Thursday, March 25, 2010

ಸದಾನಂದ ಮತ್ತು ಗುಣಪಾಲ ಮೇಷ್ಟ್ರು!!

ಮೊನ್ನೆ ಸದಾನಂದ ಸಿಕ್ಕಿದ್ದ.. ತುಂಬಾ ದಿನಗಳಾಗಿದ್ದವು ಆತನನ್ನು ಭೇಟಿ ಮಾಡಿ.. ಅಪರೂಪಕ್ಕೆ ಒಮ್ಮೊಮ್ಮೆ ಬೀರ್ ಕುಡಿಯೋ ಅಭ್ಯಾಸವಿದೆ ಆತನಿಗೆ... ಮೊನ್ನೆ ಸಿಕ್ಕಿದವನೇ "ಬೀರು" ಅಂತ ನನ್ನ ಮುಖ ನೋಡಿ ನಕ್ಕ.."ಸರಿ , ನೀನು ಹೋಗಿ ಕುಡಿದು ಬಾ ನಾನಿಲ್ಲೇ ಇರ್ತೀನಿ" ಅಂದೆ.. ಇಲ್ಲ ನೀನು ನನ್ನ ಜೊತೆ ಬರಬೇಕು ಅಂತ ಹಠ ಹಿಡಿದ.. ಸರಿ ಅಂತ ಆತನ ಜೊತೆ ಒಂದು ಗಾರ್ಡನ್ ಹೋಟೆಲ್ ಕಡೆ ಸಾಗಿದೆ.. ನಾವಿಬ್ಬರೂ ಸಿಕ್ಕರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ.. ಮಾಡಿದ ಚೇಷ್ಟೆಗಳು, ಮಾಡಿಕೊಂಡ ಅವಘಡಗಳು, ಈಗ ನೆನೆಸಿಕೊಂಡರೆ ನಗು ಬರುತ್ತೆ.. ಹಾಗೆ ಮೊನ್ನೆ ಆತನ ಜೊತೆ ಕೂತಿದ್ದಾಗ ಕೆಲವೊಂದು ಘಟನೆಗಳು ನೆನಪಾದವು..

ಘಟನೆ ಒಂದು..
  ಆಗ ಬಹುಶ ನಾವು ನಾಲ್ಕನೇ ತರಗತಿಯಲ್ಲಿ ಇದ್ದಿರಬೇಕು.. ಬೆಳಗ್ಗೆ ನಾವಿಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ಆವತ್ತೋ ಹಾಗೆ ಶಾಲೆಗೇ ಹೊರಟವನನ್ನು ಕೇಳಿದೆ "ಮಗ್ಗಿ ಕಲ್ತಿಯಾ"?   ಯಾವ ಮಗ್ಗಿ ? ಸದಾನಂದ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ.. "ಲೋ ಗೂಬೆ ನಿನ್ನೆ ತಾನೇ ಗುಣಪಾಲ ಮೇಷ್ಟ್ರು ಹೇಳಿದ್ರಲ್ಲ ಎಲ್ರೂ ೬ ನೆ ಮಗ್ಗಿ ಬಾಯಿಪಾಠ ಮಾಡಿಕೊಂಡು ಬರಬೇಕು ಅಂತ.. ಕಲ್ತಿಲ್ವ? ನಿನಗಿವತ್ತು ಇದೆ ನೋಡು" ನಾನು ಇಷ್ಟು ಹೇಳಿದ್ದೆ ಸದಾನಂದ ಒಂದು ಕ್ಷಣ ಬೆಚ್ಚಿ ಬಿದ್ದ.. ಗುಣಪಾಲ ಮೇಷ್ಟ್ರು..!!! ನೆನೆಸಿಕೊಂಡರೆ ಹೆದರಿಕೆ ಯಾಗುತ್ತಿತ್ತು.. ತುಂಬಾ ಜೋರು.. ಅವರ ಬೆತ್ತದ ರುಚಿ ನೋಡದೆ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಬಂದಿರಲಿಕ್ಕಿಲ್ಲ.. ಇವತ್ತು ಸದಾನಂದನಿಗೆ ಹೊಡೆತ ಖಂಡಿತ.. ಸದಾನಂದನ ಮುಖ ಬಿಳುಚಿಕೊಂಡಿತ್ತು.. ಆಟದ ಮಧ್ಯೆ ಮಗ್ಗಿ ಕಲಿಯುವುದೇ ಮರೆತಿದ್ದನಾತ.. "ನೀನು ಹೋಗು ನಾನು ಈಗಲೇ ಬಂದೆ" ಅಂದವನೇ ಆತ ಮನೆಯತ್ತ ಓಟಕಿತ್ತ.. ಅದ್ಯಾಕೆ ಓಡಿದ ಎಂದು ತಿಳಿಯದೆ ನಾನು ಅವಕ್ಕಾಗಿ ಶಾಲೆಯತ್ತ ಹೆಜ್ಜೆ ಹಾಕಿದೆ.. ಇನ್ನೇನು ಗುಣಪಾಲ ಮಾಸ್ತರು ಪಾಠ ಮಾಡಲು ಬಂದರು ಅನ್ನುವಷ್ಟರಲ್ಲಿ ಸದಾನಂದ ಹಾಜರಾಗಿದ್ದ!!

