Monday, November 30, 2009

ಶಾಪ...

"ಲೇ ಬೊ.. ಮಗನೆ.... ಎಷ್ಟು ಸಾರಿ ಹೇಳಿದ್ದೀನಿ ನಿಂಗೆ ದಾರಿಯಲ್ಲಿ ಮೀನು ಸ್ವಚ್ಚ ಮಾಡುತ್ತಾ ಕೂರಬೇಡ ಅಂತ... ಗೊತ್ತಾಗೊದಿಲ್ವೇನಯ್ಯಾ ನಿಂಗೆ.. ಸೂ.. ಮಗನೆ... " ಭಟ್ಟರು ಒಂದೇ ಸಮನೆ ಕಿರುಚಾಡುತ್ತಿದ್ದರೆ ಕೋಪ ಉಕ್ಕಿ ಉರಿಯಿತು ... ಮನೆ ಅಂಗಳದಲ್ಲಿ ಮೀನು ಸ್ವಚ್ಛ ಮಾಡುತ್ತಾ ಕುಳಿತಿದ್ದ ಚನಿಯ ಧಡಾರನೆ ಎದ್ದು ನಿಂತ.."ಏನು ಭಟ್ರೇ , ನಾವು ಮೀನು ದಾರಿಯಲ್ಲದ್ರೂ ಹಾಕ್ತಿವಿ, ಇಲ್ಲ ದಂಡೆಯಲ್ಲದ್ರೂ ಹಾಕ್ತೀವಿ... ಇದು ನನ್ನ ಮನೆ ಅಂಗಳ , ನೀವ್ಯಾರ್ರಿ ಕೇಳೋಕೆ... ನಿಮಗೆ ಇಷ್ಟ ಇದ್ರೆ ಇದನ್ನು ದಾಟ್ಕೊಂಡು ಹೋಗ್ರಿ... ಇಲ್ಲಾಂದ್ರೆ ಇದ್ದೆ ಇದೆಯಲ್ಲ ಊರಿನ ದಾರಿ ಅದ್ರಲ್ಲಿ ಹೋಗ್ರಿ.. ನೀವು ಏನ್ ಮಾಡಿದ್ರು ಸರಿನಾ?? ನಿಮ್ಮ ಮನೆ ದಾರಿಯಲ್ಲಿ ಇಡೀ ದರ್ಭೆ ಬೆಳೆಸಿ ಇಟ್ಟಿದ್ದಿರಲ್ಲ... ಯಾರದು , ನಿಮ್ಮಪ್ಪನ ಜಾಗಾನ ಅದು.. ಸುಮ್ನೆ ಹೋಗ್ರಿ.." ಚನಿಯಪ್ಪನೂ ಪ್ರತ್ಯುತ್ತರ ಕೊಟ್ಟಿದ್ದ.. ಹತ್ತಿರದ ದಾರಿಯಾದ್ದರಿಂದ ಚನಿಯಪ್ಪನ ಮನೆ ಅಂಗಳದಿಂದ ದಾಟಿ ಹೋಗುತ್ತಿದ್ದ ಭಟ್ಟರು ಸಿಟ್ಟಿನಿಂದ ಊರಿನ ದಾರಿಯಲ್ಲಿ ೨ ಕಿಲೋಮೀಟರು ಹೆಚ್ಚು ನಡೆದು ಮನೆ ಸೇರಿದ್ದರು...
ಇಷ್ಟಕ್ಕೂ ಚನಿಯಪ್ಪ ಆವತ್ತು ಮೀನು ಹಿಡಿದು ತಂದಿದ್ದು ತಾನು ಮೀನು ಸಾಕುತ್ತಿದ್ದ ಊರಿನ ಕೆರೆಯಿಂದ... ಅದು ಭಟ್ಟರ ಮನೆ ಪಕ್ಕದಲ್ಲೇ ಇದೆ.. ೩೬೫ ದಿನವೂ ನೀರಿನಿಂದ ತುಂಬಿ ತುಳುಕುವ ಆ ಭಾರಿ ಕೆರೆ ಬೇಸಿಗೆಯಲ್ಲಿ ಅಲ್ಲಿನ ಹೆಚ್ಚಿನ ಜನರಿಗೆ ನೀರಿನ ಮೂಲವಾಗಿತ್ತು... ಅಲ್ಲಿ ಚನಿಯ ಮೀನು ಹಿಡಿಯುತ್ತಿದ್ದ... ಹಿಡಿದ ಮೀನನ್ನು ಮಾರಿ, ಕೆಲವೊಮ್ಮೆ ಕೂಲಿಗೆ ಹೋಗಿ ಜೀವನ ಸಾಗಿಸುತ್ತಿದ್ದ ಚನಿಯ...ಊರಿನ ಕೆರೆಯಾದ್ದರಿಂದ ಯಾರು ಬೇಕಾದರೂ ನೀರು ಉಪಯೋಗಿಸಬಹುದಿತ್ತು... ವರ್ಷಕ್ಕೊಮ್ಮೆ ಭಟ್ಟರು ಆ ಕೆರೆಯನ್ನು ಸ್ವಚ್ಚ ಗೊಳಿಸಿ ಊರಿನ ಜನರ ಉಪಯೋಗಕ್ಕೆಂದು ಅಲ್ಲಿಂದ ನೀರು ಸರಬರಾಜಿಗೂ ವ್ಯವಸ್ಥೆ ಮಾಡಿದ್ದರು.. ಅಲ್ಲಿ ಮೀನು ಸಾಕುವ ಕೆಲಸ ಮಾಡುತ್ತಿದ್ದುದು ಚನಿಯ... ಮೀನುಗಳಿಂದಾಗಿ ನೀರೂ ಸ್ವಚ್ಚ ವಾಗಿರುತ್ತದೆ ಎಂದು ತಿಳಿದಿದ್ದ ಭಟ್ಟರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು...

