Thursday, September 24, 2009

ನಾನು ಸುತ್ತಿಗೆಯಿಂದ ಬಡಿಯುತ್ತಲೇ ಇದ್ದೆ....(ನನ್ನ ಕಥೆ -ಭಾಗ ೨)

ಆಗ ನನಗೆ ನೆನಪಾದದ್ದೇ ಸುತ್ತಿಗೆ ವಿದ್ಯೆ... ಅಂದರೆ ಬೆಳ್ಳಿಯ ಕುಸುರಿ ಕೆಲಸ... ನನ್ನ ಚಡ್ಡಿ ದೋಸ್ತು ಸದಾನಂದನ ಮನೆಯಲ್ಲಿ ಈ ಕೆಲಸ ನಡೆಯುತ್ತಿತ್ತು... ಆತನ ತಂದೆ ಬೆಳ್ಳಿಯ ಕೆಲಸದಲ್ಲಿ ನಿಸ್ಸೀಮರು.. ಬೆಳ್ಳಿಯ ಮೂರ್ತಿಗಳು, ಕಲಶಗಳು, ದೇವಸ್ಥಾನದ ಬಾಗಿಲು, ಪಲ್ಲಕ್ಕಿ ಇಂಥ ಕೆಲಸಗಳಲ್ಲಿ ಆಗ ಅವರು ಭಾರಿ ಹೆಸರುವಾಸಿ... ರಜಾ ದಿನಗಳಲ್ಲಿ ನಾನು ಮತ್ತು ಸದಾನಂದನೂ ಸುತ್ತಿಗೆ ಹಿಡಿದು ಕೂರುತ್ತಿದ್ದೆವು... ಅದೆಷ್ಟೋ ಕೆಲಸ ಮಾಡಿ ನಾವೂ ಅದರಲ್ಲಿ ಅಲ್ಪ ಸ್ವಲ್ಪ ನಿಸ್ಸೀಮರಾಗಿ ಬಿಟ್ಟಿದ್ದೆವು.. ಒಂದು ಸಾರಿ ಆ ಚಿಕ್ಕ ಸುತ್ತಿಗೆ ಏಟು ತಪ್ಪಿ ನನ್ನ ಕೈಗೆ ಬಿದ್ದು ಗಾಯ ಮಾಡಿಕೊಂಡಿದ್ದೆ , ಆವತ್ತಿನಿಂದ ನಾವು ಬೆಳ್ಳಿ ಕೆಲಸ ಅನ್ನೋ ಬದಲು ಸುತ್ತಿಗೆ ಕೆಲಸ ಎಂದು ಕರೆಯುತ್ತಿದ್ದೆವು...ಈಗ ನನಗೆ ನೆನಪಾದದ್ದೇ ಆ ವಿದ್ಯೆ... ಸರಿ ಮುಂದೆ ಆಲೋಚಿಸುವುದೆನಿದೆ... ಒಬ್ಬಂಟಿಯಾಗಿ ಕೆಲಸ ಪ್ರಾರಂಭಿಸಿಯೇ ಬಿಟ್ಟೆ ... ಇನ್ನೂ ವಿದ್ಯೆ ಮರೆತಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ತಿಂಗಳ ಒಳಗಾಗಿ ಎರಡು ಅದ್ಭುತ ಬೆಳ್ಳಿಯ ಮೂರ್ತಿಗಳು ತಯಾರಾಗಿ ಬಿಟ್ಟಿದ್ದವು... ಅವನ್ನು ಮಾರುವದೇನೂ ಕಷ್ಟವಾಗಲಿಲ್ಲ... ನೋಡ ನೋಡುತ್ತಲೇ ಈ ಕೆಲಸ ಅದ್ಯಾವ ಪರಿ ಬೇಡಿಕೆ ತಂದು ಕೊಟ್ಟಿತೆಂದರೆ ೨-೩ ತಿಂಗಳೊಳಗಾಗಿ ೧೦ ಜನ ನನ್ನಲ್ಲಿ ಕೆಲಸ ಮಾಡುವಂತಾಯಿತು.. ಇಷ್ಟೊಂದು ವರ್ಷ ಸರ್ಕಾರಿ ಕೆಲಸ ಮಾಡಿದ್ದು ಯಾಕೆ ಎಂದು ನನ್ನನ್ನು ನಾನು ಕೇಳುವಷ್ಟು ಪ್ರಸಿದ್ಧಿ ಯಾಗಿಬಿಟ್ಟೆ... ದಿನಗಳು ಕಳೆಯುತ್ತಿದ್ದವು... ನನ್ನ ಈ ಕೆಲಸದಲ್ಲಿ ವರ್ಷ ಕಳೆದಿದ್ದೆ ನನಗೆ ಗೊತ್ತಾಗಲಿಲ್ಲ... ಇನ್ನೂ ೬೦ ವರ್ಷ ಬದುಕಬೇಕು ಅಂತ ನನಗೆ ಜೀವನದಲ್ಲಿ ಮೊದಲಬಾರಿ ಅನ್ನಿಸತೊಡಗಿತ್ತು...
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...

