Tuesday, April 28, 2009

ಇದು ಉದಯ ಟಿವಿ ಯಾ??

ಹಳ್ಳಿಯ ಜನರ ಮುಗ್ದ ಮಾತು ಕೇಳೋದು ಅಂದ್ರೆ ಏನೋ ಖುಷಿ.... ಎಷ್ಟೋ ಬಾರಿ ಇಂಥ ಘಟನೆಗಳು ನನ್ನೂರಿನಲ್ಲೂ ನಡೆಯುತ್ತಿದ್ದವು... ಅದರಲ್ಲಿ ಒಂದು ಘಟನೆ ಹೇಳುತ್ತೇನೆ... ಇದು ನಡೆದದ್ದು ಸುಮಾರು ೧೦ - ೧೨ ವರ್ಷಗಳ ಹಿಂದೆ... ಆಗ ನಮ್ಮ ಹಳ್ಳಿಗೆ ಕರೆಂಟ್ , ಫೋನ್ ಯಾವುದೂ ಬಂದಿರಲಿಲ್ಲ... ಕಾಡಿನ ಮಧ್ಯದಲ್ಲಿ ಸೀಮೆಯೆಣ್ಣೆದೀಪದ್ದೆ ಬೆಳಕು... ೫-೧೦ ಪೈಸೆ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾಂಡ್ ಲೆಟರ್ ಗಳು ಬಳಕೆಯಲ್ಲಿದ್ದವು... ನಮ್ಮೂರಿನಲ್ಲಿ ಮೊದಲು ಕರೆಂಟ್ ಲೈಟ್ ಉರಿದದ್ದು ಬಹುಶ ನಮ್ಮನೆಯಲ್ಲೇ... ೧೯೯೬-೧೯೯೭ ಈ ಕಾಲದಲ್ಲಿ ನಮ್ಮನೆಗೆ ಸೋಲಾರ್ ಬಂತು... ಆಗ ನಾವು ಖುಷಿ ಪಟ್ಟದ್ದು ಸೋಲ್ಪವಲ್ಲ... ಇರಲಿ, ಈಗ ವಿಷಯಕ್ಕೆ ಬರುತ್ತೇನೆ...
ಅದೊಂದು ದಿನ ನಮ್ಮ ಮನೆಗೂ ಟಿವಿ ಹಾಕ್ಬೇಕು ಅಂತ ನಿರ್ಧಾರಕ್ಕೆ ಬಂದೆವು... ಒಂದು ಚಿಕ್ಕ ಕಪ್ಪು-ಬಿಳಿ ಒನಿಡಟಿವಿ ತಗೊಂಡಿದ್ದು ಆಯಿತು...(ಅದು ಬಹುಶ ೧೯೯೮ ಅಥವಾ 1೯೯೯ ನೆ ಇಸವಿ ಇರ್ಬೇಕು ಸರಿಯಾಗಿ ನೆನಪಿಲ್ಲ) ... ನಾನು ನಮ್ಮಣ್ಣ ಆ ಚಿಕ್ಕ ಟಿವಿ ಯನ್ನು ಹೊತ್ತುಕೊಂಡು ನಮ್ಮ ಮನೆಯ ೩ ಕಿಲೋಮೀಟರು ಹಾದಿಯನ್ನು ನಡೆಯುತ್ತಾ ಸಾಗಿದ್ದೆವು... ಅಷ್ಟರಲ್ಲೇ ಆ ಹೆಂಗಸು ನಮ್ಮನ್ನು ನೋಡಿಬಿಟ್ಟಿದ್ದಳು... ಅವಳ ಮನೆಯಿಂದ ಹೊರಗೆ ಬಂದವಳೇ ನಮ್ಮನ್ನ ಕೇಳಿದ್ಲು " ಬಟ್ರೆ ಟಿವಿ ಯಾ " ಅದಕ್ಕೆ ನಾನು ಹೌದು ಅಂತ ಹೇಳ್ದೆ... ಮತ್ತೆ ಅವಳಿಂದ ಇನ್ನೊಂದು ಪ್ರಶ್ನೆ ತೂರಿ ಬಂತು.. "ವೋವು ಟಿವಿ ಬಟ್ರೆ? ಉದಯ ಟಿವಿ ನಾ?" (ಯಾವ ಟಿವಿ ಬಟ್ರೆ? ಉದಯ ಟಿವಿ ನಾ) ... ಬಹುಶ ಆಕೆ ಎಲ್ಲೊ ಉದಯ ಚಾನೆಲ್ ಬಗ್ಗೆಕೆಳಿರ್ಬೇಕು ಅದಿಕ್ಕೆ ಇಂಥ ಪ್ರಶ್ನೆ ಕೇಳಿದ್ದಾಳೆ ... ನನಗೆ ಒಂದು ಕ್ಷಣ ಏನೆಂದೇ ಅರ್ಥ ವಾಗಲಿಲ್ಲ ...ಅಷ್ಟರಲ್ಲಿ ಅಣ್ಣ " ಅಂದ್ ಉಂದು ಉದಯ ಟಿವಿ " (ಹೌದು ಇದು ಉದಯ ಟಿವಿ) ಅಂತ ಹೇಳಿ ಮುಂದೆ ಸಾಗಿದ್ದ... ನಾನೂ ನಗುತ್ತಾ ಅಲ್ಲಿಂದ ಹೆಜ್ಜೆ ಹಾಕಿದೆ...

