Sunday, May 22, 2016

ಗಾಂಧೀಜಿ ಯವರನ್ನು ಕೊಂದಿದ್ದು ಯಾರು ?

ಗಾಂಧೀಜಿ  ಯವರನ್ನು ಕೊಂದಿದ್ದು ಯಾರು ? ಈಗ ಈ ಪ್ರಶ್ನೆ ಕೇಳಿದರೆ ಎಲ್ ಕೆ ಜಿ ಓದುವ ಮಕ್ಕಳೂ ನಕ್ಕುಬಿಡುತ್ತಾರೆ .. ಉತ್ತರ ಎಲ್ಲರಿಗೂ ಗೊತ್ತಿದೆ .. ನಾಥೂರಾಮ್ ಗೋಡ್ಸೆ ೩೦ನೇ ಜನವರಿ ೧೯೪೮ ಸಂಜೆ ೫ ಗಂಟೆ ೧೭ ನಿಮಿಷಕ್ಕೆ ಇಟಲಿ ತಯಾರಿತ ಬೆರೆಟ್ಟಾ ಪಿಸ್ತೂಲಿನಿಂದ ಗುಂಡು ಹೊಡೆದು ಸಾಯಿಸಿದ ..


ಆದರೆ ಈ ಬಗ್ಗೆ ಹಲವು ಅನುಮಾನಗಳು ಆಗಲೂ ಇದ್ದವು ಮತ್ತು ಈಗಲೂ ಇವೆ .. ಮೊನ್ನೆಯ ಇಷ್ರತ್ ಜಹಾನ್ ಮತ್ತು ಮಲೆಗಾವ್ ಸ್ಪೋಟದ ಹಲವು ಕೊಂಡಿಗಳು ಬಿಚ್ಚುವುದರೊಂದಿಗೆ ನನ್ನ ಅನುಮಾನ ತಿರುಗಿದ್ದು ಗಾಂಧಿಜಿ ಹತ್ಯೆಯ ಬಗ್ಗೆ .. ಈ ಬಗ್ಗೆ ಇಂಟರ್ನೆಟ್ ನಲ್ಲಿ ಶೋಧಿಸುವಾಗ ಕೆಲವು ಸ್ಪೋಟಕ ಮಾಹಿತಿಗಳು ದಕ್ಕಿದವು.. ಅವನ್ನು ಈ ಬರಹದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇನೆ ..


೩೦ನೆ ಜನವರಿ ೧೯೪೮ ಸಂಜೆ ೫ ಗಂಟೆ ೧೭ ನಿಮಿಷಕ್ಕೆ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಎಂಬಾತ ಬೆರೆಟ್ಟಾ ಮ್ ೯೩೪ ಎಂಬ   ಇಟಾಲಿಯನ್ ಪಿಸ್ತೂಲಿ ನಿಂದ ಗುಂಡು ಹಾರಿಸಿ ಕೊಂದ !! ಗುಂಡು ಹೊಡೆದ ೧ ಗಂಟೆಯೊಳಗೆ ಗಾಂದಿಜಿಯವರ ಪ್ರಾಣ ಪಕ್ಷಿ ಹಾರಿ ಹೋಯಿತು .. ಆದರೆ ಈಗ ನಿಜಾಮ್ಶಕ್ಕೆ ಬರೋಣ .. ಗಾಂಧೀಜಿಯವರ ಕೊಲೆ ಕೇಸಿನ FIR ಮೇಲೆ ಒಂದು ಸಾರಿ ಬಾರಿ ಕಣ್ಣು ಹಾಯಿಸಿದರೆ ಹಲವು ಅನುಮಾನಗಳು ಹುಟ್ಟುತ್ತವೆ ..






ಮೇಲಿನ ಚಿತ್ರದಲ್ಲಿರುವುದು FIR ೩೦೪ IPC  ಪ್ರತಿ ಮತ್ತು ಅದರ ಸಾರಾಂಶ .. ಅದರಲ್ಲಿ ಹೇಳಿರುವಂತೆ ೩೦ನೆ ಜನವರಿ ೧೯೪೮ ಸಂಜೆ ೫ ಗಂಟೆ ೪೫ ನಿಮಿಷಕ್ಕೆ ಇದನ್ನು ದಾಖಲಿಸಲಾಗಿದೆ !! ಗೋಡ್ಸೆ ಗುಂಡು ಹೊಡೆದದ್ದು ೫ ಗಂಟೆ ೧೭ ನಿಮಿಷಕ್ಕೆ..  ದೊರಕುವ ಮಾಹಿತಿ ಪ್ರಕಾರ ಗಾಂಧೀಜಿ ಯವರು ಗುಂಡು ಹೊಡೆದ ಕೂಡಲೇ ಪ್ರಾಣ ತ್ಯಜಿಸಲಿಲ್ಲ .. ಆದರೆ  FIR ಬರೆಸಿದ್ದು ೫ ಗಂಟೆ ೪೫ ನಿಮಿಷಕ್ಕೆ !!!!! ಇದು ನನ್ನ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ .. ಗಾಂಧೀಜಿ ಯವರನ್ನು ಕೊಂದದ್ದು ಗೋಡ್ಸೇನಾ ಅಥವಾ ಒಂದು ವ್ಯವಸ್ತಿತ ಸಂಚು ಮೊದಲೇ ರೂಪಿಸಲಾಗಿತ್ತೆ ?


ಗಾಂಧೀಜಿಯವರನ್ನು ಕೊಲ್ಲಲು ಉಪಯೋಗಿಸಿದ ಪಿಸ್ತೂಲು ಬೆರೆಟ್ಟಾ M೧೯೩೪  ಮತ್ತು ಅದರ ನೋಂದಣಿ ಸಂಖೆ ೬೦೬೮೨೪.. ಇವತ್ತಿನ ವರೆಗೂ ಗೊತ್ತಾಗದ ಒಂದು ಅಂಶವೆಂದರೆ ಈ ಪಿಸ್ತೂಲಿನ ವಾರಸುದಾರರು ಯಾರು ಎಂಬುದು .. ಇರಲಿ , ಗಾಂಧೀಜಿಯವರ ಪೋಸ್ಟ್ ಮಾರ್ಟಂ ಆದಾಗ ಅವರ ದೇಹದಲ್ಲಿ ಇದ್ದ ಗುಂಡುಗಳಿಗೆ ಮತ್ತು ಪಿಸ್ತೂಲಿನಲ್ಲಿ ಇದ್ದ ಗುಂಡುಗಳು ಹೋಲುತ್ತಿದ್ದವೆ ? ಉಹುಂ !!! ಅವರ ಪೋಸ್ಟ್ ಮಾರ್ಟಂ ಮಾಡೇ ಇಲ್ಲ ಅನ್ನುವ ವಿಷಯ ಮಾತ್ರ ಬೆಚ್ಚಿಬೀಲಿಸುವಂಥಾ ದ್ದು  !! ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬೆರೆಟ್ಟಾ ಅನ್ನುವ ಈ ಪಿಸ್ತೂಲನ್ನು ರಾಯಲ್ ಇಟಾಲಿಯನ್  ಆರ್ಮಿ ಉಪಯೋಗಿಸಿತ್ತು ... ಇದರಲ್ಲಿ ೭ ಸುತ್ತು ಗುಂಡು ಹಾರಿಸಬಹುದಿತ್ತು ! ಹಾರಿಸಿದ ಮೂರು ಗುಂಡುಗಳನ್ನು ಪಿಸ್ತೂಲಿನಲ್ಲಿ ಉಳಿದ ೪ ಗುಂಡುಗಳಿಗೆ ಹೋಲಿಸಿ ನೋಡಬಹುದಿತ್ತು  ಆದರೆ ಉಳಿದ ಆ ೪ ಗುಂಡುಗಳು ಏನಾದವು ಅನ್ನುವುದು ಮಾತ್ರ ಎಲ್ಲೂ ಸ್ಪಷ್ಟವಾಗಿಲ್ಲ !! ಮತ್ತೆ ಅದೇ ಪ್ರಶ್ನೆ ಉದ್ಭವಿಸುತ್ತದೆ , ಗಾಂಧೀಜಿಯವರ ಸಾವಿಗೆ ಕಾರಣವೇನು? ಮತ್ತು ಎಷ್ಟು ಹೊತ್ತಿಗೆ ಈ ಹೇಯ ಕೃತ್ಯ ಯೆಸಗಲಾಯಿತು??