"ಎಲ್ರೂ ಮಗ್ಗಿ ಕಲ್ತಿದ್ದೀರ??" ಮಾಸ್ತರು ಕೇಳಿದ್ದಕ್ಕೆ ನಾವೆಲ್ಲಾ "ಹೌದು ಸಾರ್" ಎಂದು ಕೂಗಿಕೊಂಡೆವು.. "ಒಬ್ಬೊಬ್ಬರಾಗಿ ಶುರು ಮಾಡಿ" ಹಾಗೆ ಮೇಷ್ಟ್ರು ಹೇಳುತ್ತಿದ್ದಂತೆ ಮೊದಲನೇ ಬೆಂಚಿನಿಂದ ಒಬ್ಬೊಬ್ಬರಾಗಿ ಮಗ್ಗಿ ಒಪ್ಪಿಸತೊಡಗಿದೆವು.. ನನ್ನ ಸರದಿಯೂ ಬಂತು.. ನಾನು ಮುಗಿಸಿದ್ದೇ ಸದಾನಂದ ನಿಧಾನಕ್ಕೆ ಎದ್ದು ನಿಂತ.. ಆತನ ಕೈ ಕಾಲು ಮೆಲ್ಲನೆ ನಡುಗುತ್ತಿತ್ತು.. "ಆರೊಂದ್ಲಿ ಆರು, ಆರು ಯೆರಡ್ಲಿ ಹನ್ನೆರಡು..ಆರು ಮೂರ್ಲಿ ...." ಸದಾನಂದ ತಡವರಿಸತೊಡಗಿದ..."ಆರು ಮೂರ್ಲಿ ಹದಿನೆಂಟು"  ಹಾಗಂತ ಹೇಳಿಕೊಟ್ಟ ಮೇಷ್ಟ್ರು ಆತನ ಬೆನ್ನಿನ ಮೇಲೆ "ಛಟ್" ಅಂತ ಬೆತ್ತ ಬೀಸಿಯೇ ಬಿಟ್ಟರು.. ಸದಾನಂದ ಹಾಗೆಯೇ ಹೇಳಿ ಮತ್ತೆ ತಡವರಿಸತೊಡಗಿದ.. ಪ್ರತಿಯೊಂದು ಮಗ್ಗಿಯ ಪಂಕ್ತಿಗೂ ಒಂದೊಂದು ಏಟು.. ಹುಹ್.. ಒಂದು ಅಥವಾ ಎರಡು ಏಟಿಗೆ ಕಣ್ಣೀರು ಹರಿಸುತ್ತಿದ್ದ ಸದಾನಂದ ಆವತ್ತು ನಾಲ್ಕು ಬಿದ್ದರೂ ತುಟಿಪಿಟಿಕ್ ಎಂದಿರಲಿಲ್ಲ.. ಬದಲಿಗೆ ಆತನ ಮುಖದಲ್ಲಿ ಸಣ್ಣಗೆ ನಗು.. ನನಗ್ಯಾಕೋ ಅನುಮಾನ ಕಾಡತೊಡಗಿತು..