Wednesday, January 30, 2013

ಒಂದು ರಾತ್ರಿ !

"ನಾನೊಮ್ಮೆ ಕಣ್ಣಾರೆ ಇದನ್ನ ನೋಡದೆ ನಂಬೋದಿಲ್ಲ.. ಇವೆಲ್ಲ ಸುಮ್ನೆ ಸುಳ್ಳು.. ೩೦ ವರ್ಷ ಆಯಿತು ಒಂದೇ ಒಂದು ದೆವ್ವ ನಾನು ನೋಡಿಲ್ಲ.." ಕುಮಾರ ಪಕಪಕನೆ ನಕ್ಕ..

"ನಿಂಗೆ ದೆವ್ವ ನೋಡೋ ಆಸೆ ಇದೆಯಾ?" ನಾನು ಕೇಳಿದ್ದಕ್ಕೆ ಮತ್ತೆ ಪಕಪಕನೆ ನಕ್ಕು ಬಿಯರ್ ಗ್ಲಾಸ್ ಕೆಳಗಿಟ್ಟ  ಕುಮಾರ..

"ಒಂದ್ಸಾರಿ ಇವನಿಗೆ ಯಾವದಾದ್ರೂ ರಾಜಕಾರಣಿ ಯನ್ನ ತೋರಿಸ್ರಪ್ಪ" ಸದಾನಂದ ಮೆಲ್ಲನೆ ಗೊಣಗಿದಾಗ ಕುಮಾರ್ ಪಕ್ಕನೆ ನಕ್ಕು ಬಾಯಿಯಿಂದ ಬಿಯರ್ ಹಾರಿಸಿದ್ದು ಮಾತ್ರ ಎಲ್ಲರಿಗೆ ಸಿಟ್ಟು ತರಿಸಿತು..

ಆವತ್ತು ನಾವೆಲ್ಲರೂ ಸದಾನಂದನ ಮನೆಯಲ್ಲಿ ಒಟ್ಟು ಸೇರಿದ್ದವು.. ತುಂಬಾ ದಿನಗಳ ನಂತರ ಗುಂಪು ಒಟ್ಟಾಗಿದ್ದರಿನ್ದ ಎಲ್ಲರೂ ಅದೇನೇನೋ ಮಾತನಾಡುತ್ತ ದೆವ್ವದ ವಿಷಯ ಮಧ್ಯೆ ಬಂದಿತ್ತು..

ಅಷ್ಟರಲ್ಲಾಗಲೇ ರಾತ್ರಿ ೧೧ ಘಂಟೆಯಾಗಿತ್ತು .. ಕುದಿಯಲು ಇಟ್ಟಿದ್ದ ಸಾರಿಗೆ ಒಗ್ಗರಣೆ ಹಾಕಿ ಬಂದ  ಸದಾನಂದ "ನಿಮಗೆ ನಿಜವಾಗಲು ದೆವ್ವ ನೋಡುವ ಆಸಕ್ತಿಯಿದ್ದರೆ ನಾನೊಂದು ಕಡೆ ಕರೆದುಕೊಂಡು ಹೋಗುವೆ..ದೆವ್ವ ಇದೆಯಾ  ಇಲ್ವಾ ಗೊತ್ತಿಲ್ಲ.. ಆದರೆ ಜನ ಮಾತ್ರ ಅದ್ರ ಬಗ್ಗೆ ಮಾತಾಡೋದನ್ನ ಕೇಳಿದ್ದೇನೆ" ಅಂದ ..ಆತ  ಸಾರಿಗೆ ಒಗ್ಗರಣೆ ಹಾಕಿದನೋ ಇಲ್ಲ ಬೇರೆಲ್ಲಾದರೂ ಹಾಕಿದನೋ ಅನ್ನೋ ಅನುಮಾನ ನನಗೆ ಬಂದಿದ್ದು ಆವಾಗ..!! ಕುಮಾರ ಮಾತ್ರ ತಟ್ಟನೆ ಎದ್ದು ನಿಂತ .. "ಇವತ್ತು ಅಲ್ಲಿಗೆ ಹೋಗಲೇ ಬೇಕು.. ನಡೀರಿ" ಕುಮಾರ ಎಲ್ಲರಿಗೆ ಆದೇಶ ನೀಡಿದ.. "ನಂಗೆ ನಿದ್ದೆ ಬರ್ತಿದೆ.. ಊಟ ಮಾಡಿ ಮಲಗ್ತೀನಿ" ಅಂದ ಚಿದಾನಂದ ಆವತ್ತು ಬದುಕಿದ್ದೆ ಹೆಚ್ಚು :)  ಹಾಗೂ ಹೀಗೂ ಮಾತಾಡಿ ಎಲ್ಲರೂ ದೆವ್ವದ ಬೆನ್ನು ಹತ್ತ್ತೋದೆ ಸರಿ ಅಂತ ಹೊರಟೆವು.. ಸದಾನಂದ ಸಫಾರಿ ಕಾರು ಸ್ಟಾರ್ಟ್ ಮಾಡಿದರೆ ಉಳಿದ ನಾವು ೫ ಮಂದಿ ತೆಪ್ಪಗೆ ಕೂತೆವು ..