Monday, April 20, 2009

ಚದುರಂಗ..

ಚದುರಂಗ... ಆ ಆಟದ ಹೆಸರು ಕೆಳಿದ್ರೆನೆ ಒಂಥರಾ ರೋಮಾಂಚನ... ಆನೆ,ಒಂಟೆ(ರಥ),ಕುದುರೆ,ರಾಜ, ರಾಣಿ ಮತ್ತು ಕಾಲಾಳು ಇವಿಷ್ಟುಆ ಆಟದ ಅಂಗಗಳು... ೬೪ ಮನೆಗಳ ಪುಟ್ಟ ಹಾಳೆಯ ಮೇಲೆ ಆಡುವ ಆಟ ಅದೆಷ್ಟು ಜನರಿಗೆ ಇಷ್ಟವೋ ಗೊತ್ತಿಲ್ಲ...ಆದರೆ ಆ ಆಟ ಕೇವಲ ಮನರಂಜನೆಯ, ಟೈಂಪಾಸ್ ಆಟವಾಗಿರದೆ ಬುದ್ಧಿ ಮತ್ತೆಯನ್ನು ಹೆಚ್ಹಿಸಲು ಸಹಕಾರಿಯಾಗುವುದಂತು ಸುಳ್ಳಲ್ಲ...
ಚದುರಂಗ ಜನ್ಮತಾಳಿದ್ದು ಭಾರತದಲ್ಲಿ ಅಂತಾರೆ...ಕೆಲವರ ಅನಿಸಿಕೆ ಪ್ರಕಾರ ಇದು ಆರಂಭವಾದದ್ದು ೬ನೆ ಶತಮಾನದಲ್ಲಿ ... ಆ ನಂತರ ಬೇರೆ ಬೇರೆ ಮೂಲಗಳ ಮುಖಾಂತರ ಇಡೀ ವಿಶ್ವಕ್ಕೆ ಪಸರಿಸಿದ ಈ ಆಟ ಈಗಿನ ಕ್ರೀಡಾ ಜಗತ್ತಿನಲ್ಲಿ ಬಹು ಮುಖ್ಯ ಸ್ಥಾನವನ್ನು ಪಡೆದುಕೊಂಡಿದೆ... ಇರಲಿ ಅದರ ಇತಿಹಾಸ ಬಹು ದೊಡ್ಡದು ಅದರ ಬಗ್ಗೆ ಇನ್ನೊಮ್ಮೆ ನೋಡೋಣ...
ಮೊನ್ನೆ ತಾನೆ ಊರಿಗೆ ಹೋದಾಗ ನನ್ನ ತಂಗಿಯ ಮಗಳು "ಮಾಮ ಚೆಸ್ ಆಡೋ ಣವ " ಅಂತ ಕೇಳಿದಾಗ ಒಂದ್ಸಾರಿ ದಿಗಿಲು ಬಿದ್ದೆ.... ಹೌದಲ್ಲ...ಅದೆಷ್ಟು ದಿನವಾಯಿತು ಚದುರಂಗ ಆಡಿ... ಬಹುಶ ನಾನು ಕೊನೆಯದಾಗಿ ಚೆಸ್ ಆಡಿದ್ದು ೨೦೦೦ನೆ ಇಸವಿಯಲ್ಲಿ... ಆಗ ನಾನು ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದೆ... ಮಂಗಳೂರು ಯುನಿವೆರ್ಸಿಟಿಯ ಚೆಸ್ ಟಿಮ್ ಗೆ ನನ್ನ ಕಾಲೇಜ್ ನಿಂದ ನಾನೂ ಹೋಗಿ ಸೋತು ಬಂದಿದ್ದೆ... :-) .. ಸರಿ ಈಗ ಇನ್ನೊಮ್ಮೆ ಅವಕಾಶ ಸಿಗ್ತಲ್ಲ ಅನ್ನೋ ಖುಷಿಲಿ ಆಟಕ್ಕೆ ಕೂತೆ... ನನಗೆ ಗೊತ್ತಿರೋವಷ್ಟು ಆಟ ನನ್ನ ತಂಗಿಯ ಮಗಳಿಗೂ ಕಳಿಸಿದೆ... (ಚದುರಂಗ ಇನ್ನೊ ಮರೆತಿಲ್ಲ ಅನ್ನೋ ಖುಶಿನೂ ಆಯಿತು) ಆಟ ಮುಗಿಸಿದವನೇ ಆಲೋಚನೆಗೆ ಬಿದ್ದೆ... ಅರೆ.. ಇದ್ಯಾವ ಲೋಕದತ್ತ ನಾವು ಸಾಗುತ್ತಿದ್ದೇವೆ... ಚಿಕ್ಕಂದಿನಲ್ಲಿ ಅಪ್ಪ, ಅಮ್ಮ ನಮ್ಮನ್ನು ಕೂರಿಸಿ ಚದುರಂಗ ಕಲಿಸುತ್ತಿದ್ದರು.... ಅದರಿಂದಾಗಿಯೇ ನಾವು ಇಷ್ಟಾದರೂ ಬುದ್ಧಿವಂತ ರಾದೆವೋ ಏನೋ ಗೊತ್ತಿಲ್ಲ...
ಆದರೆ ಇಗೀಗ ಚೆಸ್ ಆಡುವ ಮಕ್ಕಳನ್ನು ನಾನು ಕಂಡಿದ್ದು ತುಂಬ ಕಮ್ಮಿ... ಅದೇನೇನೋ ಆಟಗಳು... ಒಂದೇ ಒಂದು ಆಟದಲ್ಲೂ ಬುದ್ಧಿಮತ್ತೆಗೆ ಅಥವಾ ದೇಹಕ್ಕೆ ವ್ಯಾಯಾಮ ಸಿಗದು... ಬುದ್ಧಿಗೆ ಕಸರತ್ತು ಕೊಡುವ ಇಂಥ ಆಟವನ್ನು ಕೇರಂ, ಹಾವೇಣಿ, ಲೂಡೋದಂಥ ಆಟಗಳು ನುಂಗಿ ಬಿಟ್ಟಿವೆ ... ಸಚಿನ್ ತೆಂಡೂಲ್ಕರ್ ಹೆಸರು ಗೊತ್ತಿರುವಷ್ಟು ಮಂದಿಗೆ ವಿಶ್ವನಾಥನ್ ಆನಂದ್ ಬಗ್ಗೆ ಗೊತ್ತಿಲ್ಲ...
ಇಂಥ ಒಂದು ಅದ್ಭುತ ಆಟ ತನ್ನ ನೆಲೆಯನ್ನೇ ಕಳೆದು ಕೊಳ್ಳುತ್ತಿದೆಯೇ ??? ಹಾಗಂತ ಯೋಚನೆಗೆ ಬಿದ್ದಿದ್ದೇನೆ ... ಬಹುಶ ಹಾಗಾಗಲಾರದು ಅಲ್ಲವೇ ??