ಹತ್ಯೆಯ ಮರುದಿನ ನ್ಯೂ ಯಾರ್ಕ್ ಟೈಮ್ಸ್ ಅನ್ನುವ ಪತ್ರಿಕೆಯಲ್ಲಿ ಬಂದ ಸುದ್ದಿ .. ಹೇ ರಾಮ್ ಅಂದಿದ್ದೇ , ಅಥವಾ ನೀರು ಬೇಕು ಅಂದಿದ್ದೆ ?








ಅನುಮಾನಗಳು ಬಲಗೊಳ್ಳುವಾಗಲೆ ಇನ್ನು ಕೆಲವು ನಿಘೂಡತೆಗಳು ಎದ್ದು ನಿಲ್ಲುತ್ತವೆ ! ಗಾಂಧೀಜಿ ಯವರಂಥ ಮಹಾನ್ ನಾಯಕನನ್ನು ಹತ್ಯೆಗೈದಾಗಿನ ಚಾರ್ಜ್ ಶೀಟ್ ಕಾಣೆಯಾಗಿದೆ !! ಹೌದು , ಅವರ ಹತ್ಯೆಯ ಚಾರ್ಜ್ ಶೀಟ್ ಅನ್ನು ಇವತ್ತು ನೋಡುವುದು ಸಾಧ್ಯವಿಲ್ಲ .. ಅನೇಕ ದಾಖಲೆಗಳಂತೆ ಅದೂ ಕಾಣೆಯಾಗಿದೆ !! ಒಬ್ಬ ಮಹಾನ್ ನಾಯಕನ ಹತ್ಯೆಯ ಚಾರ್ಜ್ ಶೀಟ್ ಕಾಣೆಯಾಗುವುದು ಎಂದರೇನು ? ಇದನ್ನು ಕಾಣೆಯಾಗಿಸಿದವರು ಯಾರು ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ !!
ಗೋಡ್ಸೆ ಗುಂಡು ಹೊಡೆದಾಗ ಗಾಂಧೀಜಿ ಯವರು ಇನ್ನೂ ಉಸಿರಾಡುತ್ತಿದ್ದರು .. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಬಿರ್ಲಾ ಹೌಸ್ ನ ವಸತಿ ಗೃಹಕ್ಕೆ  ಏತಕ್ಕೆ ಕರೆದೊಯ್ಯಲಾಯಿತು ?




ಅಲ್ಲಿ ಗಾಂಧೀಜಿ ಯವರನ್ನ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ತೆಯೇ ಇರಲಿಲ್ಲ ಎಂದರೆ ಯಾರಾದರೂ ನಂಬುವ ವಿಷಯವೇ ? ೧೯೪೮ ರಲ್ಲಿ ಸೈಂಟ್ ಸ್ಟೀಫನ್ಸ್ ಆಸ್ಪತ್ರೆ ಬಿರ್ಲಾ ಹೌಸ್ ನಿಂದ ಇದ್ದಿದ್ದು ೧೦ ಕಿಲೋ ಮೀಟರು ಅಂತರದಲ್ಲಿ .. ಆಸ್ಪತ್ರೆ ಗೆ ಸೇರಿಸುವುದು ಕಷ್ಟದ್ದಾಗಿರಲಿಲ್ಲ !!
ಇಟಾಲಿಯನ್ ಪಿಸ್ತೂಲು , ಪೋಸ್ಟ್ ಮೊರ್ಟಮ್ ಮಾಡದೆ ಇದ್ದಿದ್ದು , ೫ ಗಂಟೆ ೪೫ ನಿಮಿಷಕ್ಕೆ FIR ಬರೆದಿದ್ದು , ಆಸ್ಪತ್ರೆಗೆ ಸಾಗಿಸದೆ ಇದ್ದಿದ್ದು , ಚಾರ್ಜ್ ಶೀಟ್ ಕಾಣೆಯಾಗಿದ್ದು  ಎಲ್ಲವೂ ನಿಗೂಢ !!


ಗಾಂಧಿಜಿ ಯವರನ್ನು ಕೊಂದ ಗೋಡ್ಸೆ ಯನ್ನು ಅಲ್ಲಿಂದ ಓಡಿ ಹೋಗದಂತೆ ಹಿಡಿದದ್ದು ಬೇರೆ ಯಾರೂ ಅಲ್ಲ ಟಾಮ್ ರೀನೆರ್ ಅನ್ನುವ ಅಮೇರಿಕಾದ ಪ್ರಜೆ !! ಆತ ಈ ಹತ್ಯೆಯ ಕೆಲವು ಸಮಯದ ಹಿಂದಷ್ಟೇ ಭಾರತಕ್ಕೆ ಬಂದಿದ್ದ ... ಆತ ಗೋಡ್ಸೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ , ಇದು ಮೆಚ್ಚಬೇಕಾದ್ದೆ !! ಆದರೆ ಆತ ಅಲ್ಲಿಗೆ ಯಾಕೆ ಬಂದಿದ್ದ ?


ಕೆಲವು ಪತ್ರಿಕೆಗಳಲ್ಲಿ ಹತ್ಯೆಯ ನಂತರ ಈ ಬಗ್ಗೆ ಸುದ್ದಿಗಳು ಪ್ರಸಾರವಾದವು .. ಹತ್ಯೆಗಯ್ಯುವಾಗ ಗೋಡ್ಸೆ ಹೇಗಿದ್ದ ಅನ್ನುವುದನ್ನ ನ್ಯೂ ಯಾರ್ಕ್ ಟೈಮ್ಸ್ ಮತ್ತು ದಿ ಹಿಂದು ಅನ್ನುವ ಪತ್ರಿಕೆಗಳು ಹೀಗೆ ಬರೆದಿದ್ದವು .. ಅದು ಹೇಗೆ ಆತನ ಬಟ್ಟೆಗಳು ಒಬ್ಬೊಬ್ಬರಿಗೆ ಒಂದೊಂದು ಥರ ಕಂಡವೋ ದೇವರೇ ಬಲ್ಲ !!


















ಟೈಮ್ಸ್ ಆಫ್ ಇಂಡಿಯಾ ಅನ್ನುವ ರದ್ದಿ ಪತ್ರಿಕೆಯಂತೂ ಗಾಂಧೀಜಿ ಯವರಿಗೆ ೪ ಗುಂಡು ಹಾರಿಸಲಾಯಿತು ಅಂತ ಬರೆಯಿತು !!




ಮುಂದುವರಿಯುವುದು .....


ಕೃಪೆ : https://twitter.com/loosebool







ಗೋರೆ ಉವಾಚ :   ಹುಟ್ಟುಹಬ್ಬದ ದಿನ ಕೇಕ್ ಮೇಲೆ ಇಡುವ ಮೇಣದ ಬತ್ತಿಗಳಿಗೆ ಕೇಕ್ ಗಿಂತ ಹೆಚ್ಚಿನ ದುಡ್ಡು ಖರ್ಚಾದರೆ ನಿಮಗೆ ವಯಸ್ಸಾಯಿತು ಎಂದರ್ಥ !!!



Sunday, August 9, 2015

ಅರ್ಥ - ಅಪಾರ್ಥ --- ವ್ಯತ್ಯಾಸ ಬಹಳ !!!

"ಬಾ ಇವತ್ತು ಎರಡು ಪೆಗ್ಗು ಹಾಕುವ " ಕುಮಾರ ಯಾಕೋ ಬೇಸರದಲ್ಲಿದ್ದ .. ಜೀವನ ಅಂದ್ರೆ ಅಷ್ಟೇ ತಾನೆ.. ಕೆಲವೊಮ್ಮೆ ಖುಷಿ , ಕೆಲವೊಮ್ಮೆ ದುಖ್ಖ್ಹ .. ಕೆಲವೊಮ್ಮೆ ಜಯ , ಮತ್ತೆ ಕೆಲವೊಮ್ಮೆ ಅಪಜಯ .. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವವ , ಸ್ತಿತಪ್ರಜ್ಞ , ಯಾವತ್ತೂ ವಿಜಯಿಯಾಗುತ್ತಾನೆ . ಆದರೆ ಈಗ ಹಾಗಿಲ್ಲವಲ್ಲ .. ಚಿಕ್ಕಂದಿನಿಂದಲೇ ನಮ್ಮ ಮಕ್ಕಳನ್ನು ನಾವು ಸ್ಪರ್ಧೆಗೆ ಒಡ್ಡುತ್ತೇವೆ .. ಗೆಲ್ಲಲೇ ಬೇಕು ! ಸೋತರೆ ಯಾವುದಕ್ಕೂ ಪ್ರಯೋಜನವಿಲ್ಲ ಎನ್ನುವ ಭಾವನೆ ಮೂಡಿಸಿಬಿಡುತ್ತೇವೆ ..

