮನಸು said...

ಚೆನ್ನಾಗಿದೆ ರವಿಕಾಂತ್, ಮೇಲು ಕೀಳು ಮನೋಭಾವವಿದ್ದರೆ ಹೀಗೆಲ್ಲ ಆಗುತ್ತೆ.. ನೀತಿ ಪಾಠ ತಿಳಿಸಿದ್ದೀರಿ.. ಬಹಳ ದಿನಗಳ ಮೇಲೆ ಲೇಖನ ಬರೆದಿದ್ದೀರಿ ಅದು ಇಂತಹ ಬುದ್ಧಿಮಾತಿನೊಂದಿಗೆ ಧನ್ಯವಾದಗಳು.. ಇನ್ನು ಮುಂದೆ ಆಗಾಗ ಲೇಖನಗಳನ್ನು ಬಿತ್ತರಿಸುತ್ತಲಿರಿ.

ವಂದನೆಗಳು

PARAANJAPE K.N. said...

ಜನರ ಮನಸ್ಥಿತಿ ಮತ್ತು ವರ್ತನೆ ಹೇಗೆ ಸಾಮಾಜಿಕ ಜೀವನದಲ್ಲಿ ಜನಸಮುದಾಯಗಳ ನಡುವೆ ಕ೦ದಕ ಸೃಷ್ಟಿ ಮಾಡುವಲ್ಲಿ ಕಾರಣವಾಗುತ್ತದೆ ಎ೦ಬುದು ನಿಮ್ಮ ಸಣ್ಣಕಥೆಯಲ್ಲಿ ಹಾಸುಹೊಕ್ಕಾಗಿದೆ.

ಬಾಲು said...

ಚೆನ್ನಾಗಿದೆ, ಇಷ್ಟ ಆಯಿತು.

sunaath said...

ಹಹ್ಹಹ್ಹಾ!! ಕತೆ ಮಜವಾಗಿದೆ!

ದಿನಕರ ಮೊಗೇರ said...

ರವಿಕಾಂತ್,
ಕತೆ ಚೆನ್ನಾಗಿದೆ..... ಮೇಲು ಕೀಳು ಎಂಬ ಗೋಳು ಈಗ ಕಡಿಮೆಯಾಗಿದೆ....... ಇದರಿಂದ ನೀತಿ ಪಡೆಯೋಣ, ಪಾತ್ರದ ಬಗ್ಗೆ ವಿಮರ್ಶೆ ಬಿಟ್ಟು........ ನನ್ನ 'ಪಾರಿವಾಳ' ಕಥೆಯ ಬಗ್ಗೆ ನನಗಿಂತ ವಿನಯ್ ಭಟ್ ಹತ್ತಿರ ಕೇಳಿ.... ತುಂಬಾ ಚೆನ್ನಾಗಿಹೇಳುತ್ತಾನೆ......

Anonymous said...

ಗೋರೆ,

ನಿಮ್ಮ ಕತೆಯಲ್ಲಿ ಈ ಹಿಂದೆ ಬಂದ ಕನ್ನಡದ ಎಷ್ಟೋ ಕತೆಗಳಿಗಿಂತ ಬೇರೆ ಏನೂ ಇಲ್ಲ. ಆದರೆ ನನಗೆ ಆಶ್ಚರ್ಯವಾಗಿದ್ದು ಓದುಗರ ಅಭಿಪ್ರಾಯಗಳು. ದಬ್ಬಾಳಿಕೆಯ ಮುಖವನ್ನು ವ್ಯಂಗ್ಯದಲ್ಲಿ ತುಂಬ ಚೆನ್ನಾಗಿ ಬರೆದಿದ್ದೀರಿ, ಆದರೆ ಓದುಗರು ಕತೆಯಲ್ಲಿ ನೀತಿಯನ್ನು ಹುಡುಕಿದ್ದು ಬಹು ತಮಾಷೆಯಾಗಿದೆ. ಇದು ಇನ್ನೂ ಈ ಕಾಲದಲ್ಲೂ ನಡೆಯುತ್ತಾ? ಎಂದು ಸಂಶಯ ವ್ಯಕ್ತಪಡಿಸುವವರು ಹಳ್ಳಿಗಳ ಕಡೆಗೆ ಹೋಗದೆ ಯುಗವೇ ಆಯಿತು ಅನಿಸುತ್ತೆ. ವೈಯಕ್ತಿಕವಾಗಿ ಆದ ಸಣ್ಣ ಜಗಳ ಪುರೋಹಿತಶಾಹೀ ದೌರ್ಜನ್ಯದಲ್ಲಿ ಮುಗಿಯುವ ಕತೆಯಲ್ಲಿ ಚನಿಯನ ತಪ್ಪನ್ನು ಹುಡುಕುತ್ತ ಕೂಡುವುದು ತರವೇ?

Unknown said...

ಚುಕ್ಕಿಚಿತ್ತಾರ,
ಕಥೆ ಇಷ್ಟಪಟ್ಟಿದ್ದಕ್ಕೆಧನ್ಯವಾದಗಳು... ಹೀಗೆ ಬರುತ್ತಿರಿ..