Tuesday, April 14, 2009

ಸೆಖೇನಾ? ಹಂಗಂದ್ರೇನು? !!!

ಮೊನ್ನೆ ತಾನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಎಂಬ ಪುಟ್ಟ ಗ್ರಾಮಕ್ಕೆ ಹೋಗಿದ್ದೆ...
ಬಿಸಿಲಿಗೆ ಸುಸ್ತಾಗಿ ಬಿಟ್ಟಿದ್ದ ನಮಗೆ ತಂಪನ್ನು ನೀಡಿದ್ದು ಇಲ್ಲಿಯ "ದಾನುಂಡಿ" ಎಂಬ ಪುಟ್ಟ ಜಲಪಾತ...
ಅಲ್ಲಿಯ ಸುಂದರ ಪ್ರಕೃತಿಯ ಕೆಲವು ಫೋಟೋಗಳು...
ಮಾಳಕ್ಕೆ ತಲುಪಿದವರಿಗೆ ತಣ್ಣನೆ ಮಜ್ಜಿಗೆ ಕುಡಿದಾಗ ಹಾಯಾಗಿತ್ತು ..
ಅಷ್ಟೂ ಮಜ್ಜಿಗೆ ಕುಡ್ದು ಬಿಟ್ರಾ??.... ಛೆ ನಿಮಗೆ ಉಳ್ಸೋದು ಮರ್ತೆ ಹೋಯ್ತು...
ದಾನುಂಡಿಗೆ ಸಾಗುವ ದಾರಿ...
ಸುಸ್ತಾಯಿತು ಕಣ್ರೀ ...

ನಾವೂ ದಾನುಂಡಿಗೆ ಬರ್ಲಾ???

ದೂರದಿಂದ ಕಂಡ ಪುಟ್ಟ ಜಲಪಾತ , "ದಾನುಂಡಿ .."

ದಾನುಂಡಿ ..

ಸೆಖೇನಾ? ಹಂಗಂದ್ರೇನು? !!!

ಇದು ಹಾಲೋ ? ನೀರೋ?

ಹಾಲಲ್ಲಾದರು ಹಾಕು... ನೀರಲ್ಲಾದರು ಹಾಕು .......

ಹಾಲಲ್ಲಿ ಕೆನೆಯಾಗಿ ... ನೀರಲ್ಲಿ ಮೀನಾಗಿ ... ಹಾಯಾಗಿರುವೆ ...
(ಫೋಟೋಗಳು : ವಿನಯ್ ಭಟ್, ಶ್ರೀಹರ್ಷ,ಅರವಿಂದ್ )
(ಇವತ್ತಿಗೆ ಇಷ್ಟು ಸಾಕು... ಮಾಳದ ಬಗೆಗಿನ ಇನ್ನಷ್ಟು ಚಿತ್ರ ಲೇಖನ ಮುಂದೆ ... :-) )
(photo

Wednesday, March 18, 2009

ಆ ಹಾಡು ಕೇಳಿದ ನಂತರ....