ಆದರೆ ಕುಮಾರ ಅಂಥವನಲ್ಲ .. ಖುಷಿಯಾದಾಗ ತುಂಬಾ ನಗುತ್ತಾನೆ .. ಸೋತಾಗ ಒಮ್ಮೆ ದುಖ:.. ಎರಡು ಪೆಗ್ಗು ಏರಿಸುತ್ತಾನೆ.. ಅಷ್ಟೇ ಮರುದಿವಸ ಮತ್ತೆ ಅದೇ ಕುಮಾರ.. ಸೋತ ದುಕ್ಖವಿಲ್ಲ  , ಗೆದ್ದ ಖುಷಿಯಿಲ್ಲ ..

"ಸರಿ ನಡಿ "  ನಾನೂ ಆತನ ಜೊತೆ ಹೆಜ್ಜೆ ಹಾಕಿದೆ .. ಸ್ವಲ್ಪ ದೂರ ನಡೆದಾಗ ಸಿಕ್ಕಿದ್ದೇ ಸಪ್ತಗಿರಿ ಬಾರ್ ಮತ್ತು ರೆಸ್ಟೋರಂಟ್ ..
ಇಬ್ಬರೂ ಒಳ ಹೋಗಿ ಒಂದು ಟೇಬಲ್ ಮುಂದೆ ಕೂತೆವು .. ಇಲ್ಲಿ ಕುಡಿದರೆ ಬಹುಶ ಏಳು ಬಣ್ಣಗಳೂ ಕಾಣಿಸುತ್ತವೋ , ಅಥವಾ ಸಪ್ತ ಸಾಗರಗಳನ್ನು ದಾಟಿದ ಖುಷಿ ಸಿಗುತ್ತದೋ , ಸಪ್ತ ಜನ್ಮಗಳ ಪಾಪ ಕಳೆದು ಪಾವನರಾಗುತ್ತೆವೋ? ಸಪ್ತಗಿರಿ ಅಂತ ಹೆಸರೀತ್ತಿದ್ದಾರಲ್ಲ .. ತಲೆಯಲ್ಲಿ ಏನೇನೊ ಯೋಚನೆಗಳು ..  "ಎರಡು ಪೆಗ್ , ಒಂದು ಬೊಟ್ಟಲ್ ನೀರು," ಕುಮಾರ ಅಲ್ಲಿದ್ದ ಸರ್ವರ್ ಗೆ ಹೇಳುತ್ತಿದ್ದ ..

ಒಮ್ಮೆ ಸುತ್ತಲೂ ನೋಡಿದೆ .. ನಮ್ಮ ಪಕ್ಕದಲ್ಲೇ ಇಬ್ಬರು ಹುಡುಗರು ಕೂತಿದ್ದರು .. ಒಬ್ಬ ಬಹುಶ ೨೦-೨೫ ವಯಸ್ಸಿನವ , ಇನ್ನೊಬ್ಬ ಬಹುಶ ೩೮-೪೦ ವರ್ಷ ದವನಿರಬಹುದು .. ಇಬ್ಬರ್ರೂ ವಿಸ್ಕಿ ಕುಡಿಯುತ್ತಿದ್ದರು .. ಅದೇನೋ ಮಾತಾಡಿಕೊಂಡು ನಗುತ್ತಿದ್ದರು .. ಅಷ್ಟರಲ್ಲಿ ನಮ್ಮ ಮುಂದೆ ಎರಡು ಗ್ಲಾಸು ಬಂದಾಗಿತ್ತು .. ನೀರು ಬೆರೆಸಿ ಗ್ಲಾಸು ತುಟಿಗಿತ್ತೆವು .. ಆಗ ಕೆಳಿಸಿತ್ತದು ..

ಪಕ್ಕದಲ್ಲೇ ಕೂತಿದ್ದ ಇಬ್ಬರಲ್ಲಿ ಒಬ್ಬ ಹೇಳುತ್ತಿದ್ದ  " ನೀನೇನೆ ಹೇಳು .. ನಿನ್ನ ಅಮ್ಮನಷ್ಟು ಚೆಂದದ ಹುಡುಗಿಯನ್ನು ನಾನು ನೋಡೇ ಇಲ್ಲ , ಅವಳನ್ನು ನೋಡಿದಾಗಲೆಲ್ಲ ಮುತ್ತಿಕ್ಕಬೇಕು ಅನ್ನಿಸ್ತದೆ .." ತುಟಿಗಿಟ್ಟಿದ್ದ ಗ್ಲಾಸು ತೆಗೆದು ಮೆಲ್ಲನೆ ಕೆಳಗಿಟ್ಟೆ ..
ಅವರನ್ನು ನೋಡುವ ಎಂದು ತಿರುಗ ಹೋದಾಗ ಕುಮಾರ ತಟ್ಟನೆ ತಡೆದ .. "ಬೇಡ , ಅದ್ಯಾರೋ ಬೇವರ್ಸಿಗಳು ಅಂತ ಅನ್ನಿಸ್ತದೆ " ಕುಮಾರ ಕೆಟ್ಟದಾಗಿ ಮುಖ ಹಿಂಡಿದ .. ವ್ಹಿಸ್ಕಿಯ ಘಾಟಿಗೋ , ಇಲ್ಲಾ ಅವರ ಮಾತಿಗೋ ಗೊತ್ತಾಗಲಿಲ್ಲ !!

"ಮೊನ್ನೆ ನಿನ್ನ ಜೊತೆ ಶಾಪಿಂಗ್ ಹೋಗಿದ್ಳಲ್ಲ , ಆ ಚೂಡಿ ನೋಡಿದ್ರೆ ಕಾಲೇಜ್ ಹುಡುಗೀನೆ .. ಐ ಲವ್ ಯುವರ್ ಮುಮ್ "  ಹಾಗಂತ ಹೇಳಿದವನೇ ಗಟಗಟನೆ ಗ್ಲಾಸ್ ಮುಗಿಸಿಬಿಟ್ಟ !! ಇದೆಂಥ ಕಾಲ? ಒಬ್ಬನ ಅಮ್ಮನ ಬಗ್ಗೆ ಇಷ್ಟು ಕೆಟ್ಟ ಮಾತೇ ? ಅದೂ ಆತನ ಎದುರಿಗೆ ? ಇದ್ಯಾವ ಮಗ ಇವನು ? ನಾನಾಗಿದ್ರೆ ಇವತ್ತು ಕೊಲೆಯೇ ನಡೆದು ಹೋಗುತ್ತಿತ್ತು .. ನನಗೆ ನಂಬಲಿಕ್ಕೆ ಆಗಲಿಲ್ಲ .. ಕಲಿಯುಗ ಅಂದರೆ ಇದೇನಾ? ನಮ್ಮ ಹಿರಿಯರು ಹೆಳಿಕೊಟ್ಟ ಸಂಸ್ಕೃತಿ ಎಲ್ಲಿ ಹೋಯಿತು? ಬಾರಿನ ಜೊತೆಗೆ ಅದು ಪೈಪೋಟಿ ನಡೆಸಲಾಗದೇ ಸತ್ತು ಹೋಯಿತೇ?

