Sunday, August 9, 2015

ಅರ್ಥ - ಅಪಾರ್ಥ --- ವ್ಯತ್ಯಾಸ ಬಹಳ !!!

"ಬಾ ಇವತ್ತು ಎರಡು ಪೆಗ್ಗು ಹಾಕುವ " ಕುಮಾರ ಯಾಕೋ ಬೇಸರದಲ್ಲಿದ್ದ .. ಜೀವನ ಅಂದ್ರೆ ಅಷ್ಟೇ ತಾನೆ.. ಕೆಲವೊಮ್ಮೆ ಖುಷಿ , ಕೆಲವೊಮ್ಮೆ ದುಖ್ಖ್ಹ .. ಕೆಲವೊಮ್ಮೆ ಜಯ , ಮತ್ತೆ ಕೆಲವೊಮ್ಮೆ ಅಪಜಯ .. ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವವ , ಸ್ತಿತಪ್ರಜ್ಞ , ಯಾವತ್ತೂ ವಿಜಯಿಯಾಗುತ್ತಾನೆ . ಆದರೆ ಈಗ ಹಾಗಿಲ್ಲವಲ್ಲ .. ಚಿಕ್ಕಂದಿನಿಂದಲೇ ನಮ್ಮ ಮಕ್ಕಳನ್ನು ನಾವು ಸ್ಪರ್ಧೆಗೆ ಒಡ್ಡುತ್ತೇವೆ .. ಗೆಲ್ಲಲೇ ಬೇಕು ! ಸೋತರೆ ಯಾವುದಕ್ಕೂ ಪ್ರಯೋಜನವಿಲ್ಲ ಎನ್ನುವ ಭಾವನೆ ಮೂಡಿಸಿಬಿಡುತ್ತೇವೆ ..

ಆದರೆ ಕುಮಾರ ಅಂಥವನಲ್ಲ .. ಖುಷಿಯಾದಾಗ ತುಂಬಾ ನಗುತ್ತಾನೆ .. ಸೋತಾಗ ಒಮ್ಮೆ ದುಖ:.. ಎರಡು ಪೆಗ್ಗು ಏರಿಸುತ್ತಾನೆ.. ಅಷ್ಟೇ ಮರುದಿವಸ ಮತ್ತೆ ಅದೇ ಕುಮಾರ.. ಸೋತ ದುಕ್ಖವಿಲ್ಲ  , ಗೆದ್ದ ಖುಷಿಯಿಲ್ಲ ..

"ಸರಿ ನಡಿ "  ನಾನೂ ಆತನ ಜೊತೆ ಹೆಜ್ಜೆ ಹಾಕಿದೆ .. ಸ್ವಲ್ಪ ದೂರ ನಡೆದಾಗ ಸಿಕ್ಕಿದ್ದೇ ಸಪ್ತಗಿರಿ ಬಾರ್ ಮತ್ತು ರೆಸ್ಟೋರಂಟ್ ..
ಇಬ್ಬರೂ ಒಳ ಹೋಗಿ ಒಂದು ಟೇಬಲ್ ಮುಂದೆ ಕೂತೆವು .. ಇಲ್ಲಿ ಕುಡಿದರೆ ಬಹುಶ ಏಳು ಬಣ್ಣಗಳೂ ಕಾಣಿಸುತ್ತವೋ , ಅಥವಾ ಸಪ್ತ ಸಾಗರಗಳನ್ನು ದಾಟಿದ ಖುಷಿ ಸಿಗುತ್ತದೋ , ಸಪ್ತ ಜನ್ಮಗಳ ಪಾಪ ಕಳೆದು ಪಾವನರಾಗುತ್ತೆವೋ? ಸಪ್ತಗಿರಿ ಅಂತ ಹೆಸರೀತ್ತಿದ್ದಾರಲ್ಲ .. ತಲೆಯಲ್ಲಿ ಏನೇನೊ ಯೋಚನೆಗಳು ..  "ಎರಡು ಪೆಗ್ , ಒಂದು ಬೊಟ್ಟಲ್ ನೀರು," ಕುಮಾರ ಅಲ್ಲಿದ್ದ ಸರ್ವರ್ ಗೆ ಹೇಳುತ್ತಿದ್ದ ..