Unknown said...

ಉಮೇಶ್ ದೇಸಾಯಿ ಸಾರ್ ,
ಕಥೆ ಇಷ್ಟಪಟ್ಟಿದ್ದಕ್ಕೆಧನ್ಯವಾದಗಳು... ಹೀಗೆ ಬರುತ್ತಿರಿ..
ಬಹುಶ ಹೌದು.. ಇಂಥ ವ್ಯಕ್ತಿಗಳನ್ನು ಹಳ್ಳಿಗಳ ಕಡೆ ಈಗಲೂ ಕಾಣಬಹುದು.. ಆದರೆ ಹಿಂದಿನಷ್ಟಲ್ಲ...
ಸಮಾಜವನ್ನು ಬದಲಾಯಿಸೋದು nanninda ಸ್ವಲ್ಪ ಕಷ್ಟ.. ನನ್ನ ಬ್ಲಾಗ್ ಆ ಮಹಾ ಮಡಿವಂತ ಭಟ್ಟರೂ ಓದುತ್ತಾರಾದ್ದರಿಂದ ಸ್ವಲ್ಪ ಸುಧಾರಿಸಿ ಕೊಂಡಾರು ಅನ್ನೋದಷ್ಟೇ ನನ್ನ ಆಶಯ...

Unknown said...

ದಿಲೀಪ್ ಸಾರ್,
ನೀವು ಹೇಳಿದ್ದು ಖರೆ... ಈ ಇಗೋ ಅನ್ನೋದು ಎಲ್ಲಾ ಹಾಳು ಮಾಡುತ್ತೆ...
ಧನ್ಯವಾದಗಳು..

Unknown said...

ಮನಸು ಮೇಡಂ,
ಕಥೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ... ಹೌದು, ತುಂಬ ದಿನಗಳ ನಂತರ ಬರೆಯಲು ಸಮಯ ಸಿಕ್ಕಿತು... ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು...

Unknown said...

ಪರಾಂಜಪೆಯವರೇ,
ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Unknown said...

ಬಾಲು ಸಾರ್,
ಧನ್ಯವಾದಗಳು..

Unknown said...

ಸುನಾಥ್ ಸಾರ್,
ಧನ್ಯವಾದಗಳು..

Unknown said...

ದಿನಕರ್ ಸಾರ್,
ಧನ್ಯವಾದಗಳು... ನೀವು ಹೇಳಿದಂತೆ ಈಗ ಹಳ್ಳಿ ಕಡೆ ಕೂಡ ಮೇಲು ಕೀಳು ಸ್ವಲ್ಪ ಕಡಿಮೆಯಾಗಿದೆ...
"ಪಾರಿವಾಳದ" ಬಗ್ಗೆ ವಿನಯ್ ಸಿಕ್ಕಾಗ ಖಂಡಿತಾ ಕೇಳುವೆ...

Unknown said...

ಅನಾಮಿಕರೆ,
ಬ್ಲಾಗ್ ಗೆ ಭೇಟಿ ಕೊಟ್ಟಿದ್ದು ಖುಷಿ ನೀಡಿತು... ಕಥೆಯಲ್ಲಿನ ವ್ಯಂಗ್ಯ ಇಷ್ಟಪಟ್ಟಿದ್ದಕ್ಕೆ ಧನ್ಯವಾದ...
ಈ ಥರ ಘಟನೆಗಳು ಈಗ ಹಳ್ಳಿಗಳಲ್ಲೂ ತುಂಬಾ ಕಡಿಮೆಯಾಗಿವೆ...(ನನ್ನ ಹಳ್ಳಿಯಲ್ಲಂತೂ ಶೇಕಡಾ ೮೦ ಕಮ್ಮಿಯಾಗಿದೆ)..
ಮತ್ತೆ ಉಳಿದ ಓದುಗರ ಅಭಿಪ್ರಾಯ... ಬಹುಶ ನೀವು ಎಲ್ಲಾ ಕಥೆಗಳನ್ನೂ ಓದುತ್ತೀರಿ , ತಿಳಿದುಕೊಂಡಿದ್ದೀರಿ... ಆದರೆ ಪ್ರತಿಯೊಬ್ಬರೂ ಕಥೆ ಅಥವಾ ಕವನವನ್ನಾಗಲಿ ಬೇರೆ ಬೇರೆ ರೀತಿಯಲ್ಲಿ ವಿಮರ್ಶಿಸುತ್ತಾರೆ... ಪ್ರತಿಯಾಬ್ಬರ ಆಲೋಚನೆಗಳೂ ಬೇರೆ ಬೇರೆ... ನಿಮಗೆ ಕಥೆಯಲ್ಲಿ ನೀತಿ ಕಾಣಿಸಿಕೊಳ್ಳಲಿಲ್ಲ... ಹಾಗಂತ ಇದರಲ್ಲಿ ನೀತಿಯೇ ಇಲ್ಲ, ನೀತಿ ಹುಡುಕುವುದು ತಮಾಷೆ ಅಂತ ಅಂದು ಕೊಳ್ಳುವುದಾದರೆ, ಅದು ನೀವು ಕಥೆ ಅರ್ಥಮಾಡಿಕೊಳ್ಳುವ ವಿಚಾರವಾಯಿತು... ಬುದ್ದಿವಂತರಿಗೆ ಮತ್ತು ಅತೀ ಬುದ್ದಿವಂತರಿಗೆ ತುಂಬಾ ವ್ಯತ್ಯಾಸವಿದೆ... ನೀವು ಬಹುಶ ಅತೀ ಬುದ್ದಿವಂತರಿರಬೇಕು.. :-)