ಮೆಲ್ಲನೆ ತಿರುಗಿ ನೋಡಿದೆ .. ಇಬ್ಬರೂ ಇನ್ನೊಂದು ಗ್ಲಾಸು ತುಂಬಿಸಿ ಕುಡಿಯಲು ತಯಾರಾಗುತ್ತಿದ್ದರು ....  ನಾನೂ ಕುಮಾರ ಇವರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲವೆಂದು ನಮ್ಮ ಕಾರ್ಯಕ್ರಮ ಮುಂದುವರೆಸಿದೆವು .. ಆದರೆ ನಮ್ಮ ಕಿವಿಗೆ ಮದ್ಧ್ಯೆ ಮಧ್ಯೆ ಅವರ ಮಾತು ಕೇಳಿಸುತ್ತಿತ್ತು .. ಒಬ್ಬ ಯುವಕ ಸುಮ್ಮನೆ ಕೂತಿದ್ದರೆ ಇನ್ನೊಬ್ಬ ಆತನ ಅಮ್ಮನ ಬಗ್ಗೆಯೇ ಮಾತು.. ಕೊನೆಗೆ ಅವರು ಬಿಲ್ಲು ತರುವಂತೆ ಹೇಳಿದ್ದು ಕೇಳಿಸಿತು .. "ಇವತ್ತು ನಾನು ನಿನ್ನ ಅಮ್ಮನಿಗೆ ಐ ಲವ್ ಯು  ಅಂತ ಹೇಳ್ಬೇಕು .. ತುಂಬಾ ದಿನ ಆಯಿತು ಹೀಗೆ ಅಂದುಕೊಂಡು " ಆತನ ಮಾತಿಗೆ ತಟ್ಟನೆ ತಿರುಗಿ ನೋಡಿದೆ ..ಇನ್ನು ಇವರ ಇಂತಹ ಅಸಹ್ಯ ಮಾತು, ಸಂಬಧಗಳ ಬಗ್ಗೆ ಕೀಳು ಭಾವನೆ ಸಹಿಸಲಾರೆ ಅನ್ನುವಂತೆ ಅವರ ಇನ್ನೊಂದು ಬದಿಯ ಟೇಬಲ್ ನಲ್ಲಿ ಕುಳಿತಿದ್ದವರು ಎದ್ದು ಹೊರ ನಡೆದರು ..  ಹುಡುಗ ಬಿಲ್ಲು ಕಟ್ಟಿ ಎದ್ದು ನಿಂತಿದ್ದ .. ಕಣ್ಣು ಕೆಂಪಾಗಿತ್ತು .. ಬಹುಶ ಈಗ ತಾಳ್ಮೆಯ ಕಟ್ಟೆ ಒಡೆದಿರಬೇಕು .. ಅಮ್ಮನ ಬಗ್ಗೆಯೇ ಈ ರೀತಿ ಮಾತಾಡಿದವನನ್ನ ಇಷ್ಟು ಹೊತ್ತು ಸಹಿಸಿದ್ದೆ ತಪ್ಪು.. "ಯೋಚಿಸಬೇಡ ಬಾರಿಸು ನಾಕು " ನನ್ನ ಮನಸ್ಸು ಕೂಗಿ ಹೇಳುತ್ತಿತ್ತು .. ಆತ ನಿಧಾನಕ್ಕೆ ಎದ್ದು ನಿಂತ .. ಕಣ್ಣು ಕೆಂಪಾಗಿವೆ .. ಇಲ್ಲಿ ಏನೋ ಅನಾಹುತ ನಡೆಯುವುದು ಖಂಡಿತ .. ನಾನು ಮೆಲ್ಲನೆ ಬೆವರತೊಡಗಿದ್ದೆ ..

ನಿದಾನಕ್ಕೆ ಎದ್ದು ನಿಂತ ಆ ಯುವಕ ಎದುರು ಕೂತಿದ್ದ ಮಧ್ಯ ವಯಸ್ಕನಂತೆ ಕಾನುತ್ತಿದ್ದವನನ್ನು ನೋಡಿದ .. "ಐ ಲವ್ ಯುವರ್ ಮಮ್ಮಿ "  ಆತ ಹೇಳಿದ್ದು ಸ್ಪಷ್ಟವಾಗಿ ಕೇಳಿಸಿತ್ತು .. ಏನಾಗುತ್ತಿದೆ ಅನ್ನುವಷ್ಟರಲ್ಲಿ ಆ ಘಟನೆ ನಡೆದು ಹೋಗಿತ್ತು .. ನಾನು ಬಿಟ್ಟ ಕಣ್ಣು ಬಿಟ್ಟು ನೋಡುತ್ತಲೇ ಇದ್ದೆ .
ತನ್ನ ಕುರ್ಚಿಯಿಂದ ಎದ್ದ ಯುವಕ , ಎದುರು ಕೂತಿದ್ದ ಆ ಮಧ್ಯವಯಸ್ಕನ ತೋಳು ಹಿಡಿದ .. ಆಮೇಲೆ ಸ್ವಲ್ಪ ಎತ್ತರಿಸಿದ ಧ್ವನಿಯಲ್ಲಿ   "ಅಪ್ಪಾ , ಇವತ್ತು ತುಂಬಾ ಕುದ್ಡಿದ್ದಿಯಾ ಬಾ ಹೋಗೋಣ ಮನೆಗೆ .. ಅಮ್ಮ ಕಾಯ್ತಿರ್ತಾಳೆ " ಅಂತ ಹೇಳಿ ಆತನನ್ನು ಎಬ್ಬಿಸಿಕೊಂಡು ಹೊರಗೆ ನಡೆದೇ ಬಿಟ್ಟ .. !!
ಕುಮಾರ ಗಹಗಹಿಸಿ ನಗುವ ಸದ್ದು ನಶೆಯಲ್ಲಿ ಕರಗಿ ಹೋಯಿತು !!

ಗೋರೆ ಉವಾಚ :

ಪ್ರತಿಯೊಬ್ಬರ ಅರ್ಧ ಜೀವನವು ತಂದೆ-ತಾಯಿಯನ್ನು ಗೋಳು ಹೊಯ್ಯುವುದರಲ್ಲಿ , ಮತ್ತೆ ಉಳಿದರ್ಧ ಜೀವನವು ಮಕ್ಕಳನ್ನು ಗೋಳು ಹೊಯ್ಯುವುದರಲ್ಲಿ ಮುಗಿದು ಹೋಗಿರುತ್ತದೆ !!!!

Sunday, March 8, 2015

ದೆವ್ವ ಕಥೆಗಳು !!!

ಮುನ್ಸೂಚನೆ !!

ಗಡಿಯಾರದತ್ತ ಕಣ್ಣು ಹಾಯಿಸಿದವನಿಗೆ ಕಂಡಿತ್ತು  ಅದು ಮಧ್ಯ ರಾತ್ರಿ ೧೨ ಗಂಟೆ .. ಗಡಿಯಾರದ ಮುಳ್ಳುಗಳು ಒಂದರ ಮೇಲೆ ಒಂದಿದ್ದವು .. ನನ್ನ ರೂಮಿನ ಬಾಗಿಲು ತೆಗೆದಿದ್ದು ನೋಡಿ ಅಚ್ಚರಿಯಾಯಿತು ನನ್ನ ಪಕ್ಕದಲ್ಲೇ ಕೂತಿದ್ದ ಭಯಾನಕ ಮುಖದ ಮನುಷ್ಯ ನನ್ನು ನೋಡಿ ಬೆಚ್ಚಿ ಬಿದ್ದೆ.. ಭೂತವೇ, ಪ್ರೆತವೆ? ಜೋರಾಗಿ ಕಿರುಚಲೆಂದು ಬಾಯಿ ತೆಗೆದೆ .. ಆದರೆ ಆ ಭಯಾನಕ ಮನುಷ್ಯ ನನ್ನ ಬಾಯಿ ಒಂದು ಕೈ ಯಿಂದ ಮುಚ್ಚಿ ಬಿಟ್ಟ .. ಇನ್ನೊಂದು ಕೈಯ ಭಯಾನಕ ಉದ್ದದ ಉಗುರುಗಳು ನನ್ನ ಗಂಟಲನ್ನು ಸೀಳಿ ಬಿಟ್ಟಿದ್ದವು .. !!

ನನಗೆ ತಟ್ಟನೆ ಎಚ್ಚರವಾಯಿತು !! ಮಂದ ಬೆಳಕಿನಲ್ಲಿ ಗಡಿಯಾರದತ್ತ ನೋಡಿದೆ .. ಸರಿಯಾಗಿ ರಾತ್ರಿ ೧೧ ಗಂಟೆ ೫೯ ನಿಮಿಶ.. ನನ್ನ ರೂಮಿನ ಬಾಗಿಲು ಮೆಲ್ಲನೆ ಕಿರ್ರ್ ಅನ್ನುವ ಶಬ್ದ ದೊಂದಿಗೆ ತೆರೆದುಕೊಂಡಿತ್ತು !!!!

