Friday, February 1, 2013

ಮುಂದುವರಿದ ಒಂದು ರಾತ್ರಿ !!!

ಒಂದು ಕ್ಷಣ ಎಲ್ಲರೂ ಬೆಚ್ಚಿಬಿದ್ದರು !! ಖಾಲಿಯಾಗಿದ್ದ ಬಸ್ ಸ್ಟಾಂಡ್ ನಲ್ಲಿ ಹೆಣ !! ಯಾರಿಗೂ ನಂಬಲಾಗಲಿಲ್ಲ !!
ಹೆಣದ ಮುಖವನ್ನಾದರೂ ನೋಡೋಣ ಅಂದ್ರೆ ಚಿದಾನಂದ ಬಿಡಲಿಲ್ಲ.. ಅಲ್ಲಿಂದ ಪಲಾಯನ ಗಯ್ಯುವುದೇ ಸೂಕ್ತ ಎಂದು ಆತ ಅರಚುತ್ತಿದ್ದ.. ಕುಮಾರನನ್ನು ನಾವು ಹೋಗಿ ಕೈ ಹಿಡಿದು ಎಬ್ಬಿಸಬೇಕಾಯಿತು .. ಹಾಗೂ ಹೇಗೊ ಎಲ್ಲರೂ ಕಾರಿನಲ್ಲಿ ಕುಳಿತು ಅಲ್ಲಿಂದ ಓಡುವುದೇ ಉತ್ತಮ ಅನ್ನುವ ತೀರ್ಮಾನಕ್ಕೆ ಬಂದೆವು..
"ನಾವು ಸಿಕ್ಕಿಬೀಳುವುದು ಗ್ಯಾರೆಂಟಿ.. ಇಲ್ಲದ ತೊಂದರೆಗೆ ಸಿಕ್ಕಿ ಹಾಕಿಕೊಂಡೆವು.. ನಾವು ಸೇದಿದ ಸಿಗರೇಟು, ಬಿಸಾಕಿದ ನೀರಿನ ಬಾಟಲಿ , ನಾಳೆ ಪೋಲಿಸ್ ತನಿಖೆಯಾಗುವಾಗ ಸಿಕ್ಕಿಬಿದ್ದರೆ?" ಕೇಳಿದ ಸದಾನಂದನ ಕಣ್ಣಲ್ಲಿ ನೀರಿತ್ತು !! ಹೌದು !! ನಮ್ಮ ಮೇಲೆ ಅನುಮಾನ ಬರುವುದು ಖಂಡಿತ .. ಯಾರಾದರೂ ನಮ್ಮ ಕಾರು ಆಕಡೆ ಬರುವುದನ್ನು ನೋಡಿರುತ್ತಾರೆ.. ನಾವೇ ಕೊಂದು ಹೆಣ  ಅಲ್ಲಿ ಹಾಕಿದ್ದು ಅನ್ನುವ ಅನುಮಾನ ಬಂದರೆ? ತಪ್ಪಿಸಿಕೊಳ್ಳುವುದು ಹೇಗೆ? ಕಥೆ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ "ಪೋಲಿಸ್ ಗೆ ನಾವೇ ಫೋನ್ ಮಾಡಿ ಎಲ್ಲ ಹೇಳೋಣ" ಅಂದ  ಕುಮಾರ.. ಆತ  ಇನ್ನೂ ನಡುಗುತ್ತಲೇ ಇದ್ದ .. ಜೇಬಿನಿಂದ ಫೋನ್ ತೆಗೆದವನೇ ಪೋಲಿಸ್ ಗೆ ಫೋನ್ ಹಚ್ಚಿಬಿಟ್ಟ ಸದಾನಂದ !! ನನಗೋ ಏನು ಮಾಡುವುದು ತಿಳಿಯದೆ ನಿಂತು ಬಿಟ್ಟಿದ್ದೆ.. ಏನೂ ತಪ್ಪು ಮಾಡದೆ ಜೈಲಿಗೆ ಹೋಗುವ ಪ್ರಮೇಯ !! ಮಾನ ಮರ್ಯಾದೆ ಎಲ್ಲಾ ಹರಾಜು !! ಪೇಪರ್ ನಲ್ಲಿ ಸ್ಲೇಟು ಹಿಡಿದ ನನ್ನ ಫೋಟೋ ಕಣ್ಣ ಮುಂದೆ ಬರತೊಡಗಿತ್ತು !! ನಾವು ತಪ್ಪಿತಸ್ತರಲ್ಲ ಅಂತ ಗೊತ್ತಾದರೂ ಜನ ಸುಮ್ಮನೆ ಬಿಡುತ್ತಾರೆಯೇ? ಕೊಲೆಗಾರ ಅನ್ನುವ ಪಟ್ಟ ಅಂತೂ ಗ್ಯಾರೆಂಟಿ ..

