Saturday, September 6, 2014

ಪುಸ್ತಕ !!

ರಾತ್ರಿ ೧೧ ಗಂಟೆ . ಜೋರಾಗಿ ನಿದ್ದೆ ಬರುತ್ತಿತ್ತು . ಮಲಗೋಣವೆಂದು  ಮನೆಯ ದೀಪಗಳನ್ನು ಆರಿಸೋಣವೆಂದು  ಅಂದು ಕೊಳ್ಳುವಷ್ಟರಲ್ಲಿ "ಟಿಂಗ್ ಟೋಂಗ್ " ಅನ್ನುವ ಶಬ್ದ.. ಯಾರೋ ಬಾಗಿಲ ಗಂಟೆ ಬಾರಿಸಿದ್ದರು.. ಅರ್ರೆ ಇಷ್ಟೊತ್ತಿನಲ್ಲಿ ಯಾರಿರಬಹುದು ? ಒಂದು ವಾರದ ಹಿಂದಷ್ಟೇ ಆ ಊರಿಗೆ ವರ್ಗವಾಗಿದ್ದೆ .. ಅಷ್ಟೊಂದು ಪರಿಚಯ ಯಾರದ್ದೂ ಇರಲಿಲ್ಲ .. ಗೊತ್ತಿದ್ದಿದು ಪಕ್ಕದ ಮನೆಯ ರಾಮ ಭಟ್ಟರು ಮಾತ್ರ . ರಾತ್ರಿ ಹನ್ನೊಂದು ಗಂಟೆಗೆ ಯಾರು ಬಂದಿರಬಹುದು ಅಂತ ಮೆಲ್ಲನೆ ಬಾಗಿಲು ತೆಗೆದೆ.. ಯಾರೋ ಹುಡುಗನೊಬ್ಬ ನಿಂತಿದ್ದ

"ಸಾರ್ ನಾನು ರಾಮಭಟ್ಟರ ಮಗ , ನಿದ್ದೆ ಬರ್ತಾ ಇರ್ಲಿಲ್ಲ ಅದಕ್ಕೆ ನಿಮ್ಮಲ್ಲಿ ಯಾವುದಾದರೂ ಒಳ್ಳೆಯ ಪುಸ್ತಕ ಇದ್ರೆ ಕೊಡ್ತೀರ . ಓದಿ ನಾಳೆ ಕೊಡ್ತೀನಿ " ಅಂದ ..
ಅಬ್ಬ , ಇದೆಂತ ಒಳ್ಳೆಯ ಕಾಲ.. ಮೊಬೈಲ್ ನಲ್ಲಿ, ಟಿ .ವಿ  ನೋಡುತ್ತಾ , ಇಲ್ಲವೇ ಹಾಳು  ಹರಟೆ ಹೊಡೆಯುತ್ತ ಕೂರುವ ಈ ಹುಡುಗರ ಮಧ್ಯೆ ಇದೆಲ್ಲಿಂದ ಬಂದ  ಅಂತ ಆಶ್ಚರ್ಯ ವಾಯಿತು ..

ಮನೆಯ ಸಾಮಾನು ಇನ್ನೂ ಜೋಡಿಸಿರಲಿಲ್ಲ ..

"ಹೆಸರೇನು ನಿಂದು "?

"ರಾಘವೇಂದ್ರ ಅಂತ ಸಾರ್, ಎಲ್ರೂ ರಘು ಅಂತ ಕರೀತಾರೆ "

"ಸರಿ, ಯಾವುದು ಬೇಕೋ ಅದು ತಗೋ " ಅಂತ ಹೇಳಿ ಪುಸ್ತಕ ಕಟ್ಟಿಟ್ಟಿದ್ದ ರಟ್ಟಿನ ಪೆಟ್ಟಿಗೆ ತೋರಿಸಿದೆ ..

ಸ್ವಲ್ಪ ಹೊತ್ತು ಹುಡುಕಾಡಿ ೨ ಪುಸ್ತಕ ತೆಗೆದುಕೊಂಡ .. "ಸಾರ್ , ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ತಗೊಂಡೆ  .. ನಾಳೆ ಕೊಡ್ತೀನಿ ಸಾರ್" ಅಂತ ಹೇಳಿ ಹೊರ ಹೋದ .. ನೇರವಾಗಿ ರಾಮ ಭಟ್ಟರ ಮನೆಯ ಗೇಟು ತೆಗೆದು ಒಳ ಹೋದವನನ್ನು ನೋಡಿ ಖುಷಿಯಾಯಿತು .. ನಿದ್ದೆ ಬರದೆ ಮೊಬೈಲ್ ನಲ್ಲಿ ಆಟ ಆಡುವ ಜನಾಂಗದ ಮಧ್ಯೆ ಇಂಥವರು ಇನ್ನೂ ಇದ್ದಾರೆ ಅಂದರೆ ಹೆಮ್ಮೆಯ ವಿಷಯವಲ್ಲವೇ ..