ಒಮ್ಮೆ ಸುತ್ತಲೂ ನೋಡಿದೆ .. ನಮ್ಮ ಪಕ್ಕದಲ್ಲೇ ಇಬ್ಬರು ಹುಡುಗರು ಕೂತಿದ್ದರು .. ಒಬ್ಬ ಬಹುಶ ೨೦-೨೫ ವಯಸ್ಸಿನವ , ಇನ್ನೊಬ್ಬ ಬಹುಶ ೩೮-೪೦ ವರ್ಷ ದವನಿರಬಹುದು .. ಇಬ್ಬರ್ರೂ ವಿಸ್ಕಿ ಕುಡಿಯುತ್ತಿದ್ದರು .. ಅದೇನೋ ಮಾತಾಡಿಕೊಂಡು ನಗುತ್ತಿದ್ದರು .. ಅಷ್ಟರಲ್ಲಿ ನಮ್ಮ ಮುಂದೆ ಎರಡು ಗ್ಲಾಸು ಬಂದಾಗಿತ್ತು .. ನೀರು ಬೆರೆಸಿ ಗ್ಲಾಸು ತುಟಿಗಿತ್ತೆವು .. ಆಗ ಕೆಳಿಸಿತ್ತದು ..

ಪಕ್ಕದಲ್ಲೇ ಕೂತಿದ್ದ ಇಬ್ಬರಲ್ಲಿ ಒಬ್ಬ ಹೇಳುತ್ತಿದ್ದ  " ನೀನೇನೆ ಹೇಳು .. ನಿನ್ನ ಅಮ್ಮನಷ್ಟು ಚೆಂದದ ಹುಡುಗಿಯನ್ನು ನಾನು ನೋಡೇ ಇಲ್ಲ , ಅವಳನ್ನು ನೋಡಿದಾಗಲೆಲ್ಲ ಮುತ್ತಿಕ್ಕಬೇಕು ಅನ್ನಿಸ್ತದೆ .." ತುಟಿಗಿಟ್ಟಿದ್ದ ಗ್ಲಾಸು ತೆಗೆದು ಮೆಲ್ಲನೆ ಕೆಳಗಿಟ್ಟೆ ..
ಅವರನ್ನು ನೋಡುವ ಎಂದು ತಿರುಗ ಹೋದಾಗ ಕುಮಾರ ತಟ್ಟನೆ ತಡೆದ .. "ಬೇಡ , ಅದ್ಯಾರೋ ಬೇವರ್ಸಿಗಳು ಅಂತ ಅನ್ನಿಸ್ತದೆ " ಕುಮಾರ ಕೆಟ್ಟದಾಗಿ ಮುಖ ಹಿಂಡಿದ .. ವ್ಹಿಸ್ಕಿಯ ಘಾಟಿಗೋ , ಇಲ್ಲಾ ಅವರ ಮಾತಿಗೋ ಗೊತ್ತಾಗಲಿಲ್ಲ !!

