Sunday, September 18, 2016

ಬಾಂಡ್ಲಿ !!

"ಅಪ್ಪಾ , ಅಮ್ಮನಿಗೆ ಅಷ್ಟೊಂದ್ ಕೂದ್ಲು ಇದೆ , ನಂಗೂ ಇಷ್ಟೊಂದ್ ಕೂದ್ಲಿದೆ , ನಿಂಗೆ ಮಾತ್ರ ಕಮ್ಮಿ ಯಾಕೇ ?"
ಮಗಳು ಕೇಳಿದಾಗ ಮೆಲ್ಲನೆ ಕಣ್ಣು ಬಿಟ್ಟೆ .. "ನಂಗೆ ಮಾತ್ರ ಅಲ್ಲ , ನಿನ್ನ ತಮ್ಮಂಗೂ ಕೂದ್ಲು ಕಮ್ಮಿ ನೋಡು " ೫ ತಿಂಗಳ ಮಗನನ್ನು ತೋರಿಸಿದೆ ..


"ಹೌದಾ .. ಹುಡುಗ್ರಿಗೆ ಕೂದ್ಲು ಕಮ್ಮಿನಾ " ಕೇಳಿದ ಮಗಳು  ಟಿವಿ ನೋಡುವುದರಲ್ಲಿ ಮಗ್ನಳಾದಳು ..
ಆದರೂ ಮಧ್ಯೆ ಮಧ್ಯೆ ಬರುತ್ತಿದ್ದ ಜಾಹೀರಾತುಗಳಲ್ಲಿ ನಿಸರ್ಗಾಲಯ , ಇಂದುಲೇಖಾ ಮುಂತಾದ ಕೇಶತೈಲಗಳ ಜಾಹಿರಾತು ಬರುತ್ತಿದ್ದಂತೆ ತಿರುಗಿ ನನ್ನ ತಲೆ ನೋಡುತ್ತಿದ್ದಳು ..


--------------------------------------------------------------------------------------------------------------------


"ಅಪ್ಪಾ , ತಮ್ಮನಿಗೆ ನನ್ ಥರಾನೇ ಕೂದ್ಲು ಬರ್ತಿದೆ ನೋಡು " ಮಗಳು ಖುಷಿಯಾಗಿದ್ದಳು .. ೧೦ ತಿಂಗಳ ತಮ್ಮನಿಗೂ ಕೂದಲು ಒತ್ತಾಗಿ ಬೆಳೆಯುತ್ತಿದೆ .. ಮತ್ತೆ ನನ್ನ ತಲೆ ನೋಡಿದವಳೇ "ನಿಂಗ್ಯಾಕೆ ಕೂದ್ಲು ಬೆಳೀತಿಲ್ಲ ? ಹುಡುಗ್ರಿಗೆ ಕಮ್ಮಿ ಕೂದ್ಲು ಅಂದ್ಯಲ್ಲ , ಮತ್ತೆ ತಮ್ಮನಿಗೆ ಅಷ್ಟೊಂದು ಕೂದ್ಲು ಬರ್ತಿದೆ " ..
"ನಿನ್ನ ಅಮ್ಮ ತಲೆ ತಿಂದೂ ತಿಂದೂ ಹೀಗಾಗಿದೆ ಪುಟ್ಟಿ " ಅಂದೆ
"ಏನೂ ??" ಒಳಗಿಂದ ಬಂದ ಧ್ವನಿ ದೊಡ್ಡದಾಗಿಯೇ ಇತ್ತು ..
ನಾನು ಸುಮ್ಮನಾದೆ .. ಬಾಂಡ್ಲಿಯಾಗಿದ್ದ  ತಲೆ ಒಮ್ಮೆ ನೇವರಿಸಿಕೊಂಡೆ ..
ಅಡುಗೆ ಮನೆಯಲ್ಲಿರೋ ಬಾಂಡ್ಲಿಯಲ್ಲಿ ಎಣ್ಣೆ ನಿಲ್ಲುತ್ತೆ ಆದರೆ ನಮ್ಮ ಬಾಂಡ್ಲಿ ????
"ನೀನೂ ನಿಸರ್ಗಾಲಯ , ಇಂದುಲೇಖಾ ಹಚ್ಚು " ಮಗಳು ಸಲಹೆ ಕೊಟ್ಟಳು ..
"ಅದೆಲ್ಲ ಸುಮ್ನೆ ಸುಳ್ಳು , ಅದ್ರಿಂದ ಕೂದ್ಲು ಬರಲ್ಲ"..
"ಸುಳ್ಳಾ ?? ಸುಳ್ಳು ಹೇಳಿದ್ರೆ ಪನಿಶ್ಮೆಂಟ್ ಇದೆ ಅಂತ ನೀನೆ ತಾನೇ ಹೇಳಿದ್ದು ... ಅವ್ರಿಗೆ ಯಾರು ಪನಿಷಮೆಂಟ್ ಕೊಡ್ತಾರೆ ? ಏನ್ ಪನಿಶ್ಮೆಂಟ್ ಕೊಡ್ತಾರೆ ?"...
ನಾನು ಮತ್ತೆ ನನ್ನ ತಲೆ ಮೇಲೆ ಕೈ ಆಡಿಸಿದೆ !!!