ಅದ್ಯಾಕೋ ಸದಾನಂದನಿಗೆ ಹೊಡೆಯುವಾಗ ಬೇರೆಯೇ ರೀತಿಯ ಶಬ್ದ ಬರುತ್ತಿತ್ತು!!!.. ಆತ ಅದೇನೋ ಬೆನ್ನಿಗೆ ಕಟ್ಟಿಕೊಂಡಂತೆ.. ಅದು ಮಾಸ್ತರಿಗೂ ಗೊತ್ತಾಗಿ ಹೋಯಿತು.. "ಅಂಗಿ ಬಿಚ್ಚು" ಗುಣಪಾಲ ಮಾಸ್ತರು ಅಬ್ಬರಿಸಿದರು.. ಸದಾನಂದ ನಡುಗುತ್ತ ಅವರ ಮುಖ ನೋಡತೊಡಗಿದ.. "ನಿಕ್ಕೆ ಪನ್ಯ ಅಂಗಿ ದೆಪ್ಪು" ಈ ಬಾರಿ ಗುಣಪಾಲ ಮೇಷ್ಟ್ರು ಸದನಂದನ ಮಾತೃ ಭಾಷೆ ತುಳುವಿನಲ್ಲಿ ಆಜ್ಞಾಪಿಸಿದರು .. ಬೇರೆ ವಿಧಿಯಿಲ್ಲದೇ ಸದಾನಂದ ನಿಧಾನಕ್ಕೆ ಅಂಗಿ ಬಿಚ್ಚಿದ.. ಅದನ್ನು ನೋಡಿ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆವು..!!!!
ಗುಣಪಾಲ ಮಾಸ್ತರ ಏಟಿಗೆ ಹೆದರಿಕೊಂಡಿದ್ದ ಸದಾನಂದ ತನ್ನ ಬೆನ್ನಿಗೆ ಅಡಕೆ ಮರದ ಹಾಳೆಯೊಂದನ್ನು ಕಟ್ಟಿಕೊಂಡು ಬಂದಿದ್ದ.. ಆತ ಮನೆಗೆ ಓಡಿ ಹೋಗಿದ್ದು ಯಾಕೆ ಅನ್ನೋದು ನನಗೆ ಆಗ ಅರ್ಥವಾಗಿತ್ತು... ನಾವೆಲ್ಲಾ ಜೋರಾಗಿ ನಗುತ್ತಿದ್ದರೆ  ಅದನ್ನು ನೋಡಿ ಗುಣಪಾಲ ಮೇಷ್ಟ್ರು ಸಹ ನಗತೊಡಗಿದರು..."ನಾಳೆ ಬರುವಾಗ ಮಗ್ಗಿಯನ್ನು ೫೦ ಸಾರಿ ಬರೆದುಕೊಂಡು ಬಾ" ಅಂತ ಶಿಕ್ಷೆ ವಿಧಿಸಿದ ಮೇಷ್ಟ್ರು ನಗುತ್ತ ಕ್ಲಾಸಿನಿಂದ ಹೊರನಡೆದರು!!!