--------------------------------------------------------------------------------------------------------------------------
 ಅಭ್ಯಾಸ !!

ನಾಯಿ, ಬೆಕ್ಕುಗಳನ್ನು  ಜೊತೆಗೆ ಸಾಕಿಕೊಂಡು ಬದುಕಿದ್ದ ನನಗೆ ಅವುಗಳು ಬಾಗಿಲು ಬಡಿಯುವ , ಪರಚುವ ಶಬ್ದಗಳು ಸಾಮಾನ್ಯವಾಗಿತ್ತು !! ಈಗ ಒಬ್ಬನೇ ಇದ್ದರೂ ರಾತ್ರಿಯಲ್ಲಿ ಬಾಗಿಲು ಬಡಿಯುವ, ಪರಚುವ ಶಬ್ದ ನನಗೆ ಭಯ ಉಂಟುಮಾಡುವುದಿಲ್ಲ !!!

-------------------------------------------------------------------------------------------------------------------------

ನಾನು ನನ್ನ ಮನೆಯ ಬಾಗಿಲು ತೆರೆದದ್ದಕ್ಕಿಂತ ಮುಚ್ಚಿದ್ದೆ ಹೆಚ್ಚು.. ಮನೆಯಲ್ಲಿ ಇರುವುದು ನಾನೊಬ್ಬನೆ !!!

-----------------------------------------------------------------------------------------------------------------------

ಗೋರೆ ಉವಾಚ :

ಮಲಗುವ ಮುನ್ನ ದೆವ್ವ ಗಳ ಬಗ್ಗೆ ಹೆದರುವ ಅಗತ್ಯವಿಲ್ಲ .. ದೆವ್ವ ಅನ್ನುವುದು ಇಲ್ಲವೇ ಇಲ್ಲ. ಬೇಕಾದರೆ ಒಂದು ಬಾರಿ ಮಂಚದ ಮೇಲೆ, ಟೇಬಲ್ ಹಿಂದುಗಡೆ , ಟೇಬಲ್ ಕೆಳಗೆ, ಕನ್ನಡಿಯ ಹಿಂದೆ ಎಲ್ಲ ನೋಡಿ ದೆವ್ವ ಇಲ್ಲವೆಂದು ಖಾತರಿಪಡಿಸಿಕೊಳ್ಳಿ ! ನಿಮಗೆ ದೆವ್ವ ಖಂಡಿತಾ ಕಾಣಿಸದು!! ಆದರೆ ಯಾವತ್ತೂ ಮಂಚದ ಕೆಳಗೆ ನೋಡಲು ಹೋಗಬೇಡಿ .. ದೆವ್ವವನ್ನು ನೋಡುವುದು ಅದಕ್ಕೆ ಇಷ್ಟವಾಗುವುದಿಲ್ಲ!!!!

Sunday, October 26, 2014

ದೀಪಾವಳಿ ಮತ್ತು ಬುದ್ಧಿಜೀವಿಗಳು !!!

ದೀಪಾವಳಿ ದಿನ.. ಅದೊಂದು ಅಭಿಯಾನ ಕೈಗೊಂಡಿದ್ದ ಕೆಲವಷ್ಟು ಮಂದಿ ಕಣ್ಣಿಗೆ ಬಿದ್ದರು..

"ಪಟಾಕಿ ಸುಡಬೇಡಿ .. ಇದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗುತ್ತದೆ.. ನಾವು ಮುಂದಿನ ಪೀಳಿಗೆಯ ಜನರಿಗೆ ಬದುಕಲು ಉತ್ತಮ ವಾತಾವರಣ ನಿರ್ಮಿಸಿಲಿಕ್ಕಾದರೂ ಈ ಪಟಾಕಿಗಳಿಗೆ ದೀಪಾವಳಿಯ ದಿವಸ ಅಂತ್ಯ ಹಾಡಬೇಕು .."
ಮನೆ ಮನೆಗೂ ತೆರಳಿ ಜನರಿಗೆ ಅವರು ತಿಳಿಹೆಳುತ್ತಿದ್ದರು..

ಮಧ್ಯಾನ್ನದ ಹೊತ್ತು.. ಗೆಳೆಯನನ್ನು ಬಸ್ಸ್ಟ್ಯಾಂಡ್ ತನಕ ಕಳುಹಿಸಿ ವಾಪಸು ಬರುತ್ತಿದ್ದಾಗ ಮತ್ತೆ ಅವರೇ ನನ್ನ ಕಣ್ಣಿಗೆ ಬಿದ್ದರು.. ಹೋಟೆಲೊಂದರಲ್ಲಿ ಗಡದ್ದಾಗಿ ಕೋಳಿ , ಕುರಿಯ ಊಟ ಮಾಡುತ್ತಿದ್ದರು ... ಒಂದು ಕ್ಷಣ ಅಲ್ಲೇ ನಿಂತೆ .. ಊಟ ಮುಗಿಸಿದ ಅವರಲ್ಲೊಬ್ಬ ಹೊರಗೆ ಬಂದು ಸಿಗರೇಟು ಹಚ್ಚಿಕೊಂಡ .. ಅದ್ಯಾಕೋ ಇವೆಲ್ಲವೂ ನನಗೆ ವಿಚಿತ್ರ ವಾಗಿ ಕಾಣತೊಡಗಿತ್ತು .. ಜನರಿಗೆ ಪಟಾಕಿಯ ಬಗ್ಗೆ ತಿಳಿಹೇಳುವ ಇವನಿಗೆ ತನ್ನ ಆರೋಗ್ಯದ ಬಗ್ಗೆಯೇ ಚಿಂತೆ ಇಲ್ಲವೇ ?
ಆತನನ್ನು ಮಾತನಾಡಿಸೋಣವೆಂದು ಆತನತ್ತ ಹೆಜ್ಜೆ ಹಾಕಿದೆ..

ನನ್ನನ್ನು ನೋಡಿದ ಆ ನಾಲ್ಕು ಮಂದಿಯಲ್ಲೊಬ್ಬ ನನಗೆ ಹಾಗೂ ಅಲ್ಲೇ ಇದ್ದ ಕೆಲವೊಂದು ಮಂದಿಗೆ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ವಿವರಿಸತೊಡಗಿದ .. ಪಟಾಕಿಯಿಂದ ಹೊರಸೂಸಿ ಗಾಳಿ, ಮಣ್ಣು ಸೇರುವ  ಇಂಗಾಲದ ಬಗ್ಗೆ ಅತೀ ಉತ್ತಮವಾಗಿ ಹೇಳಿದ .. ಆತನನ್ನು ಒಂದು ಕ್ಷಣ ತಡೆದು ಹೇಳಿದೆ, "ನನ್ನದೊಂದು ಪ್ರಶ್ನೆಯಿದೆ ನಿಮಗೆ"..

"ಕೇಳಿ ಸಾರ್"

"ಪಟಾಕಿ ಗಿಂತ ಹೆಚ್ಚು ಇಂಗಾಲ ದ ಪರಿಣಾಮ ಮಾಂಸಾಹರದಿಂದ ಉಂಟಾಗುತ್ತದೆ ಅಂತ ಕೇಳಿದ್ದೆ ಹೌದಾ?"..

ಆತ ಒಂದು ಕ್ಷಣ ದುರುಗುಟ್ಟಿ ನೋಡಿದ ..

