Monday, April 5, 2010

ಭೂತದ ಬೆನ್ನುಹತ್ತಿ !!!

ಕುಮಾರ ..!! ಕಾಲೇಜ್ ನಲ್ಲಿರುವಾಗ ನಮ್ಮ ಜೊತೆ ಗೆಳೆಯರ ಪೈಕಿ ಈತನೂ ಒಬ್ಬ... ನಮ್ಮ ಗುಂಪಿನಲ್ಲಿ ಅತ್ಯಂತ ಪೋಲಿ ಹುಡುಗ ಅಂದ್ರೆ ಈತನೇ.. ಯಾರಿಗಾದರೂ ಕಾಮೆಂಟ್ ಹೊಡೆಯೋದು, ತಮಾಷೆ ಮಾಡೋದು, ಲೈನ್ ಹೊಡೆಯೋದು ಎಲ್ಲದರಲ್ಲೂ ಮುಂದು.. ನಮ್ಮ ಕಾಲೇಜ್ ಗೆ ಬರುತ್ತಿದ್ದ ಮಿನಿ ಸ್ಕರ್ಟ್ ಹುಡುಗಿಯರಿಗೆ ಚೂಡಿದಾರ್ ಹಾಕಿಕೊಂಡು ಬರುವಂತೆ ಮಾಡಿದ್ದು ಈತನೇ... ಹೇಗೆ ಅಂತೀರಾ? ಯಾರಾದರೂ ಹುಡುಗೀರು ಮಿನಿ ಸ್ಕರ್ಟ್ ಹಾಕಿಕೊಂಡು ಬಂದರೆ ಮುಗೀತು ಈತ "ಉಫ್ಫ್" "ಉಫ್ಫ್" ಅಂತ ಗಾಳಿ ಬಿಡಲು ಪ್ರಾರಂಭಿಸುತ್ತಿದ್ದ.. ಏನಯ್ಯಾ ಇದು ಅಂತ ಒಮ್ಮೆ ಕೇಳಿದ್ದಕ್ಕೆ  "ಏನಿಲ್ಲಾ, ಅಷ್ಟೊಂದು ಚಿಕ್ಕ ಸ್ಕರ್ಟ್ ಹಾಕಿಕೊಂಡಿದ್ದಾಳಲ್ಲ, ಎಲ್ಲಿಯಾದರೂ ಗಾಳಿಗೆ ಮೇಲೆ ಹಾರುತ್ತೋ ನೋಡೋಣ" ಅಂತ ಹೇಳಿ ಪೋಲಿ ನಗು ಬೀರಿದ್ದ.. ಇದನ್ನು ತಿಳಿದ ಹುಡುಗೀರು ಮಿನಿ ಸ್ಕರ್ಟ್ ತೊಡೊದನ್ನೇ    ನಿಲ್ಲಿಸಿದರು...!!! ಇದೊಂದು sample  ಅಷ್ಟೇ ಆತನ ಪೋಲಿ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ.. ತುಂಬಾ ಚಟುವಟಿಕೆಯ ಮನುಷ್ಯ .. ನೋಡಲೂ ಸುಮಾರಾಗಿದ್ದ.. ಕಾಲೇಜ್ ಮುಗಿಸಿ ಅಪ್ಪ ಮಾಡಿಟ್ಟಿದ್ದ ೧೦-೧೨ ಎಕರೆ ಯಷ್ಟಿದ್ದ ಜಮೀನಿನಲ್ಲಿ  ಕೃಷಿ ಮಾಡಿಕೊಂಡು ಹಾಯಾಗಿದ್ದ.. ಮದುವೆಯೂ ಆಗಿ ೨೦೦೫ ರ ಹೊತ್ತಿಗೆ ಒಂದು ಮಗು ಕೂಡ ಆಗಿತ್ತು... ಆದರೆ....
ಅದು ೨೦೦೯ ಜನವರಿನೋ ಫೆಬ್ರುವರಿನೋ ಸರಿಯಾಗಿ ನೆನಪಿಲ್ಲ , ಒಂದು ಸಾರಿ ಊರಿಗೆ ಹೋಗಿದ್ದ ನಾನು ಕುಮಾರನನ್ನು ಭೇಟಿಯಾದೆ.. ಆತನನ್ನು ನೋಡಿದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.. ಈತನೇ ಕುಮಾರನಾ? ನಂಬಲಿಕ್ಕೆ ಆಗಲಿಲ್ಲ.. ಆತನ ದೇಹ ಅಸ್ತಿಪಂಜರದಂತೆ ಆಗಿ ಹೋಗಿತ್ತು... ಆತನೇ ತುಂಬಾ ಪ್ರೀತಿಯಿಂದ ಬೆಳೆಸಿದ್ದ ತೋಟ ನೀರಿಲ್ಲದೆ ಕೆಂಪಗಾಗಿತ್ತು..."