ಅದೇನೋ ಆಸ್ಕರ್ ಬಂತು ಅಂತ "ಸ್ಲಮ್ ಡಾಗ್ ಮಿಲಿಯನರ್" ಚಲನ ಚಿತ್ರದ "ಜಯ ಹೋ" ಹಾಡು ಮೊನ್ನೆ ಕೇಳಿಸಿಕೊಳ್ಳುತ್ತಿದ್ದೆ... ಆ ಹಾಡು ಕೇಳಿದ ನಂತರ ಕೆಲವಾರು ಪ್ರಶ್ನೆ ಗಳು ನನ್ನನ್ನು ಕಾಡತೊಡಗಿದವು... ಯಾರನ್ನೂ ಕೇಳೋದು ಬೇಡ, ಆಸ್ಕರ್ ಪ್ರಶಸ್ತಿ ಬಂದ ಹಾಡು ಅಂತ ಸುಮ್ಮನಿದ್ದೆ... ಆದರೆ ಅದ್ಯಾಕೋ ಇವತ್ತು ಸುಮ್ಮನಿರಲಾಗುತ್ತಿಲ್ಲ...
ಅಲ್ಲ, ಆ ಹಾಡು ಆಸ್ಕರ್ ಪ್ರಶಸ್ತಿ ಬರೋವಷ್ಟು ಚೆನ್ನಾಗಿದೆಯೇ? ಬೇರೆ ಯಾರೂ ಅಥವಾ ಖುದ್ದು ಏ.ಆರ್.ರೆಹಮಾನರು ಇದಕ್ಕಿಂತ ಉತ್ತಮ ಹಾಡು ಕೊಟ್ಟಿಲ್ಲವೆ? ಅದ್ಯಾಕೋ ಇಂಥ ತಲೆಬುಡ ಇಲ್ಲದ ಪ್ರಶ್ನೆಗಳು ನನ್ನನ್ನು ಕಾಡತೊದಗಿವೆ...
ಅಳಿದೂರಿಗೆ ಉಳಿದವನೆ ಅರಸ ಅನ್ನೋ ಹಾಗೆ ಬೇರೆ ಯಾವ್ದೇ ಹಾಡು ಈ ವರ್ಷ ಸ್ಪರ್ಧೆಯಲ್ಲಿ ಇಲ್ಲದ್ದಕ್ಕೆ ಬಹುಮಾನ ಕೊಟ್ರೋ? ಅಥವ ಬೇರೆ ಏನಾದ್ರು ಕಾರಣ ವಿದ್ದಿರಬಹುದೇ?
ನಿಮಗೆ ಗೊತ್ತಿದ್ರೆ ಸ್ವಲ್ಪ ಹೇಳ್ತೀರಾ???

ಹೀಗೂ ಇರ್ತಾರೆ ನೋಡಿ!!

