Thursday, September 24, 2009

ನಾನು ಸುತ್ತಿಗೆಯಿಂದ ಬಡಿಯುತ್ತಲೇ ಇದ್ದೆ....(ನನ್ನ ಕಥೆ -ಭಾಗ ೨)

ಆಗ ನನಗೆ ನೆನಪಾದದ್ದೇ ಸುತ್ತಿಗೆ ವಿದ್ಯೆ... ಅಂದರೆ ಬೆಳ್ಳಿಯ ಕುಸುರಿ ಕೆಲಸ... ನನ್ನ ಚಡ್ಡಿ ದೋಸ್ತು ಸದಾನಂದನ ಮನೆಯಲ್ಲಿ ಈ ಕೆಲಸ ನಡೆಯುತ್ತಿತ್ತು... ಆತನ ತಂದೆ ಬೆಳ್ಳಿಯ ಕೆಲಸದಲ್ಲಿ ನಿಸ್ಸೀಮರು.. ಬೆಳ್ಳಿಯ ಮೂರ್ತಿಗಳು, ಕಲಶಗಳು, ದೇವಸ್ಥಾನದ ಬಾಗಿಲು, ಪಲ್ಲಕ್ಕಿ ಇಂಥ ಕೆಲಸಗಳಲ್ಲಿ ಆಗ ಅವರು ಭಾರಿ ಹೆಸರುವಾಸಿ... ರಜಾ ದಿನಗಳಲ್ಲಿ ನಾನು ಮತ್ತು ಸದಾನಂದನೂ ಸುತ್ತಿಗೆ ಹಿಡಿದು ಕೂರುತ್ತಿದ್ದೆವು... ಅದೆಷ್ಟೋ ಕೆಲಸ ಮಾಡಿ ನಾವೂ ಅದರಲ್ಲಿ ಅಲ್ಪ ಸ್ವಲ್ಪ ನಿಸ್ಸೀಮರಾಗಿ ಬಿಟ್ಟಿದ್ದೆವು.. ಒಂದು ಸಾರಿ ಆ ಚಿಕ್ಕ ಸುತ್ತಿಗೆ ಏಟು ತಪ್ಪಿ ನನ್ನ ಕೈಗೆ ಬಿದ್ದು ಗಾಯ ಮಾಡಿಕೊಂಡಿದ್ದೆ , ಆವತ್ತಿನಿಂದ ನಾವು ಬೆಳ್ಳಿ ಕೆಲಸ ಅನ್ನೋ ಬದಲು ಸುತ್ತಿಗೆ ಕೆಲಸ ಎಂದು ಕರೆಯುತ್ತಿದ್ದೆವು...ಈಗ ನನಗೆ ನೆನಪಾದದ್ದೇ ಆ ವಿದ್ಯೆ... ಸರಿ ಮುಂದೆ ಆಲೋಚಿಸುವುದೆನಿದೆ... ಒಬ್ಬಂಟಿಯಾಗಿ ಕೆಲಸ ಪ್ರಾರಂಭಿಸಿಯೇ ಬಿಟ್ಟೆ ... ಇನ್ನೂ ವಿದ್ಯೆ ಮರೆತಿಲ್ಲ ಅನ್ನೋದಕ್ಕೆ ಸಾಕ್ಷಿಯಾಗಿ ತಿಂಗಳ ಒಳಗಾಗಿ ಎರಡು ಅದ್ಭುತ ಬೆಳ್ಳಿಯ ಮೂರ್ತಿಗಳು ತಯಾರಾಗಿ ಬಿಟ್ಟಿದ್ದವು... ಅವನ್ನು ಮಾರುವದೇನೂ ಕಷ್ಟವಾಗಲಿಲ್ಲ... ನೋಡ ನೋಡುತ್ತಲೇ ಈ ಕೆಲಸ ಅದ್ಯಾವ ಪರಿ ಬೇಡಿಕೆ ತಂದು ಕೊಟ್ಟಿತೆಂದರೆ ೨-೩ ತಿಂಗಳೊಳಗಾಗಿ ೧೦ ಜನ ನನ್ನಲ್ಲಿ ಕೆಲಸ ಮಾಡುವಂತಾಯಿತು.. ಇಷ್ಟೊಂದು ವರ್ಷ ಸರ್ಕಾರಿ ಕೆಲಸ ಮಾಡಿದ್ದು ಯಾಕೆ ಎಂದು ನನ್ನನ್ನು ನಾನು ಕೇಳುವಷ್ಟು ಪ್ರಸಿದ್ಧಿ ಯಾಗಿಬಿಟ್ಟೆ... ದಿನಗಳು ಕಳೆಯುತ್ತಿದ್ದವು... ನನ್ನ ಈ ಕೆಲಸದಲ್ಲಿ ವರ್ಷ ಕಳೆದಿದ್ದೆ ನನಗೆ ಗೊತ್ತಾಗಲಿಲ್ಲ... ಇನ್ನೂ ೬೦ ವರ್ಷ ಬದುಕಬೇಕು ಅಂತ ನನಗೆ ಜೀವನದಲ್ಲಿ ಮೊದಲಬಾರಿ ಅನ್ನಿಸತೊಡಗಿತ್ತು...
ಆದರೆ ಈ ಒಂದು ವರ್ಷದ ಅವಧಿಯಲ್ಲಿ ಒಂದೇ ಒಂದು ಸಾರಿಯೂ ಮಗಳಾಗಲಿ ಅಥವಾ ಮಗನಾಗಲಿ ಫೋನ್ ಮಾಡಲಿಲ್ಲ.. ಬರೆದ ಈ -ಮೇಲ್ ಬಹುಶ ಕಂಪ್ಯೂಟರ್ ಕಸದ ಬುಟ್ಟಿಗೆ ಸೇರಿದ್ದವೋ ಏನೋ.. ಆದರೆ ನಾನು ಮಾತ್ರ ಒಂದು ಅಥವಾ ಎರಡು ತಿಂಗಳಿಗೊಮ್ಮೆಯಾದರೂ ಫೋನಾಯಿಸುತ್ತಿದ್ದೆ.. ಆವತ್ತೊಂದಿನ "ಒಂದೇ ಒಂದು ಸಾರಿ ಮಗ ಮತ್ತು ಮಗಳಿಗೆ ಫೋನ್ ಮಾಡೋಣ.. ಬನ್ನಿ ಅಂದ್ರೆ ಹೋಗೋಣ... ಏನು ಅಂತ ಗೊತ್ತಾಗುತ್ತಲ್ಲ.. ಫೋನ್ ಮಾಡೋಣ.. ಅವ್ರನ್ನ ಇಲ್ಲಿಗೆ ಬರೋಕೆ ಹೇಳೋಣ" ಹಾಗಂತ ಹೆಂಡತಿ ಹೇಳಿದ್ದು ಸರಿಯೆನಿಸಿತು... ಆಕೆಗೂ ಬಹುಶ ಮಕ್ಕಳನ್ನು ನೋಡಬೇಕು ಅಂತ ಅನ್ನಿಸಿರಬೇಕು.. ಎಷ್ಟಾದರೂ ತಾಯಿ ಹೃದಯವಲ್ಲವೇ...ಹಾಗಂತ ಮಗನಿಗೆ ಫೋನ್ ಹೊಡೆದದ್ದು ಆಯಿತು.. ಎಲ್ಲ ಕ್ಷೇಮ ಸಮಾಚಾರದ ನಂತರ ಮೆಲ್ಲನೆ ನಾನು ವಿಷಯಕ್ಕೆ ಬಂದೆ.. "ಒಂದು ಸ್ವಲ್ಪ ದಿನ ಅಲ್ಲಿಗೆ ಬರ್ತೀವಿ.. ವಯಸ್ಸೂ ಆಗ್ತಿದೆ.. ಒಮ್ಮೆ ಅಮ್ಮನಿಗೂ ಅಮೇರಿಕಾ ನೋದಬೇಕೆನ್ನೋ ಆಸೆಯಿದೆ.. ಪೂರೈಸಲು ನನ್ನಿಂದಾಗಲಿಲ್ಲ .. ನಾವು ಬರ್ಲೆನಪ್ಪ" ಹಾಗಂತ ಕೇಳಿದೆ.. "ಒಹ್ ಖಂಡಿತಾ ಬನ್ನಿ.. ಒಂದು ತಿಂಗಳು ಇರಿ ಅಪ್ಪಾ.. ತುಂಬಾ ದಿನ ಇರೋದು ಕಷ್ಟ ಅಪ್ಪ.. ಇಲ್ಲಿ ತುಂಬಾ ದಿನ ಇರೋದು