Saturday, August 6, 2016

ದೆವ್ವದ ಕಾರು !!

ರಾತ್ರಿ ೧೧ ಗಂಟೆ. ಬಸ್ ಸ್ಟ್ಯಾಂಡಿನಲ್ಲಿ ಬಂದು ಇಳಿದೆ. ನನ್ನೂರಿಗೆ ಹೋಗಲು ಈ ಹೊತ್ತಿನಲ್ಲಿ ಇನ್ನು ಗಾಡಿ ಸಿಗುವುದು ಕಷ್ಟ. ಭಾರಿ ಮಳೆ ಬೇರೆ. ಹಾಗಂತ ಅಂದು ಕೊಂಡಿದ್ದ ನನಗೆ ಬಸ್ ನಿರ್ವಾಹಕ ಹೇಳಿದ ಮಾತು ಕೇಳಿ ಅಚ್ಚರಿಯಾಗಿತ್ತು. ಇಲ್ಲಿ ಈಗ ಟ್ಯಾಕ್ಸಿ ಗಳು ೨೪ ಗಂಟೆಯೂ ಓಡಾಡುತ್ತವಂತೆ. ಏನೂ ತೊಂದರೆಯಿಲ್ಲ ಅಂದಿದ್ದ. "ಎಂತದು ಮಾರಾಯ್ರೆ , ನೀವು ಇಲ್ಲಿಗೆ ಬರುವುದು ಮೊದಲನೇ ಸಲವೋ ? ನೋಡಿ ಈ ನಂಬರಿಗೆ ಒಂದು ಸಂದೇಶ ಕಳಿಸಿ , ನೀವಿದ್ದಲ್ಲಿಗೆ ಟ್ಯಾಕ್ಸಿ ಬರುತ್ತದೆ ಮಾರಾಯ್ರೆ " ಅಂತ ಹೇಳಿ ಒಂದು ನಂಬರೂ ಕೊಟ್ಟ .. ಸಂದೇಶ ಕಳಿಸಿಯೂ ಬಿಟ್ಟೆ .. ಬರುತ್ತಿದ್ದ ನಗು ಹಾಗೂ ಹೀಗೂ ತಡೆದುಕೊಂಡಿದ್ದೆ .. ಅವನಿಗೆ ಟಿಕೆಟ್ ದುಡ್ಡು ಸಿಕ್ಕಿದರೆ ಸಾಕು ಬಹುಶ ಸುಮ್ಮನೆ ಬುರುಡೆ ಬಿಡುತ್ತಿದ್ದಾನೆ ಅಂದುಕೊಂಡು ನಕ್ಕು ಸುಮ್ಮನಾಗಿದ್ದೆ . 
ಭಾರಿ ಕತ್ತಲು .. ಸ್ನಾನಗ್ರಹದಲ್ಲಿ ಶವರ್ ನೀರು ಬೀಳುತ್ತಿದ್ದಂತೆ ಹುಯ್ಯುತ್ತಿದ್ದ ಮಳೆ .. ಸ್ವಲ್ಪ ಮುಂದಕ್ಕೆ ಬಂದವನೇ ಯಾವುದಾದರೂ ವಾಹನ ಬರಬಹುದೇ ಅಂತ ಕಾಯತೊಡಗಿದೆ. ಉಹುಂ ಒಂದು ನರಪಿಳ್ಳೆಯೂ ಕಾಣಿಸುತ್ತಿಲ್ಲ .. ನಡೆದು ಕೊಂಡು ಹೋಗೋಣ ಅಂದರೆ ಇಲ್ಲಿಂದ ನನ್ನ ಮನೆ ಇರುವುದು ೩೦-೩೫ ಕಿಲೋಮೀಟರು ದೂರದಲ್ಲಿ. ಹತ್ತಿರ ಗೊತ್ತಿರುವವರ ಮನೆಯೂ ಇಲ್ಲ .. ಸರಿಯಾಗಿ ಆಲೋಚನೆ ಮಾಡದೆ , ಊರಿಗೆ ಹೋಗಬೇಕು ಅನ್ನುವ ಒಂದೇ ಒಂದು ಆಸೆಯಿಂದ ಹೊರಟು ಬಿಟ್ಟಿದ್ದೆ ..