ಎರಡನೆ ಘಟನೆಯನ್ನು ಮುಂದೆ ಬರೆಯುವೆ!!!

12 comments:

Manasaare said...

ರವಿ ಅವರೇ
ಸಕತ್ತಾಗಿದೆ ನಿಮ್ಮ ಬಾಲ್ಯದ ನೆನಪು . ನಾನು ಚಿಕ್ಕವಳು ಇರುವಾಗ್ ಇಂಥ ಘಟನೆಗಳು ಸುಮಾರು ನಡೆದಿವೆ , ಇವೊತ್ತು ಅವೆಲ್ಲ ಜ್ಞಾಪಕಕ್ಕೆ ಬಂತು. ಹೀಗೆ ಬರಲಿ ನಿಮ್ಮ ಬಾಲ್ಯದ ನೆನಪುಗಳ ಮಾಲೆ .

ಮನಸಾರೆ

Subrahmanya said...

ಚೆನ್ನಾಗಿದೆ ನಿಮ್ಮ ಅನುಭವ ಕಥನ. ಎರಡನೆಯದೂ ಬೇಗ ಬರಲಿ.

jaya shetty said...

Thumba nagu taristu reeeeeeeeeeeee

PARAANJAPE K.N. said...

ಅನುಭವ ಚೆನ್ನಾಗಿದೆ, ಇನ್ನಷ್ಟು ವಿಚಾರ ಹೊರಬರಲಿ

ಸವಿಗನಸು said...

ರವಿ,
ತಮಾಷೆಯಾಗಿದೆ ನಿಮ್ಮ ಬಾಲ್ಯದ ನೆನಪು....
ಒಂದೆ ಬೀರ್ ಗೆ ಇಷ್ಟು ನೆನಪು ಬಂದಿದೆ....ಇನ್ನಂದು ಬೀರ್ ದು ಹೇಳಿ....

ಬಿಸಿಲ ಹನಿ said...

ರವಿಕಾಂತ್,
ತುಂಬಾ ತಮಾಷೆಯಾಗಿದೆ ಬಾಲ್ಯದ ನಿಮ್ಮ ಗೆಳೆಯನ ಆಟ. ನನ್ನ ಬಾಲ್ಯದ ಇಂಥ ಆಟಗಳು ನೆನಪಿಗೆ ಬಂದವು. ಮುಂದಿನ ಘಟನೆಯನ್ನು ಓದಲು ಕಾಯುವೆ.

ದಿನಕರ ಮೊಗೇರ said...

ಮಹೇಶ್ ಸರ್ ಹೇಳಿದ್ದು ಸರಿ.... ಒಂದು ಬೀರ್ ಗೆ ಕಥೆ ಚೆನ್ನಾಗಿದೆ..... ಮೂರನೇ ಬೀರ್ ಕಥೆ ಮುಂದಿನ ಪೋಸ್ಟ್ ನಲ್ಲಿ ಇರಲಿ...... ನಿಮ್ಮ ಶೇಕ್ ಅಬ್ದುಲ್ಲಾ ನ ಕಥೆ, ನಾನು ಸರಿ ಸುಮಾರು ಎಲ್ಲರಿಗೂ ಹೇಳಿದ್ದೇನೆ....

Raghu said...

ಹ್ಹ ಹ್ಹ ಹ್ಹ ಏನ್ ಸೂಪರ್ ಐಡಿಯಾ ಅಲ್ವ...ನಾನು ಇದೆ ಐಡಿಯಾ use ಮಾಡಿದ್ರೆ ಕೆಲೋಮ್ಮೆ ಪೆಟ್ಟು ತಿನ್ನೋದು ಉಳಿತಿತ್ತು..
ನಿಮ್ಮವ,
ರಾಘು.

shivu.k said...

ರವಿಕಾಂತ್ ಸರ್,

ನಿಮ್ಮ ಬಾಲ್ಯದ ಗೆಳೆಯನ ಉಪಾಯವನ್ನು ನೋಡಿ ನಗುಬಂತು. ಇನ್ನಷ್ಟು ಇಂಥ ಬಾಲ್ಯದ ನೆನಪುಗಳನ್ನು ಬರೆಯಿರಿ..ಚೆನ್ನಾಗಿರುತ್ತೆ...

sunaath said...

ರವಿಕಾಂತ,
ತುಂಬ ವಿನೋದಮಯವಾಗಿವೆ ನಿಮ್ಮ ನೆನಪುಗಳು. ಇನ್ನಷ್ಟನ್ನು ಬಿತ್ತರಿಸಿರಿ.

satish kulal said...

gunapala meshtra nenapu tharisiddakke tumbaa thanks.avara aetina ruchi innoo hasi...ru !!!!!!

ಸುಧೇಶ್ ಶೆಟ್ಟಿ said...

ha ha ha...

nanna classinalli meshtarindha pettu thinnuthidda prasanga nenapaayithu :)