ಒಂದೊಂದು ನಿಮಿಷವೂ ಒಂದೊ೦ದು  ವರ್ಷ ದಂತೆ ಭಾಸವಾಗತೊಡಗಿತು.. ಅರ್ಧ ಗಂಟೆಯ ನಂತರ ಪೋಲಿಸ್ ಸೈರನ್ ಕೇಳಿ ಹೆದರಿಕೆ ಇನ್ನೂ ಜಾಸ್ತಿಯಾಗತೊಡಗಿತು ..ಪೋಲಿಸ್ ಜೀಪ್ ನಮ್ಮ ಕಾರಿನ ಹಿಂದೆಯೇ ಬಂದು ನಿಂತಿತ್ತು !! ಅದರ ಹಿಂದೆ ಒಂದು ಆಂಬುಲೆನ್ಸ್ .. ಜೀಪಿನಿಂದ ಕೆಳಗಿಳಿದ ಪೋಲಿಸ್ ನನ್ನು ನೋಡಿ ಮೈಯ ಶಕ್ತಿಯೆಲ್ಲ ಉಡುಗಿ ಹೋಗಿತ್ತು !! "ಏನಾಯಿತು ? ಯಾರ್ ನೀವು " ಪೋಲಿಸ್ ನ ದಪ್ಪ ಸ್ವರ ಆ ಕತ್ತಲೆಯಲ್ಲಿ , ಕಾಡಿನ ಮಧ್ಯೆ ಹುಲಿಯ ಘರ್ಜನೆಯಂತೆ ಕೆಳಿಸತೊಡಗಿ  ಎಲ್ಲರೂ ಮೂಕರಾಗಿ ನಿಂತು ಬಿಟ್ಟೆವು .. "ಸದಾನಂದ ನೀವು ಇಲ್ಲಿ?" ಒಬ್ಬ ಪೋಲಿಸ್ ನವ ಸದಾನಂದ ಗುರುತು ಹಿಡಿದಿದ್ದ.. ಚಿಕ್ಕ ಊರಲ್ಲವೇ.. ಸದಾನಂದನೀಗೋ ಆತನ ಪರಿಚಯವಿತ್ತು..
"ಹೆಣ , ಬಸ್ ಸ್ಟಾಂಡ್ , ಹಗ್ಗ" ಸದಾನಂದ ತಡಬಡಿಸತೊದಗಿದ್ದ .. ಧೈರ್ಯ ಮಾಡಿ ನಾನೇ ಏನಾಯಿತು ಅಂತ ವಿವರಿಸಿದೆ .. ಬಸ್ ಸ್ಟಾಂಡ್ ಗೆ ಲೈಟು ಹಾಕಿದ ಪೋಲಿಸ್ ಇದೆಲ್ಲಾ ಮಾಮೂಲಿ ಎಂಬಂತೆ ನಮ್ಮ ಕಡೆ ದುರುಗುಟ್ಟಿ ನೋಡತೊಡಗಿದ್ದ .. ನಾವು ಎಲ್ಲವನ್ನೂ ವಿವರಿಸಿದೆವು ..