(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)

(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)

22 comments:

ಮನಸು said...

ರವಿಕಾಂತ್ ನಿಮ್ಮ ಕಥೆ ನಿಜವೆಂದು ನಾ ಊಹಿಸಿದ್ದೆ, ಏನು ಮಾಡುವುದು ಜನ ಹಣಕ್ಕೆ ಬೆಲೆ ಕೊಡುವಂತಾಗಿದ್ದಾರೆ, ಮನುಷ್ಯತ್ವವನ್ನು ಮರೆಯುತ್ತಿದ್ದಾರೆ,
ಇದೆ ರೀತಿ ನನ್ನ ಕಣ್ಣ ಎದುರು ಕಥೆ ನೆಡೆದಿದೆ ಮಗ ಪ್ರತಿಷ್ಟತ ಕಂಪನಿಯಲ್ಲಿ ಜೆನರಲ್ ಮಾನೆಜರ್ ಆಗಿದ್ದ ರಾತ್ರಿ ಸರಿಹೊತ್ತು ೧೨ ಗಂಟೆಯಲ್ಲಿ ಅಪ್ಪ ಅಮ್ಮ ಇಬ್ಬರನ್ನು ಮನೆಬಿಟ್ಟು ಹೊರಕಳಿಸಿದ್ದರು ನಾವುಗಳೆಲ್ಲ ಮೂಖವಿಸ್ಮಿತರಂತೆ ನೋಡುವ ಹಾಗಾಯಿತು... ಸಂಬಂಧಗಳ ಮಧ್ಯೆ ನಾವುಗಳು ಹೋಗುವುದು ಸರಿಯಲ್ಲವೆಂದು ಅಕ್ಕಪಕ್ಕದ ಮನೆಯವರು ಯಾರು ಅವರನ್ನು ಸಾಂತ್ವಾನಿಸಲಿಲ್ಲ... ಆದರೆ ಇತ್ತೀಚೆಗೆ ಆ ಕಹಿ ಕ್ಷಣವನ್ನು ಮರೆತು ಈಗ ಎಲ್ಲರೂ ಚೆನ್ನಾಗಿದ್ದಾರೆಂದು ಕೇಳಿದೆ..... ಸಮಯ ಕಾಲ ಎಲ್ಲವನ್ನು ಮರೆಸುತ್ತೆ... ನೀವು ಕಂಡ ಆ ಮಾತಪಿತೃಗಳಿಗೆ ಒಳ್ಳೆಯದಾಗಲೆಂದು ಬಯಸುತ್ತೆನೆ.

ದಿನಕರ ಮೊಗೇರ said...

ಓದಿ ತುಂಬಾ ಬೇಸರವಾಯಿತು, ಅದೇ ಮಗನಿಗೆ ಮೂವತ್ತು ವರ್ಷ ಕಳೆದಾಗ ಇದೆ ಪರಿಸ್ತಿತಿ ಬರತ್ತೆ ಅಂತ ಯಾಕೆ ಯೋಚನೆ ಮಾಡಲ್ವೋ ಗೊತ್ತಿಲ್ಲ..... ಆ ಅಪ್ಪ ಅಮ್ಮನಿಗೆ ಜೀವನದುದ್ದಕ್ಕೂ ಸುಖ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.....

sunaath said...

ದುರ್ದೈವದ ಮಾತು. ಆದರೆ ಇದೀಗ common ಆಗಿಬಿಟ್ಟಿದೆ.

ಶಿವಪ್ರಕಾಶ್ said...

ಇ ಭೂಮಿ ಮೇಲೆ ಇನ್ನು ವಿಚಿತ್ರ ವಿಚಿತ್ರ ಜನ ಇರ್ತಾರೆ...
ಅಂತವರಿಗೆ ದೇವರು ತಪ್ಪದೆ ಬುದ್ದಿ ಕಲಿಸುತ್ತಾನೆ...

Unknown said...