"ಇರಬಹುದು ಸಾರ್.. ಆದರೆ ಈ ಮಾಂಸಾಹಾರ ಅನ್ನೋದು ವಿಶ್ವ ದಾದ್ಯಂತ ಇದೆ .. ಅದನ್ನು ನಿಲ್ಲಿಸುವುದು ಕಷ್ಟ .. ಹಾಗಾಗಿ ನಮ್ಮಿಂದ ಆಗುವ ಚಿಕ್ಕ ಪ್ರಯತ್ನ ನಾವು ಮಾಡುತ್ತಿದ್ದೇವೆ .. ದೀಪಾವಳಿ ಸಮಯದಲ್ಲಿ ಪಟಾಕಿ ಉಪಯೋಗಿಸದಂತೆ , ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಉಪಯೋಗಿಸದಂತೆ , ಚೌತಿಯ ಸಂದರ್ಭ ಗಣಪತಿ ನೀರಿನಲ್ಲಿ ವಿಸರ್ಜಿಸದಂತೆ ನಾವು ಅಭಿಯಾನ ಕೈಗೊಳ್ಳುತ್ತೇವೆ "

"ಒಳ್ಳೆಯ ಕೆಲಸ .. ಆದರೆ ಇಡೀ ಪ್ರಪಂಚಕ್ಕೆ ನಿಮ್ಮಿಂದ ತಿಳಿಸಲಾಗದ್ದು , ಆದರೆ ನಿಮಗೆ ತಿಳಿದದ್ದು ನೀವೂ ಮಾಡಬಹುದಲ್ಲ "..

"ಏನು? "... ಆತನಿಗೆ ಅರ್ಥ ವಾದಂತೆ ಕಾಣಲಿಲ್ಲ ..

"ಅದೇ ಮಾಂಸಾಹಾರ, ಅದನ್ನು ನಿಮಗೆ ತ್ಯಜಿಸಬಹುದು ಅಲ್ಲವೇ ?"

"ಹೇ ಹೇ .. ಎಲ್ಲವನ್ನು ಪಾಲಿಸುವುದು ಕಷ್ಟ , ಅದಕ್ಕೆ ನಾವು ನಮ್ಮಿಂದ ಆಗುವಂಥ ಚಿಕ್ಕ ಪ್ರಯತ್ನ ಮಾಡಿದ್ದೇವೆ .. ಹೋಳಿಯ ದಿನ ಬಣ್ಣ , ಗಣಪತಿ ವಿಸರ್ಜನೆ , ಪಟಾಕಿ ಇವೆಲ್ಲವನ್ನೂ ಬಿಟ್ಟಿದ್ದೇವೆ .."

"ನಾನು ಮಾಂಸಾಹಾರಿ ಅಲ್ಲ.. ಇದು ನನ್ನ ಚಿಕ್ಕ ಕೊಡುಗೆ ವಾತಾವರಣಕ್ಕಾಗಿ .. ಹಾಗಾಗಿ ನಾನು ಪಟಾಕಿ ಸಿಡಿಸಬಹುದೇ ? "

ಆತ ಮೌನವಾದ ..

"ಮತ್ತೆ ಈ ಸಿಗರೇಟು ಆ ಅಭ್ಯಾಸವೂ ನನಗಿಲ್ಲ .. ಬೀಡಿ , ಸಿಗರೇಟು ಇದರಲ್ಲೆಲ್ಲ ಅದೆಷ್ಟೊಂದು ಬಾಲ ಕಾರ್ಮಿಕರು ದುಡಿಯುತ್ತಾರೆ ಅಲ್ಲವೇ ?...  ಮತ್ತೆ ಈ ಕೆಟ್ಟ ಚಟಗಳು ಪಟಾಕಿ ಉಂಟುಮಾದುವುದಕ್ಕಿಂತ ಹೆಚ್ಚಿನ ಮಾಲಿನ್ಯ , ಸಾವು - ನೋವು  ಉಂಟುಮಾಡುತ್ತವೆ .. ಜನರಿಗೆ ಈ ಬಗ್ಗೆ ತಿಳಿಹೇಳಿ ದ್ದೀರ ?"

ಆತ ಮತ್ತೆ ಮೌನ ...

ನಾನೇ ಮತ್ತೆ ಮುಂದುವರಿಸಿದೆ .. " ಮಾಂಸಾಹರದಿಂದ ಆಗುವ ದುಷ್ಪರಿಣಾಮ , ವಾಹನಗಳಿಂದ ಆಗುವ ದುಷ್ಪರಿನಾಮಕ್ಕಿಂತ ಹೆಚ್ಚಂತೆ ಹೌದ? ಮತ್ತೆ ಈ ಕೈಗಾರಿಕೆಗಳು , ಕಲ್ಲಿದ್ದಲು , ಅದಿರು ಸಂಗ್ರಹ ಇವೆಲ್ಲವೂ ಸಹಾ ಸಾವಿರ ಪಟ್ಟು ಹೆಚ್ಚಿನ ಮಾಲಿನ್ಯ ಉಂಟುಮಾಡುತ್ತವೆ ಅಂತ ಎಲ್ಲೋ ಓದಿದ ನೆನಪು  "

ಆತ ಮೆಲ್ಲನೆ ಬೆವರತೊದಗಿದ್ದ .. ತುಂಬಾ ಬಾಯಾರಿಕೆ ಆಗಿರಬೇಕು , ಬ್ಯಾಗಿನಿಂದ ತಂಪು ಪಾನಿಯದ ಬಾಟಲಿ ಹೊರತೆಗೆದು ಕುಡಿಯ ತೊಡಗಿದ ..
"ಈ ಪಾನೀಯ ಗಳಲ್ಲೂ ಕೆಮಿಕಲ್ ಇದ್ಯಲ್ಲ .. ಇದನ್ನು ತಯಾರಿಸುವ ಕಾರ್ಖಾನೆಗಳಿಂದ ದಿನಾ ಕಲ್ಮಶ ನದಿ ಸೇರುತ್ತದಲ್ಲಾ ? ಇದೂ ಕೆಟ್ಟದಲ್ಲವೇ? ಮತ್ತೆ ಈ ಪ್ಲಾಸ್ಟಿಕ್ ಬಾಟಲಿಗಳು .."

ಆತ ತಟ್ಟನೆ ಬಾಟಲಿಯ ಬಿರಡೆ ಮುಚ್ಚಿ ಚೀಲದಲ್ಲಿ ಹಾಕಿಕೊಂಡ 

"ಮತ್ತೆ ಹೊಸ ವರ್ಷ , ಕ್ರಿಸ್ಮಸ್ ದಿನಾನು ಮೇಣದ ಬತ್ತಿ ಉರಿಸ್ತಾರೆ ,ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಇದೆ ರೀತಿ ಜನಕ್ಕೆ ತಿಳಿ ಹೇಳ್ತೀರಾ ? ಅದೆಲ್ಲ ಯಾಕೆ , ಅದ್ಯಾವನೋ ರಾಜಕಾರಣಿ ಜಯಗಳಿಸಿದಾಗ , ಜೈಲಿನಿಂದ ಬಿಡುಗಡೆಯಾದಾಗ ಪಟಾಕಿ ಬಿಡ್ತಾರಲ್ಲ  ಆಗಲೂ ನೀವು ಹೋಗಿ ತಿಳಿ ಹೆಳುತ್ತೀರ ?"

"ಅದೆಲ್ಲಾ ತುಂಬಾ ಚಿಕ್ಕ ಪ್ರಮಾಣದಲ್ಲಿ ಸಾರ್ " ಅವರಲ್ಲೊಬ್ಬ ಬಾಯಿ ಬಿಟ್ಟಿದ್ದ ..

"ಇರಬಹುದು , ಆದರೆ ಚಿಕ್ಕ ಪ್ರಮಾಣದಲ್ಲೇ ಪ್ರಾರಂಭಿಸಿದರೆ ಉತ್ತಮ ಅಂತ ನೀವೇ ತಾನೇ ಹೇಳಿದ್ದು "

ಆ ನಾಲ್ಕೂ ಮಂದಿ ನನ್ನನ್ನು ತಿಂದು ಬಿಡುವಂತೆ ದುರುಗುಟ್ಟಿ ನೋಡತೊಡಗಿದರು ..

"ದೀಪಾವಳಿ ನಮ್ಮ ಹಬ್ಬ .. ಹಬ್ಬದ ಆಚರಣೆಗಾಗಿ ವರ್ಷಕ್ಕೆ ಒಂದು ದಿನ ನಾವು ಪಟಾಕಿ ಬಿಡುತ್ತೇವೆ .. ಆದರೆ ಆಗ ಮಾತ್ರ ಬಂದು ಹಬ್ಬದ ಸಂತೋಷವನ್ನು ಕಿತ್ತುಕೊಳ್ಳುವುದಕ್ಕಿಂತ , ಪಟಾಕಿಗಿಂತ ಹೆಚ್ಚು ಮಾರಕವಾದ  ಬೀಡಿ , ಸಿಗರೇಟು , ಮಾಂಸ , ಕೈಗಾರಿಕೆ , ತಂಬಾಕು , ವಾಹನ ಇತ್ಯಾದಿಗಳ ಬಗ್ಗೆ ವರ್ಷ ಪೂರ್ತಿ ಅರಿವು ಮೂಡಿಸುವ ಕಾರ್ಯ ಒಳಿತಲ್ಲವೇ ?"