ಕಷ್ಟ.. ನಂಗೆ ತುಂಬಾ ಟೂರ್ ಗಳಿರುತ್ವೆ.. ಅವಳಿಗೂ ಅಷ್ಟೆ ತುಂಬಾ ಕೆಲಸ.. ಒಂದು ತಿಂಗಳ ಮಟ್ಟಿಗೆ ಬನ್ನಿ" ಹಾಗಂತ ಮಗನಿಂದ ಆಮಂತ್ರಣವೂ ಬಂತು... ಆವತ್ತು ಮಗಳಿಗೆ ಫೋನ್ ಹೊಡೆದೆ... "ಅಪ್ಪಾ.. ಈಗ ತಾನೆ ನಾನು ಫೋನ್ ಮಾಡುವವಳಿದ್ದೆ ಅಷ್ಟರಲ್ಲಿ ನೀವೇ ಫೋನ್ ಮಾಡಿದ್ರಿ... ನನಗೀಗ ೪ ತಿಂಗಳು.. ಅಮ್ಮನನ್ನ ಕಳಿಸಿ ಕೊಡಿ.." ಹಾಗಂತ ಹೇಳಿದಳು... ನಾನೂ ಬರ್ಲೆನಮ್ಮಾ ಅಂತ ಕೇಳೋ ಮನಸ್ಸಾಗದೆ ಫೋನ್ ಹೆಂಡತಿಯ ಕೈಗೆ ವರ್ಗಾಯಿಸಿ ನಾನು ಬೆಳ್ಳಿಯ ಕೆಲಸ ಮಾಡಿಟ್ಟಿದ್ದ ಶೆಡ್ಡಿನತ್ತ ಹೆಜ್ಜೆ ಹಾಕಿದೆ.. ಸ್ವಲ್ಪ ಹೊತ್ತಿಗೆ ಯಾರೋ ಒಳಗೆ ಬಂದಂತಾಯಿತು .. ತಲೆಯೆತ್ತಿ ನೋಡಿದರೆ ಹೆಂಡತಿ.. ಮುಖ ಕೆಂಪಗಾಗಿ ಕಣ್ಣೀರು ಈಗಲೋ ಆಗಲೋ ಧುಮುಕಲು ತಯಾರಾದನ್ತಿತ್ತು.. ಬಹುಶ ಇವತ್ತು ಆಕೆಯ ಸಹನೆಯ ಕಟ್ಟೆ ಒಡೆದಿರಬೇಕು.. ಮಗಳಿಗೆ ಅದ್ಯಾವ ಪರಿ ಮಂಗಳಾರ್ಚನೆ ಯಾಗಿರಬಹುದು ಅಂತ ನನಗೆ ಅರ್ಥವಾಗಿ ಹೋಗಿತ್ತು..
"ಎಷ್ಟಾದರೂ ಮಕ್ಕಳಲ್ವೇ .. ಅವರು ತಪ್ಪು ಮಾಡದೇ ನಾವು ಮಾಡೋಕಾಗುತ್ತಾ.... ಬರೋದಾದ್ರೆ ನಾವಿಬ್ರೂ ಬರ್ತೀವಿ , ಇಲ್ಲಾಂದ್ರೆ ಒಬ್ರೂ ಬರಲ್ಲ ಅಂತ ಹೇಳಿ ಬಿಟ್ಟಿದ್ದೀನಿ.. ಮುಂದಿನ ತಿಂಗಳು ಹೊಗೊಣಾವೆನ್ರೀ.. ಪಾಪ ಒಬ್ಳಿಗೆ ಅದೆಷ್ಟು ಕಷ್ಟವಾಗುತ್ತೋ ಏನೋ.." ಆಕೆ ಮಾತನಾಡುತ್ತಲೇ ಇದ್ದಳು...
ನನ್ನ ಎದುರಿಗೇ ಇದ್ದ ಬೆಳ್ಳಿಯ ತಗಡಿಗೆ , ತೂತು ಬಿದ್ದಿದ್ದನ್ನೂ ಗಮನಿಸದೆ ನಾನು ಆ ಸಣ್ಣ ಸುತ್ತಿಗೆಯಿಂದ ಅದಕ್ಕೆ ಅವ್ಯಾಹತವಾಗಿ ಬಡಿಯುತ್ತಲೇ ಇದ್ದೆ..ಟಕ್.....ಟಕ್.....ಟಕ್.....ಟಕ್...

(ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಆ ಮಗ ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು , ಸುರಿಯುತ್ತಿದ್ದ ಜಡಿಮಳೆಯಲ್ಲಿ ಮನೆಯಿಂದ ಹೊರಗೆ ಹಾಕಿದ ಘಟನೆ ಇನ್ನೂ ನನ್ನ ಕಣ್ಣ ಮುಂದಿದೆ.. ಅದನ್ನು ಬರೆಯುವ ಮನಸ್ಸಾಗದೆ ಹೀಗೊಂದು ಕಥೆ ಹುಟ್ಟಿಕೊಂಡಿತು.......)

(ಈ ಬರಹ "ಕೆಂಡಸಂಪಿಗೆ" ಯಲ್ಲಿ ದಿನದ ಬ್ಲಾಗ್ ಎಂದು ೨೫ ಸೆಪ್ಟೆಂಬರ್ ನಂದು ಆಯ್ಕೆಯಾಗಿದೆ .. http://www.kendasampige.com/article.php?id=1774)

Tuesday, September 22, 2009

ನನ್ನ ಕಥೆ..

ಆಗ ನನಗೆ ೫೬ ವರ್ಷ.. ಇನ್ಯಾಕೆ ಬೇಕು ಈ ಸರ್ಕಾರಿ ಕೆಲಸ... ಹಾಗಂತ ಒಂದು ದಿನ ನಿರ್ಧಾರ ಮಾಡಿದವನೇ, ಮಾಡುತ್ತಿದ್ದ ಸರ್ಕಾರಿ ಕೆಲಸದ ಮುಖಕ್ಕೊಂದು ರಾಜೀನಾಮೆ ಬಿಸಾಕಿ ಮನೆಗೆ ಬಂದು ಆರಾಮಾಗಿ ಕೂತುಬಿಟ್ಟೆ... ಮೊನ್ನೆಯಷ್ಟೇ ಮದುವೆಯಾಗಿ ಅಮೆರಿಕಾದಲ್ಲಿ ಕೈತುಂಬಾ ಸಂಬಳ ಪಡೆಯುವ ಮಗ-ಸೊಸೆ.. ಈಗಾಗಲೇ ಜರ್ಮನಿ ಯಲ್ಲಿ ಠಿಕಾಣಿ ಹೂಡಿರೋ ಮಗಳು ಮತ್ತು ಅಳಿಯ.. ಒಬ್ಬ ಅಪ್ಪ ತನ್ನ ಮಕ್ಕಳಿಗೆ ಒದಿಸಿ, ಕಲಿಸಿ, ಪ್ರೀತಿಸಿ ಇದಕ್ಕಿಂತ ಹೆಚ್ಚಾಗಿ ಇನ್ನೇನು ಮಾಡಲು ಸಾದ್ಧ್ಯ... ಹಾಗಂತ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೆ...
"ಮೊದಲಿಗೆ ಎಲ್ಲಿಗೆ ಹೋಗೋಣ? ಮಗಳ ಮನೆಗೋ? ಇಲ್ಲ ಮಗನ ಮನೆಗೋ?" ಹಾಗಂತ ಒಂದು ದಿನ ಹೆಂಡತಿಯಲ್ಲಿ ಕೇಳಿದೆ..." ಮಗಳ ಮನೆಗೆ ಹೋಗೋಣಾರಿ.. ಮಗ ಈಗ ತಾನೆ ಮದ್ವೇಯಾಗಿದ್ದಾನೆ.. ಸ್ವಲ್ಪ ದಿನ ಇಬ್ರೆ ಇರ್ಲಿ" ಹಾಗಂತ ಹೇಳಿದ್ದಳಾಕೆ .. ಸರಿ ಅಂದು ನಾನು ಆ ದಿನಕ್ಕಾಗಿ ಕಾಯುತ್ತಿದ್ದೆ... ಬಹುಶ ಜೀವನದ ಅತೀ ಸುಂದರ ಕ್ಷಣಗಳು ಅವೇ ಅನ್ನಿಸಿಬಿಟ್ಟಿತ್ತು...

