Tuesday, December 8, 2009

ಪಿಂಡದಾನ !!

  " ಥೂ ಎಲ್ಲಾ ನಾಟಕ... ನಮ್ಮನ್ನ ಪರೀಕ್ಷೆನಲ್ಲಿ ಫೈಲ್ ಮಾಡ್ಬೇಕು ಅಂತ ಇವ್ರು ಹಿಂಗಾಡ್ತಾರೆ... ಅವರ ಮೋಡಿಗೆ ಮರುಳಾಗಿ ನಾವು ಅವ್ರಿಗೆ ಲೈನ್ ಹೊಡ್ದು ಅವ್ರ ಬಗ್ಗೆ ಆಲೋಚನೆ ಮಾಡ್ತಾ ಇರ್ತೀವಿ... ಅವರೋ ಆರಾಮಾಗಿ ಓದ್ಕೊಂಡು ನಮಗೆ ಟೋಪಿ ಹಾಕ್ತಾರೆ.." ಸದಾನಂದ ಧಿಮಿಗುಡುತ್ತಲೇ ಇದ್ದ.. "ಛೆ ಹೀಗೆಲ್ಲ ಮಾಡಲ್ಲ ಯಾರೂ.. ಅದು ನಿನ್ನ ಆಲೋಚನೆ ಅಷ್ಟೇ.." ನಾನು ಆತನನ್ನು ಸಮಾಧಾನ ಗೊಳಿಸಲು ಯತ್ನಿಸಿದೆ.. "ಹೇ ನಿನ್ಗದೆಲ್ಲ ಗೊತ್ತಾಗಲ್ಲ ಗೋರೆ.." ಸದಾನಂದ ತಿರುಗಿ ಬಿದ್ದ..."ಹೌದು ಈ ಹುಡ್ಗೀರೆ ಹೀಗೆ ಎಲ್ಲಾ ಮೋಸ" ಹಾಗಂತ ಮದ್ಧ್ಯೆ ಎಲ್ಲಿಂದಲೋ ಮನೀಶ್ ನುಗ್ಗಿ ಬಂದ.. ಆತನೇನೋ ನಮ್ಮ ಸ್ನೇಹಿತರ ಗುಂಪಿನವನಲ್ಲ.. ಆತನಿಗೂ ಸದಾನಂದನೀಗೂ ಅಷ್ಟಕ್ಕಷ್ಟೇ.. ಆದರೆ ಆವತ್ತು ಅವರಿಬ್ಬರ ಆಲೋಚನೆಗಳು ಒಂದೇ ಆಗಿದ್ದವು.. ಒಬ್ಬರಿಗೊಬ್ಬರು ಬೆಂಬಲಿಸುತ್ತಿದರು... ಇಷ್ಟಕ್ಕೂ ಆವತ್ತು ಸದಾನಂದ  ಸಿಟ್ಟು ಮಾಡಿಕೊಂಡಿದ್ದುದು ಟೀನಾ ಮೇಲೆ..
ಅದು ನಮ್ಮ ಕಾಲೇಜ್ ದಿನಗಳು.. ಈ ಸದಾನಂದ ನಮ್ಮ ಎಂಟು ಜನರ ಸ್ನೇಹಿತರ  ಗುಂಪಿನಲ್ಲಿ ಒಬ್ಬ.. ಆತ ನಮ್ಮದೇ ಕ್ಲಾಸ್ ನ ಟೀನಾ ಅನ್ನೋ ಸುಂದರ ಹುಡುಗಿಗೆ ಲೈನ್ ಹೊಡಿತಾ ಇದ್ದಿದ್ದು ತಿಳಿದಿದ್ದ ವಿಷಯವೇ.. ಆದರೆ ಆಕೆಯನ್ನು ಮಾತಾಡಿಸುವಷ್ಟು  ಧೈರ್ಯವಂತನಲ್ಲ.. ಆತನಿಗೆ ಸ್ಪರ್ಧೆಗೆ ಇಳಿದವನು ನಮ್ಮ ಕ್ಲಾಸ್ನ ಇನ್ನೊಂದು ಗುಂಪಿನ ಲೀಡರ್ ಮನೀಶ್... ಆತನೂ ಟೀನಾ ಹಿಂದೆ ಸುತ್ತೊದನ್ನ ನೋಡಿ ಸದಾನಂದ ಆತನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದ... ದಿನ ಕಳೆದಂತೆ ಟೀನಾ , ಸದಾನಂದನನ್ನು  ನೋಡಿ ನಗೋದಕ್ಕೂ ," ಹಲೋ , ಹಾಯ್" ಅಂತ ಹೇಳೋದನ್ನೂ ನೋಡಿ ನಾವೂ ಅಚ್ಚರಿಗೊಂಡಿದ್ದೆವು..