---------------------------------------------------------------------------------------------------------------------


---------------------------------------------------------------------------------------------------------------------


"ಹಾಕ್ಷಿ " ಮಗಳು ಜೋರಾಗಿ ಸೀನುತ್ತಿದ್ದಳು ... ಮಳೆಯಲ್ಲಿ ಇಬ್ಬರೂ ಗಡದ್ದಾಗಿ ಆಟ ಆಡಿದ್ದರ ಫಲ ..ಶೀತವಾಗಿತ್ತು .. ಅಷ್ಟೊಂದು ಬೆಳೆದ ಕೂದಲು ಎಷ್ಟೇ ಒರೆಸಿಕೊಂಡರೂ , ಪೂರ್ತಿ ಒಣಗಿಸುವುದು ಕಷ್ಟ ಕಷ್ಟ .. ಆದರೆ ನನಗೆ ? ನೀರು ತಲೆಯ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ .. ಶೀತದಿಂದ ಪಾರಾಗಿದ್ದೆ :)


"ಅಪ್ಪಾ , ಅವ್ರೆಲ್ಲ ಯಾಕೆ ಬೆಂಕಿ ಹಾಕ್ತಿದ್ದಾರೆ "   ಟಿವಿ ಮುಂದೆ ಕೂತಿದ್ದ ಮಗಳು ಕೇಳಿದಳು
"ಅದೇನೋ ಕಾವೇರಿ ಗಲಾಟೆ " ಅಂತ ನಂಗೆ ಗೊತ್ತಿದ್ದಷ್ಟು ಹೇಳಿದೆ
"ನೀರಿಗೂ ಜಗಳಾನಾ " ??  ನಾನು ಟಿವಿ ಆರಿಸಿದೆ ..
ಮರುದಿನ ಟಿವಿ ಹಾಕುವಾಗ , ಬೆಂಕಿ ಹಚ್ಚಿದ್ದ ವಾಹನಗಳಿಗೆ ನೀರು ಸುರಿದು ಬೆಂಕಿ ನಂದಿಸುತ್ತಿದ್ದರು ...
"ವೆರಿ ಗುಡ್ , ನಿನ್ನೆ ಬೆಂಕಿ ಹಾಕಿದ್ರಲ್ಲ ಅವ್ರೆಲ್ಲ ಬ್ಯಾಡ್ , ನೀರು ಹಾಕಿ ನಂದಿಸ್ತಾರಲ್ಲ ಇವರು ಗುಡ್ " ಮಗಳು ಕಾಮೆಂಟರಿ ಕೊಡುತ್ತಲೇ ಇದ್ದಳು ..
"ಅಪ್ಪಾ , ಬೆಂಕಿ ನಂದಿಸ್ತಾ ಇದ್ದಾರಲ್ಲ ಇದೂ ಕಾವೇರಿ ನೀರಾ "


