Thursday, March 25, 2010

ಸದಾನಂದ ಮತ್ತು ಗುಣಪಾಲ ಮೇಷ್ಟ್ರು!!

ಮೊನ್ನೆ ಸದಾನಂದ ಸಿಕ್ಕಿದ್ದ.. ತುಂಬಾ ದಿನಗಳಾಗಿದ್ದವು ಆತನನ್ನು ಭೇಟಿ ಮಾಡಿ.. ಅಪರೂಪಕ್ಕೆ ಒಮ್ಮೊಮ್ಮೆ ಬೀರ್ ಕುಡಿಯೋ ಅಭ್ಯಾಸವಿದೆ ಆತನಿಗೆ... ಮೊನ್ನೆ ಸಿಕ್ಕಿದವನೇ "ಬೀರು" ಅಂತ ನನ್ನ ಮುಖ ನೋಡಿ ನಕ್ಕ.."ಸರಿ , ನೀನು ಹೋಗಿ ಕುಡಿದು ಬಾ ನಾನಿಲ್ಲೇ ಇರ್ತೀನಿ" ಅಂದೆ.. ಇಲ್ಲ ನೀನು ನನ್ನ ಜೊತೆ ಬರಬೇಕು ಅಂತ ಹಠ ಹಿಡಿದ.. ಸರಿ ಅಂತ ಆತನ ಜೊತೆ ಒಂದು ಗಾರ್ಡನ್ ಹೋಟೆಲ್ ಕಡೆ ಸಾಗಿದೆ.. ನಾವಿಬ್ಬರೂ ಸಿಕ್ಕರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ.. ಮಾಡಿದ ಚೇಷ್ಟೆಗಳು, ಮಾಡಿಕೊಂಡ ಅವಘಡಗಳು, ಈಗ ನೆನೆಸಿಕೊಂಡರೆ ನಗು ಬರುತ್ತೆ.. ಹಾಗೆ ಮೊನ್ನೆ ಆತನ ಜೊತೆ ಕೂತಿದ್ದಾಗ ಕೆಲವೊಂದು ಘಟನೆಗಳು ನೆನಪಾದವು..

ಘಟನೆ ಒಂದು..
  ಆಗ ಬಹುಶ ನಾವು ನಾಲ್ಕನೇ ತರಗತಿಯಲ್ಲಿ ಇದ್ದಿರಬೇಕು.. ಬೆಳಗ್ಗೆ ನಾವಿಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ಆವತ್ತೋ ಹಾಗೆ ಶಾಲೆಗೇ ಹೊರಟವನನ್ನು ಕೇಳಿದೆ "ಮಗ್ಗಿ ಕಲ್ತಿಯಾ"?   ಯಾವ ಮಗ್ಗಿ ? ಸದಾನಂದ ಪ್ರಶ್ನಾರ್ಥಕವಾಗಿ ನನ್ನ ಮುಖ ನೋಡಿದ.. "ಲೋ ಗೂಬೆ ನಿನ್ನೆ ತಾನೇ ಗುಣಪಾಲ ಮೇಷ್ಟ್ರು ಹೇಳಿದ್ರಲ್ಲ ಎಲ್ರೂ ೬ ನೆ ಮಗ್ಗಿ ಬಾಯಿಪಾಠ ಮಾಡಿಕೊಂಡು ಬರಬೇಕು ಅಂತ.. ಕಲ್ತಿಲ್ವ? ನಿನಗಿವತ್ತು ಇದೆ ನೋಡು" ನಾನು ಇಷ್ಟು ಹೇಳಿದ್ದೆ ಸದಾನಂದ ಒಂದು ಕ್ಷಣ ಬೆಚ್ಚಿ ಬಿದ್ದ.. ಗುಣಪಾಲ ಮೇಷ್ಟ್ರು..!!! ನೆನೆಸಿಕೊಂಡರೆ ಹೆದರಿಕೆ ಯಾಗುತ್ತಿತ್ತು.. ತುಂಬಾ ಜೋರು.. ಅವರ ಬೆತ್ತದ ರುಚಿ ನೋಡದೆ ಯಾವುದೇ ವಿದ್ಯಾರ್ಥಿ ಶಾಲೆಯಿಂದ ಹೊರಗೆ ಬಂದಿರಲಿಕ್ಕಿಲ್ಲ.. ಇವತ್ತು ಸದಾನಂದನಿಗೆ ಹೊಡೆತ ಖಂಡಿತ.. ಸದಾನಂದನ ಮುಖ ಬಿಳುಚಿಕೊಂಡಿತ್ತು.. ಆಟದ ಮಧ್ಯೆ ಮಗ್ಗಿ ಕಲಿಯುವುದೇ ಮರೆತಿದ್ದನಾತ.. "ನೀನು ಹೋಗು ನಾನು ಈಗಲೇ ಬಂದೆ" ಅಂದವನೇ ಆತ ಮನೆಯತ್ತ ಓಟಕಿತ್ತ.. ಅದ್ಯಾಕೆ ಓಡಿದ ಎಂದು ತಿಳಿಯದೆ ನಾನು ಅವಕ್ಕಾಗಿ ಶಾಲೆಯತ್ತ ಹೆಜ್ಜೆ ಹಾಕಿದೆ.. ಇನ್ನೇನು ಗುಣಪಾಲ ಮಾಸ್ತರು ಪಾಠ ಮಾಡಲು ಬಂದರು ಅನ್ನುವಷ್ಟರಲ್ಲಿ ಸದಾನಂದ ಹಾಜರಾಗಿದ್ದ!!