ಆವತ್ತು ಸದಾನಂದನ ಹುಟ್ಟು ಹಬ್ಬ.. ಅಂತೂ ಇಂತೂ ಧೈರ್ಯಮಾಡಿ ಆತ ಪಾರ್ಟಿಗೆ ಟೀನಳನ್ನು ಕರೆದದ್ದೂ ಆಯ್ತು..
ಅಲ್ಲೇ ಪಕ್ಕದಲ್ಲೇ ಇದ್ದ ಅಮೃತ್ ಕ್ರೀಂ ಪಾರ್ಲರ್ ಅನ್ನೋ ಇದ್ದ ಒಂದೇ ಒಂದು ಅಡ್ಡಕ್ಕೆ ನಾವು ೫ ಗಂಟೆಗೆ ನುಗ್ಗಿದೆವು.. ಟೀನಾ ೫.೩೦ ಬರುತ್ತೇನೆ ಅಂದಿದ್ದಳಂತೆ.. ನಾವು ಸದಾನಂದನ ಕಾಲೆಳೆಯುತ್ತಾ  ತಮಾಷೆ ಮಾಡುತ್ತಾ ಸಾಗಿದ್ದರೆ, ಸದಾನಂದ ಟೀನಾ ಬರ್ತಾಳೆ ಅಂತ ಕಾಯ್ತಾನೆ ಇದ್ದ...  ೫.೩೦, ಆಯ್ತು..೫.೪೫.. ೬.೦೦ ಉಹುಂ ಆಕೆಯ ಸುದ್ದಿಯೇ ಇಲ್ಲ.. ಆಕೆಗಾಗಿ ಕಾದು ಕಾದು ಬೇಸತ್ತಿದ್ದ ಸದದಾನಂದನನ್ನು ನಾನೇ ಮೆಲ್ಲ ಸಮಾಧಾನ ಪಡಿಸಿ ೮  ಗಂಟೆಯಷ್ಟು ಹೊತ್ತಿಗೆ ಎಬ್ಬಿಸಿಕೊಂಡು ಹೋದೆ...
ಮರುದಿನ ಕಾಲೇಜಿಗೆ ಬಂದಾಗ ನಮ್ಮ ಅರ್ಧವಾರ್ಷಿಕ ಪರೀಕ್ಷೆಯ ಅಂಕಗಳು ಹೊರ ಬಿದ್ದಿದ್ದವು..ನಾನು ಮತ್ತೆ ಸದಾನಂದ ಯಾವಾಗಲೂ ಟಾಪ್ ೫ ರಲ್ಲಿ ಗ್ಯಾರೆಂಟಿ... ಆ ಪರೀಕ್ಷೆಯಲ್ಲಿ ನಾನು ಮೂರನೇ ಸ್ತಾನದಲ್ಲಿದ್ದರೆ ಸದಾನಂದ ೧೧ನೆ ಸ್ತಾನಕ್ಕೆ ಜಾರಿದ್ದ.. ಟೀನಾ ಎಂಟನೆ ಸ್ತಾನದಲ್ಲಿದ್ದಳು.. ಹಿಂದಿನ ದಿನ ಟೀನಾ ಪಾರ್ಟಿಗೆ ಬರದೆ ಇರೋ ಸಿಟ್ಟು ಮತ್ತು ಪರೀಕ್ಷೆಯಲ್ಲಿ ಹಿಂದಕ್ಕೆ ಬಿದ್ದ ಸಿಟ್ಟು ಎರಡೂ ಆತನನ್ನು ಮುತ್ತಿಕೊಂಡಿದ್ದವು... ಆಗಲೇ ಆತ " ಥೂ ಎಲ್ಲಾ ನಾಟಕ... " ಅನ್ನೋ ಡೈಲಾಗ್ ಹೊಡೆಯಲು ಶುರುಮಾಡಿದ್ದು...