ನಮ್ಮದು ಒಂದು ಚಿಕ್ಕ ಹಳ್ಳಿ... ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕಾಡಿನ ಮಧ್ಯದಲ್ಲಿ ನಮ್ಮ ಮನೆ ಇತ್ತು (ಈವಾಗ ಅಲ್ಲಿ ನಕ್ಸಲೈಟ್ ಕಾಟ ಜಾಸ್ತಿ ಆಗಿ ತೋಟ ಮಾರಿ ನೆಲ್ಲಿಕಾರು ಅನ್ನೋ ಊರಲ್ಲಿ ಅಣ್ಣ ಮನೆಮಾಡಿಕೊಂಡಿದ್ದಾನೆ)... ಇನ್ನು ನಮ್ಮ ಪಕ್ಕದ ಮನೆ ಅಂದ್ರೆ ಸುಮಾರು ಅರ್ಧ ಕಿಲೋಮೀಟರು ದೂರ.. ನಮ್ಮ ಮನೆಯಿಂದ ಸುಮಾರು ೧ ಕಿಲೋಮೀಟರು ದೂರದಲ್ಲಿದ್ದದ್ದೆ ಅಚ್ಯುತ ಭಟ್ಟರ ಮನೆ... ನಾನು ಚಿಕ್ಕವನು ಅಂದ್ರೆ ೫-೬ ವರ್ಷದಿಂದ ಅವ್ರನ್ನು ನೋಡಿದ ನೆನಪು... ಬಹುಶ ಆಗ ಅವ್ರಿಗೆ ೬೫-೭೦ ವರ್ಷ ಇದ್ದಿರಬೇಕು... ಅವ್ರು ನಮ್ಮೂರಲ್ಲಿ ಭಾರಿ ಫೇಮಸ್ ಯಾಕಂದ್ರೆ ಅವ್ರಿಗೆ ಮದ್ವೇನೆ ಆಗಿರಲಿಲ್ಲ ಮತ್ತು ಆ ವಯಸ್ಸಿನಲ್ಲೂ ಮದ್ವೆ ಆಗ್ಬೇಕು ಅಂತ ಅವ್ರು ಹಾಕ್ತಿದ್ದ ಪ್ಲಾನ್...
ಅವ್ರ ಬಗ್ಗೆ ತುಂಬ ಕಥೆಗಳಿವೆ ಆದ್ರೆ ನಂಗೆ ತುಂಬ ಚೆನ್ನಾಗಿ ನೆನಪಿರೋದು ಅಂದ್ರೆ ಅವ್ರು ನಮ್ಮ ಇಡೀ ತಾಲೂಕಿಗೆ ಡಿಕ್ಲೆರೇಶನ್ ಕೊಟ್ಟಿದ್ದು... (ಡಿಕ್ಲರೇಶನ್ ಅಂದ್ರೆ ಉಳುವವನೇ ಭೂಮಿಯ ಒಡೆಯ ಅಂತ ಇಂದಿರಾ ಗಾಂಧಿಯವರು ತಂದ ಕಾನೂನು)...
ಇಂದಿರಾ ಗಾಂಧಿಯವರು ಅದ್ಯಾವಾಗ ಉಳುವವನೇ ಭೂಮಿಯ ಒಡೆಯ ಅಂತ ಕಾನೂನು ತಂದು ಅರ್ಜಿ ಹಾಕೋಕೆ ಹೇಳಿದರೋ ಆವಾಗ ಈ ಅಚ್ಯುತ ಭಟ್ಟರು ಇಡೀ ತಾಲುಕನ್ನೇ ಉಳುವವನು ನಾನು ಅಂತ ಅರ್ಜಿ ಹಾಕಿದರಂತೆ.... ಆದ್ರೆ ಅದು ಏನಾಯಿತು ಅಂತ ಕೇಳಿದ್ರೆ ಇನ್ನೊ ಏನೂ ಪ್ರತಿಕ್ರಿಯೆ ಬಂದಿಲ್ಲ ಅನ್ನುತ್ತಿದ್ದರು ಅಚ್ಯುತ ಭಟ್ಟರು!!!... ಮೊನ್ನೆ ಊರಿಗೆ ಹೋದಾಗ ಅವರನ್ನು ನೋಡ್ಕೊಂಡು ಬಂದೆ... ವಯಸ್ಸು ೮೫-೯೦ ರ ಆಸುಪಾಸು..ಈಗಲೋ ಆಗಲೋ ಅನ್ನುವಂತಿದ್ದಾರೆ ಆದ್ರೆ ನಂಗೆ ಇನ್ನೂ ಮದ್ವೆ ಆಗಿಲ್ಲ, ಕೊಟ್ಟ ಡಿಕ್ಲೆರೇಶನ್ ಅರ್ಜಿ ಏನಾಯಿತೋ ಏನೋ ಅಂತ ಮತ್ತೆ ಮೆಲ್ಲನೆ ಹೇಳಿಕೊಂಡರು ....ಬೆಂಗಳೂರಲ್ಲೇ ಇದ್ರೆ ನಂಗೊಂದು ಹುಡುಗಿ ಹುಡುಕ್ರಿ ಅಂದ್ರು ... ಎಷ್ಟು ವಯಸ್ಸಿನ ಹುಡುಗಿ ಬೇಕು ಅಂತ ಕೇಳ್ದೆ... ೪೦-೫೦ ಆಸುಪಾಸಿದ್ದು ತೊಂದ್ರೆ ಇಲ್ಲ ಅಂದ್ರು... ೪೦ ರ ವಯಸ್ಸಿನ ಹುಡುಗಿ ಸಿಕ್ಕಿಲ್ಲಂದ್ರೆ ೨೦ ರದ್ದು ಎರಡು ಆದಿತೋ ಅಂತ ಕೇಳಿದ್ದಕ್ಕೆ ಮೆಲ್ಲನೆ ನಕ್ಕರು... ವಯಸ್ಸು ಎಷ್ಟು ಅಂತ ಕೇಳಿದ್ದಕ್ಕೆ ೯೪- ೯೬ ಅಂತ ಏನೋ ಹೇಳಿದ್ರು.. ಸೆಂಚುರಿ ಬಾರ್ಸಿ ಅಜ್ಜಾ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ...