"ಎಲ್ರೂ ಮಗ್ಗಿ ಕಲ್ತಿದ್ದೀರ??" ಮಾಸ್ತರು ಕೇಳಿದ್ದಕ್ಕೆ ನಾವೆಲ್ಲಾ "ಹೌದು ಸಾರ್" ಎಂದು ಕೂಗಿಕೊಂಡೆವು.. "ಒಬ್ಬೊಬ್ಬರಾಗಿ ಶುರು ಮಾಡಿ" ಹಾಗೆ ಮೇಷ್ಟ್ರು ಹೇಳುತ್ತಿದ್ದಂತೆ ಮೊದಲನೇ ಬೆಂಚಿನಿಂದ ಒಬ್ಬೊಬ್ಬರಾಗಿ ಮಗ್ಗಿ ಒಪ್ಪಿಸತೊಡಗಿದೆವು.. ನನ್ನ ಸರದಿಯೂ ಬಂತು.. ನಾನು ಮುಗಿಸಿದ್ದೇ ಸದಾನಂದ ನಿಧಾನಕ್ಕೆ ಎದ್ದು ನಿಂತ.. ಆತನ ಕೈ ಕಾಲು ಮೆಲ್ಲನೆ ನಡುಗುತ್ತಿತ್ತು.. "ಆರೊಂದ್ಲಿ ಆರು, ಆರು ಯೆರಡ್ಲಿ ಹನ್ನೆರಡು..ಆರು ಮೂರ್ಲಿ ...." ಸದಾನಂದ ತಡವರಿಸತೊಡಗಿದ..."ಆರು ಮೂರ್ಲಿ ಹದಿನೆಂಟು"  ಹಾಗಂತ ಹೇಳಿಕೊಟ್ಟ ಮೇಷ್ಟ್ರು ಆತನ ಬೆನ್ನಿನ ಮೇಲೆ "ಛಟ್" ಅಂತ ಬೆತ್ತ ಬೀಸಿಯೇ ಬಿಟ್ಟರು.. ಸದಾನಂದ ಹಾಗೆಯೇ ಹೇಳಿ ಮತ್ತೆ ತಡವರಿಸತೊಡಗಿದ.. ಪ್ರತಿಯೊಂದು ಮಗ್ಗಿಯ ಪಂಕ್ತಿಗೂ ಒಂದೊಂದು ಏಟು.. ಹುಹ್.. ಒಂದು ಅಥವಾ ಎರಡು ಏಟಿಗೆ ಕಣ್ಣೀರು ಹರಿಸುತ್ತಿದ್ದ ಸದಾನಂದ ಆವತ್ತು ನಾಲ್ಕು ಬಿದ್ದರೂ ತುಟಿಪಿಟಿಕ್ ಎಂದಿರಲಿಲ್ಲ.. ಬದಲಿಗೆ ಆತನ ಮುಖದಲ್ಲಿ ಸಣ್ಣಗೆ ನಗು.. ನನಗ್ಯಾಕೋ ಅನುಮಾನ ಕಾಡತೊಡಗಿತು..ಅದ್ಯಾಕೋ ಸದಾನಂದನಿಗೆ ಹೊಡೆಯುವಾಗ ಬೇರೆಯೇ ರೀತಿಯ ಶಬ್ದ ಬರುತ್ತಿತ್ತು!!!.. ಆತ ಅದೇನೋ ಬೆನ್ನಿಗೆ ಕಟ್ಟಿಕೊಂಡಂತೆ.. ಅದು ಮಾಸ್ತರಿಗೂ ಗೊತ್ತಾಗಿ ಹೋಯಿತು.. "ಅಂಗಿ ಬಿಚ್ಚು" ಗುಣಪಾಲ ಮಾಸ್ತರು ಅಬ್ಬರಿಸಿದರು.. ಸದಾನಂದ ನಡುಗುತ್ತ ಅವರ ಮುಖ ನೋಡತೊಡಗಿದ.. "ನಿಕ್ಕೆ ಪನ್ಯ ಅಂಗಿ ದೆಪ್ಪು" ಈ ಬಾರಿ ಗುಣಪಾಲ ಮೇಷ್ಟ್ರು ಸದನಂದನ ಮಾತೃ ಭಾಷೆ ತುಳುವಿನಲ್ಲಿ ಆಜ್ಞಾಪಿಸಿದರು .. ಬೇರೆ ವಿಧಿಯಿಲ್ಲದೇ ಸದಾನಂದ ನಿಧಾನಕ್ಕೆ ಅಂಗಿ ಬಿಚ್ಚಿದ.. ಅದನ್ನು ನೋಡಿ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆವು..!!!!
ಗುಣಪಾಲ ಮಾಸ್ತರ ಏಟಿಗೆ ಹೆದರಿಕೊಂಡಿದ್ದ ಸದಾನಂದ ತನ್ನ ಬೆನ್ನಿಗೆ ಅಡಕೆ ಮರದ ಹಾಳೆಯೊಂದನ್ನು ಕಟ್ಟಿಕೊಂಡು ಬಂದಿದ್ದ.. ಆತ ಮನೆಗೆ ಓಡಿ ಹೋಗಿದ್ದು ಯಾಕೆ ಅನ್ನೋದು ನನಗೆ ಆಗ ಅರ್ಥವಾಗಿತ್ತು... ನಾವೆಲ್ಲಾ ಜೋರಾಗಿ ನಗುತ್ತಿದ್ದರೆ  ಅದನ್ನು ನೋಡಿ ಗುಣಪಾಲ ಮೇಷ್ಟ್ರು ಸಹ ನಗತೊಡಗಿದರು..."ನಾಳೆ ಬರುವಾಗ ಮಗ್ಗಿಯನ್ನು ೫೦ ಸಾರಿ ಬರೆದುಕೊಂಡು ಬಾ" ಅಂತ ಶಿಕ್ಷೆ ವಿಧಿಸಿದ ಮೇಷ್ಟ್ರು ನಗುತ್ತ ಕ್ಲಾಸಿನಿಂದ ಹೊರನಡೆದರು!!!

ಎರಡನೆ ಘಟನೆಯನ್ನು ಮುಂದೆ ಬರೆಯುವೆ!!!

Tuesday, March 23, 2010

ಸುಮ್ನೆ ತಮಾಷೆಗೆ!!!

ನೀತಿ !!!
ಬಿರುಗಾಳಿಗೆ ಬೀಸಲು ಯಾರೂ ಕಲಿಸುವುದಿಲ್ಲ,
ಸುನಾಮಿಗೆ ಹೇಗೆ ಅಪ್ಪಳಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಭೂಮಿಗೆ ಹೇಗೆ ಕಂಪಿಸಬೇಕೆಂದು ಯಾರೂ ಕಲಿಸುವುದಿಲ್ಲ,
ಹಾಗೆಯೇ ಹೆಂಡತಿಯನ್ನು ಹೇಗೆ ಆಯ್ಕೆ ಮಾಡಬೇಕೆಂದು ಯಾರೂ ಕಲಿಸುವುದಿಲ್ಲ...
ನೀತಿ: ಪ್ರಕೃತಿ ವಿಕೋಪಗಳು ಯಾರೂ ಕಲಿಸಿ ಬರುವಂಥದ್ದಲ್ಲ, ಅವು ತನ್ನಿಂತಾನೆ ನಡೆಯುತ್ತವೆ!!!
----------------------------------------------------------------------------------------------------------------------------
ವ್ಯತ್ಯಾಸ!!
ಸ್ನೇಹಿತನಿಗೆ ನೀನು ನನ್ನ ಉತ್ತಮ ಸ್ನೇಹಿತ ಅಂತ ಹೇಳಬಹುದು..
ಆದರೆ ಹೆಂಡತಿಗೆ, ನೀನು ನಾನ ಉತ್ತಮ ಹೆಂಡತಿ ಅಂತ ಹೇಳುವ ಧೈರ್ಯ ಯಾರಿಗಿದೆ??
-----------------------------------------------------------------------------------------------------------------------------
ಅತೀ ಚಿಕ್ಕ ಗಲೀಜು ಕಥೆ!
ಅಪ್ಪಟ ರೇಷ್ಮೆ ಬಿಳುಪಿನ ಸುಂದರ ಕುದುರೆಯೊಂದು ಕೆಸರಿನಲ್ಲಿ ಬಿದ್ದು ಹೋಯಿತು!!!