ಏನಯ್ಯ ಇದು" ಅಂದೆ... ಯಾರಿಗಾದರೂ ತಮಾಷೆ ಮಾಡುತ್ತಾ ಅಷ್ಟೊಂದು ಉಲ್ಲಾಸದಿಂದಿದ್ದ ಹಿಂದಿನ ಕುಮಾರ ಮಾತೆ ಆಡಲಿಲ್ಲ.. ನನಗೆ ಗಾಬರಿಯಾಯಿತು.. ಎಷ್ಟಾದರೂ ನನ್ನ ಸ್ನೇಹಿತನಲ್ಲವೇ.. "ಏನಾದರೂ ಖಾಯಿಲೇನಾ" ಮತ್ತೆ ಕೇಳಿದೆ.. ಇಲ್ಲಪ್ಪ ಅಂದ.. ಮತ್ತಿನ್ನೇನು ಹೀಗಾಗಿದ್ದಿಯಾ? ಅಂತ ಕೇಳಿದ್ದಕ್ಕೆ ಮನೆಗೆ ಬಾ ಮಾತಾಡೋಣ ಅಂತ ಕರೆದುಕೊಂಡು ಹೋದ... ನಾವು ಮನೆಗೆ ಹೋಗುತ್ತಿದ್ದಂತೆ ಅಲ್ಲೇ ಅಂಗಳದಲ್ಲಿದ್ದ ಆತನ ೩.೫ ವರ್ಷದ ಮಗಳು ಮನೆಯೊಳಕ್ಕೆ ಓಡಿಹೋದಳು.. ಆತನ ಮನೆಯನ್ನೊಮ್ಮೆ ವೀಕ್ಷಿಸಿದೆ... ಹಿಂದಿನ ಸೊಬಗಿಲ್ಲ.. ಆತನ ಮನೆ ಮುಂದೆ ಇದ್ದ ಎರಡು ಭಯಂಕರ ನಾಯಿಗಳ ಶಬ್ದವಿಲ್ಲ... ಆತನ ಹೆಂಡತಿಯೂ ಸೊರಗಿ ಹೋಗಿದ್ದಳು.. ನನಗೇನೂ ಅರ್ಥವಾಗದೆ ಆತನ ಮನೆಯ ಬದಿಯಲ್ಲಿದ್ದ ದನಗಳ ಹಟ್ಟಿಯ ಕಡೆ ವೀಕ್ಷಿಸಿದೆ.. ೧೦-೧೨ ರಷ್ಟಿದ್ದ ದನ ಎಮ್ಮೆ ಯಾವುದೂ ಇರಲಿಲ್ಲ..ಉಹುಂ ಒಂದೇ ಒಂದು ದನವಾಗಲಿ ಎಮ್ಮೆಯಾಗಲಿ ಇಲ್ಲ.. ಏನಿದೆಲ್ಲಾ.. ನನಗೆ ಅರ್ಥವಾಗದೆ ಮೆಲ್ಲನೆ ಕುರ್ಚಿಯಲ್ಲಿ ಕೂತೆ.. ಮನಸ್ಸಿನಲ್ಲಿ ಏನೇನೊ ಕಲ್ಪನೆಗಳು... ಏನಾದರೂ ಖಾಯಿಲೆ ಬಂದಿರಬಹುದೇ..? ಅಥವಾ ಈತನ ಅಪ್ಪನಂತೆ ಈತನೂ ಕುಡಿತದ ದಾಸನಾಗಿ ಬಿಟ್ಟನೇ? ಅಪ್ಪನ ಕುಡಿತ ಬಿಡಿಸಲು ಶತಾಯ ಗತಾಯ ಯತ್ನಿಸಿದ್ದ ಕುಮಾರನೇ ಹೀಗೆ ಮಾಡಿಯಾನೆ?.. ನಾನು ಸುಮ್ಮನೆ ಗರಬಡಿದಂತೆ ಕುಳಿತೆ ಇದ್ದೆ.. ಆತ ಕಾಫಿ ತಂದುಕೊಟ್ಟ.. ನನಗೆ ತಡೆಯಲಾಗಲಿಲ್ಲ... "ಏನೋ ಇದು , ಇದೇನು ಎಲ್ಲಾ ಹೀಗಾಗಿ ಹೋಗಿದೆ? ಏನಾದ್ರು ತೊಂದ್ರೆನಾ.. ಕೃಷಿಯಲ್ಲಿ ಏನಾದರೂ ಲೋಸ್ಸ್ ಆಯ್ತಾ.." ಆತ ಒಂದು ಕ್ಷಣ ಆತನ ಹೆಂಡತಿಯ ಮುಖ ನೋಡಿದ.. ಆಕೆಯ ಕಣ್ಣುಗಳು ಆಗಲೇ ಒದ್ದೆಯಾಗಿದ್ದವು..."ಇಲ್ಲ ಗೋರೆ.. ಈಗೆ ೮ ತಿಂಗಳ ಹಿಂದಿನಿಂದ ಇದು ಪ್ರಾರಂಭವಾಯಿತು" ಅಂದ..