ಅದೆಷ್ಟು ವರ್ಷವಾದವು ಊರು ಬಿಟ್ಟು ? ಬರೋಬ್ಬರಿ ೧೦ ವರ್ಷ .. ಕೆಲಸ ಅಂತ ಒಂದು ಸಿಕ್ಕಿದ ತಕ್ಷಣ ಅಮೆರಿಕಾ ಕೈ ಬೀಸಿ ಕರೆದಿತ್ತು .. ಮೊದಲಿಗೆ ಚೆನ್ನಾಗಿತ್ತು .. ಡಾಲರ್ ನಲ್ಲಿ ಸಿಗುವ ಸಂಬಳ , ಬಣ್ಣದ ಜೀವನ , ಎಣಿಸಿಕೊಳ್ಳಲಾರದಷ್ಟು ಸ್ವಾತಂತ್ರ, ಮನುಷ್ಯ ನಿಗೆ ಏನಾಗಬಾರದಿತ್ತೋ ಅದಾಗಿ ಬಿಟ್ಟಿತ್ತು .. ದಿನ ಕಳೆದಂತೆ ಅಮೆರಿಕಾವೇ ಇಷ್ಟವಾಗತೊಡಗಿತ್ತು. ದಿನಕ್ಕೊಂದು ಬಾರಿ ಮನೆಗೆ  ಮಾಡುತ್ತಿದ್ದ ದೂರವಾಣಿ ಕರೆ ಬರು ಬರುತ್ತಾ ವಾರಕ್ಕೊಮ್ಮೆ , ಆ ನಂತ್ರ ತಿಂಗಳಿಗೊಮ್ಮೆ ಆಗಿ ಕಳೆದ ೮ ವರ್ಷಗಳು ಕರೆ ಮಾಡದೆಯೇ ಕಳೆದು ಹೋದವು .. ಆದರೆ ಅದೇನೋ ಜ್ಞಾನೋದಯ ಅಂತಾರಲ್ಲ , ಅಂತಹ ಒಂದು ಅನುಭೂತಿ . ದುಡ್ಡು ಮುಖ್ಯವಲ್ಲ ಅನ್ನುವ ಮಾತು ನಿಜ ಅನಿಸಿತ್ತು . ಆದರೆ ಇಂತಹ ಅನುಭೂತಿ ಬರಬೇಕಾದರೆ ನಮ್ಮಲ್ಲಿ ಬೇಕಾದಷ್ಟು ದುಡ್ಡು ಇರಲೇ ಬೇಕು ಅನ್ನುವ ಜ್ಞಾನಿಯ ಮಾತು ನೆನಪಾಗಿ ನಗು ಬಂತು .. ಊರಿಗೆ ಹೋಗಬೇಕು .. ಅಲ್ಲಿರುವ ಅಣ್ಣ , ತಂಗಿ ಹೇಗಿದ್ದಾರೋ ಗೊತ್ತಿಲ್ಲ . ಬರೋಬ್ಬರಿ ೮ ವರ್ಷಗಳಾದವು ಅವರನ್ನು ಮರೆತು . ಬಹುಶ ಅವರು ಮರೆತಿರಲಿಕ್ಕಿಲ್ಲ .. ಮಾಡುತ್ತಿದ್ದ ಕೆಲಸಕ್ಕೊಂದು ರಾಜೀನಾಮೆ ಒಗೆದು ದೇಶಕ್ಕೆ ವಾಪಸಾಗುವ ನಿರ್ಧಾರ ಕೈಗೊಂಡಿದ್ದೆ .. ಆತುರಕ್ಕೆ ಸರಿಯಾಗಿ ಆಲೋಚನೆ ಮಾಡದೆ ಹೀಗೆ ಧಾವಂತಕ್ಕೆ ಬಂದಿದ್ದ ನಾನು ಮಲೆನಾಡಿನ ಭರ್ಜರಿ ಮೆಳೆಗಾಲದ ಈ ಮಧ್ಯರಾತ್ರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದೆ !!