Thursday, February 11, 2010

ಬದನೇಕಾಯಿ !!

ಬಿ ಟಿ ಬದನೆ.. ಬಹುಶ ಎಲ್ಲರೂ ಇದರ ಬಗ್ಗೆ ಕೇಳಿಯೇ ಇದ್ದೀರಿ.. ತುಂಬಾ ದಿನಗಳಿಂದ ಇದರ ಬಗ್ಗೆ ನ್ಯೂಸ್ ಪೇಪರ್ , ಟ್ಟಿ ವಿ ಗಳಲ್ಲಿ ಕೇಳುತ್ತಲೇ ಇದ್ದೇವೆ.. ಬಿ ಟಿ ಬದನೆ ಬೇಕೇ, ಬೇಡವೇ ಅನ್ನೋ ಜಿಜ್ಞಾಸೆ ತುಂಬಾ ದಿನಗಳಿಂದ ನಮ್ಮ ರಾಜಕಾರಣಿಗಳಿಗೆ, ವಿಜ್ಞಾನಿಗಳಿಗೆ ಇದ್ದೆ ಇದೆ.. ಇದು ಬೇಡವೇ ಬೇಡ ಅಂತ ಹೇಳಿರೋದು ಶುದ್ಧ ಭಾರತೀಯರು ಮಾತ್ರ.. ಅವರಿಗೆ ನಮ್ಮ ದೇಶದ ಬಗ್ಗೆ, ನಮ್ಮ ಜನರ ಬಗ್ಗೆ ಕಾಳಜಿಯಿತ್ತು.. ಅರೆ, ಈ ಬದನೆಗೂ ನಮ್ಮ ದೇಶದ ಭವಿಷ್ಯ ಕ್ಕೂ ಏನ್ರೀ ಸಂಬಂಧ ಅಂತ ಕೇಳ್ತೀರಾ?? ಹಾಗಾದ್ರೆ ಮುಂದೆ ಓದಿ..