ಅರ್ಥವಾಗದೆ ಆತನ ಮುಖ ನೋಡಿದೆ.. "ಈಗ್ಗೆ ೮ ತಿಂಗಳ ಹಿಂದೆ ನಮ್ಮ ಹಟ್ಟಿಯಲ್ಲಿ ೨ ದನಗಳು ಸತ್ತು ಹೋದವು.. ಆಮೇಲೆ  ಒಂದು ನಾಯಿ.. ಹೀಗೆ ೨-೩ ತಿಂಗಳಲ್ಲಿ ೪-೫ ಜೀವಗಳು ಒಂದೊಂದಾಗಿ ಹೋಗಿಬಿಟ್ವು.. ಏನೆಂದೇ ಅರ್ಥವಾಗಲಿಲ್ಲ.. ಗೋ- ಡಾಕ್ಟರ ಸಹ ಕಾರಣ ತಿಳಿಯದೆ ಹಿಂದುರಿಗಿದ...ಎಲ್ಲಾ ಸಾಯೋದು ಬೇಡ ಅಂತ ಎಲ್ಲಾ ದನ-ಕರು ಮಾರಿಬಿಟ್ಟೆ.. ನಾನೇ ತುಂಬಾ ಜ್ಯೋತಿಷಿ ಗಳ ಬಳಿ ಹೋದೆ.. ಆಮೇಲೆ ತಿಳೀತು ನೋಡು" ಆತ ಮಾತು ನಿಲ್ಲಿಸಿದ..
"ಏನು ಏನಂತ ತಿಳೀತು"
"ಕುಂದಾಪುರದ ಹತ್ತಿರ ಒಬ್ಬ ಜ್ಯೋತಿಷಿ ಇದ್ದಾನೆ , ತುಂಬಾ ತಿಳಿದವನು..ತುಂಬಾ ಫೇಮಸ್ ... ಆತನ ಬಳಿ ಪ್ರಶ್ನೆ ಕೇಳಿದೆ. ಆಗ್ಲೇ ನನಗೆ ಈ ವಿಷಯ ತಿಳಿದದ್ದು.. ಪರಿಹಾರಕ್ಕಾಗಿ ತುಂಬಾ ಖರ್ಚು ಮಾಡಿದೆ ಆದರೆ ಯಾವುದೇ ಉಪಯೋಗ ಆಗ್ಲಿಲ್ಲ.."
ಆತನ ಮುಖವನ್ನೇ ಗಮನಿಸಿದೆ.. ಇಷ್ಟು ಮಾತಿಗೆ ಆತ ಬೆವರತೊಡಗಿದ್ದ .!!
"ಯಾರೋ , ಯಾರೋ ನಮಗೆ ಮಾಟ ಮಾಡಿದ್ದಾರಂತೆ!!!"  ಕುಮಾರ ಗಕ್ಕನೆ ತನ್ನ ಮಾತು ನಿಲ್ಲಿಸಿದ..
"ಏನು? ಮಾಟ?? "  ನಾನು ಒಂದು ಕ್ಷಣ ಬೆಚ್ಚಿಬಿದ್ದೆ!!!!