Monday, March 16, 2009

ವ್ಯವಸಾಯ ಮತ್ತು ಸಾಫ್ಟ್ವೇರ್

ಅದ್ಯಾಕೋ ಈ ಕೆಲಸ ಸಾಕಾಗೋಗಿದೆ... ದಿನಾ ಬೆಳಿಗ್ಗೆ ಎದ್ದು ಅದೇ ಕಂಪ್ಯೂಟರ್ ಮುಂದೆ ಕೂತು ಸಂಜೆ ತನಕ ಕೀಬೋರ್ಡ್ ಒತ್ತಿ ಒತ್ತಿ ತಲೆ ಎಲ್ಲ ಹಾಳಾಗಿ ಹೋಗಿತ್ತು ಅಂತ್ಹೇಳಿ ಮೊನ್ನೆ ಊರಿನ ಕಡೆ ಹೊರಟೆ...
ಅದೆಷ್ಟು ಚೆಂದದ ಊರು... ಕಣ್ಣು ಹಾಯಿಸಿದಷ್ಟು ಹಸಿರು... ಸಂಜೆ ಹೊತ್ತಿಗೆ ಧಬೋ ಅಂತ ಸುರಿದ ಮಳೆ, ಕಾದ ಮನಸ್ಸನ್ನು ತಂಪಾಗಿಸಿದ್ದವು... ಬೆಳಿಗ್ಗೆ ಎದ್ದು ಕಾಫಿ ಕುಡಿದು ತೋಟದ ಕಡೆ ಹೆಜ್ಜೆ ಹಾಕಿದೆ... ೬-೭ ವರ್ಷಗಳ ಹಿಂದಿನ ದಿನಗಳು ನೆನಪಾದವು.... ಅದೇ ತೋಟ, ಅಲ್ಲಿ ಕಿತ್ತ ಸೊಪ್ಪು, ಹುಲ್ಲು, ಚಿಮ್ಮುವ ಸ್ಪ್ರಿಂಕ್ಲರ್, ಹೊತ್ತ ಗೊಬ್ಬರದ ವಾಸನೆ ಹಾಗೆಯೇ ಇದ್ದಂತ್ಹಿದ್ದವು ... ಹಕ್ಕಿಗಳ ಚಿಲಿಪಿಲಿ, ಪೇರಳೆ ಹಣ್ಣು (ಸೀಬೆ ಕಾಯಿ) , ಬೊಂಡ(ಸೀಯಾಳ), ಮಾವಿನ ಮಿಡಿ, ಪಪ್ಪಾಯಿ ಎಲ್ಲವನ್ನೂ ಸವಿದು ವಾಪಾಸು ಬೆಂಗಳೂರಿಗೆ ಹೊರಟಾಗ ಮನಸ್ಸು ಯಾಕೋ ಭಾರವಾಗಿತ್ತು... ಎಲ್ಲವನ್ನೂ ಬಿಟ್ಟು ಊರಲ್ಲಿ ಸ್ವಲ್ಪ ಜಮೀನು ಖರೀದಿಸಿ ವ್ಯವಸಾಯ ಶುರು ಮಾಡಿದರೆ ಹೇಗೆ ಅಂತ ಅದ್ಯಾವತ್ತಿನಿಂದಲೋ ಆಲೋಚಿಸುತ್ತಿದ್ದೇನೆ... ಆದರೆ ಯಾಕೋ ಎಲ್ಲವೂ ಏರುಪೇರು... ಇನ್ನೆಷ್ಟು ವರ್ಷಗಳು ಬೇಕೋ ನನ್ನ ಕನಸಿನ ಗೂಡಿಗೆ ವಾಪಸಾಗಲು... ಬೆಂಗಳೂರು ಅನ್ನೋದಂತೂ ನನಗ್ಯಾಕೋ ಚಕ್ರವ್ಯೂಹದ ಥರ ಅನ್ನಿಸ್ತಿದೆ... ಒಳಗೆ ಹೊಕ್ಕಾಗಿದೆ ಹೊರ ಬರುವ ದಾರಿ ಗೊತ್ತಾಗ್ತಿಲ್ಲ... ದಾರಿ ಕಾಣದಾಗಿದೆ ರಾಘವೆಂದ್ರನೆ...ಬೆಳಕ ತೋರಿ ನಡೆಸುವ.. ಅಂತ ಅತ್ತಿಗೆ ಮೊನ್ನೆ ಸಂಜೆ ಹೇಳುತ್ತಿದ್ದ ಭಜನೆ ಕಿವಿಯಲ್ಲಿ ಮತ್ತೆ ಮತ್ತೆ ಗುಯಿಗುಡುತ್ತಿದೆ...

Monday, February 16, 2009

ಪ್ರೇಮಿಗಳ ದಿನ ಮತ್ತು ಶಿವರಾತ್ರಿ...