ಈ ಬಿ ಟಿ  ಗೆ ಆಂಗ್ಲ ಭಾಷೆಯಲ್ಲಿ Bacillus thuringiensis ಅಂತ ಹೇಳ್ತಾರೆ.. ಇದೊಂದು ಥರ ಬ್ಯಾಕ್ಟಿರಿಯಾ ಇದ್ದ ಹಾಗೆ.. ಇದನ್ನು ಬದನೆಯ ಬಿಜಕ್ಕೆ injection ಥರಾ ಚುಚ್ಚಿ ಹೊಸ ತಳಿ ರೂಪಿಸಿದ್ರಲ್ಲಾ ಅದಕ್ಕೆ ಬಿ ಟಿ ಬದನೆ ಅಂದ್ರು.. ಇಂತಹ ತಳಿಗಳಿಗೆ Genetically  Modified ಆಹಾರ ಅನ್ನುತ್ತಾರೆ.. ಇದರ ಲಾಭ ಏನಪ್ಪಾ ಅಂದ್ರೆ ಇದು ನಮ್ಮ ಮಾಮೂಲಿ ತಳಿಗಿಂತ ಹೆಚ್ಚಿನ ಉತ್ಪತ್ತಿ ನೀಡುತ್ತೆ, ಕೊಳೆನಾಷಕ ಔಶಧಿಯ ಅಗತ್ಯವಿಲ್ಲ (ಇದಕ್ಕೆ ಬಳಸಿರೋ ಬ್ಯಾಕ್ಟಿರಿಯಾ ಮತ್ತು ಕೆಮಿಕಾಲ್ ಗಳು ಕೊಳೆ ಬರೋಕೆ ಬಿಡಲ್ಲ ಅಂದಮೇಲೆ ಕೊಳೆನಾಷಕ ಯಾಕ್ರೀ?), ಗಾತ್ರದಲ್ಲಿ ಇಂತಹ ತರಕಾರಿಗಳು ದೊಡ್ದದಾಗಿರುತ್ತವೆ... ಹೆಚ್ಚಿನ ತರಕಾರಿ, ಹೆಚ್ಚಿನ ದುಡ್ಡು, ಯಾವ ರೈತನಿಗೆ ಬೇಡ ಸ್ವಾಮೀ??
ಹಾಗಾದ್ರೆ ನಮಗೂ ಇದು ಇರ್ಲಾ? ಅಮೇರಿಕಾ ದಲ್ಲಿ ಹೆಚ್ಚಿನ ತರಕಾರಿಗಳೆಲ್ಲಾ ಹೀಗೆ Genetically Modified (ಬದನೆ ಬಿಟ್ಟು).. ಹಾಗಾದ್ರೆ ಇದರಿಂದ ಏನು ನಷ್ಟ? ನಮಗ್ಯಾಕೆ ಬೇಡಾ ಅಂತೀರಾ .. ಪಟ್ಟಿ ದೊಡ್ಡದಿದೆ..
೧. ಇಂತಹ ತರಕಾರಿಗಳಿಗೆ ರುಚಿ ಅನ್ನೋದು ಖಂಡಿತಾ ಇಲ್ಲ.
೨. ಇವು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಅನ್ನೋದು ಇನ್ನೂ ಸಾಬಿತಾಗಿಲ್ಲ.
೩. ಇಡೀ ವಿಶ್ವದಲ್ಲಿ ಇದನ್ನು ಮಾಡೋ ತಾಕತ್ತಿರೋದು ಒಂದೇ ಒಂದು ಕಂಪನಿ ಗೆ ಅದು "ಮೊನ್ಸಂಟೋ".
೪. ಇದಕ್ಕೆ ಸಹಕರಿಸೋದು ಈ ಮೊನ್ಸಂಟೋ ಕಂಪನಿ ಯ ಅಂಗ ಸಂಸ್ತೆಗಳು.
೫. ಈ ಕಂಪನಿ ಅಮೆರಿಕಾದ್ದು..
೬. ಮೊನ್ಸಂಟೋ ಹೊರತಂದ ಇಂತಹ ಉತ್ಪನ್ನಗಳಿಗೆ "ಚೆನ್ನಾಗಿದೆ", "ಏನೂ ತೊಂದರೆ ಇಲ್ಲ ಅಂತ ಪ್ರಮಾಣ ಪತ್ರ ನೀಡೋದು ಶುದ್ಧ ಇಲ್ಲಿಯ ಕಳ್ಳರೇ (ಪ್ರಮಾಣ ಪತ್ರ ನೀಡಿದ ಕಂಪನಿ ಯ ಹೆಸರು ಬೇರೆ ಇರುತ್ತೆ.. ಕಂಪನಿ ಮಾತ್ರ ಮೊನ್ಸಂಟೋ ದ್ದೆ ಆಗಿರುತ್ತೆ)
ಅರೆ ಅರೆ.. ಪಟ್ಟಿ ಮುಂದೆ ಬೆಳೆಸ್ತಿನಿ , ಈಗ ಬದನೆಗೆ ಬರೋಣ.. ಈ ಬಿ ಟಿ ಬದನೆ ಇನ್ನೂ ಯಾವ ದೇಶದಲ್ಲೂ ಇಲ್ಲ.. ನಮ್ಮ ಭಾರತದಲ್ಲೇ ಮೊದಲು ಇದನ್ನು ಮನುಷ್ಯರಿಗೆ ತಿನ್ನಿಸೋಕೆ ಪ್ರಯತ್ನ ನಡೀತಾ ಇದೆ.. ಮೊನ್ಸಂಟೋ ಕಂಪನಿ ಯ ಇನ್ನೊಂದು ಅಂಗ ಸಂಸ್ತೆಯಾದ ಮಹಿಕೋ (Mahyco ) ಈ ಬಿ ಟಿ ಬದನೆ ಹೊರತಂದಿದೆ.. ಆದರೆ ಇದಕ್ಕೆ ಯಾವುದೇ ದೇಶ ಅನುಮತಿ ನೀಡದ ಕಾರಣ ಇದನ್ನು ಈಗ ಭಾರತೀಯರ ಮೇಲೆ ಪ್ರಯೋಗಿಸಲು ಯತ್ನಿಸಲಾಗುತ್ತಿದೆ.. ಎಷ್ಟಾದರೂ ನಾವು ಅಮೇರಿಕಾದ ಪಾಲಿಗೆ ಪ್ರಯೋಗ ಶಾಲೆಯಲ್ಲಿ ಇಲಿ ಇದ್ದಂತೆ ಅಲ್ಲವೇ..ಈ ಬದನೆ ನಮ್ಮ ಮೇಲೆ ಪ್ರಯೋಗ ಆಗಬೇಕು, ತೊಂದರೆ ಇದ್ದರೆ ಅದನ್ನು ಸರಿಪಡಿಸಬೇಕು.. ಯಾವ ಖಾಯಿಲೆ ಹೇಗೆ ಬರುತ್ತೆ ಅನ್ನೋ ಸಂಶೋಧನೆ ನಮ್ಮ ಮೇಲೆ ನಡೀಬೇಕು.. ಎಲ್ಲಾ ಓ ಕೆ ಆದ ಮೇಲೆ ಇದನ್ನು ಅಮೇರಿಕಾ ಬಳಸಬೇಕು...ಹೇಗಿದೆ ಚಾಣಕ್ಯ ನೀತಿ??
ಈಗಾಗಲೇ ಈ  ಬದನೆಯನ್ನು ಕೆಲವೊಂದು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಲಾಗಿದೆ..
೧. ಬಿ ಟಿ ಬದನೆ ತಿಂದ ಇಲಿಗಳು diarrhoea ಗೆ ತುತ್ತಾಗಿವೆ.. ಒಮ್ಮೆಲೇ ಹೆಚ್ಚು ನೀರು ಕುಡಿಯಲು ಪ್ರಾರಂಭಿಸಿವೆ.. ಪಿತ್ತಕೋಶದ ಭಾರ ಕಮ್ಮಿಯಾಗಿದೆ..
೨. ಇದನ್ನು ತಿಂದ ಕೋಳಿಗಳು ಕಾಳು ತಿನ್ನೋದು ಕಮ್ಮಿ ಮಾಡಿದವು..
೩. ಇದನ್ನು ತಿಂದ ದನಗಳು ತಮ್ಮ ಮೈ ಭಾರ ಹಿಗ್ಗಿಸಿ ಕೊಂಡವು.. ಹೆಚ್ಚಿನ ಹಾಲು ನೀಡತೊಡಗಿದವು. ಇವೆಲ್ಲ ಇದರ ಸೈಡ್ ಎಫೆಕ್ಟ್ ಆಗಿತ್ತು..
೪. ಈ ಬದನೆಯಲ್ಲಿ ನಮ್ಮ ಮಾಮೂಲಿ ಬದನೆಗಿಂತ ಶೇಕಡಾ ೧೫ ರಷ್ಟು ವಿಟಮಿನ್ ಗಳು ಕಮ್ಮಿ ಇವೆ.. ಒಂಥರಾ toxic ಆಸಿಡ್ ಈ ಬದನೆಗಳಲ್ಲಿ ಕಂಡು ಬಂದಿದೆ..
೫. ಇದನ್ನು ಬೇರೆ ಬೇರೆ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದಾಗ ರಕ್ತದ ಕಾಯಿಲೆ ಗಳು ಕಂಡು ಬಂದಿವೆ.. ಅದೇ ರೀತಿ ನಮಗೆ ಗಾಯವಾದಾಗ ರಕ್ತ ಹೆಪ್ಪು ಕಟ್ಟುತ್ತದೆ ಅಲ್ಲವೇ? ಈ ಹೆಪ್ಪುಕಟ್ಟುವಿಕೆ ಅನ್ನೋ ಕ್ರಿಯೆ ಮಾಮೂಲಿಗಿಂತ ಹೆಚ್ಚಿನ ಸಮಯ ತೆಗುದು ಕೊಂಡದ್ದು ಸಂಶೋಧನೆಯಿಂದ ಸಾಬೀತಾಗಿದೆ..
೬. ಇದರಲ್ಲಿರುವ ವಿಟಾಮಿನ್ ಗಳಿಂದಾಗಿ ನಮ್ಮ ದೇಹದ ಮೇಲೆ ಮಾತ್ರೆಗಳು ತಮ್ಮ ರೋಗ ನಿರೋಧಕ ಶಕ್ತಿಯನ್ನು ದೇಹದ ಮೇಲೆ ತೋರಲು ವಿಫಲವಾಗಿವೆ (eg  : antibiotic resistance ).. ಇದು ನಮ್ಮ ಆರೋಗ್ಯದ ಮೇಲೆ ಎಂತಹ ಘೋರ ಪರಿಣಾಮ ಬೀರಬಹುದು ಗೊತ್ತೇ??