--ಮುಂದುವರೆಯುವುದು..

8 comments:

ದಿನಕರ ಮೊಗೇರ said...

ರವಿಕಾಂತ್.........
ಇದು ಸಹ ಜೋಕ್ ಇರಬಹುದು ಅಂತ ಓದುತ್ತಾ ಹೋದೆ........ ಆದರೆ '' ಮುಂದುವರಿಯುವುದು'' ನೋಡಿ ನಗು ಬಂತು............ ಬೇಗ ಮುಂದುವರಿಸಿ.......... ಕಾಯುತ್ತೇನೆ............

ಸುಧೇಶ್ ಶೆಟ್ಟಿ said...

hmm... interesting aagidhe.... yenaaguttade endu thiliyalu mundina baagakkaagi kaayuttEne...

ಸವಿಗನಸು said...

ರವಿ,
ನಿರೂಪಣೆ ಚೆನ್ನಾಗಿತ್ತು...
ಎನಾಯಿತು ಕುಮಾರನಿಗೆ ಎಂಬ ಕಾತುರ....
ಬೇಗ ಮುಂದುವರಿಸಿ......

Shashi jois said...

ಏನೋ ತಮಾಷೆ ಅಂತ ಓದುತ್ತಾ ಹೋದರೆ ಎಲ್ಲೋ ಮಾಟದ ಕಡೆ ಕತೆ ತಿರುಗಿತಲ್ಲ !!!!!!

PARAANJAPE K.N. said...

ಕಥೆಯ ನಿರೂಪಣೆ ಮತ್ತು ಅದು ಪಡೆದ ತಿರುವು ರೋಚಕ ವಾಗಿದೆ. ಹೌದು ಕೆಲವರಿಗೆ ಇ೦ತಹ ಭೂತ-ಪ್ರೇತ-ಮಾಟ-ಮ೦ತ್ರ ಗಳ ಪೇತು ಮನಸ್ಸಿಗೆ ತಟ್ಟಿದರೆ ಸಾಕು, ಅವರ ಕ್ರಿಯಾಶೀಲತೆಯೆಲ್ಲ ನಾಶವಾಗಿ, ಸಾವಿನ ಮನೆ ಸಮೀಪ ಇರುವವರ೦ತೆ ಆಗಿ ಬಿಡುತ್ತಾರೆ, ಮು೦ದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ.

Subrahmanya said...

..ಒಳ್ಳೆಯ ನಿರೂಪಣೆಯೊಂದಿಗೆ, ಕೊನೆಯ ಟ್ವಿಸ್ಟ್ ಚೆನ್ನಾಗಿದೆ. ಬೇಗ ಮುಂದುವರಿಸಿ.

sunaath said...

ತುಂಬ ಕುತೂಹಲಕರವಾಗಿದೆ. ಮುಂದಿನ ಭಾಗವನ್ನು ಬೇಗನೇ ಕೊಡಿ, please.

Unknown said...

ಎಲ್ಲರಿಗೂ ಧನ್ಯವಾದಗಳು.. ಭೂತದ ಬೆನ್ನು ಹತ್ತಿದಾಗ ಏನಾಯಿತು.. ಮಾಟ ಮಂತ್ರ ಈಗಲೂ ನಡೆಯುತ್ತಾ?? ಮುಂದಿನ ಭಾಗ ತಯಾರಿದೆ, ಹೆಚ್ಚು ಕಾಯಿಸಲಾರೆ.. ಬೇಗನೆ ಹಾಕುವೆ..