ನಿಮ್ಮ ಅಭಿಪ್ರಾಯ ಗಳು ಮುಂದಿನ ಲೇಖನ ಬರೆಯಲು, ತಿದ್ದಿಕೊಳ್ಳಲು ಸಹಾಯ ಮಾಡುತ್ತವೆ... ಹೀಗೆ ಬರುತ್ತಿರಿ...
ಹಾಗೆ ಈ ಅನಾಮಿಕ ಪಟ್ಟ ಯಾಕೆ? ತಮ್ಮ ಹೆಸರೂ ಹೇಳಬಹುದಲ್ಲವೇ...

ಜಲನಯನ said...

ರವಿಕಾಂತ್, ಮೀನನ್ನು ಸ್ವಛ್ಚ ಮಾಡ್ತಾ ಇದ್ದದ್ದು ಅವನ ಮನೆ ಅಂಗಳದಲ್ಲಿ ಅಷ್ಟಕ್ಕೇ..ಬೋ. ಮಗ...ಸೂ..ಮಗ ಅನ್ನೋದು ತಪ್ಪಾದ್ರೂ ಮೀನುಹಿಡಿಸಿ ಚನಿಯನಿಗೆ ಅನ್ಯಾಯ ಮಾಡ್ಸಿದ್ದೀರಿ...ಅವನಿಗೆ ಮುಂದಿನ ಕಂತಿನಲ್ಲಿ ಪರಿಹಾರ ಕೊಡಿ..ಇಲ್ಲ ಅಂದ್ರೆ....ಚನ್ನಾಗಿರೊಲ್ಲಾ...
ಗ್ರಾಮೀಣ ಪರಿಕಲ್ಪನೆಯ ಒಳ್ಲೆಯ ನಿದರ್ಶನ..ನಿಮ್ಮ ಕಥೆ ಮೂಲಕ ಮೂಡಿ ಬಂತು.

Ittigecement said...

ರವಿ...

ತುಂಬ ಕಟು ವಾಸ್ತವದ ಘಟನೆ ಅನ್ನಿಸುತ್ತದೆ..
ಇಂಥಹ ಪಾತ್ರಗಳು ಇಂದಿಗೂ ಜೀವಂತ ಇವೆ..
ಆದರೆ..
ಕಡಿಮೆ ಆಗಿದೆ..

ಮನುಷ್ಯ ಸ್ವಭಾವಗಳಿಗೆ ಜಾತಿಯತೆಯ ಬಣ್ಣ ಬೇರೆ..!
ನಮ್ಮ ದೇಶದ ಮೊದಲ ಶತ್ರು ಇವು ಅಲ್ಲವಾ?

ಚಂದದ ಕಥೆಗೆ ಅಭಿನಂದನೆಗಳು..

Unknown said...

ಆಜಾದ್ ಸಾರ್,

ಖಂಡಿತಾ... ಚನಿಯನಿಗೆ ನ್ಯಾಯ ಸಿಕ್ಕೆ ಸಿಗುತ್ತೆ.. ಹೀಗೆ ಬರುತ್ತಿರಿ.. ಧನ್ಯವಾದ...

Unknown said...

ಪ್ರಕಾಶ್ ಸಾರ್,

ಹೌದು.. ಈವಾಗ ಇಂಥಾ ಪಾತ್ರಗಳು ತುಂಬಾ ಕಮ್ಮಿ...ಜಾತೀಯತೆ ಅನ್ನೋದು ದೇಶದ ಮೊದಲ ಶತ್ರು ಅನ್ನೋದು ಒಪ್ಪತಕ್ಕದ್ದೇ...

ಕಥೆ ಮೆಚ್ಚಿ ಕೊಂಡಿದ್ದಕ್ಕೆ ಧನ್ಯವಾದಗಳು..

ಸುಧೇಶ್ ಶೆಟ್ಟಿ said...

ಇ೦ತಾ ಸೇರಿಗೆ ಸೆವ್ವಾ ಸೇರು ಸ೦ಗತಿಗಳು ನಮ್ಮ ಊರಿನಲ್ಲಿ ತು೦ಬಾ ನಡೆಯುತ್ತದೆ ಅಲ್ವಾ ರವಿ? :)

Unknown said...

ಸುಧೇಶ್,

ಹಹಹ.. ಹೌದು.. ಆದರೆ ಈಗೀಗ ಕಮ್ಮಿಯಾಗಿದೆ ಅಲ್ವೇ??