ಒಂದು ಕಡೆ ದಟ್ಟನೇ ಕತ್ತಲು , ಮಧ್ಯೆ ಮಧ್ಯೆ ಬರುತ್ತಿದ್ದ ಮಿಂಚು , ಕಿವಿಗಪ್ಪಳಿಸುವ ಸಿಡಿಲಿನ ಸದ್ದು , ಸುಯ್ಯ್ ಅಂತ ಬೀಸುತ್ತಿದ್ದ ಗಾಳಿ , ಮಳೆಗೆ ಒದ್ದೆಯಾಗುತ್ತಿದ್ದ ಮೈ , ಎರಡೂ ಕೈಯಲ್ಲಿ ಹಿಡಿದಿದ್ದ ದೊಡ್ಡ ದೊಡ್ಡ ಚೀಲಗಳು ... ಕಪ್ಪೆಯ ಶಬ್ದ, ಅದೇನೋ ಜೋರಾಗಿ ಅರಚಿದಂತೆ ಭಾಸವಾಗುತ್ತಿತ್ತು .. ಅದ್ಯಾಕೋ ಹೆದರಿಕೆ ಅನ್ನಿಸಲಿಲ್ಲ .. ೧೨-೧೫ ವರ್ಷದ ಹಿಂದಿನ ನೆನಪುಗಳು ಕಾಡತೊಡಗಿದವು .. ನಾನು ಹೋಗುತ್ತಿದ್ದ ಶಾಲೆ, ಕಾಲೇಜು .. ಗೆಳೆಯರು .. ಹೌದು ಎಲ್ಲರನ್ನೂ ಭೇಟಿಯಾಗಬೇಕು .. ಸದಾನಂದ , ಕುಮಾರ , ಸೇಸ , ಜಯ , ಪ್ರಭಾಕರ  ಎಲ್ಲರ ಮುಖಗಳೂ ಸ್ಪಷ್ಟವಾಗಿ ನೆನಪಿವೆ.  ಅಲ್ಲೇ ಆಲೋಚಿಸುತ್ತಾ ನಿಂತವನಿಗೆ ದೂರದಲ್ಲಿ ಯಾವುದೋ ವಾಹನ ಬರುತ್ತಿರುವ ಬೆಳಕು ಕಂಡಿತ್ತು .. ಮೈ ಚಳಿಗೆ ನಡುಗತೊಡಗಿತ್ತು .. ಎತ್ತಿನ ಗಾಡಿ ಬಂದರೂ ಸರಿಯೇ , ಮೀನಿನ ಟೆಂಪೋ ಬಂದರೂ ಸರಿಯೇ .. ಹತ್ತಲೇಬೇಕು ಅನ್ನುವಷ್ಟು ಸುಸ್ತಾಗಿತ್ತು .. ಕಣ್ಣು ಚಿಕ್ಕದು ಮಾಡಿ ಅದೇನು ಅಂತ ನೋಡಲು ಪ್ರಯತ್ನಿಸಿದೆ .. ಉಹುಂ , ಮಳೆಯ ಆರ್ಭಟಕ್ಕೆ ಮಂದವಾದ ಬೆಳಕು ಬಿಟ್ಟರೆ ಏನೆಂದು ಗೊತ್ತಾಗಲಿಲ್ಲ .. ಮೆಲ್ಲನೆ ಬಂದ  ಬೆಳಕು ನನ್ನ ಹತ್ತಿರ ಬಂದು ನಿಂತಿತ್ತು .. ನೋಡಿದರೆ ಕಾರು !! ಯಾರದ್ದು , ಯಾರಿದ್ದಾರೆ ಒಳಗಡೆ ಕೇಳುವಷ್ಟು ತಾಳ್ಮೆಯಿರಲಿಲ್ಲ .. ನನ್ನ ಎರಡೂ ಚೀಲಗಳನ್ನು ಒಳಗೆ ಒಗೆದವನೇ ಒಳಗೆ ಹತ್ತಿ ಕೂತು ಬಿಟ್ಟೆ ..
ಒಂದು ಕ್ಷಣ ಕಣ್ಣು ಮುಚ್ಚಿಕೊಂಡೆ .. "ಎಲ್ಲಿಗೆ ಹೋಗಬೇಕು ?" ಕರ್ಕಶ ಧ್ವನಿ ಕಿವಿಗಪ್ಪಳಿಸಿತು .. "ಹೊಸ್ಮಾರು " ಉತ್ತರ ಕೊಟ್ಟೆ ..