"ಮೊನ್ನೆ ನಿನ್ನ ಜೊತೆ ಶಾಪಿಂಗ್ ಹೋಗಿದ್ಳಲ್ಲ , ಆ ಚೂಡಿ ನೋಡಿದ್ರೆ ಕಾಲೇಜ್ ಹುಡುಗೀನೆ .. ಐ ಲವ್ ಯುವರ್ ಮುಮ್ "  ಹಾಗಂತ ಹೇಳಿದವನೇ ಗಟಗಟನೆ ಗ್ಲಾಸ್ ಮುಗಿಸಿಬಿಟ್ಟ !! ಇದೆಂಥ ಕಾಲ? ಒಬ್ಬನ ಅಮ್ಮನ ಬಗ್ಗೆ ಇಷ್ಟು ಕೆಟ್ಟ ಮಾತೇ ? ಅದೂ ಆತನ ಎದುರಿಗೆ ? ಇದ್ಯಾವ ಮಗ ಇವನು ? ನಾನಾಗಿದ್ರೆ ಇವತ್ತು ಕೊಲೆಯೇ ನಡೆದು ಹೋಗುತ್ತಿತ್ತು .. ನನಗೆ ನಂಬಲಿಕ್ಕೆ ಆಗಲಿಲ್ಲ .. ಕಲಿಯುಗ ಅಂದರೆ ಇದೇನಾ? ನಮ್ಮ ಹಿರಿಯರು ಹೆಳಿಕೊಟ್ಟ ಸಂಸ್ಕೃತಿ ಎಲ್ಲಿ ಹೋಯಿತು? ಬಾರಿನ ಜೊತೆಗೆ ಅದು ಪೈಪೋಟಿ ನಡೆಸಲಾಗದೇ ಸತ್ತು ಹೋಯಿತೇ?

ಮೆಲ್ಲನೆ ತಿರುಗಿ ನೋಡಿದೆ .. ಇಬ್ಬರೂ ಇನ್ನೊಂದು ಗ್ಲಾಸು ತುಂಬಿಸಿ ಕುಡಿಯಲು ತಯಾರಾಗುತ್ತಿದ್ದರು ....  ನಾನೂ ಕುಮಾರ ಇವರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲವೆಂದು ನಮ್ಮ ಕಾರ್ಯಕ್ರಮ ಮುಂದುವರೆಸಿದೆವು .. ಆದರೆ ನಮ್ಮ ಕಿವಿಗೆ ಮದ್ಧ್ಯೆ ಮಧ್ಯೆ ಅವರ ಮಾತು ಕೇಳಿಸುತ್ತಿತ್ತು .. ಒಬ್ಬ ಯುವಕ ಸುಮ್ಮನೆ ಕೂತಿದ್ದರೆ ಇನ್ನೊಬ್ಬ ಆತನ ಅಮ್ಮನ ಬಗ್ಗೆಯೇ ಮಾತು.. ಕೊನೆಗೆ ಅವರು ಬಿಲ್ಲು ತರುವಂತೆ ಹೇಳಿದ್ದು ಕೇಳಿಸಿತು .. "ಇವತ್ತು ನಾನು ನಿನ್ನ ಅಮ್ಮನಿಗೆ ಐ ಲವ್ ಯು  ಅಂತ ಹೇಳ್ಬೇಕು .. ತುಂಬಾ ದಿನ ಆಯಿತು ಹೀಗೆ ಅಂದುಕೊಂಡು " ಆತನ ಮಾತಿಗೆ ತಟ್ಟನೆ ತಿರುಗಿ ನೋಡಿದೆ ..ಇನ್ನು ಇವರ ಇಂತಹ ಅಸಹ್ಯ ಮಾತು, ಸಂಬಧಗಳ ಬಗ್ಗೆ ಕೀಳು ಭಾವನೆ ಸಹಿಸಲಾರೆ ಅನ್ನುವಂತೆ ಅವರ ಇನ್ನೊಂದು ಬದಿಯ ಟೇಬಲ್ ನಲ್ಲಿ ಕುಳಿತಿದ್ದವರು ಎದ್ದು ಹೊರ ನಡೆದರು ..  ಹುಡುಗ ಬಿಲ್ಲು ಕಟ್ಟಿ ಎದ್ದು ನಿಂತಿದ್ದ .. ಕಣ್ಣು ಕೆಂಪಾಗಿತ್ತು .. ಬಹುಶ ಈಗ ತಾಳ್ಮೆಯ ಕಟ್ಟೆ ಒಡೆದಿರಬೇಕು .. ಅಮ್ಮನ ಬಗ್ಗೆಯೇ ಈ ರೀತಿ ಮಾತಾಡಿದವನನ್ನ ಇಷ್ಟು ಹೊತ್ತು ಸಹಿಸಿದ್ದೆ ತಪ್ಪು.. "ಯೋಚಿಸಬೇಡ ಬಾರಿಸು ನಾಕು " ನನ್ನ ಮನಸ್ಸು ಕೂಗಿ ಹೇಳುತ್ತಿತ್ತು .. ಆತ ನಿಧಾನಕ್ಕೆ ಎದ್ದು ನಿಂತ .. ಕಣ್ಣು ಕೆಂಪಾಗಿವೆ .. ಇಲ್ಲಿ ಏನೋ ಅನಾಹುತ ನಡೆಯುವುದು ಖಂಡಿತ .. ನಾನು ಮೆಲ್ಲನೆ ಬೆವರತೊಡಗಿದ್ದೆ ..