ದುಡಿಮೆಯ ಸಂತೋಷ, ಪತಿಪ್ರೇಮದ ಹಕ್ಕೊತ್ತಾಯ, ತಾಯ್ತನದ ತುಡಿತ ಎಲ್ಲವೂ ಮಿಳಿತವಾದ ಕಥೆ. ಒಮ್ಮೆ ನಮ್ಮ ಸ್ನೇಹಿತರು ಹೀಗೆ ಹೇಳಿದ್ದರು. ಮಕ್ಕಳಿದ್ದಾರೆ ಎಂದು ಇಲ್ಲಿಂದ ಜಂಭದಿಂದ ಫಾರಿನ್ ಟೂರಿಗೆ ಹೋದ ತಂದೆ ತಾಯಿಯರು ಅಲ್ಲಿನ ತಮ್ಮ ನಿಜವಾದ ಅನುಭವಗಳನ್ನು ಬಿಚ್ಚಿಟ್ಟರೆ, ಅವರ ಮಕ್ಕಳ ಮಾನ ಮರ್ಯಾದೆಗೆ ಕುಂದು! ಅದಕ್ಕೇ ಅವರು ಅದನ್ನೆಲ್ಲಾ ಮುಚ್ಚಿಡಲೆಂದೇ ವಿದೇಶಗಳನ್ನು ವಿಪರೀತ ಹೊಗಳಲು ಆರಂಬಿಸುತ್ತಾರೆ' ಎಂದು. ಆಗ ಿದರಲ್ಲಿ ನಿಜವೆಷ್ಟು ಸುಳ್ಳೆಷ್ಟು ಎಂದು ಸುಮ್ಮನಾಗಿದ್ದೆ. ಈಗ ಮತ್ತೊಮ್ಮೆ ಅದೆಲ್ಲಾ ನೆನಪಾಯಿತು.

shivu.k said...

ಸರ್,

ಕತೆ ತುಂಬಾ ಚೆನ್ನಾಗಿದೆ...ಓದಿ ಮನಸ್ಸಿಗೆ ಬೇಸರವಾಯಿತು...

ಆ ತಂದೆ ತಾಯಿಗಳಿಬ್ಬರೂ ಮತ್ತಷ್ಟು ದಿನ ಚೆನ್ನಾಗಿ ಬದುಕಲಿ ಎಂದು ಆರೈಸುತ್ತೇನೆ.

ನೀವು ಕತೆಯನ್ನು ಮನಮಿಡಿಯುವಂತೆ ಬರೆದಿದ್ದೀರಿ...ಧನ್ಯವಾದಗಳು.

umesh desai said...

ಗೋರೆ ಸರ್ ಕತೆ ಎರಡೂ ಭಾಗ ಓದಿದೆ ಕತೆ ಚೆನ್ನಾಗಿದೆ ಈಗ ಇದೆಲ್ಲ ಕಾಮನ್ ಎಂದು ಅಸಡ್ಡೆ ಮಾಡುವಹಾಗಿಲ್ಲ.
ಬೆಂಗಳೂರಿನಲ್ಲಿ ವೃಧ್ದಾಶ್ರಮಗಳು ಬೆಳೆಯುತ್ತಿರುವ ಪರಿ ನೋಡಿದರೆ ದಂಗಾಗುತ್ತದೆ ಇದು ಒಂಥರಾ ಶಾಪ...!

PARAANJAPE K.N. said...

ಗೋರೆ,
ನಿಮ್ಮ ಕಥೆ ಚೆನ್ನಾಗಿದೆ. ನಿಮ್ಮೊಳಗೊಬ್ಬ ಕಥೆಗಾರ ಇದ್ದಾನೆ. ಕೆ೦ಡಸ೦ಪಿಗೆಯಲ್ಲಿ ನಿಮ್ಮ ಬ್ಲಾಗು "ದಿನದ ಬ್ಲಾಗ್'" ಗೌರವಕ್ಕೆ ಪ್ರಾಪ್ತವಾಗಿದ್ದಕ್ಕೆ ಅಭಿನಂದನೆಗಳು

ಸುಧೇಶ್ ಶೆಟ್ಟಿ said...

ಗೋರೆಯವರೇ....

ತು೦ಬಾ ಬೇಸರವಾಯಿತು.. ಆ ತ೦ದೆ ತಾಯಿ ಸುಖವಾಗಿರಲಿ ಎ೦ದು ಬೇಡುತ್ತೇನೆ ದೇವರ ಹತ್ತಿರ....

Unknown said...