"ಎಲ್ಲಿಗೆ ಹೋಗಬೇಕು ?" ಮತ್ತೆ ಅದೇ ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದೆ ! ಮೆಲ್ಲನೆ ಕಣ್ಣು ತೆರೆದೆ ! ನನ್ನ ಎದುರಿನ ಸೀಟಿನ ಹಿಂಭಾಗಕ್ಕೆ ಟಿವಿ ಪರದೆ ಕಾಣಿಸಿತ್ತು .. ಅದರಲ್ಲಿ ಒಂದಾದ ಮೇಲೆ ಒಂದು ಸ್ಥಳಗಳ ಹೆಸರು ಬರುತ್ತಾ ಇತ್ತು !! ಓಹ್ ಬಸ್ ನಿರ್ವಾಹಕ ಹೇಳಿದ್ದು ಸರಿ .. ಇಲ್ಲಿಯೂ ಈಗ ಟ್ಯಾಕ್ಸಿಗಳು ವಾಹ್ .. ಮೆಲ್ಲನೆ ಬಗ್ಗಿ ಮುಂದಕ್ಕೆ ನೋಡಿದರೆ ಕಾರಿನಲ್ಲಿ ಯಾರೂ ಇರಲಿಲ್ಲ.. ಡ್ರೈವರ್ ಯಾವನೋ ಅಹಂಕಾರಿ ಇರಬೇಕು ಮಾತೂ ಆಡುತ್ತಿಲ್ಲ .. ಅಡ್ಡ ಪರದೆ ಬೇರೆ ಹಾಕಿಕೊಂಡಿದ್ದಾನೆ .. "ಎಲ್ಲಿಗೆ ಹೋಗಬೇಕು?" ಮತ್ತೆ ಕರ್ಕಶ ಧ್ವನಿ .. ಹೆದರಿಕೊಂಡೇ ನಡುಗುತ್ತಿದ್ದ ಕೈ ನನಗರಿವಿಲ್ಲದಂತೆ ಮುಂದಿದ್ದ ಟಿವಿ ಪರದೆಯನ್ನು ಜಾಲಾಡಿ ಸ್ಥಳ ಗುರುತಿಸಿತು .. "ಹೊಸ್ಮಾರು" ... ಪರದೆಯ ಮೇಲೆ ನಾನು ಹೋಗಬೇಕಾದ ಜಾಗ ತೋರಿಸುತ್ತಿತ್ತು .. " ಸಂದೇಶ ತೋರಿಸಿ " ಮತ್ತದೇ ಕರ್ಕಶ ಧ್ವನಿ .. ಆಗ ನೆನಪಾಯಿತು .. ಮೊಬೈಲ್ ನಲ್ಲಿ ಕಳಿಸಿದ್ದ ಸಂದೇಶ .. ಏನು ಮಾಡಬೇಕು ಎಂದು ಡ್ರೈವರ್ ನನ್ನ ಕೇಳಿದೆ .. ಉತ್ತರವಿಲ್ಲ .. ಪರದೆಯ ಮೇಲೆ ಸಂದೇಶ ತೋರಿಸಿ ಅನ್ನುವ ಕರ್ಕಶ ಧ್ವನಿ ಬರುತ್ತಲೇ ಇತ್ತು .. ಮೊಬೈಲ್ ಹತ್ತಿರ ಹಿಡಿದ ಕೂಡಲೇ "ಕುಯ್ಯ" ಅನ್ನುವ ಶಬ್ದ .. ಕಾರು ಚಲಿಸತೊಡಗಿತ್ತು !!ಮತ್ತೆ ಮೆಲ್ಲನೆ ಬಗ್ಗಿ ಮುಂದಕ್ಕೆ ನೋಡಿದೆ .. ಡ್ರೈವರ್ ಸೀಟ್ ಕೂಡ ಖಾಲಿಯಾಗಿತ್ತು !! ತಿರುವುಗಳಲ್ಲಿ ತನ್ನಿಂದ ತಾನೇ ತಿರುಗುವ ಸ್ಟೇರಿಂಗ್ !!! ಮಳೆಯಲ್ಲಿ ಒದ್ದೆಯಾಗಿದ್ದ ನಾನು ಈಗ ಬೆವರತೊಡಗಿದ್ದೆ .. ಪ್ಯಾಂಟು ಮತ್ತೆ ಒದ್ದೆಯಾಗಿತ್ತು !! ಕಾರಿನ ವೇಗ ಹೆಚ್ಚಾಗತೊಡಗಿತ್ತು !!