ನಿದಾನಕ್ಕೆ ಎದ್ದು ನಿಂತ ಆ ಯುವಕ ಎದುರು ಕೂತಿದ್ದ ಮಧ್ಯ ವಯಸ್ಕನಂತೆ ಕಾನುತ್ತಿದ್ದವನನ್ನು ನೋಡಿದ .. "ಐ ಲವ್ ಯುವರ್ ಮಮ್ಮಿ "  ಆತ ಹೇಳಿದ್ದು ಸ್ಪಷ್ಟವಾಗಿ ಕೇಳಿಸಿತ್ತು .. ಏನಾಗುತ್ತಿದೆ ಅನ್ನುವಷ್ಟರಲ್ಲಿ ಆ ಘಟನೆ ನಡೆದು ಹೋಗಿತ್ತು .. ನಾನು ಬಿಟ್ಟ ಕಣ್ಣು ಬಿಟ್ಟು ನೋಡುತ್ತಲೇ ಇದ್ದೆ .
ತನ್ನ ಕುರ್ಚಿಯಿಂದ ಎದ್ದ ಯುವಕ , ಎದುರು ಕೂತಿದ್ದ ಆ ಮಧ್ಯವಯಸ್ಕನ ತೋಳು ಹಿಡಿದ .. ಆಮೇಲೆ ಸ್ವಲ್ಪ ಎತ್ತರಿಸಿದ ಧ್ವನಿಯಲ್ಲಿ   "ಅಪ್ಪಾ , ಇವತ್ತು ತುಂಬಾ ಕುದ್ಡಿದ್ದಿಯಾ ಬಾ ಹೋಗೋಣ ಮನೆಗೆ .. ಅಮ್ಮ ಕಾಯ್ತಿರ್ತಾಳೆ " ಅಂತ ಹೇಳಿ ಆತನನ್ನು ಎಬ್ಬಿಸಿಕೊಂಡು ಹೊರಗೆ ನಡೆದೇ ಬಿಟ್ಟ .. !!
ಕುಮಾರ ಗಹಗಹಿಸಿ ನಗುವ ಸದ್ದು ನಶೆಯಲ್ಲಿ ಕರಗಿ ಹೋಯಿತು !!

ಗೋರೆ ಉವಾಚ :

ಪ್ರತಿಯೊಬ್ಬರ ಅರ್ಧ ಜೀವನವು ತಂದೆ-ತಾಯಿಯನ್ನು ಗೋಳು ಹೊಯ್ಯುವುದರಲ್ಲಿ , ಮತ್ತೆ ಉಳಿದರ್ಧ ಜೀವನವು ಮಕ್ಕಳನ್ನು ಗೋಳು ಹೊಯ್ಯುವುದರಲ್ಲಿ ಮುಗಿದು ಹೋಗಿರುತ್ತದೆ !!!!

2 comments:

sunaath said...

ಹಹ್ಹಹ್ಹಾ! ಸಸ್ಪೆನ್ಸ್ ತುಂಬಿದ ಜೋಕು!

ಮಾತಿನಮಂಚ said...

ಒಳ್ಳೆ ಸ್ಟೋರಿ ಆದ್ರೆ... ಧರ್ಮಕ್ಕೆ ಸಿಟ್ಟು ಬರಿಸಿದ್ರಲ್ಲ....