ನನ್ನನ್ನು ದುರುಗುಟ್ಟಿ ನೋಡಿದ ನಾಲ್ಕೂ ಮಂದಿ ದಡದಡನೆ ಅಲ್ಲಿದ್ದ ಅವರ ಕಾರು ಏರಿ ಕೂತರು .. ಕಪ್ಪು ಹೋಗೆ ಉಗುಳುತ್ತ ಸಾಗಿದ ಕಾರನ್ನೇ ನೋಡುತ್ತಾ ನಿಂತುಬಿಟ್ಟೆ ..

ಸೂಚನೆ : ಪಟಾಕಿಯ  ದುಷ್ಪರಿಣಾಮಗಳ ಬಗ್ಗೆ ನನಗೂ ತಿಳಿದಿದೆ .. ಅದಕ್ಕೇ ನಾನೂ ಪಟಾಕಿ ಉಪಯೋಗ ಕಮ್ಮಿ ಮಾಡಿದ್ದೇನೆ .. ಆದರೆ ಅದು ಹಬ್ಬದ ಸಂತೋಷವನ್ನು ಹಾಳುಗೆಡಹುವಷ್ಟಲ್ಲ ..


ಗೋರೆ ಉವಾಚ :

ಪಟಾಕಿ ಮತ್ತು ಹೆಂಡತಿಗಿರುವ ಒಂದೇ ಒಂದು ವ್ಯತ್ಯಾಸವೆಂದರೆ , ಪಟಾಕಿ ಹಳೆಯದಾದಷ್ಟು ಶಬ್ದ ಕಮ್ಮಿ !!!

 

Saturday, September 6, 2014

ಪುಸ್ತಕ !!

ರಾತ್ರಿ ೧೧ ಗಂಟೆ . ಜೋರಾಗಿ ನಿದ್ದೆ ಬರುತ್ತಿತ್ತು . ಮಲಗೋಣವೆಂದು  ಮನೆಯ ದೀಪಗಳನ್ನು ಆರಿಸೋಣವೆಂದು  ಅಂದು ಕೊಳ್ಳುವಷ್ಟರಲ್ಲಿ "ಟಿಂಗ್ ಟೋಂಗ್ " ಅನ್ನುವ ಶಬ್ದ.. ಯಾರೋ ಬಾಗಿಲ ಗಂಟೆ ಬಾರಿಸಿದ್ದರು.. ಅರ್ರೆ ಇಷ್ಟೊತ್ತಿನಲ್ಲಿ ಯಾರಿರಬಹುದು ? ಒಂದು ವಾರದ ಹಿಂದಷ್ಟೇ ಆ ಊರಿಗೆ ವರ್ಗವಾಗಿದ್ದೆ .. ಅಷ್ಟೊಂದು ಪರಿಚಯ ಯಾರದ್ದೂ ಇರಲಿಲ್ಲ .. ಗೊತ್ತಿದ್ದಿದು ಪಕ್ಕದ ಮನೆಯ ರಾಮ ಭಟ್ಟರು ಮಾತ್ರ . ರಾತ್ರಿ ಹನ್ನೊಂದು ಗಂಟೆಗೆ ಯಾರು ಬಂದಿರಬಹುದು ಅಂತ ಮೆಲ್ಲನೆ ಬಾಗಿಲು ತೆಗೆದೆ.. ಯಾರೋ ಹುಡುಗನೊಬ್ಬ ನಿಂತಿದ್ದ

"ಸಾರ್ ನಾನು ರಾಮಭಟ್ಟರ ಮಗ , ನಿದ್ದೆ ಬರ್ತಾ ಇರ್ಲಿಲ್ಲ ಅದಕ್ಕೆ ನಿಮ್ಮಲ್ಲಿ ಯಾವುದಾದರೂ ಒಳ್ಳೆಯ ಪುಸ್ತಕ ಇದ್ರೆ ಕೊಡ್ತೀರ . ಓದಿ ನಾಳೆ ಕೊಡ್ತೀನಿ " ಅಂದ ..
ಅಬ್ಬ , ಇದೆಂತ ಒಳ್ಳೆಯ ಕಾಲ.. ಮೊಬೈಲ್ ನಲ್ಲಿ, ಟಿ .ವಿ  ನೋಡುತ್ತಾ , ಇಲ್ಲವೇ ಹಾಳು  ಹರಟೆ ಹೊಡೆಯುತ್ತ ಕೂರುವ ಈ ಹುಡುಗರ ಮಧ್ಯೆ ಇದೆಲ್ಲಿಂದ ಬಂದ  ಅಂತ ಆಶ್ಚರ್ಯ ವಾಯಿತು ..

ಮನೆಯ ಸಾಮಾನು ಇನ್ನೂ ಜೋಡಿಸಿರಲಿಲ್ಲ ..

"ಹೆಸರೇನು ನಿಂದು "?

"ರಾಘವೇಂದ್ರ ಅಂತ ಸಾರ್, ಎಲ್ರೂ ರಘು ಅಂತ ಕರೀತಾರೆ "

"ಸರಿ, ಯಾವುದು ಬೇಕೋ ಅದು ತಗೋ " ಅಂತ ಹೇಳಿ ಪುಸ್ತಕ ಕಟ್ಟಿಟ್ಟಿದ್ದ ರಟ್ಟಿನ ಪೆಟ್ಟಿಗೆ ತೋರಿಸಿದೆ ..

ಸ್ವಲ್ಪ ಹೊತ್ತು ಹುಡುಕಾಡಿ ೨ ಪುಸ್ತಕ ತೆಗೆದುಕೊಂಡ .. "ಸಾರ್ , ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ತಗೊಂಡೆ  .. ನಾಳೆ ಕೊಡ್ತೀನಿ ಸಾರ್" ಅಂತ ಹೇಳಿ ಹೊರ ಹೋದ .. ನೇರವಾಗಿ ರಾಮ ಭಟ್ಟರ ಮನೆಯ ಗೇಟು ತೆಗೆದು ಒಳ ಹೋದವನನ್ನು ನೋಡಿ ಖುಷಿಯಾಯಿತು .. ನಿದ್ದೆ ಬರದೆ ಮೊಬೈಲ್ ನಲ್ಲಿ ಆಟ ಆಡುವ ಜನಾಂಗದ ಮಧ್ಯೆ ಇಂಥವರು ಇನ್ನೂ ಇದ್ದಾರೆ ಅಂದರೆ ಹೆಮ್ಮೆಯ ವಿಷಯವಲ್ಲವೇ ..