ಪೋಲಿಸ್ ಅಂದ ಮೇಲೆ ಕೇಳಬೇಕೆ .. ಒಬ್ಬ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದರೆ ಉಳಿದವರು ಹೆಣ  ತೆಗೆಯೋದರಲ್ಲಿ ಮಗ್ನರಾದರು.. ಒಬ್ಬ ಪೋಲಿಸ್ ನವ ಅಲ್ಲಿ ಬಿದ್ದಿದ್ದ ಸಿಗರೇಟು, ನೀರಿನ ಬಾಟಲಿ, ಚಪ್ಪಲಿ ಎಲ್ಲವನ್ನೂ ತುಂಬಿಸುತ್ತಿದ್ದ.. ಆಮೇಲೆ ಏನೇನು ಮಾಡಿದರೋ ನೆನಪಿಲ್ಲ.. ಅಂತೂ ಇಂತೂ ೨ ಗಂಟೆ ಸುಮಾರಿಗೆ ಹೆಣ  ಆಂಬುಲೆನ್ಸ್ ಗೆ ಹಾಕಿದವರೇ ನಮ್ಮೆಲ್ಲರ ಸಹಿ, ಹೆಬ್ಬೆಟ್ಟು ಪಡೆದು ಹೋಗುವಂತೆ ಸೂಚನೆ ನೀಡಿದರು .."ಸದಾನಂದ ,.. ನಾಳೆ ಫೋನ್ ಮಾಡ್ತೀನಿ , ಎಲ್ಲರೂ ಸ್ಟೇಷನ್ ಗೆ ಬರಬೇಕಾಗಬಹುದು .. ಎಷ್ಟೇ ಆದರೂ ನಾವು ನಮ್ಮ ಕರ್ತವ್ಯ ಮಾಡಲೇಬೇಕು .. ಇದು ಆತ್ಮ ಹೆತ್ಯೆಯೇ ಇರುವಂತೆ ಕಾಣುತ್ತೆ .. ವರ್ಷವೂ ಇಲ್ಲಿ ಇಂಥದ್ದು ನಡೆಯತ್ತೆ " ಪೋಲಿಸ್ ನವ ಏನೇನೊ ಬಡಬಡಿಸುತ್ತಲೇ ಇದ್ದ.. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರುವರ್ಷ ಆಯುಷ್ಯ ಅಂತ ಕಾರು ಹತ್ತಿದೆವು .. ಹೋಗುವಾಗ ಅರ್ಧ ಘ೦ಟೆ ತೆಗೆದು ಕೊಂಡಿದ್ದ ನಮಗೆ ವಾಪಸ್ ಬರಲು ಬೇಕಾಗಿದ್ದು ಕೇವಲ ೧೦ ನಿಮಿಷ.. ಮನೆಗೆ ಬಂದಾಗ ಬೆಳಗಿನ ಜಾವ ೨.೩೦ ಘಂಟೆ .. ಎಲ್ಲರೂ ಬೆವರಿನಲ್ಲಿ ಒದ್ದೆಯಾಗಿದ್ದೆವು!! ಚಿದಾನಂದ ನಂತೂ ಒಂದಕ್ಕೆ ಒಬ್ಬನೇ ಹೋಗಲೂ ಹೆದರಿ ಅದನ್ನೂ ಕಟ್ಟಿಕೊಂಡು ಕೂತ .. ಇನ್ನು ಸಾಧ್ಯವೇ ಇಲ್ಲ ಅಂದ ಸದಾನಂದ ಗಟಾರನೆ  ವಿಸ್ಕಿಯ ಬಾಟಲಿಗೆ ಬಾಯಿ ಹಾಕಿದ.. ಅಷ್ಟರ ತನಕ ಸುಮ್ಮನೆ ಕೂತಿದ್ದ ಕುಮಾರ ನಡುಗುವ ಕೈಯಿಂದಲೇ ಬಿಯರ್ ಬಾಟಲು ಎತ್ತಿಕೊಂಡ.. ಯಾರಲ್ಲೂ ಮಾತೆ ಇಲ್ಲ .. ಅಷ್ಟರಲ್ಲೇ ಪೋಲಿಸ್ ಜೀಪ್ ಬಂದು ಸದಾನ೦ದನ ಮನೆ ಮುಂದೆ ನಿಂತು ಬಿಟ್ಟಿತ್ತು!!!