ಮನಸು ಮೇಡಂ,
ದುಡ್ಡೇ ದೊಡ್ಡಪ್ಪ... ಏನೂ ಮಾಡಲು ಆಗದು..ನೀವು ಹೇಳಿದ ಕಥೆಯೂ ಇದರಂತೆ ಇದೆ.. ಆದರೆ ಸುಖಂತ್ಯವಾದದ್ದು ಸಂತಸ ತಂದಿತು.. ಹೀಗೆ ಬರುತ್ತಿರಿ..

Unknown said...

ದಿನಕರ್ ಅವರೇ,
ಇವತ್ತಿಂದು ಇವತ್ತಿಗೆ , ಅನ್ನೋ ಈ ಕಾಲದಲ್ಲಿ ಮೂವತ್ತು ವರ್ಷದ ನಂತರ ಹೇಗೋ ಅನ್ನೋ ಆಲೋಚಿಸುವ ವ್ಯವಧಾನ ಎಲ್ಲಿದೆ??.. ಹೀಗೆ ಬರುತ್ತಿರಿ..

Unknown said...

ಸುನಾಥ್ ಸಾರ್ ,
ಕಾಮನ್ ಆಗಿ ಬಿಟ್ಟಿದೆ?? ಯಾಕೋ ಮನಸ್ಸಿಗೆ ನೋವಾಗುತ್ತಿದೆ... ಹೀಗೆ ಯಾರಿಗೂ ಆಗದಿರಲಿ ಎಂದೇ ನನ್ನ ಆಶಯ...

Unknown said...

ಶಿವಪ್ರಕಾಶ್ ಸಾರ್ ,
ನೀವು ಹೇಳಿದ್ದು ನಿಜ.. ದೇವರು ಖಂಡಿತಾ ಇಂತಹವರಿಗೆ ಶಿಕ್ಷೆ ಕೊಟ್ಟೆ ಕೊಡುತ್ತಾನೆ.. ಒಳ್ಳೆಯವರಿಗೆ ಒಳ್ಳೆಯದಾಗಲಿ , ಕೆಟ್ಟವರೂ ಒಳ್ಳೆಯವರಾಗಲಿ ಎಂದು ಪ್ರಾರ್ಥಿಸೋಣ..

Unknown said...

ಸತ್ಯನಾರಾಯಣ ಸಾರ್ ,
ನೀವು ಹೇಳಿದ್ದು ನಿಜ.. ನಾನೂ ಅಂಥ tumbaa ಮಂದಿಯನ್ನು ಕಂಡಿದ್ದೇನೆ... ಧನ್ಯವಾದ..

Unknown said...

ಶಿವೂ ಸಾರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದ.. ನಿಮ್ಮ ಮಾತು ಕೇಳಿ ಇನ್ನೂ ಬರೆಯಬೇಕು ಹಾಗೂ ಬರೆದಿದ್ದು ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ.. ನಾನು ಬರೆದ ಅದೆಷ್ಟೋ ಕಥೆಗಳನ್ನು ಯಾರಿಗೂ ತೋರಿಸುವ ಧೈರ್ಯ ಸಾಲದೇ ಕಸದ ಬುಟ್ಟಿಗೆ ಬಿಸಾಡಿದ್ದಿದೆ.. ಈಗ ಅವುಗಳಿಗೆ ಮರು ಜೀವ ಕೊಡುವೆ...

Unknown said...

ಉಮೇಶ್ ಸಾರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದ.. ಹೌದು ... ಅದೆಷ್ಟೊಂದು ವೃದ್ಧಾಶ್ರಮಗಳು .. ಪಾಪ ಅಲ್ಲಿನ ತಂದೆ ತಾಯಿಯರ ಮನಸ್ಸಿನ ನೋವು ಯಾರಿಗೆ ಅರ್ಥ ವಾದೀತು... ಮುಡಿ ತಂದೆ ತಾಯಿಯರನ್ನು ಹೀಗೆ ಕೈಬಿಡುವ ಪಾಪಿಗಳಿಗೆ ಧಿಕ್ಕಾರವಿರಲಿ...

Unknown said...

ಪರಾಂಜಪೆಯವರೇ,
ನಿಮ್ಮ ಮೆಚ್ಚುಗೆಗೆ ಧನ್ಯವಾದ.. ನೀವು ಹೇಳಿದ ಮೇಲೆ ನಾನೂ ಕೆಂಡಸಂಪಿಗೆ ತಾಣಕ್ಕೆ ಭೇಟಿ ನೀಡಿ ಗಮನಿಸಿದೆ.. ತುಂಬಾ ಸಂತೋಷವಾಯಿತು.. ಕೆಂಡಸಂಪಿಗೆ ಮಂದಿಗೆ ನನ್ನ ಧನ್ಯವಾದಗಳು.. ಅಂಥ ಉತ್ತಮ ತಾಣ ನನ್ನ ಗಮನಕ್ಕೂ ತಂದಿದ್ದಕ್ಕೆ ನಿಮಗೆ ಋಣಿ...