ಮನೆಗೆ ಬಂದಿದ್ದ ಮಗಳಿಗೆ ಭರ್ಜರಿ ಮೀನಿನ ಭೋಜನ ಉಣಬಡಿಸಿದ್ದ ಚನಿಯ ಆಕೆಯನ್ನು ವಾಪಸು ಊರಿಗೆ ಕಳಿಸಿ ಆಕೆಯ ಮನೆಯಲ್ಲೇ ಎರಡು ದಿನ ಇದ್ದು ವಾಪಸು ಬಂದಿದ್ದ... ವಾಪಸು ಮನೆಗೆ ಬಂದ ಚನಿಯನಿಗೆ ಅದ್ಯಾಕೋ ಮೂರು ದಿನಗಳ ಹಿಂದೆ ಭಟ್ಟರ ಜೊತೆ ಆಡಿದ್ದ ಜಗಳ ನೆನಪಾಯಿತು.. ಅದ್ಯಾವುದೋ ಆಲೋಚನೆಯಲ್ಲಿ , ಸೋಲ್ಪವೇ ಸ್ವಲ್ಪ ಕುಡಿದಿದ್ದ ಮತ್ತಿನಲ್ಲಿ ತಾನು ಭಟ್ಟರಿಗೆ ಬೈದಿದ್ದು , ಭಟ್ಟರು ಸಿಟ್ಟಿನಿಂದ ಕುದಿಯುತ್ತಾ ಸಾಗಿದ್ದು.. ಎಲ್ಲವೂ ನೆನಪಾಗತೊಡಗಿತು... ತಾನು ಮಾಡಿದ್ದು ತಪ್ಪಲ್ಲವೇ.? ಭಟ್ಟರಿಗೆ ತಾನು ಬೈಯಬಹುದಿತ್ತೆ... ಅವರೇನಾದರೂ ಶಾಪ ಹಾಕಿಬಿಟ್ಟರೆ... ಅದ್ಯಾಕೋ ಚನಿಯ ಹೆದರಿಕೆಯಿಂದ ನಡುಗತೊಡಗಿದ... ಛೆ !! ಈ ಕಲಿಗಾಲದಲ್ಲಿ ಅದ್ಯಾವ ಬ್ರಾಹ್ಮಣ , ಅದ್ಯಾವ ಶಾಪ? ತನ್ನಷ್ಟಕ್ಕೆ ತಾನೆ ಸಮಾಧಾನ ಹೇಳಿಕೊಂಡು ಮೀನು ಹಿಡಿಯಲು ಕೆರೆಯತ್ತ ಸಾಗಿದ... ಒಂದು ಘಂಟೆ , ಎರಡು ಘಂಟೆ ಉಹುಂ..ಎಷ್ಟು ಹೊತ್ತಾದರೂ ಒಂದೇ ಒಂದು ಮೀನು ಗಾಳಕ್ಕೆ ಸಿಕ್ಕಿಬೀಳಲಿಲ್ಲ... ಊರಿಗೆ ಕುಡಿಯುವ ನೀರು ಒದಗಿಸುವ ಕೆರೆಯಾದ್ದರಿಂದ ಗಲೀಜು ಮಾಡುವಂತಿಲ್ಲ... ಒಂದರ್ಧ ಗಂಟೆಯೊಳಗೆ ಮೀನಿನ ಬುಟ್ಟಿ ತುಂಬಿಸಿ ಬಿಡುತ್ತಿದ್ದ ಚನಿಯನಿಗೆ ಇವತ್ತು ಗಂಟೆಗಟ್ಟಲೆ ಕಾದರೂ ಒಂದೇ ಒಂದು ಮೀನು ಸಿಗದೇ ಇದ್ದಿದ್ದು ಅಚ್ಚರಿ ಮೂಡಿಸಿತು.. ಅದೇನೇನೋ ಆಲೋಚನೆಗಳು ಬರತೊಡಗಿದವು...ಚನಿಯನಿಗೆ ಭಯ ಹೆಚ್ಚಾಗ ತೊಡಗಿತು.. ಇಲ್ಲ ಇದು ಭಟ್ಟರ ಶಾಪವೇ ಇರಬೇಕು.. ಆವತ್ತು ಸಿಟ್ಟಿನಿಂದ ಹೊರಟು ಹೋದ ಭಟ್ಟರ ಮುಖ ನೆನಪಾಯಿತು...ಇನ್ನು ನನಗೆ ಒಳ್ಳೆಯದಾಗದು... ಈಗಲೇ ಹೋಗಿ ಭಟ್ಟರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು... ಹಾಗಂತ ನಿರ್ಧರಿಸಿದವನೆ ನಡುಗುವ ಕಾಲುಗಳೊಂದಿಗೆ ಚನಿಯ , ಭಟ್ಟರ ಮನೆ ಕಡೆ ದೌಡಾಯಿಸತೊಡಗಿದ... ದೂರದಿಂದ ಇದನ್ನು ಗಮನಿಸುತ್ತಿದ್ದ ಭಟ್ಟರು , ನಿನ್ನೆ ತಾನೆ ಪಕ್ಕದ ಊರಿನಿಂದ ಹನೀಫ ನನ್ನು ಕರೆಸಿ ಕೆರೆಯಲ್ಲಿದ್ದ ಎಲ್ಲ ಮೀನುಗಳನ್ನು ಹಿಡಿಸಿದ್ದು ಯಾರಿಗೂ ಗೊತ್ತಾಗಲಿಲ್ಲವೆಂದು ಒಳಗೊಳಗೇ ಗಹಗಹಿಸಿ ನಗತೊಡಗಿದರು...!!!