ಎಷ್ಟೇ ಪ್ರಯತ್ನಿಸಿದರೂ ಆತನನ್ನು ಸಮಾಧಾನ ಪಡಿಸಲು ಸಾದ್ಧ್ಯವಾಗಲಿಲ್ಲ.. ಬದಲಿಗೆ ಮನೀಶ್ ಬೇರೆ ಸೇರಿಕೊಂಡಿದ್ದ.. ಟೀನಾಳ ಬಗ್ಗೆ ಕನುಸು ಕಾಣುತ್ತ ಓದದೆ ೪ ಪರೀಕ್ಷೆಯಲ್ಲಿ ಫೈಲ್ ಆದ ತನ್ನ ದುರ್ಗತಿ ವಿವರಿಸಿಕೊಂಡ... ನಾನು ನಗುತ್ತಲೇ ಇದ್ದೆ...
ಸರಿ ಇನ್ನೇನ್ ಮಾಡೋದು... "ಇನ್ಯಾವತ್ತು ನಾನು ಹುಡ್ಗೀರಿಗೆ ಲೈನ್ ಹೊಡೆಯೋದಿಲ್ಲ"  ಸದಾನಂದ  ಪ್ರಮಾಣ ಮಾಡಿದ.. "ನಾನೂ ಅಷ್ಟೇ " ದನಿಗೂಡಿಸಿದ್ದು ಮನೀಶ್.. "ಅಲ್ಲಯ್ಯ ಮತ್ತೆ ಟೀನಾ?" ಮಧ್ಯದಲ್ಲಿ ಹುಳಿ ಹಿಂಡಿದ್ದು  ಮಾಧವ ಅನ್ನೋ ಉಬ್ಬು ಹಲ್ಲಿನ 'ಗರಗಸ'...
"ಆಕೆಗೆ ನಾನು ಪಿಂಡ ಬಿಡ್ತಾ ಇದ್ದೀನಿ " ಸದಾನಂದ ಅರಚಿಕೊಂಡ.. "ಹೌದು ಅದೇ ಸರಿ.. ಆಕೆಗೆ ಪಿಂಡ ದಾನ ಮಾಡಲೇ ಬೇಕು.. ಆಕೆ ಸತ್ತು ಹೋದಳು ಅಂತ ತಿಳ್ಕೊತಿನಿ" ಮನೀಶ್ ಕೂಡ ಯಾಕೋ ಹೆಜ್ಜೆ ತಪ್ಪುತ್ತಿದ್ದ... ಸದಾನಂದ ನನ್ನನ್ನು ಕರೆದುಕೊಂಡು ಕಾಲೇಜ್ ಹಿಂಭಾಗದಲ್ಲಿದ್ದ ತೋಟದತ್ತ ಸಾಗಿದ...ಉಳಿದವರೂ ನಮ್ಮನ್ನು ಹಿಂಬಾಲಿಸಿದರು... ನಮ್ಮ ಗುಂಪಿನ ಹರಿಪ್ರಸಾದ್ ಶಾಸ್ತ್ರಿ ಆವತ್ತು ಪುರೋಹಿತ.. ಆತ ತಿಥಿ ಕರ್ಮದ ಮಂತ್ರಗಳನ್ನು ಹೇಳೋದನ್ನೂ , ಸದಾನಂದ ಅಲ್ಲಿಯೇ ಇದ್ದ ನಲ್ಲಿಯಿಂದ ನೀರು ಬಿಡೋದನ್ನು ನೋಡಿ ನಾವು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು... ಊಟಕ್ಕೆಂದು ತಂದಿದ್ದ ಅನ್ನ ಪಿಂಡವಾಗಿತ್ತು .. ಪಿಂಡ ದಾನಕ್ಕೆ ಸದಾನಂದ ಜೊತೆ ಸೇರಿಕೊಂಡಿದ್ದು ಮನೀಶ್.. ಸರಿ ಇಬ್ಬರೂ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪಿಂಡ ದಾನ ಮಾಡಿಬಿಟ್ಟಿದ್ದರು.. !!!
"ಇವತ್ತಿನಿಂದ ಟೀನಳ ಕಡೆ ತಿರುಗಿಯೂ ನೋಡಲಾರೆವು " ಹಾಗಂತ ಇಬ್ಬರೂ  ಶಪಥ ಗೈದರು...
ಆವತ್ತಿನಿಂದ ಸದಾನಂದ ಬದಲಾಗಿಬಿಟ್ಟಿದ್ದ.. ಟೀನಳ ಕಡೆ ತಿರುಗಿಯೂ ನೋಡುತ್ತಿರಲಿಲ್ಲ... ಬಹುಶ ಹುಟ್ಟುಹಬ್ಬದ ಪಾರ್ಟಿಗೆ ಬಂದಿಲ್ಲದ್ದಕ್ಕೆ ಹಿಂಗಾಡುತ್ತಿದ್ದಾನೆ ಅಂದು ಕೊಂಡಿದ್ದ ಟೀನಾ ಕಳಿಸಿದ 'ಸಾರೀ' ಗ್ರೀಟಿಂಗ್ಸ್ ಕಾರ್ಡು ಸಹ ಈ ಸದಾನಂದ ಹರಿದು ಬಿಸಾಕಿದ್ದ..