Unknown said...

ಸುಧೇಶ್ ಅವರೇ,
ಈಗ ಆ ತಂದೆ ತಾಯಿ ಎಲ್ಲಿದ್ದಾರೋ, ಹೇಗಿದ್ದಾರೋ ತಿಳಿಯದು... ಆದರೆ ಎಲ್ಲಿಗಾದರೂ ಹೋಗುವಾಗ ಅವರ ಮನೆ ಮುಂದಿನಿಂದ ಸಾಗಿದರೆ ಯಾಕೋ ಮನಸ್ಸಿಗೆ ಬೇಸರವಾಗುತ್ತದೆ.. (ಅವರ ಮನೆ ಬೆಂಗಳೂರಿನಲ್ಲೇ ಇದೆ) ....ಅವರು ಎಲ್ಲಿದ್ದಾರೋ , ಪಾಪ ಸುಖವಾಗಿರಲಿ ಎಂದು ನಿಮ್ಮ ಜೊತೆ ನಾನೂ ಪ್ರಾರ್ಥಿಸುವೆ...

Sathish Kulal said...

Bhatre,kathe chennagitthu.monne monne nimma blog nodide.oorina nenapu innoo marethilla thaane?Nellithadkada daariya nadige innoo nenapideya?Achyutha Bhattaru eegaloo iddaara? Dhanyavaadagalu.
Naanu Satish kulal sulkeri.(sksulkeri@gmail.com)from Dubai

ಬಿಸಿಲ ಹನಿ said...

ಹೌದು ಇದು ಈಗೀಗ ಕಾಮನ್ ಆಗಿ ಬಿಟ್ಟಿದೆ. ತಂದೆ ತಾಯಿಯನ್ನು ನೋಡಿಕೊಳ್ಳಲು ರೆಡಿಯಾಗಿದ್ದರೂ ಅವರ ಹೆಂಡಿರು ಅವರನ್ನು ಉಪಾಯವಾಗಿ ಹೊರಹಾಕುವ ಇಲ್ಲ ಅವರ ಮೇಲೆ ದಬ್ಬಾಳಿಕೆ ನಡೆಸುವ ಹಿಂಸಾ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಎರಡು ಜನ್ರೇಶನ್‍ಗಳ ನಡುವೆ ನಡೆಯುವ ತಿಕ್ಕಾಟ ಇರಬಹುದೆ? ಇಲ್ಲ ಸೇವಾ ಮನೋಭಾವನೆ ಕಡಿಮೆಯಾಗುತ್ತಿದೆಯೇ?

Laxman (ಲಕ್ಷ್ಮಣ ಬಿರಾದಾರ) said...

ಕಥೆ ಚೆನ್ನಾಗಿದೆ. ಆದ್ರೆ ಇದು ಕಠೆಯಲ್ಲ ರವಿಯವರೆ ಇದು ಇವತ್ತಿನ ಮತಿಯಿಲ್ಲದವರಂತೆ ವರ್ತಿಸುವ ಮಕ್ಕಳ ನೈಜ ವರ್ತನೆ. ಅಪ್ಪನೆ ಓದಿಸಿಲ್ಲದಿದ್ದರೆ ಎಲ್ಲಿರುತಿದ್ದೆವೊ ಎಲ್ಲ. ದುಡ್ಡು ಇದ್ದಾಗ ಕೋದಬಹುದು. ಆದ್ರೆ ದುಡ್ಡಿಲ್ಲದಾಗ ನಮ್ಮನ್ನು ಓದಿಸಿದರಲ್ಲಾ ಅವರ ಋಣ ದೊಡ್ಡದು.

ನಾನೋಂದು ಮೊಟ್ಟ ಮೊದಲ ಬಾರಿಗೆ ಒಂದು ಕಥೆ ಬರೆದಿದ್ದೆನೆ. ನೋಡಿ ನಿಮ್ಮ ಆಭಿಪ್ರಾಯ ತಿಳಿಸಿ
www.nanisaha.blogspot.com

ದಿನಕರ ಮೊಗೇರ said...

ಗೋರೆಯವರೇ,
ಎಲ್ಲಿದ್ದಿರಿ, ನಿಮ್ಮ ಮುಂದಿನ ಲೇಖನ, ಕವನಕ್ಕಾಗಿ ಕಾಯ್ತಾ ಇದ್ದೇವೆ.............