 ಇದಾಗಿ ಎರಡು ಮೂರು ದಿನ ಕಳೆಯಿತು .. ನಾನು ಕೆಲಸಕ್ಕೆ ಹೋಗಿ ಬರುವುದೇ ರಾತ್ರಿಯಾಗುತ್ತಿದ್ದುದರಿಂದ ರಘು ಬಗ್ಗೆಯೂ ಮರೆತು ಹೋಯಿತು .. ಆದರೆ ನಾಲ್ಕನೇ ದಿನ ನನ್ನ ಗೆಳೆಯ ಸದಾನಂದ ಫೋನ್ ಮಾಡಿ ಒಂದು ಪುಸ್ತಕ ಕೊಡು ಅಂದಿದ್ದ .. ಆಗ ನೆನಪಾಯಿತು.. ರಘು ಪುಸ್ತಕ ತೆಗೆದುಕೊಂಡು ಹೋಗಿದ್ದ ವಿಶಯ.. ಅಲ್ಲಿಗೆ ಹೋಗಿ ಕೇಳೋಣ .. ಹೇಗೂ ರಾಮ ಭಟ್ಟರು ಮನೆಗೆ ಬರುವಂತೆ ಒತ್ತಯಿಸಿದ್ದೂ ಉಂಟು .. ಹೋದ ಹಾಗೆಯೂ ಆಯಿತು , ಪುಸ್ತಕ ವಾಪಸು ತಂದ ಹಾಗೆಯೂ ಆಯಿತು ಅಂತ ಅವರ ಮನೆ ಕಡೆ ಸಾಗಿದೆ..
"ಬನ್ನಿ ಬನ್ನಿ " ರಾಮ ಭಟ್ಟರು ಎಲೆ ಅಡಿಕೆ ತಿಂದು ಕೆಂಪಾಗಿದ್ದ ಬಾಯಿಯನ್ನು ಇಷ್ಟಗಲ ಮಾಡಿ ಸ್ವಾಗತಿಸಿದರು .. ಅವರ ಹೆಂಡತಿ ರುಕ್ಮಿಣಿ ಹಾಗೂ ಮಗಳ ಪರಿಚಯ ಮಾಡಿಕೊಟ್ಟರು .. ಭರ್ಜರಿ ಕಾಫಿ ತಿಂಡಿಯೂ ಮುಗಿಯಿತು.. ಇನ್ನು ಮನೆಗೆ ಹೋಗೋಣವೆಂದು ನಿಧಾನಕ್ಕೆ ಎದ್ದು ನಿಂತೆ ..
"ರಘು ಮನೆಯಲ್ಲಿ ಇಲ್ವೆ?"

ರಾಮ ಭಟ್ಟರು ಕಣ್ಣು ಚಿಕ್ಕದು ಮಾಡಿ "ಯಾರು?" ಎಂದು ಕೇಳಿದರು ..
"ಅದೇ ಭಟ್ರೇ ನಿಮ್ಮ ಮಗ ರಾಘವೇಂದ್ರ "

ಅದ್ಯಾಕೋ ರಾಮ ಭಟ್ಟರು ತಟ್ಟನೆ ಅವರ ಹೆಂಡತಿಯ ಮುಖ ನೋಡಿದರು .. ಅವರ ಮಗಳೂ ಸಹ ಅವಕ್ಕಾಗಿ ನಿಂತು ಬಿಟ್ಟಿದ್ದಳು ..  ಅವರ ಮುಖ ಚಹರೆಯೇ  ಬದಲಾಗಿ ಹೋಗಿತ್ತು ..

"ಭಟ್ರೇ , ಅದೇ ಮೊನ್ನೆ ನಿಮ್ಮ ಮಗ ರಘು ಬಂದಿದ್ದ .. ರಾತ್ರಿ ೧೧ ಗಂಟೆಗೆ .. ನಿಮ್ಮ ಮಗ ಅಂತ ಹೇಳಿದ .. ನಿದ್ದೆ ಬರ್ತಾ ಇಲ್ಲ, ಯಾವುದಾದರು ಪುಸ್ತಕ ಕೊಡಿ ಓದ್ತೀನಿ  ಅಂತ ಎರಡು ಪುಸ್ತಕ ತೆಗೊಂಡು ಹೊದ.. ಅದು ನನ್ನ ಗೆಳೆಯನಿಗೆ ಒಂದ್ಸಾರಿ ಕೊಡಬೇಕಾಗಿತ್ತು .. ಅದ್ಕೆ ತೆಗೊಂಡು ಹೋಗೋಣ ಅಂತ ಬಂದೆ "

ಮೂವರೂ ಮತ್ತಷ್ಟು ದಿಗ್ಭ್ರಾಂತ ರಾದರು .. " ನನ್ನ ಮಗನೆ? ನಿಮ್ಮ ಮನೆಗೆ ಬಂದಿದ್ನೆ?" ರಾಮ ಭಟ್ಟರು ತೊದಲಿದರು..