"ಕಾರು ನಿಲ್ಲಿಸು " ಅರಚಿಕೊಂಡೆ .. ವೇಗ ಹೆಚ್ಚಿಸಿಕೊಂಡಿದ್ದ ಕಾರು ಮಳೆಯನ್ನೂ ಸೀಳಿ ಮುಂದಕ್ಕೆ ನುಗ್ಗುತ್ತಿತ್ತು !! ಕಾರಿನಲ್ಲಿ ಯಾರೂ ಇಲ್ಲ!! ಡ್ರೈವರ್ ಸಹ ಇಲ್ಲ ! ದೆವ್ವದ ಕಾರೆ? ಹೆದರಿಕೆಯಾಗತೊಡಗಿತು .. ಮಧ್ಯೆ ಮಧ್ಯೆ ಮಿಂಚು ಗುಡುಗು !! ತನ್ನಿಂತಾನೇ ತಿರುಗುತ್ತಿದ್ದ ಸ್ಟೇರಿಂಗ್ !! ಕಾರಿನಿಂದ ಹೊರಗೆ ಹಾರೋಣ ಅಂದುಕೊಂಡೆ !! ಉಹುಂ , ಬಾಗಿಲು ಭದ್ರವಾಗಿ ಮುಚ್ಚಲ್ಪಟ್ಟಿವೆ .. ತೆಗೆಯಲು ಆಗುತ್ತಿಲ್ಲ ..  "ಕಾರು ನಿಲ್ಲಿಸಲೇ !!" ಜೋರಾಗಿ ಕೂಗಿಕೊಂಡೆ .. ಯಾವುದೇ ಉಪಯೋಗವಿಲ್ಲ !! ಕಾರು ಶರವೇಗದಿಂದ ಮುನ್ನುಗ್ಗುತ್ತಿತ್ತು !! ಪ್ರಜ್ಞೆ ತಪ್ಪುತ್ತಿರುವಂತೆ ಭಾಸವಾಯಿತು .. ಅದೇನೇನೋ ಕರ್ಕಶ ಶಬ್ದಗಳು ಗುಡುಗಿನ ಸದ್ದಿನೊಂದಿಗೆ ವಿಲೀನವಾಗುತ್ತಿದ್ದವು !! ದೆವ್ವ ಮಧ್ಯೆ ಮಧ್ಯೆ ಏನೇನೊ ಮಾತಾಡುತ್ತಲೇ ಇತ್ತು !!
ಅದೊಂದು ಕಡೆ ಕಾರು ನಿಂತಿತು !! ಬಾಗಿಲು ತನ್ನಿಂತಾನೇ ತೆರೆದುಕೊಂಡಿತು !! ಬದುಕಿದರೆ ಸಾಕು ಅಂತ ಕಾರಿನಿಂದ ಇಳಿದವನೇ ಒಂದೇ ಸಮನೆ ಓದತೊಡಗಿದೆ !! ಮಳೆಯ ರಾತ್ರಿ , ದಾರಿ ಕಾಣಿಸುತ್ತಿಲ್ಲ .. ಒಂದೆರಡು ಕಡೆ ಬಿದ್ದು ಕೈ ಕಾಲು ಎಲ್ಲ ತರಚಿ ರಕ್ತ ಬರುತ್ತಿತ್ತು .. ಸ್ವಲ್ಪ ದೂರ ಓಡಿದವನೇ ಹೆದರಿಕೊಂಡೇ ಹಿಂದೆ ತಿರುಗಿ ನೋಡಿದೆ !! ದೂರದಲ್ಲಿ ಕಾರು