ಫೆಬ್ರವರಿ ೧೪... ಪ್ರೇಮಿಗಳ ದಿನ...
ಫೆಬ್ರವರಿ ೨೪... ಶಿವರಾತ್ರಿ...
ಅದ್ಯಾಕೋ ಈ ಎರಡೂ ದಿನಗಳು ನಂಗೆ ತುಂಬಾ ಕನ್ಫ್ಯೂಸ್.. ಅದ್ಯಾಕೋ ಗೊತ್ತಿಲ್ಲ ಈ ಎರಡೂ ದಿನಗಳು ಬಂತು ಅಂದ್ರೆ ನಂಗೆ ಕಳ್ಳರ ನೆನಪಾಗುತ್ತೆ...
ಫೆಬ್ರವರಿ ೨೪ ಶಿವರಾತ್ರಿ ಸೋಗಿನಲ್ಲಿ ಕದಿಯುವವರು..ಫೆಬ್ರವರಿ ೧೪ ಹೃದಯ ಕದಿಯುವವರು.. ಸಾಮ್ಯತೆಯನ್ತು ಇದೆ...
ಅದ್ಯಾಕೆ ಪ್ರೇಮಿಗಳ ದಿನ ಅಂತ ಆಚರಿಸ್ಥಾರೋ ನನಗಂತೂ ಗೊತ್ತಿಲ್ಲ್ಲ... ನಾನು ಹೃದಯ ಕಡಿಯೋಕೆ ಪ್ರಯತ್ನ ಪಟ್ಟದ್ದಂತೂ ಫೆಬ್ರವರಿ ೧೪ ಅಲ್ಲ... ಬಹುಶ ಜೂನ್ ೬ , ಮತ್ತೆ ಜುಲೈ ೨೫ ಮತ್ತೆ ಜನವರಿ೨೮.. ಹೀಗೆ ಶತ ಪ್ರಯತ್ನಗಳ ಭಗೀರಥ...:-)
ಮೊನ್ನೆಯ ಪ್ರೇಮಿಗಳ ದಿನವಂತೂ ಇಡೀ ದೇಶದಲ್ಲೇ ದಾಂಧಲೆ ಯೇಬ್ಬಿಸಿದ್ದಂತೂ ಸುಳ್ಳಲ್ಲ..
ಪ್ರೇಮಿಗಳ ದಿನ ಆಚರಿಸೋಕೆ ತುದಿಗಾಲಲ್ಲಿ ನಿಂತ ಯುವಕ ಯುವತಿಯರು... ಪ್ರೇಮಿಗಳ ದಿನ ಆಚರಿಸುವವರ ಕಾಲು ಮುರಿಯಲು ಸಜ್ಜಾಗಿ ನಿಂತ ಆಂಜನೆಯರು... ಹೀಗೆ ಪ್ರೇಮಿಗಳ ದಿನಕ್ಕಂತೂ ಪುಕ್ಕಟೆ ಜಾಹಿರಾತು...
ವರ್ಷಕ್ಕೆ ಒಂದು ಸಾರಿ ಸತ್ತವರಿಗೂ ತಿಥಿ ಅಂತ ಆಚರಿಸೋ ನಮ್ಮ ಸಂಸ್ಕ್ರಿತಿಲಿ vaರ್ಶಕ್ಕೊಮ್ಮೆ ಪ್ರೇಮಿಗಳ ದಿನ ಅಂತ ಆಚರಿಸೋದ್ರಲ್ಲಿ ತಪ್ಪೇನಿದೆ? ಹಾಗಂತ ಕೇಳಿದ್ದ ನನ್ನ ಸ್ನೇಹಿತ.. ಹೌದು... ವರ್ಷಕ್ಕೊಂದ್ಸಾರಿ ಪ್ರೇಮಿಗಳ ದಿನ ಆಚರಿಸೋದು ಸರೀನೆ.. ಈ ಕೆಲಸದ ಒತ್ತಡದಲ್ಲಿ ನಮ್ಮನು ಪ್ರೀತಿಸುವವರನ್ನು, ನಾವು ಪ್ರೀತಿಸುವವರನ್ನು ನೆನಪಿಸಿ ಕೊಳ್ಳೋದು ಒಂಥರಾ ಸರಿ ಅನ್ಸುತ್ತೆ... ಹೊಸ ಪ್ರೀತಿ ಹುಡುಕೋಕೆ, ಕಳೆದು ಹೋದ ಪ್ರೀತಿಗೆ ಪಿಂಡ ಇಟ್ಟು, ತರ್ಪಣ ಕೊಟ್ಟು ಹೊಸ ಪ್ರೀತಿನ ಹುಡುಕೋಕೆ ಅದೊಂದು ದಿನ ಇರ್ಲಿ... ಏನಂತಿರ?
ಆದ್ರೆ ನಮ್ಮ ಸಂಸ್ಕ್ರಿತಿಲಿ ಇದೆಲ್ಲ ಇಲ್ಲ ಅಂತ ಬೊಬ್ಬೆ ಹೊಡೆಯೋರು ಒಂದು ಕಡೆ... ನಮಗೆ ದಿನಾಲೂ ಪ್ರೇಮಿಗಳ ದಿನಾನೇ .... ನಮ್ಮ ಭಾರತೀಯ ಸಂಸ್ಕ್ರುತಿಲಿ ೩೬೫ ದಿನಾನೂ ಪ್ರೇಮಿಗಳ ದಿನ... ಹೀಗಂತ ವಾದಿಸೋರನ್ನ ಕಂಡಿದ್ದೆ... ಅವ್ರನ್ನ ನಾನೂ ಕೆಲವು ಪ್ರಶ್ನೆ ಕೇಳ್ಬೇಕು...