ಹೋ  , ನಾನು ಬಹುಶ ಮೋಸ ಹೋಗಿದ್ದೆ .. ಅದ್ಯಾರೋ ನನ್ನ ಪುಸ್ತಕ ಕದ್ದು ಬಿಟ್ಟರು \ಅಂತ ನನಗೆ ಅರ್ಥವಾಗಿತ್ತು ..

ಒಂದು ಕ್ಷಣ ಒಳ ಹೋದ ರಾಮಭಟ್ಟರು ಕೈಯಲ್ಲಿ ಒಂದು ಫೋಟೋ ಹಿಡಿದುಕೊಂಡು ಬಂದರು ..
"ನಿಮ್ಮ ಮನೆಗೆ ಬಂದಿದ್ದು ಈ ಹುಡುಗನಾ "

"ಹೌದು ಭಟ್ರೇ ಇವನೇ .. ನಿಮ್ಮ ಮಗ ಅಂತ ಹೇಳಿದ ಅದಕ್ಕೆ ಪುಸ್ತಕ ಕೊಟ್ಟೆ .. ನಿಮ್ಮ ಮಗ ಅಲ್ವೇ?" ಅಂತ ಕೇಳಿದೆ ..

"ನನ್ನ ಮಗನೇ , ಆದರೆ ಆತ ತೀರಿಕೊಂಡು ೪ ವರ್ಷ ಆಯಿತು"..

ಕಿವಿಗೆ ಕಾದ ಸೀಸ ಹೊಯ್ದ೦ತಾಯಿತು .. "ಏನು??" ನಾನು ದಿಗ್ಭ್ರಾಂತ ನಾದೆ ...

"ಹೌದು , ನಾಲ್ಕು ವರ್ಷದ ಹಿಂದೆ ನನ್ನ ಮಗ ಅಪಘಾತವೊಂದರಲ್ಲಿ ತೀರಿಕೊಂಡು ಬಿಟ್ಟ .. ಹಾಗಿರುವಾಗ ಆತ  ನಿಮ್ಮ ಮನೆಗೆ ಬಂದು ಪುಸ್ತಕ ಹೇಗೆ ತಗೆದುಕೊಂದಿರಲು ಸಾಧ್ಯ.. ಯಾರೋ ಬೇರೆಯವರು ಬಂದಿರಬೇಕು ..  ನೋಡಿ ಅಲ್ಲಿ ಮನೆ ಹಿಂದೆ ಮಂಟಪದ ಥರ ಕಾಣಿಸ್ತಿದೆಯಲ್ಲ  ಅಲ್ಲೇ ನನ್ನ ಮಗನ ಸಂಸ್ಕಾರ  ಮಾಡಿದ್ದು "

ರಾಮಭಟ್ಟರು ಕೈ ತೋರಿಸಿದ ಕಡೆ ಮೆಲ್ಲನೆ ಸಾಗಿದೆ .. ಗೊರಿಯೊಂದು ಕಟ್ಟಲಾಗಿತ್ತು .. ನನ್ನ ಹಿಂದೆಯೇ ರಾಮಭಟ್ಟರು ಬಂದರು ..
 "ನಂಗೆ ಗೊತ್ತಿರ್ಲಿಲ್ಲ ಭಟ್ರೇ, ಕ್ಷಮಿಸಿ.. ಬಹುಶ ಬೇರೆ ಯಾರೋ ಹುಡುಗರು ಬಂದಿರಬೇಕು .. ಆದರೆ ನಿಮ್ಮ ಮಗನ ಫೋಟೋ ನೋಡಿದ್ನಲ್ಲ ಅದೇ ಥರ ಇದ್ದ .. ಅದಕ್ಕೆ...." ಮುಂದೆ ಮಾತೆ ಹೊರಡಲಿಲ್ಲ ..

ಗೋರಿಯ ಪಕ್ಕದಲ್ಲಿ ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ಅನಾಥವಾಗಿ ಬಿದ್ದಿದ್ದವು!!!!ಗೋರೆ ಉವಾಚ :

ಗ್ರಂಥಾಲಯದಲ್ಲಿರುವ  ಅತೀ ಕೆಟ್ಟ ಅಭಿರುಚಿಯ  ಪುಸ್ತಕಕ್ಕೆ ಯಾವತ್ತೂ ಧೂಳು ಇರುವುದಿಲ್ಲ !!!