ಆದರೆ ಹಿಂದಿನಂತೆ ಮಗಳು ಈಗೀಗ ವಾರಕ್ಕೊಂದು ಸಾರಿ ಇರಲಿ , ತಿಂಗಳಿಗೊಮ್ಮೆಯಾದರೂ ಫೋನ್ ಮಾಡುವುದು ನಿಂತೆ ಹೋಗಿತ್ತು.. ಹಾಗಂತ ನಾನು ಮಾತ್ರ ತಿಂಗಳಿಗೊಮ್ಮೆಯಾದರೂ ಫೋನ್ ಮಾಡಿ ವಿಚಾರಿಸುವ ನನ್ನ ಕ್ರಮವನ್ನು ಮಾತ್ರ ಬಿಟ್ಟಿರಲಿಲ್ಲ.. ಆದರೆ ಇದ್ಯಾಕೆ ಹೀಗಾಗಿ ಹೋಯ್ತು?? ಈಗೀಗ ನಮ್ಮ ಕರೆಗೆ ಮಗಳಿಂದ ಸರಿಯಾದ ಉತ್ತರವೇ ಬರುತ್ತಿರಲಿಲ್ಲ... ಬೇಕೋ ಬೇಡವೋ ಅನ್ನುವ ನಾಟಕೀಯ ಉತ್ತರಗಳು... ಇಲ್ಲಿ ತುಂಬಾ ಚಳಿ , ನಿಮ್ಮಿಂದ ಇಲ್ಲಿರೋಕೆ ಕಷ್ಟ ಆಗಬಹುದು ಅನ್ನೋವಂಥ ಮಾತು .. ಇಷ್ಟೊಂದು ಪ್ರೀತಿಯಿಂದ ಬೆಳೆಸಿದ ಮಗಳಿಗೆ ನಾವು ಬೇಡವಾದೆವೆ?? ೨ ವರ್ಷಕ್ಕೆ ಹಿಂದೆ ನಂ ಜೊತೆ ಬನ್ನಿ ಅಂತ ರಚ್ಚೆ ಹಿಡಿದಿದ್ದ ಮಗಳು ಇವಳೇನಾ? ನನಗ್ಯಾಕೋ ತಲೆ ಧಿಂ ಎನ್ನ ತೊಡಗಿತ್ತು...
ಹೀಗೆ ಸುಮಾರು ಒಂದು ವರ್ಷ ಕಳೆದಿದ್ದೆ ಗೊತ್ತಾಗಲಿಲ್ಲ... ಮನೆಯ ಖರ್ಚುಗಳು ನನ್ನ ಅರ್ಧ ಸಂಬಳ ಸಾಕಾಗೋದಿಲ್ಲ ಅನ್ನೋ ಸೂಚನೆ ಕೊಡತೊಡಗಿದ್ದವು.. ಮಗ ಅಥವಾ ಮಗಳನ್ನು ದುಡ್ಡು ಕೇಳಲು ಯಾಕೋ ಮನಸ್ಸಾಕ್ಷಿ ಒಪ್ಪಲಿಲ್ಲ... ಇನ್ನೊಂದೇ ಒಂದು ವರ್ಷ ಕಳೆದರೂ ಸಾಕು.. ನನ್ನ , ನನ್ನ ಹೆಂಡತಿಯ ಹೆಸರಲ್ಲಿರೋ ಇನ್ಸೂರೆನ್ಸ್ ದುಡ್ಡು ಸಿಕ್ಕಿ ಬಿಡುತ್ತದೆ.. ಆಮೇಲೆ ಏನೂ ತೊಂದರೆಯಿಲ್ಲ... ಆದರೆ ಈ ಒಂದು ವರ್ಷ ಏನ್ಮಾಡಲಿ... ಹಾಗಂತ ಆಲೋಚಿಸುತ್ತ ಮಲಗಿದ್ದೆ...ನನ್ನ ಅಲ್ಪ ಸ್ವಲ್ಪ ಉಳಿತಾಯದ ದುಡ್ಡು ಈಗಲೇ ತೆಗೆದರೂ ಅದು ಅಷ್ಟಕ್ಕಷೆ.. ಅದಕ್ಕಿಂತ ಮುಂದಿನ ವರ್ಷ ತೆಗೆದರೆನೆ ಲಾಭ... ಇಲ್ಲಾ , ಏನಾದರೂ ಮಾಡಲೇ ಬೇಕು... ಯಾವ ಕೆಲಸವಾದರೂ ಸರಿ.. ಒಂದಿಷ್ಟು ದುಡ್ಡು ಸ್ವಲ್ಪ ದಿನದ ಮಟ್ಟಿಗೆ ಸಂಪಾದನೆ ಮಾಡಲೇಬೇಕು.. ಹಾಗಂತ ನಿರ್ಧರಿಸಿದವನಿಗೆ ನೆನಪಾದದ್ದೇ ನನ್ನ ಹಳೆಯ ವಿದ್ಯೆ..ಕಾಲೇಜ್ ಗೆ ಹೋಗುತ್ತಿದ್ದ ದಿನಗಳಲ್ಲಿ ನಾನು ಮತ್ತು ನನ್ನ ಚಡ್ಡಿ ದೋಸ್ತು ಸದಾನಂದ ಆ ಕೆಲಸ ಮಾಡುತ್ತಿದ್ದೆವು.. ಆವಾಗ ಸುಮ್ನೆ ತಮಾಷೆಗೆಂದು ಮಾಡುತ್ತಿದ್ದ ಆ ವಿದ್ಯೆ ಇವತ್ತು ಉಪಯೋಗಕ್ಕೆ ಬರಬಹುದು ಅಂತ ನಾನು ಕನಸಿನಲ್ಲೂ ಎಣಿಸಿರಲಿಲ್ಲ...

-- ಮುಂದುವರೆಯುವುದು..