ಆದರೂ ನಮಗೆ ಈ ಬದನೆ ಬೇಕೇ? ನಮ್ಮ ದೇಶದಲ್ಲೇ ಸಿಗುವ ೨೫-೩೦ ಜಾತಿಯ ಬದನೆ ನಮಗೆ ಸಾಕಾಗದೆ?( ಇವೆಲ್ಲಾ ನೈಸರ್ಗಿಕ) .. ಈ ಬದನೆ ಮೇಲೆ ನಮ್ಮ ರಾಜಕಾರಣಿಗಳಿಗೆ ಯಾಕಿಷ್ಟು ಆಸೆ.. ?? ಉತ್ತರ ತುಂಬಾ ಸುಲಭ.. ಇಡೀ ಪ್ರಪಂಚದಲ್ಲಿ  , ತಮ್ಮ ಕೆಲಸವಾಗಲು , ದುಡ್ಡು ಮಾಡಲು "ಮೊನ್ಸಂಟೋ" ಕಂಪನಿ ಕೊಡುವಷ್ಟು ಲಂಚ ಯಾರೂ ಕೊಡಲ್ಲ.. ಇವರು ವರ್ಷಕ್ಕೆ ಅತೀ ಹೆಚ್ಚು ದುಡ್ಡು ಖರ್ಚು ಮಾಡುವುದೇ ಲಂಚ ನೀಡಲು ಅಂದ್ರೆ ನಂಬ್ತೀರಾ? (ಹಾಗಂತ ತುಂಬಾ ಜನ ಹೇಳೋದನ್ನ ಅಂತರಜಾಲದಲ್ಲಿ ಓದಿದೆ).. ಇಲ್ಲೂ ಅಷ್ಟೇ ನಮ್ಮ ರಾಜಕಾರಣಿಗಳಿಗೆ ಲಂಚ ಕೊಟ್ಟು ಇದೀಗ ಈ ಕಂಪನಿ ನಮ್ಮ ದೇಶವನ್ನು ಪ್ರಯೋಗ ಶಾಲೆಯನ್ನಾಗಿಸಲು ಹೊರಟಿದೆ.. ಈಗಾಗಲೇ ಬಿ ಟಿ ಹತ್ತಿ ತಂದು ತನ್ನ ವಂಶ ಬೆಳೆಸುತ್ತಿದೆ..
ಹೀಗೆ ಮುಂದುವರಿದರೆ ಏನಾದೀತು??
ನಾವು ಈ ಬಿ ಟಿ ಹತ್ತಿಯನ್ನೇ ನೋಡೋಣ.. ಈಗಾಗಲೇ ನಮ್ಮ ರೈತರು ಈ ಬಿ ಟಿ ಹತ್ತಿಗೆ ಮೊರೆ ಹೋಗಿದ್ದಾರೆ.. ಇದು ಬೀಜ ರಹಿತ ಹತ್ತಿ.. ಹೆಚ್ಚು ಇಳುವರಿ, ಹೆಚ್ಚು ಲಾಭ.. ಆದರೆ ಮೊನ್ಸಂಟೋ ರೈತರಿಗೆ ಈ ಬೀಜ ಕೊಡುವ ಮುನ್ನ ಒಂದು ಒಪ್ಪಂದ ಮಾಡಿಕೊಳ್ಳುತ್ತದೆ.. ಅದು , ಒಮ್ಮೆ ಈ ಬಿ ಟಿ ಬಳಸಿದರೆ ಮುಂದೆ ಕಮ್ಮಿ ಅಂದ್ರೂ ೧೦-೧೫ ವರ್ಷ ಅದನ್ನೇ ಬಳಸಬೇಕು.. ಬೇರೆ ಬೆಳೆ ಬೆಳೆಯುವಂತಿಲ್ಲ, ಮೊನ್ಸಂಟೋ ಕಂಪನಿ ನೀಡುವ ರಾಸಾಯನಿಕಗಳನ್ನೇ ಬಳಸಬೇಕು.. ಹೀಗೆ..
ಒಂದು ವೇಳೆ ಹೀಗೆ ಸಾಗಿದರೆ ಮುಂದೆನಾದಿತು?. ನಾವು ಬಿ ಟಿ ಹತ್ತಿಗೆ ಮೊರೆ ಹೋಗಿ ನಮ್ಮ ದೇಶಿಯ ಹತ್ತಿ ಸರ್ವ ನಾಶವಾಯಿತು ಅನ್ನೋವಾಗ ಯೆದ್ದೆಳುತ್ತಾರೆ ಈ ಕಳ್ಳರು..ಮೊದಲೇ ಇವರದ್ದು ಬೀಜ ರಹಿತ ಹತ್ತಿ.. ಬೆಳೆದ ಹತ್ತಿಯಿಂದ ಮುಂದಿನ ವರ್ಷದ ಬೆಳೆ ಬೆಳೆಯೋಕೆ ಸಾಧ್ಯನೇ ಇಲ್ಲ (ಬೀಜಾನೆ ಇಲ್ವಲ್ಲ ಸ್ವಾಮೀ..) .. ಆಗ ನಾವು ಮತ್ತೆ ಮೊನ್ಸಂಟೋ ಹತ್ತಿರ ಹೋಗಿ ಭಿಕ್ಷೆ ಬೇಡಬೇಕು.. ಬೀಜ ಕೊಡಿ ಅಂತ.. ಇಷ್ಟರವರೆಗೆ ೧ ರೂಪಾಯಿಗೆ ಸಿಗುತ್ತಿದ್ದ ಬೀಜಕ್ಕೆ ಈಗ ೧೦ ರೂಪಾಯಿ ಅನ್ನುತ್ತಾರೆ.. ನಾವು ತಗೋಳ್ಳಲೇ   ಬೇಕು.. ೧೦ ರೂಪಾಯಿ ಇದ್ದ ಹತ್ತಿಗೆ ೧೦೦ ರೂಪಾಯಿಯಾಗುತ್ತದೆ.. ಇದು ಹೀಗೆ ಮುಂದುವರಿದು ನಮ್ಮ ಕೃಷಿ ಎಲ್ಲಾ ಮೊನ್ಸಂಟೋ ಕೈಯಲ್ಲಿ..!!! ಇದು ಕೃಷಿಯಲ್ಲಿನ ಎಲ್ಲಾ ವಸ್ತುಗಳಿಗೆ ಅನ್ವಯಿಸೋಕೆ ಎಷ್ಟು ಕಾಲ ಬೇಕಾದೀತು.. ನಿಧಾನಕ್ಕೆ ಅದು ಎಲ್ಲವನ್ನೂ ನುಂಗಿ ನೀರು ಕುಡಿಯುತ್ತದೆ ..
ಅದೇನೋ ಸದ್ಯಕ್ಕೆ ಮಂತ್ರಿ ಮಹಾವರ್ಯ ಇದಕ್ಕೆ ಲಗಾಮು ಹಾಕಿದ್ದಾನೆ.. ಇದೆಲ್ಲ ನಮ್ಮ ನಿಮ್ಮೆಲ್ಲರ ಕಣ್ಣಿಗೆ ಬಟ್ಟೆ ಕಟ್ಟುವ ಕೆಲಸ.. ಇನ್ನು ಕೆಲವೇ ದಿನಗಳಲ್ಲಿ ಇಂಥಾ ಬೇರೆ ಬೇರೆ ತರಕಾರಿಗಳು, ಬದನೆ ಎಲ್ಲವೂ ಲಗ್ಗೆ ಹಾಕಲಿವೆ!!!
 "ಝಣ ಝಣ ಝಣ ಝಣ ಕಾಂಚಣ ದಲ್ಲಿ
 ಅಮೇರಿಕಾದ ಲಾಂಛನದಲ್ಲಿ ,
 ಎಲ್ಲಾ ಮಾಯ ನಾಳೆ ನಾವು ಮಾಯ
 ಎಲ್ಲಾ ಮಾಯ ನಾಳೆ ನೀವು ಮಾಯ" 

ಆದ್ದರಿಂದ.. ಏಳಿ ಭಾರತೀಯರೇ ಎದ್ದೇಳಿ..!!!!