 ಇದಾಗಿ ಎರಡು ಮೂರು ದಿನ ಕಳೆಯಿತು .. ನಾನು ಕೆಲಸಕ್ಕೆ ಹೋಗಿ ಬರುವುದೇ ರಾತ್ರಿಯಾಗುತ್ತಿದ್ದುದರಿಂದ ರಘು ಬಗ್ಗೆಯೂ ಮರೆತು ಹೋಯಿತು .. ಆದರೆ ನಾಲ್ಕನೇ ದಿನ ನನ್ನ ಗೆಳೆಯ ಸದಾನಂದ ಫೋನ್ ಮಾಡಿ ಒಂದು ಪುಸ್ತಕ ಕೊಡು ಅಂದಿದ್ದ .. ಆಗ ನೆನಪಾಯಿತು.. ರಘು ಪುಸ್ತಕ ತೆಗೆದುಕೊಂಡು ಹೋಗಿದ್ದ ವಿಶಯ.. ಅಲ್ಲಿಗೆ ಹೋಗಿ ಕೇಳೋಣ .. ಹೇಗೂ ರಾಮ ಭಟ್ಟರು ಮನೆಗೆ ಬರುವಂತೆ ಒತ್ತಯಿಸಿದ್ದೂ ಉಂಟು .. ಹೋದ ಹಾಗೆಯೂ ಆಯಿತು , ಪುಸ್ತಕ ವಾಪಸು ತಂದ ಹಾಗೆಯೂ ಆಯಿತು ಅಂತ ಅವರ ಮನೆ ಕಡೆ ಸಾಗಿದೆ..
"ಬನ್ನಿ ಬನ್ನಿ " ರಾಮ ಭಟ್ಟರು ಎಲೆ ಅಡಿಕೆ ತಿಂದು ಕೆಂಪಾಗಿದ್ದ ಬಾಯಿಯನ್ನು ಇಷ್ಟಗಲ ಮಾಡಿ ಸ್ವಾಗತಿಸಿದರು .. ಅವರ ಹೆಂಡತಿ ರುಕ್ಮಿಣಿ ಹಾಗೂ ಮಗಳ ಪರಿಚಯ ಮಾಡಿಕೊಟ್ಟರು .. ಭರ್ಜರಿ ಕಾಫಿ ತಿಂಡಿಯೂ ಮುಗಿಯಿತು.. ಇನ್ನು ಮನೆಗೆ ಹೋಗೋಣವೆಂದು ನಿಧಾನಕ್ಕೆ ಎದ್ದು ನಿಂತೆ ..
"ರಘು ಮನೆಯಲ್ಲಿ ಇಲ್ವೆ?"

ರಾಮ ಭಟ್ಟರು ಕಣ್ಣು ಚಿಕ್ಕದು ಮಾಡಿ "ಯಾರು?" ಎಂದು ಕೇಳಿದರು ..
"ಅದೇ ಭಟ್ರೇ ನಿಮ್ಮ ಮಗ ರಾಘವೇಂದ್ರ "

ಅದ್ಯಾಕೋ ರಾಮ ಭಟ್ಟರು ತಟ್ಟನೆ ಅವರ ಹೆಂಡತಿಯ ಮುಖ ನೋಡಿದರು .. ಅವರ ಮಗಳೂ ಸಹ ಅವಕ್ಕಾಗಿ ನಿಂತು ಬಿಟ್ಟಿದ್ದಳು ..  ಅವರ ಮುಖ ಚಹರೆಯೇ  ಬದಲಾಗಿ ಹೋಗಿತ್ತು ..

"ಭಟ್ರೇ , ಅದೇ ಮೊನ್ನೆ ನಿಮ್ಮ ಮಗ ರಘು ಬಂದಿದ್ದ .. ರಾತ್ರಿ ೧೧ ಗಂಟೆಗೆ .. ನಿಮ್ಮ ಮಗ ಅಂತ ಹೇಳಿದ .. ನಿದ್ದೆ ಬರ್ತಾ ಇಲ್ಲ, ಯಾವುದಾದರು ಪುಸ್ತಕ ಕೊಡಿ ಓದ್ತೀನಿ  ಅಂತ ಎರಡು ಪುಸ್ತಕ ತೆಗೊಂಡು ಹೊದ.. ಅದು ನನ್ನ ಗೆಳೆಯನಿಗೆ ಒಂದ್ಸಾರಿ ಕೊಡಬೇಕಾಗಿತ್ತು .. ಅದ್ಕೆ ತೆಗೊಂಡು ಹೋಗೋಣ ಅಂತ ಬಂದೆ "

ಮೂವರೂ ಮತ್ತಷ್ಟು ದಿಗ್ಭ್ರಾಂತ ರಾದರು .. " ನನ್ನ ಮಗನೆ? ನಿಮ್ಮ ಮನೆಗೆ ಬಂದಿದ್ನೆ?" ರಾಮ ಭಟ್ಟರು ತೊದಲಿದರು..

ಹೋ  , ನಾನು ಬಹುಶ ಮೋಸ ಹೋಗಿದ್ದೆ .. ಅದ್ಯಾರೋ ನನ್ನ ಪುಸ್ತಕ ಕದ್ದು ಬಿಟ್ಟರು \ಅಂತ ನನಗೆ ಅರ್ಥವಾಗಿತ್ತು ..

ಒಂದು ಕ್ಷಣ ಒಳ ಹೋದ ರಾಮಭಟ್ಟರು ಕೈಯಲ್ಲಿ ಒಂದು ಫೋಟೋ ಹಿಡಿದುಕೊಂಡು ಬಂದರು ..
"ನಿಮ್ಮ ಮನೆಗೆ ಬಂದಿದ್ದು ಈ ಹುಡುಗನಾ "

"ಹೌದು ಭಟ್ರೇ ಇವನೇ .. ನಿಮ್ಮ ಮಗ ಅಂತ ಹೇಳಿದ ಅದಕ್ಕೆ ಪುಸ್ತಕ ಕೊಟ್ಟೆ .. ನಿಮ್ಮ ಮಗ ಅಲ್ವೇ?" ಅಂತ ಕೇಳಿದೆ ..

"ನನ್ನ ಮಗನೇ , ಆದರೆ ಆತ ತೀರಿಕೊಂಡು ೪ ವರ್ಷ ಆಯಿತು"..

ಕಿವಿಗೆ ಕಾದ ಸೀಸ ಹೊಯ್ದ೦ತಾಯಿತು .. "ಏನು??" ನಾನು ದಿಗ್ಭ್ರಾಂತ ನಾದೆ ...

"ಹೌದು , ನಾಲ್ಕು ವರ್ಷದ ಹಿಂದೆ ನನ್ನ ಮಗ ಅಪಘಾತವೊಂದರಲ್ಲಿ ತೀರಿಕೊಂಡು ಬಿಟ್ಟ .. ಹಾಗಿರುವಾಗ ಆತ  ನಿಮ್ಮ ಮನೆಗೆ ಬಂದು ಪುಸ್ತಕ ಹೇಗೆ ತಗೆದುಕೊಂದಿರಲು ಸಾಧ್ಯ.. ಯಾರೋ ಬೇರೆಯವರು ಬಂದಿರಬೇಕು ..  ನೋಡಿ ಅಲ್ಲಿ ಮನೆ ಹಿಂದೆ ಮಂಟಪದ ಥರ ಕಾಣಿಸ್ತಿದೆಯಲ್ಲ  ಅಲ್ಲೇ ನನ್ನ ಮಗನ ಸಂಸ್ಕಾರ  ಮಾಡಿದ್ದು "

ರಾಮಭಟ್ಟರು ಕೈ ತೋರಿಸಿದ ಕಡೆ ಮೆಲ್ಲನೆ ಸಾಗಿದೆ .. ಗೊರಿಯೊಂದು ಕಟ್ಟಲಾಗಿತ್ತು .. ನನ್ನ ಹಿಂದೆಯೇ ರಾಮಭಟ್ಟರು ಬಂದರು ..
 "ನಂಗೆ ಗೊತ್ತಿರ್ಲಿಲ್ಲ ಭಟ್ರೇ, ಕ್ಷಮಿಸಿ.. ಬಹುಶ ಬೇರೆ ಯಾರೋ ಹುಡುಗರು ಬಂದಿರಬೇಕು .. ಆದರೆ ನಿಮ್ಮ ಮಗನ ಫೋಟೋ ನೋಡಿದ್ನಲ್ಲ ಅದೇ ಥರ ಇದ್ದ .. ಅದಕ್ಕೆ...." ಮುಂದೆ ಮಾತೆ ಹೊರಡಲಿಲ್ಲ ..

ಗೋರಿಯ ಪಕ್ಕದಲ್ಲಿ ಒಂದು ಎಸ್ .ಎಲ್ .ಭೈರಪ್ಪ ರದ್ದು ಮತ್ತೆ ಒಂದು ಯಂಡಮೂರಿಯವರ ಪುಸ್ತಕ ಅನಾಥವಾಗಿ ಬಿದ್ದಿದ್ದವು!!!!



ಗೋರೆ ಉವಾಚ :

ಗ್ರಂಥಾಲಯದಲ್ಲಿರುವ  ಅತೀ ಕೆಟ್ಟ ಅಭಿರುಚಿಯ  ಪುಸ್ತಕಕ್ಕೆ ಯಾವತ್ತೂ ಧೂಳು ಇರುವುದಿಲ್ಲ !!!