"ಎಲ್ಲಾ ನಾಟಕ ಕಣ್ರೋ.. ಅವ್ರಿಗೆ ನಿಜವಾಗಿ ನಿಮ್ ಮೇಲೆ ಪ್ರೀತಿ ಇರಲ್ಲ.. ಅವ್ರಿಗೆ ನಾವು ಇಷ್ಟೆಲ್ಲಾ ಮಜಾಮಾಡಿ ಪರೀಕ್ಷೆಯಲ್ಲಿ ಒಳ್ಳೆ ಅಂಕ ಕೂಡ ತೆಗೆಯೋದನ್ನ ನೋಡಿ ಹೊಟ್ಟೆ ಕಿಚ್ಚು..  ಕಂಠ ಪಾಠ ಮಾಡಿ ಮಾಡಿ ಸಾಧ್ಯ ಆಗದೆ ಇದ್ದಾಗ ನಮ್ ಹಿಂದೆ ಬರ್ತಾರೆ.. ಅವ್ರ ಮೋಡಿಗೆ ಒಳಗಾಗಿ ಬಿಟ್ವಿ ಅಂದ್ರೆ ಅಷ್ಟೇ.. ಆಮೇಲೆ ಪರೀಕ್ಷೆ , ಭವಿಷ್ಯ ಎಲ್ಲಾ ಮರ್ತು ಬಿಡಿ.. ..." ಸದಾನಂದ ನಮ್ಮ ಗುಂಪಿಗೆಲ್ಲ ಉಪೇಂದ್ರ ಸ್ಟೈಲ್ ನಲ್ಲಿ ಬುದ್ಧಿವಾದ ಹೇಳಿದ್ದ..
ಇದಾಗಿ ೩-೪ ತಿಂಗಳು ಕಳೆದವು...ಒಂದು ದಿನ ನಾವು ಕಾಲೇಜ್ ಮುಗಿಸಿ ನಮ್ಮ ರೂಂ ನತ್ತ ಹೆಜ್ಜೆ ಹಾಕುತ್ತಿದೆವು.. ಮೈ ಹುಷಾರಿಲ್ಲದ ಕಾರಣ ಸದಾನಂದ ಆವತ್ತು ಕಾಲೇಜ್ ಗೆ ಬರದೆ ರೂಮ್ನಲ್ಲೇ  ಮಲಗಿಕೊಂಡಿದ್ದ.. ನಾವು ಮುಂದೆ ಸಾಗುತ್ತಿದ್ದಂತೆ ದೂರದಲ್ಲಿ ಅಮೃತ್ ಕ್ರೀಂ ಪಾರ್ಲರ್ ನಲ್ಲಿ ಯಾರೋ ಹುಡುಗ-ಹುಡುಗಿ ಕುಳಿತಿದ್ದು ಮೊದಲಿಗೆ ನೋಡಿದ್ದೇ ನಮ್ಮ 'ಗರಗಸ'.. "ಅದು ಟೀನಾ ಅಲ್ವ " ತನ್ನ ಅನುಮಾನ ವ್ಯಕ್ತ ಪಡಿಸಿದ.. ಸೂಕ್ಷ್ಮವಾಗಿ ಗಮನಿಸಿದೆವು.. ಹೌದು ಅದು ಟೀನಾ.. ಆದರೆ ಆ ಹುಡುಗ ಯಾರು? ಸರಿಯಾಗಿ ಕಾಣಿಸುತ್ತಿರಲಿಲ್ಲ.. ಸರಿ, ನೋಡೇ ಬಿಡೋಣ ಅಂತ ಆಕಡೆ ಹೆಜ್ಜೆ ಹಾಕಿದೆವು.. ಮೆಲ್ಲನೆ ಕಳ್ಳ ರಂತೆ ಕದ್ದು ನೋಡುತ್ತಿದ್ದ ನಾವೆಲ್ಲಾ ಬೆಚ್ಚಿಬಿದ್ದೆವು.. ಆಕೆಯ ಜೊತೆಗಿದ್ದದ್ದು  ಮನೀಶ್!!!! ಅವರಿಬ್ಬರೂ  ಒಂದೇ ಬೌಲ್ ನಿಂದ ಐಸ್ ಕ್ರೀಂ ತಿನ್ನುತ್ತಿದ್ದರು.. ಅರೆ ಆವತ್ತು ಟೀನಗೆ ಪಿಂಡ ಬಿಟ್ಟಿದ್ದ ಮನೀಶ್!!! ಇನ್ಯಾವತ್ತು ಆಕೆಯನ್ನು ತಿರುಗೀನೂ ನೋಡಲ್ಲ ಅಂತ ಸದಾನಂದನ  ಜೊತೆಗೂಡಿ ಪ್ರತಿಜ್ಞೆ ಮಾಡಿದ್ದ ಮನೀಶ್!!!..ನಾವು ಒಂದು ಕ್ಷಣ ಒಬ್ಬರ ಮುಖ ಒಬ್ಬರು ನೋಡತೊಡಗಿದೆವು... ಅವರು ನಮ್ಮನ್ನು ನೋಡೋದು ಬೇಡ ಅಂತ  ನಾವು ಅವರಿಗೆ ತಿಳಿಯದಂತೆ ಅಲ್ಲಿಂದ ಪರಾರಿಯಾದೆವು...'ಗರಗಸ' ಮಾತ್ರ ರೂಂ ತಲುಪುವ ತನಕವೂ  ಬಿದ್ದು ಬಿದ್ದು ನಗುತ್ತಲೇ ಇದ್ದ..