Wednesday, February 3, 2010

ಸುಮ್ನೆ ತಮಾಷೆಗೆ..!!

ಮುತ್ತು..
ಮಾತು ಬೆಳ್ಳಿ
ಮೌನ ಬಂಗಾರವೆಂದರು.
ಬಂಗಾರದ ಆಸೆಗೆ ಮೌನವಾಗಿದ್ದೆ
ಅಮೂಲ್ಯ ಮುತ್ತೊಂದನ್ನ ಕಳೆದುಕೊಂಡಿದ್ದೆ !!

------------------------------------------------------------------------------------------------------------------------
ಅವಸ್ಥೆ
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ ಅಂದರು
ನಿಜವೋ ಸುಳ್ಳೋ ನೋಡಲು ಮುಂದಾದೆ..!
ಕುಂಬಾರನ  ತಲೆಗೆ
ದೊಣ್ಣೆಯಿಂದ ಹೊಡೆದು
ಮರುದಿನ ಜೈಲುವಾಸಿಯಾದೆ!!!!

--------------------------------------------------------------------------------------------------------------------
ಮಾಯ
ಬೆಂಗಳೂರನ್ನು
ಮಾಯಾನಗರಿ ಅಂದರು.
'ಮಾಯಾ'ಳನ್ನು ಹುಡುಕುತ್ತ
ನಗರಿಗೆ ಕಾಲಿಟ್ಟೆ..
ಇಂದು ನಾನೇ ಮಾಯವಾದೆ!!

Thursday, January 28, 2010

ಗಡಂಗ್ ರದ್ದಾವಡ್ !!!!

ಅವಲಕ್ಕಿ ಬಾಬು... ಆತನ ನಿಜವಾದ ಹೆಸರು ಏನು ಅಂತ ಗೊತ್ತಿಲ್ಲ... ಆದರೆ ಎಲ್ಲರೂ ಆತನನ್ನು ಬಜಿಲ್ ಬಾಬು ಅಂತ ಕರೆಯುತ್ತಿದ್ದರು.. ಅಂದ ಹಾಗೆ ಬಜಿಲ್ ಅಂದ್ರೆ ತುಳು ಭಾಷೆಯಲ್ಲಿ ಅವಲಕ್ಕಿ ಅಂತ ಅರ್ಥ.. ಈತ ನಮ್ಮ ಊರಿನ ಒಬ್ಬ ವಿದೂಷಕ ಇದ್ದಂತೆ... ದಿನ ಕೂಲಿ ಮಾಡಿಕೊಂಡು, ದುಡಿದ ದುಡ್ಡನ್ನು ಅರ್ಧ ಮನೆಗೂ ಅರ್ಧ ಶರಾಬು ಅಂಗಡೀಗೂ  ಹಾಕುತ್ತಿದ್ದ... ಮಾತಿನಲ್ಲಿ ಭಾರಿ ಜಾಣ.. ಆತ ಸಂಜೆಯ ಹೊತ್ತಿಗೆ ಶರಾಬು ಕುಡಿದು ತೂರಾಡುತ್ತ ಅದೇನೇನೋ ಮಾತಾಡಿಕೊಂಡು ತಿರುಗುತ್ತಿದ್ದುದು ಸಾಮನ್ಯ.. ಆದರೆ ಮರುದಿನ ಆತನಿಗೆ ಕೇಳಿದರೆ ಆತ ಏನು ಮಾಡಿದ್ದೂ ನೆನಪಿರುತ್ತಿರಲಿಲ್ಲ..ಅಥವಾ ಹಾಗೆ ಮಾಡುತ್ತಿದ್ದನೋ ಗೊತ್ತಿಲ್ಲ...


ಹಾಗಿರಲೊಂದು ದಿನ ನಮ್ಮ ಊರಿಗೆ ಕಾಲಿಟ್ಟಿದ್ದೆ ಮದ್ಯಪಾನ ವಿರೋಧಿ ಚಳುವಳಿ...ತುಂಬಾ ಮಂದಿ ಅದರಲ್ಲಿ ಭಾಗವಹಿಸಿದ್ದು, ನಮ್ಮ ಅವಲಕ್ಕಿ ಬಾಬು ಕೂಡ ಸೇರಿ ಕೊಂಡಿದ್ದಾನೆ ಅನ್ನೋ ಸುದ್ದಿ ಬಂತು.. ಕೆಲವು ದಿನ ಕಳೆದವು.. ಆವತ್ತು ಈ ಮದ್ಯಪಾನ ವಿರೋಧಿ ಕಾರ್ಯಕ್ರಮದ ಸಮಾರೋಪ ಸಮಾರಂಭ.. ಕಾರ್ಯಕ್ರಮ ಎಲ್ಲಾ ಮುಗಿದು ಎಲ್ಲರೂ ಘೋಷಣೆ ಕೂಗುತ್ತಿದ್ದರು... "ಗಡಂಗ್ ರದ್ದಾವಡ್, ಗಡಂಗ್ ರದ್ದಾವಡ್" (ಗಡಂಗ್ == ಶರಾಬು ಅಂಗಡಿ, ರದ್ದಾವಡ್==ರದ್ದಾಗಲಿ ಅಂತ ಅರ್ಥ) ಹಾಗಂತ ಎಲ್ಲರೂ ಅರಚಿದ್ದೆ ಅರಚಿದ್ದು..