"ಸಾರ್ ಸಾರ್" ಅನ್ನುತ್ತ ಒಬ್ಬ ಒಳಕ್ಕೊಡಿ ಬಂದ .. " ಆ ಹೆಣ , ನೀವು ನೋಡಿದ  ಹೆಣ, ನಾವೇ ನಮ್ಮ ಕೈಯಾರೆ ಎತ್ತಿ ಆಂಬುಲೆನ್ಸ್ ಗೆ ಹಾಕಿದ್ದು " ಪೋಲಿಸ್ ನವ ಏನೋ ಹೇಳತೊಡಗಿದ .. ಏನಾಯ್ತು ? ಅಂದೆ .. ಸಾರ್ ನೀವೇ ನೋಡಿದರಲ್ಲ ಹೆಣ  ಇದ್ದಿದ್ದು.. ನೀವೇ ತಾನೇ ಫೋನ್ ಮಾಡಿದ್ದು .. ನಾವ್ ಅದನ್ನ ಎತ್ತಿ ಆಂಬುಲೆನ್ಸ್ ಗೆ ಹಾಕಿದ್ದು .. ನೋಡಿ ನಿಮ್ಮೆಲ್ಲರ ಸಹಿ , ಹೆಬ್ಬೆಟ್ಟು.. ಬರೆದ ರಿಪೋರ್ಟ್ ಎಲ್ಲಾ "

"ಹೌದು ಸಾರ್ .. ಆದ್ರೆ ನಾವೇನೂ ತಪ್ಪು ಮಾಡಿಲ್ಲ .. ದೆವ್ವ ನೋಡ್ಬೇಕು ಅಂತ ಹುಚ್ಚು ಕಟ್ಟಿ ಆ ಕಡೆ ಹೋಗಿದ್ವಿ ಅಷ್ಟೇ ಸಾರ್ , ಕ್ಷಮಿಸಿಬಿಡಿ .. ನಾವೇನೂ ಮಾಡಿಲ್ಲ " ಸದ್ದಾನಂದ ಆತನಿಗೆ ಸಮಜಾಯಷಿ ನೀಡತೊಡಗಿದ್ದ

"ಹೌದು ಸದಾನಂದ , ನಾವೇ ಹೆಣ  ಕೊಂಡು  ಹೋದೆವು .. ಆಸ್ಪತ್ರೆ ಹತ್ತಿರ ಹೋಗಿ ಹೆಣ  ಇಳಿಸಬೇಕು ಅಂತ ಆಂಬುಲೆನ್ಸ್ ಬಾಗಿಲು  ತೆಗೆದರೆ ಹೆಣಾನೆ ಇರ್ಲಿಲ್ಲ " ಪೋಲಿಸ್ ನವನೂ ಬೆವರತೊಡಗಿದ್ದ!!

ಕುಮಾರನ ಕೈಯಲ್ಲಿದ್ದ ಬಿಯರ್ ಬಾಟಲಿ ಕೆಳಗೆ ಬಿದ್ದು "ಫಳ್  ಫಳ್ " ಅನ್ನುವ ಶಬ್ದದೊಂದಿಗೆ ಒಡೆದ ಸದ್ದು ಆ ನೀರವ ರಾತ್ರಿಯಲ್ಲಿ ಕಿವಿಗಪ್ಪಳಿಸಿತು !!!!
                                                                                                          --ಮುಗಿಯಿತು

ಗೋರೆ ಉವಾಚ :

ಕೆಲವರು ಎಲ್ಲಿಗೆ ಹೋದರೂ ಸಂತೋಷದ ವಾತಾವರಣ ನಿರ್ಮಿಸುತ್ತಾರೆ .. ಇನ್ನು ಕೆಲವರು, ಹೋದರೆ ಸಂತೋಷದ ವಾತಾವರಣ ನಿರ್ಮಿಸುತ್ತಾರೆ !!!



4 comments:

sunaath said...

ಭಯಾನಕ suspense ನಿರ್ಮಿಸಿದ್ದೀರಿ, ಗೋರೆ! ಟೈಪು ಮಾಡುತ್ತಿರುವಂತೆ, ನನ್ನ key board ನಡಗುತ್ತಲೇ ಇದೆ!!

Adithya Gokhale said...

ಹೋದ ಕೆಲಸ ಯಶಶ್ವಿಯಾಗಿ ನೆರವೇರಿತು ...:) ಚೆನ್ನಾಗಿತ್ತು ಗೋರೆ ..:)

Vbhat said...

nicely written...maintained super suspense till end..

Anonymous said...

ಯಪ್ಪಾ ... ಅಂಜಿ ಲದ್ದಿ ಒಗದಬಿಟ್ಟೆ ...