 ಈ ವಿಷಯ ತಿಳಿದ ಸದಾನಂದ ಮರು ದಿವಸ, ಮೈ ಸುಡುವ ಜ್ವರದಲ್ಲೂ  ಅದೇ ಕಾಲೇಜ್ ತೋಟದಲ್ಲಿ, ಅದೇ ಹರಿಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಮನೀಶ್ ಗೆ ಪಿಂಡ ದಾನ ಮಾಡಿದ್ದ!!!!

33 comments:

ಮನಸು said...

ಹಹಹಹಾ... ಸಕ್ಕತ್ತಾಗಿದೆ ಕಥೆ... ಕೋಪವಿದ್ದವರ ಮೇಲೆ ಪಿಂಡದಾನದ ಹೆಸರಲ್ಲಿ ಬ್ರಹ್ಮಾಸ್ತ್ರ ಬಿಟ್ಟರು ನಿಮ್ಮ ಸ್ನೇಹಿತರು..

ರವಿಕಾಂತ ಗೋರೆ said...

ಮನಸು ಅವರೇ ,

ಕಥೆ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು... ಹೀಗೆ ಬರುತ್ತಿರಿ..

ಜಲನಯನ said...

ರವಿಕಾಂತ್ ಪಿಂಡದಾನದ ನೆಪದಲ್ಲಿ ಮನಸಿನಲ್ಲಿದ್ದ ಹುಳಿದ್ರಾಕ್ಷಿ ಮೂಸಿದ ಗುಳ್ಳೆನರೀನ ಹೊರಕ್ಕೆ ಬಿಟ್ರಾ ಹೇಗೆ...? ಚನ್ನಾಗಿದೆ..ಕಥೆ...ಅಂದಹಾಗೆ ಲೈನ್ ಹೊಡಿಯೋದು ಬಹುಶಃ ಯೂನಿವರ್ಸಲ್ ಪದ ಆಗಿರಬೇಕು...ಎಲ್ಲಕಡೆ ..

Anonymous said...

tumbaa thamaasheyaagi barediddiri.....innoo nagtaa ideeni. thanks,

Meena jois

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ಪಿಂಡದಾನ ಚನ್ನಾಗಿದೆ..
ಅಂದಹಾಗೆ ನನಗೆ ಹರಿಪ್ರಸಾದ್ ಶಾಸ್ತ್ರಿಗಳ ವಿಳಾಸ ಕೊಡಿ, ಮುಂದೆ ನನಗೆ ಯಾರಾದ್ರೂ ತಲೆಕೆಡಿಸಲು ಪ್ರಯತ್ನಿಸಿದರೆ ಉಪಯೋಗವಾಗಬಹುದು... ಹ್ಹಾ ಹ್ಹಾ ಹ್ಹಾ...

umesh desai said...