ಕಾರ್ಯಕ್ರಮವೆಲ್ಲಾ ಮುಗಿದು ಸಂಜೆ ಆಯಿತು... ಸ್ವಲ್ಪ ಹೊತ್ತಿನಲ್ಲೇ ನಮ್ಮ ಬಜಿಲ್ ಬಾಬು ಶರಾಬು ಅಂಗಡಿಯಲ್ಲಿ ಪ್ರತ್ಯಕ್ಷ ನಾಗಿದ್ದ..."ಏನಯ್ಯ ಬಾಬು ಗಡಂಗ್ ರದ್ದಾವಡ್,ಗಡಂಗ್ ರದ್ದಾವಡ್ ಅಂತ ಭಾರಿ ಅರಚಿಕೊಳ್ತಿದ್ದೆ, ಈಗ್ಯಾಕೆ ಬಂದೆ ಇಲ್ಲಿಗೆ?" ಅದ್ಯಾರೋ ಕೇಳಿದ್ದಕ್ಕೆ ತಾನು ಹಾಗೆ ಹೇಳಲೇ ಇಲ್ಲ , ಎಲ್ಲಿ ಬೇಕಾದರೂ ಪ್ರಮಾಣ ಮಾಡುತ್ತೇನೆ ಅಂತ ಬಜಿಲ್ ಬಾಬು ವಾದಿಸಿದ.. ನಾನು ಅರಚಿಕೊಂಡಿದ್ದು ಶರಾಬು ಅಂಗಡಿಗೆ ಬೆಂಬಲವಾಗಿ ಅಂತ ಆತನ ಅಳಲು .." ಅಲ್ಲ ಅದ್ಹೇಗೆ ಆಗ್ತದೆ? ನೀನೂ ಹೇಳಿದ್ದು ಗಡಂಗ್ ರದ್ದಾವಡ್ ಅಂತ ತಾನೇ ? ಅದು ನಮಗೆ ಹೇಗೆ ಬೆಂಬಲ ವಾಗ್ತದೆ" ಒಬ್ಬ ಕುಡುಕ ತರಾಟೆಗೆ ತೆಗೆದುಕೊಂಡ... "ಅಯ್ಯೋ ಸ್ವಾಮೀ, ನೀವೇನ್ ಅರಚಿಕೊಂಡ್ರೋ ನಂಗೊತ್ತಿಲ್ಲ .. ನಾನು ಮಾತ್ರ ಬೊಬ್ಬೆ ಹೊಡೆದದ್ದು ಗಡಂಗ್ ರಡ್ದಾವಾಡ್,   ಗಡಂಗ್ ರಡ್ದಾವಾಡ್ ಅಂತ" (ತುಳುವಿನಲ್ಲಿ ರಡ್ಡ್ ಅಂದ್ರೆ ಎರಡು. ಅಂದ್ರೆ ಆತ ಹೇಳಿದ್ದು ಗಡಂಗ್ ಯೆರಡಾಗ್ಲಿ !!)  ಆತನ ಮಾತಿಗೆ ಅಲ್ಲಿದ್ದವರೆಲ್ಲ ಬಿದ್ದು ಬಿದ್ದು ನಗುತ್ತಿದ್ದರೆ, ಶರಾಬು ಅಂಗಡಿಯಾತ ಆತನ ಬುದ್ಧಿಮತ್ತೆಗೆ ಬಹುಮಾನವಾಗಿ  ಆವತ್ತಿನ ಶರಾಬು ಉಚಿತವಾಗಿ ನೀಡಿದ್ದ!!!

ಚಿತ್ರಕೃಪೆ : ಅಂತರ್ಜಾಲ

Friday, January 22, 2010

ಶೇಕ್ ಅಬ್ದುಲ್ಲ ಮತ್ತು ಸದಾನಂದ!!!

ಆಗಷ್ಟೇ ನಾವು ಗೋವಾ ದಿಂದ ಹಿಂದುರಿಗಿದ್ದೆವು... ಮಧ್ಯಾನ್ನದ ಸುಮಾರು ೧ ಘಂಟೆ.. ಮನೆಗೆ ಬಂದವರೇ  ಸ್ನಾನ ಮಾಡಿ ಊಟಕ್ಕೆ ಅಡುಗೆ ರಾತ್ರಿ ಮಾಡೋಣ ಅಂತ ನಿರ್ಧರಿಸಿ ಗಂಜಿ ಬೇಯಿಸಿಕೊಂಡೆವು.. ಇದ್ದಿದ್ದು ನಾವಿಬ್ಬರೇ, ನಾನು ಮತ್ತು ಸದಾನಂದ... ಹಿಂದಿನ ದಿನ ರಾತ್ರಿ ತುಂಬಾ ತಡವಾಗಿ ಮಲಗಿದ್ದೆವು... ಗೋವಾ ದ ಬೀಚ್ ಅಂದ ಮೇಲೆ ಕೇಳಬೇಕೆ.. ಇಡೀ ರಾತ್ರಿ ಅದು ನಿದ್ರಿಸುವುದಿಲ್ಲ... ಅಲ್ಲಿ ೨೪ ಘಂಟೆಯೂ ಮದ್ಯದ ಆರಾಧನೆ ನಡೆಯುತ್ತಲೇ ಇರುತ್ತದೆ... ಆ ಬೀಚಿನ ಬದಿಯಲ್ಲಿ ಕಳೆಯುವ ಕಾಲವೇ ಒಂಥರಾ ಮಜಾ..ಎಲ್ಲಿ ನೋಡಿದರೂ ಕಾಣುವ ಸಮುದ್ರದ ನೀರು, ಪಕ್ಕದಲ್ಲೇ ಮಲ್ಯನ ಬೀರು...

ನಾನು ಸದಾನಂದನೂ  ೪ ದಿನದ ಗೋವಾ ಪ್ರವಾಸದಿಂದಾಗಿ ಸೋತು ಹೋಗಿದ್ದೆವು.. ಅದ್ಯಾವಾಗ ಹಾಸಿಗೆ ಕಾಣಲಿಲ್ಲವೋ ಅಂತ ನನಗೆ ಅನಿಸತೊಡಗಿತು... ಸ್ನಾನ ಮುಗಿಸಿ , ಗೋವಾ ದಿಂದ ತಂದಿದ್ದ ಅಪರೂಪದ ತೀರ್ಥದ ಜೊತೆ ಗಂಜಿ ಊಟ ಮಾಡಿ ಮುಗಿಸಿದೆವು... ನನಗೋ ಕಣ್ಣು ಎಳೆಯ ಹತ್ತಿತು.. ಸರಿ ಇನ್ನು ಸ್ವಲ್ಪ ಹೊತ್ತು ಮಲಗೋಣ ಅಂತ ನಿರ್ಧರಿಸಿ ಸುಮಾರು ೩ ಗಂಟೆಯ ಹೊತ್ತಿಗೆ ಮಲಗಿದೆವು...