ಮೆಲ್ಲನೆ ಮುಂದಕ್ಕೆ ಹೋಗುವುದು ಕಾಣಿಸುತ್ತಿತ್ತು !! ಇನ್ನು ಇಲ್ಲಿ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ .. ಮತ್ತೆ ಮಿಂಚಿನ ಬೆಳಕಿನಲ್ಲೇ ಓಡತೊಡಗಿದೆ .. ಅದೂ ಮಿಂಚಿನ ವೇಗದಲ್ಲಿ !!
ಸ್ವಲ್ಪ ದೂರ ಓದಿದಾಗ ಸ್ವಲ್ಪ ಬೆಳಕು ಕಂಡಿತ್ತು .. ಅದನ್ನು ಗುರಿಯಾಗಿಟ್ಟೆ ಓಡಿದೆ !! ಅದೊಂದು ಮನೆ !! ೩-೪ ಜನ ಚಾವಡಿಯಲ್ಲಿ ಕೂತು ಇಸ್ಪೀಟು ಆಡುತ್ತಿದ್ದರು !! ಓಡಿ ಅಲ್ಲೇ ಅಂಗಳದಲ್ಲಿ ಬಿದ್ದಾಗ ಧೊಪ್ ಅನ್ನುವ ಶಬ್ದಕ್ಕೆ ನಾಲ್ಕೂ ಜನ ಎದ್ದು ನನ್ನತ್ತ ಬರತೊಡಗಿದರು !! " ಯಾರು ? ಯಾರದು " ಗೊಗ್ಗರು ಧ್ವನಿ ಭಯ ಹುಟ್ಟಿಸಿತು !! ಹತ್ತಿರ ಬಂದವರೇ ಮುಖಕ್ಕೆ ಟಾರ್ಚು ಬೆಳಕು ಬಿಟ್ಟರು !! "ಓ ಭಟ್ರೇ " ಅವರಲ್ಲೊಬ್ಬ ನನ್ನ ಎಬ್ಬಿಸಿದ !! "ಏನಾಯಿತು ಏನಾಯಿತು " ಎಲ್ಲರೂ ಸುತ್ತುವರಿದರು .. ಕಣ್ಣು ಬಿಟ್ಟು ನೋಡಿದೆ .. ಎದುರಿಗೆ ಇದ್ದದ್ದು ಸೇಸ !!


-- ಮುಂದುವರೆಯುವುದು


ಗೋರೆ ಉವಾಚ :  ನನಗಿಂತ ನಿಧಾನವಾಗಿ ಕಾರು ಚಲಾಯಿಸುವವನು ಮೂರ್ಖ !! ನನಗಿಂತ ವೇಗವಾಗಿ ಕಾರು ಚಲಾಯಿಸುವವನು ಹುಚ್ಚ !!!  

2 comments:

sunaath said...

ಈ ಸಲ ಭಯಂಕರ ಮಿಸ್ಟರಿ ಇಟ್ಟಿದ್ದೀರಿ, ಅಣ್ಣಾ!

Unknown said...

ಸುನಾಥ್ ಸರ್ , ನಿಮ್ಮ ಪ್ರೀತಿಗೆ ನಾನು ಋಣಿ !!