ಗೋರೆ ಸರ್ ವಾಸ್ತವಕ್ಕೆ ಹತ್ತಿರದ ಕಥೆ ಚೆನ್ನಾಗಿದೆ

Archu said...

mastiyavara saNNa kathegaLu sassa 'gore'yavara saNNa kathegaLu pustaka yentu :)

ರವಿಕಾಂತ ಗೋರೆ said...

ಆಜಾದ್ ಸಾರ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.. ಬಹುಶ ಹೌದು.. ಲೈನ್ ಹೊಡೆಯೋದು ಯುನಿವರ್ಸಲ್ ಪದ...

ರವಿಕಾಂತ ಗೋರೆ said...

ಮೀನಾ ಅವರೇ,

ಬ್ಲಾಗ್ ಗೆ ನಿಮಗೆ ಸ್ವಾಗತ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು... ಹೀಗೆ ಬರುತ್ತಿರಿ..

ರವಿಕಾಂತ ಗೋರೆ said...

ಶಿವಪ್ರಕಾಶ್ ಅವರೇ,

ಏನು ನೀವೂ ಅದ್ಯಾರಿಗೋ ಪಿಂಡ ಬಿಡುವ ಆಲೋಚನೆಯಲ್ಲಿರುವಂತಿದೆ.. :-).. ಕಥೆ ಮೆಚ್ಚಿದ್ದಕ್ಕೆ ಧನ್ಯವಾದ..

ರವಿಕಾಂತ ಗೋರೆ said...

ಉಮೇಶ್ ಸಾರ್,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು..

ರವಿಕಾಂತ ಗೋರೆ said...

ಅರ್ಚನಾ,

ಹುಹ್...ಮಾಸ್ತಿ ಅನಿ ಮೇ???? ಹುಹ್...
Not possible..

ಬಾಲು said...

ಸೂಪರ್ ಆಗಿದೆ. :)
ಸಿಟ್ಟು ಬಂದವರ ಮೇಲೆ ಪಿಂಡ ದಾನ ಮಾಡುವ ಕ್ರಿಯೆ ಚೆನ್ನಾಗಿದೆ.ಪಾಪ ಸದಾನಂದ.
ಕೈ ಕೊಟ್ಟ ಹುಡುಗಿಗೆ, ಕೆಲಸ ಕಿತ್ತು ಕೊಂಡ ಕಂಪನಿ ಗೆ ಈ ಉಪಾಯ ಮಾಡಬಹುದು ಅನ್ಸುತ್ತೆ.
ಚೆನ್ನಾಗಿ ಬರ್ದಿದ್ದಿರಿ. ಕುಶಿ ಆಯಿತು.

sunaath said...

ರವಿಕಾಂತ,
ತುಂಬ ಸ್ವಾರಸ್ಯಕರ ಕತೆ!

PARAANJAPE K.N. said...

ಗೋರೆ
ಚೆನ್ನಾಗಿದೆ. ಅಮೃತ್ ಕ್ರೀಮ್ ಪಾರ್ಲರ್ ಎ೦ದಾಗ ಉಜಿರೆಯ ನೆನಪಾಯಿತು

Deepasmitha said...

ತಮಾಷೆಯಾಗಿದೆ

Nisha said...

ಹಹಹಹಾ. ಚೆನ್ನಾಗಿದೆ

ರವಿಕಾಂತ ಗೋರೆ said...

ಬಾಲು ಸಾರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ... ಕಥೆ ನಿಮಗೆ ಇಷ್ಟವಾದದ್ದು ಖುಷಿ ಕೊಟ್ಟಿತು..

ರವಿಕಾಂತ ಗೋರೆ said...

ಸುನಾಥ್ ಸಾರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ...

ರವಿಕಾಂತ ಗೋರೆ said...

ಪರಾಂಜಪೆಯವರೇ,

ಉಜಿರೆಯ ನೆನಪಾಯಿತೇ?? ನಾನು ಪದವಿ ಓದಿದ್ದು ಉಜಿರೆಯಲ್ಲೇ... ಸದಾನಂದನ ಹುಟ್ಟು ಹಬ್ಬದ ಪಾರ್ಟಿ ನಡೆದಿದ್ದು ಅದೇ ಉಜಿರೆಯ ಅಮೃತ್ ಕ್ರೀಂ ಪಾರ್ಲರ್ ನಲ್ಲಿ!!!! :-)

ರವಿಕಾಂತ ಗೋರೆ said...