ನಾವು ಗೋವಾ ದಲ್ಲಿ ಉಳಿದು ಕೊಂಡಿದ್ದ ರೆಸಾರ್ಟ್ ನ ಈಜುಕೊಳ
ಟಿನ್ ಟಿನ್.. ಕಾಲಿಂಗ್ ಬೆಲ್ಲು ಕರ್ಕಶ ಶಬ್ದ ಮಾಡುವಾಗಲೇ ಎಚ್ಚರವಾದದ್ದು... ಮಲಗಿದ್ದಲ್ಲಿಂದಲೇ ಮೆಲ್ಲನೆ ಕಣ್ಣು ಬಿಟ್ಟು ನೋಡಿದೆ , ಸುಮಾರು ೪.೧೫ ರ ವೇಳೆ.. ಅದ್ಯಾರೋ ಪುಣ್ಯಾತ್ಮ ಬಂದು ನಮ್ಮ ಒಳ್ಳೆಯ ನಿದ್ದೆ ಹಾಳು ಮಾಡಿದ್ದ.. ನನಗೋ ಪೂರ್ತಿ ಎಚ್ಚರವಾಗಿರಲಿಲ್ಲ...ಅದೇನೋ ಮಂಪರು.. ಸುಮಾರು ನಾಲ್ಕು ದಿನದಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲವಲ್ಲ.. ನನಗೆ ಏಳಲೇ ಆಗದಷ್ಟು ಮಂಪರು.. ಮತ್ತೆ ಹೊದಿಕೆ ಸರಿ ಮಾಡಿ ಗಟ್ಟಿಯಾಗಿ ಮಲಗಿಬಿಟ್ಟೆ... ಟಿನ್ ಟಿನ್.. ಮತ್ತೆ ಕಾಲಿಂಗ್ ಬೆಲ್ಲು ಕರ್ಕಶವಾಗಿ ಶಬ್ದ ಮಾಡಿತ್ತು ... "ಯಾವನೋ ಅವನು ಲೋ..ನಂ ಮಗ" ಅನ್ನುತ್ತಲೇ ನಿಧಾನವಾಗಿ ಎದ್ದು ಕೂತಿದ್ದು ಸದಾನಂದ.. ನನ್ನ ಕಡೆ ನೋಡಿದ .. ನಾನು ಮಂಪರು ಕಣ್ಣಲ್ಲೇ ಆತನನ್ನೊಮ್ಮೆ ನೋಡಿ ಮತ್ತೆ ಕಣ್ಣು ಮುಚ್ಚಿದೆ...ನಿಧಾನಕ್ಕೆ ಸದಾನಂದ ಎದ್ದು ನಿಲ್ಲುವುದಕ್ಕೂ ಟಿನ್ ಟಿನ್ ಅಂತ ಬೆಲ್ಲು ಮತ್ತೆ ಶಬ್ದಮಾಡುವುದಕ್ಕೂ ಸರಿ ಹೋಯಿತು... ಗೊಣಗುತ್ತಾ , ಕಣ್ಣುಜ್ಜಿಕೊಂಡು ಸದಾನಂದ ಬಾಗಿಲು ತೆಗೆದ...ಎದುರಿಗೆ ಅದ್ಯಾರೋ ನಿಂತಿದ್ದವನನ್ನು ದುರುಗುಟ್ಟಿ ನೋಡಿದ..." ಸಾರ್ ಶೇಕ್ ಅಬ್ದುಲ್ಲ ಇದ್ದಾರ??" ಬಂದ ವ್ಯಕ್ತಿ ಕೇಳಿದ್ದು ನಂಗೆ ಅಸ್ಪಷ್ಟವಾಗಿ ಕೇಳಿಸಿತ್ತು...ಅದೆಲ್ಲಿತ್ತೋ ಸಿಟ್ಟು ಸದಾನಂದ ಬಿರ್ರನೆ ಆತನತ್ತ ಗುರಾಯಿಸಿ , ತಾನು ಉಟ್ಟು ಕೊಂಡಿದ್ದ ಲುಂಗಿ ಬಿಚ್ಚಿಬಿಟ್ಟ..!! "ಅಬ್ದುಲ್ಲಾ ಇಲ್ಲಿದ್ದಾನೆ, ಬೇಕಾದ್ರೆ ಶೇಕ್ ಮಾಡಿಕೊ" .. ಸದಾನಂದ ಅಬ್ಬರಿಸಿದ್ದೂ , ಬಂದ ವ್ಯಕ್ತಿ ದಡ ದಡ ನೆ ಮೆಟ್ಟಿಲು ಇಳಿದು ಹೋಗಿದ್ದು ನನಗೆ ನಿದ್ದೆಯ ಮಂಪರಿನಲ್ಲೂ ಕೇಳಿಸುತ್ತಲೇ ಇತ್ತು...!!!!!

Tuesday, January 19, 2010

ಗಡಿಯಾರ!!

ಅದೊಂದು ಹುಚ್ಚು ಹಿಡಿದುಬಿಟ್ಟಿತ್ತು .. ಇದೇನೂ ಹಳೆಯ ಹುಚ್ಚಲ್ಲ.. ಇತ್ತೀಚಿಗೆ ಹುಟ್ಟಿಕೊಂಡಿದ್ದು..ಚಿಕ್ಕವನಿರುವಾಗ ಹಾರ್ಮೋನಿಯಂ ಕಲಿಯಬೇಕು ಅನ್ನುವ ಹುಚ್ಚು ಒಂದು ಬಿಟ್ಟರೆ ಬೇರೆ ಏನೂ ಅಷ್ಟೊಂದು ತಿಳಿದಿರಲಿಲ್ಲ... ಆದರೆ ಹಳ್ಳಿಯಲ್ಲಿ ಇದಕ್ಕೆಲ್ಲ ಪರಿಸ್ತಿತಿ ಒಗ್ಗಿ ಬರದ ಕಾರಣ ಹಾರ್ಮೋನಿಯಂ ಕನಸಾಗಿಯೇ ಉಳಿದಿದೆ... ಆದರೆ ಅದ್ಯಾಕೋ ಕೆಲವು ದಿನಗಳಿಂದ ನನಗೆ ಹಳೆಯ ಮರಳಿನ ಗಡಿಯಾರ ಬೇಕು ಅನ್ನಿಸಿಬಿಟ್ಟಿತ್ತು... ಇದಕ್ಕಾಗಿ ತುಂಬಾ ಹುಡುಕಿದ್ದೂ ಆಯಿತು.. ಕೊನೆಗೊಂದು ಸಿಕ್ಕಿಯೇ ಬಿಟ್ಟಿತಲ್ಲ.. ಹೌದು ಸಾರ್ ನನ್ನತ್ರ ಒಂದು ಹಳೆಯ ಮರಳಿನ ಗಡಿಯಾರ ಇದೆ ಬೇಕಾದ್ರೆ ಕೊಡ್ತೀನಿ ಹಾಗಂತ ಬನ್ನೇರುಘಟ್ಟ ರೋಡ್ನಲ್ಲಿ ಸಿಕ್ಕಿದ ದಿವಾಕರ ಅನ್ನೋ ಪುಣ್ಯಾತ್ಮ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು.. ಆ ಗಡಿಯಾರಕ್ಕೆ ಆತ ಕೇಳಿದ್ದು ಬರೋಬ್ಬರಿ ೮ ಸಾವಿರ ರುಪಾಯಿ.. ಛೆ.. ಏನ್ಮಾಡೋದು... ಸರಿ , ಏನೆ ಇರಲಿ ಒಮ್ಮೆ ನೋಡೋಣ ಅಂತ ಹೇಳಿ ಆತನ ಮನೆಗೆ ಹೋದೆ... ವೌ.. ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ...

ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪  ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ  ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...

ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು



ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..

ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
  ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...

                                      
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ  ಒಂದಕ್ಕೆ ೪೫೦೦೦ ಕ್ಕೆ  ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!