ಮಕ್ಕಳ ದಿನ ಅಂತ ಆಚರಿಸ್ತೇವೆ ಯಾಕೆ? ಆ ಒಂದು ದಿನ ಮಾತ್ರ ನಮ್ಮ ಮಕ್ಕಳ ಬಗ್ಗೆ ಯೋಚಿಸಿದರೆ ಸಾಕೆ? ಗಾಂಧೀ ಜಯಂತಿ ಯಾಕೆ...? ಅಂಥ ಮಹಾನ್ ರಾಷ್ಟ್ರ ಪಿತನನ್ನು ಒಂದು ದಿನ ನೆನಪಿಸ್ಕೊಂದ್ರೆ ಸಾಕೆ? ಸ್ವಾತಂತ್ರ ದಿನ... ಆ ಒಂದು ದಿನ ಮಾತ್ರ ನಾವು ಸ್ವಾತಂತ್ರರೆ? ಬಹುಶ ಉತ್ತರ ಸಿಗಲಿಕ್ಕಿಲ್ಲ... ನಾನು ಒಂದು ವೇಳೆ ಇಂಥ ಪ್ರಶ್ನೆ ಪಬ್ಲಿಕ್ ನಲ್ಲಿ ಕೇಳಿದ್ರೆ ನಂಗೂ ೧೦ ವರ್ಷ ಹಾಕ್ಕೋಳು
ವಷ್ಟು ಚಡ್ಡಿ ಬನಿಯನ್ಗಳು ಸಿಕ್ಕಿಯಾವು ...
ಪ್ರೇಮಿಗಳ ದಿನ ಅಂತ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಲ್ಲೋರಿಗೆನೂ ಕಮ್ಮಿಯಿಲ್ಲ... ಅದಕ್ಕೆ ಈ ದಿನ ಆಚರಿಸೋದಕ್ಕೆ ವಿರೋಧ ವ್ಯಕ್ತ ವಾಗಿರಬೇಕು... ಅದಕ್ಕೆ ಈ ಚಡ್ಡಿ ಪುರಾಣ ಮಾಡೋದಕ್ಕಿಂತ ಅದೊಂದು ದಿನ ಬಾರ್ ಗಳಿಗೆ, ಪಬ್ ಗಳಿಗೆ, ಡಿಸ್ಕೋ ಥೆಕ್ ಗಳಿಗೆ ಬೀಗ ಜಡಿದದ್ದೇ ಆದ್ರೆ ಅಂಥವರೆಲ್ಲರನ್ನೂ ಮೆಚ್ಚಬಹುದಿತ್ತು.. ಎಲ್ಲ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಕುತಂತ್ರಿ ರಾಜಕಾರಣಿ ಗಳ ಆಟಕ್ಕೆ ಬಲಿಪಶು ವಾದದ್ದಂತೂ ಅಬ್ಬ ಸಾಮಾನ್ಯ ಪ್ರೇಮಿ... ಪಾಪ , ಪ್ರೇಮಿಗಳ ದಿನಕ್ಕೆ ವಿರೋಧ ವ್ಯಕ್ತ ಪಡಿಸಿದವನ ಮನೆಯಂತೂ ಚಡ್ಡಿಗಲಿಂದಲೇ ತುಂಬಿ ಹೋದ ಬಗ್ಗೆ ಓದಿ ಖೆದವೆನ್ನಿಸಿತು...(ಚಡ್ಡಿ ಕಳಸಿದೋರು ಅದನ್ನ ವಾಪಾಸ್ ಪಡಿಯೋಕೆ ಶಿವರಾತ್ರಿ ಯನ್ನ ಆರಿಸಿಕೊಂಡಿದ್ದಾರೆ ಅನ್ನೋ ಸುದ್ದಿ ಎಷ್ಟು ನಿಜ ಎಷ್ಟು ಸುಳ್ಳು ಅಂತ ದೇವರಾಣೆಗೂ ನಂಗೊತ್ತಿಲ್ಲ!!!)
ನಾನಂತೂ ಇನ್ನು ಮುಂದೆ ಅಕ್ಟೋಬರ್ ೨೩ ಪ್ರೇಮಿಗಳ ದಿನ , ಫೆಬ್ರವರಿ ೧೪ ಚಡ್ಡಿ ದಿನ ಅಂತ ಆಚರಿಸೋಕೆ ನಿರ್ಧಾರ ಮಾಡಿದ್ದೇನೆ..
ಇಬ್ಬರ ಚಡ್ಡಿ ಜಗಳ , ಬಟ್ಟೆ ಅಂಗಡಿಯವನಿಗೆ ಲಾಭ, ಪ್ರೇಮಿಗೆ ಪ್ರಾಣ ಸಂಕಟ....
ಫೆಬ್ರವರಿ ೧೪ಕ್ಕೆ ಆರಂಭ ಗೊಂಡ ಪ್ರೀತಿ ,ಫೆಬ್ರವರಿ ೨೪ ಕ್ಕೆ ಯಾರೂ ಕದ್ದುಕೊಂಡು ಹೋಗದಿರಲಿ ...
ಪ್ರೀತಿ ಅಮರವಾಗಿರಲಿ...