ದೀಪಸ್ಮಿತ ಸಾರ್,

ನನ್ನ ಬ್ಲಾಗ್ ಗೆ ಸ್ವಾಗತ... ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಹೀಗೆ ಬರುತ್ತಿರಿ..

ರವಿಕಾಂತ ಗೋರೆ said...

ನಿಶಾ ಅವರೇ,

ತುಂಬಾ ದಿನಗಳ ನಂತರ ಬ್ಲಾಗ್ ಗೆ ಬಂದಿದ್ದೀರಾ... ನಿಮಗೆ ಮತ್ತೊಮ್ಮೆ ಸ್ವಾಗತ... ಹೀಗೆ ಬರುತ್ತಿರಿ..

Venkatakrishna.K.K.puttur said...

ಚೆನ್ನಾಗಿದೆ.
ಇನ್ನು ಎಲ್ಲಾ ಬರೆಹ ಓದಬೇಕು.
ಆಮೇಲೆ ಪುನಃ ಬರಿತೇನೆ.

ಬಿಸಿಲ ಹನಿ said...

ಪಿಂಡದಾನದ ಕಥೆ ತುಂಬಾ ತಮಾಷೆಯಾಗಿದೆ.

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ....

ಸೊಗಸಾಗಿದೆ...
ಕಾಲೇಜು ದಿನಗಳ ತುಂಟಾಟಗಳೇ ಹಾಗೆ...

ಮನಿಷ್ ಪಾತ್ರ ನೋಡಿ ನನಗೆ ನನ್ನ ಗೆಳೆಯ ನಾಗುವಿನ ನೆನಪಾಯಿತು...!

ಸದಾನಂದನ ಬಗೆಗೆ ನನ್ನ ಅನುಕಂಪಗಳು...

ನಮ್ಮನ್ನೆಲ್ಲ ನಗಿಸಿದ್ದಕ್ಕೆ ಅಭಿನಂದನೆಗಳು....

ರವಿಕಾಂತ ಗೋರೆ said...

ವೆಂಕಟ್ ಸಾರ್,

ಬ್ಲಾಗ್ ಗೆ ನಿಮಗೆ ಸ್ವಾಗತ.. ಹೀಗೆ ಬರುತ್ತಿರಿ...

ರವಿಕಾಂತ ಗೋರೆ said...

ಉದಯ್ ಸಾರ್,

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದ...

ರವಿಕಾಂತ ಗೋರೆ said...

ಪ್ರಕಾಶ್ ಸಾರ್,

ಹೌದು .. ಸದಾನಂದನಿಗೆ ನಾನೂ ಅನುಕಂಪ ಸೂಚಿಸುವೆ... ನಿಮ್ಮ ಅಭಿನಂದನೆಗೆ ನಾನು ಋಣಿ..

shivu said...

ರವಿಕಾಂತ್ ಸರ್,

ಪಿಂಡದಾನದ ಕತೆ ಓದಿದೆ ಸಕ್ಕತ್ತಾಗಿದೆ. ನೀವು ಒಳ್ಳೆಯ ಬರಹಗಳನ್ನು ಆಗಾಗ ಕೊಡುತ್ತೀರಿ...

ಕೆಲಸದ ಒತ್ತಡದಿಂದ ತಡವಾಗಿ ಬರುತ್ತಿದ್ದೇನೆ. ಕ್ಷಮೆಯಿರಲಿ...
ಧನ್ಯವಾದಗಳು.

ರವಿಕಾಂತ ಗೋರೆ said...

ಶಿವೂ ಸಾರ್,

ಖಂಡಿತಾ ತಡವಾಗಿಲ್ಲ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯ..

ಸುಧೇಶ್ ಶೆಟ್ಟಿ said...

ಹ ಹ ಹ....

ಸಕತ್ತಾಗಿದೆ ಈ ಕಥೆ... ಪಿ೦ಡ ದಾನ ಮಾಡುವುದು...lol!

ರವಿಕಾಂತ ಗೋರೆ said...

ಸುಧೇಶ್,

ಕಥೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದ...ಹೀಗೆ ಬರುತ್ತಿರಿ..

Vijay Bhargava said...

super !!!