"ಇಲ್ಲ ಪುಟ್ಟಿ , ಅಷ್ಟೊಂದು ಕಾವೇರಿ ನೀರು ಇದ್ದಿದ್ರೆ ಜಗಳಾನೇ ಆಗ್ತಿರ್ಲಿಲ್ಲ ... ಬಹುಶ ಇದು ಸಪುತೀ (SPT ) ನೀರು ಇರಬಹುದು "
"ಸಪುತೀ ಅಂದ್ರೆ "
"ಸಕಲ ಪುಕುಳಿ ತೀರ್ಥ "
"ಅಂದ್ರೆ "???
ನಾನು ಮತ್ತೆ ತಲೆ ನೇವರಿಸಿಕೊಂಡೆ
---------------------------------------------------------------------------------------------------------------------


ಗೋರೆ ಉವಾಚ :
ಹಾಳಾಗಿ ಮೂಲೆಯಲ್ಲಿ ಬಿದ್ದಿರುವ ಗಡಿಯಾರ ಸಹ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ !!Saturday, September 17, 2016

ಸುಮ್ನೆ ತಮಾಷೆಗೆ -೭ !!೧ .


ಭೀಕರ ಸುನಾಮಿಯ ನಂತರ ಶಾಂತವಾಗಿದ್ದ ಸಮುದ್ರ ತೀರ ದಲ್ಲಿ ನಿಂತಿದ್ದ ಆಕೆಯ ಕಾಲುಗಳಿಗೆ ಬಿದ್ದು ಬಿದ್ದು ಸಮುದ್ರ ಕ್ಷಮೆ ಕೇಳುತ್ತಲೇ  ಇತ್ತು !!
----------------------------------------------------------------------------------------------------------------------


೨..  
ಸುಮಾರು ೧೦ ವರ್ಷಗಳ ನಂತರ ಅವರ ಭೇಟಿಯಾಗಿತ್ತು !! ಆತನಿಗೆ ನಿಶ್ಚಿತಾರ್ಥ ವಾಗಿತ್ತು , ಆಕೆಗೆ ಮದುವೆಯಾಗಿತ್ತು !!!


----------------------------------------------------------------------------------------------------------------------ಆತ : "ನಿನ್ನನ್ನು ನಾನು ಪ್ರೀತಿಸುತ್ತೇನೆ ಯಾಕೆಂದರೆ ನೀನು ನನಗೆ ಬೇಕು "   ಆಕೆ ಒಲ್ಲೆ ಎಂದಳು ..
ಆತ : "ನೀನು ನನಗೆ ಬೇಕು ಯಾಕೆಂದರೆ ನಿನ್ನನ್ನು ನಾನು ಪ್ರೀತಿಸುತ್ತೇನೆ " ಆಕೆ ಮದುವೆ ಆದಳು !!


-----------------------------------------------------------------------------------------------------------------------
೪..
ಜೇಬಿನಲ್ಲಿ ನಾಣ್ಯಗಳಿದ್ದವರು ಮಳೆಯಲ್ಲಿ ನೆನೆದು , ಆಟವಾಡಿ ಖುಷಿಪಟ್ಟರು ..
ಜೇಬಿನಲ್ಲಿ ನೋಟುಗಳಿದ್ದವರು ಸೂರಿಗಾಗಿ ಹುಡುಕಾಡಿದರು !!


------------------------------------------------------------------------------------------------------------------------
೫..
ಮನುಷ್ಯ ಮತ್ತು ದೇವರು ಒಂದು ಬಾರಿ ಭೇಟಿಯಾದರು .. ಇಬ್ಬರೂ ಒಬ್ಬರನ್ನೊಬ್ಬರು ತೋರಿಸಿ ಹೇಳಿದರು "ನನ್ನ ಸೃಷ್ಟಿಕರ್ತ "!!!!


-----------------------------------------------------------------------------------------------------------------------
ಗೋರೆ  ಉವಾಚ :
ಮನುಷ್ಯ ಸತ್ತ ಮೇಲೆ ದೇವರು ಕೇಳುವ ಮೊದಲ ಪ್ರಶ್ನೆ "ಸ್ವರ್ಗ ಹೇಗಿತ್ತು ?" !!