ಅದು ಚಾರ್ಮಾಡಿ ಘಾಟಿ ಪಕ್ಕದ ಊರು.. ಅಲ್ಲಿಗೆ ಸೀಟು ಅಂತ ಕರೀತಾರ .. ಅಲ್ಲಿ ದೆವ್ವಗಳಿವೆ ಅಂತ ಜನರು ಮಾತಾಡೋದನ್ನ ನಾನೂ ಕೇಳಿದ್ದೆ.. ವರ್ಷಕ್ಕೆ ಒಂದಿಬ್ಬರಾದರೂ ಅಲ್ಲಿನ ಬಸ್ ಸ್ಟಾಂಡ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು.. ಆದರೆ ದೆವ್ವಗಳು ನನ್ನ ಅನುಭವಕ್ಕೆ ಯಾವತ್ತೂ ಬಂದಿರಲಿಲ್ಲ .. ನಾವು ಅಲ್ಲಿ ತಲುಪುವಾಗ ೧೧ ಘಂಟೆ ೫೦ ನಿಮಿಷ.. "ರಾತ್ರಿ ೧೨ ಘಂಟೆಗೆ  ಅಲ್ವ ದೆವ್ವಗಳು ಶಾಪಿಂಗ್ ಹೊರಡೋದು" ನಾನು ಕೇಳಿದ್ದಕ್ಕೆ ಕುಮಾರ ಮತ್ತೆ ನಕ್ಕು ಸಿಗರೇಟು ಹಚ್ಚಿದ..

ಸರಿಯಾಗಿ ರಾತ್ರಿ ೧೨ ಘಂಟೆ.. ದೆವ್ವ ಹೇಗಿರತ್ತೆ? ಇವತ್ತು ಕಾಣಲು ಸಿಗಬಹುದ.. ಬಂದ್ರೆ ನಮ್ಮನ್ನೆಲ್ಲ ಅದು ಜೀವಂತ ಬಿಡುತ್ತಾ ? ಚದಾನಂದ ಪ್ರಶ್ನೆ ಕೇಳುತ್ತಲೇ ಇದ್ದ.. ಸದಾನಂದ, ಕುಮಾರ, ಎಲ್ಲ ಅದೇ ಸೀಟಿನ ಬಸ್ ಸ್ಟಾಂಡ್ ನಲ್ಲಿ ಕೂತು ಸಿಗರೇಟು ಹೋಗೆ ಬಿಡುತ್ತಿದ್ದರು .. ಅಲ್ಲೇನೂ ಅಂತಹ ಘಟನೆ ನಡೆಯಲೇ ಇಲ್ಲ.."ನಾನ್ ಬಂದ್ರೆ ನೋಡು  ದೆವ್ವ ಕೂಡ ಹೊರಗ ಬರೋಕೆ ಹೆದ್ರತ್ತೆ" ಅಂತ ಕುಮಾರ ರೈಲು ಬಿಡುತ್ತಿದ್ದ..

ಸುಮಾರು ೧೨.೩೦ ವರೆಗೂ ಕಾದು ಇನ್ನು ಹೊರಡೋಣ ಅಂತ ತೀರ್ಮಾನಿಸಿದೆವು..ಎಲ್ಲರೂ ಕಾರಿನತ್ತ ಹೆಜ್ಜೆ ಹಾಕಿದರೆ, ಕುಮಾರ ಅಲ್ಲೇ ಬಸ್ ಸ್ಟಾಂಡ್ ನಲ್ಲಿ  ಕೂತು ಇನ್ನೊಂದು ಸಿಗರೇಟಿಗೆ ಬೆಂಕಿ ಹಚ್ಚಿದ .. ನಾವಿನ್ನೇನು ಕಾರು ಹತ್ತಬೇಕು ಅನ್ನುವಷ್ಟರಲ್ಲಿ ಕುಮಾರ ಕಿಟಾರನೆ ಕಿರುಚಿದ್ದ!! ಒಂದು ಕ್ಷಣ ನಾವು ಬೆಚ್ಚಿಬಿದ್ದೆವು!! ಮಧ್ಯರಾತ್ರಿ ೧೨.೩೦!! ಸುತ್ತಲೂ ಕತ್ತಲೆ.. ಕಾರಿನಿಂದ ಟಾರ್ಚ್ ತೆಗೆದವರೇ ನಾವು ಬಸ್ ಸ್ಟಾಂಡ್ ನತ್ತ  ಓಡಿದೆವು .. ಕುಮಾರ ಅಲ್ಲೇ ಒಂದು ಮೂಲೆಯಲ್ಲಿ ಕುಳಿತು ಗಡಗಡನೆ ನಡುಗುತ್ತಿದ್ದ !! ಅರ್ಧ ಸುಟ್ಟ  ಸಿಗರೇಟು ಅಲ್ಲೇ ಬಿದ್ದು ಹೋಗೆ ಕಾರುತ್ತಿತ್ತು ! ಏನಾಯಿತು ಅಂತ ಕೇಳಿದ್ದಕ್ಕೆ ಕುಮಾರ ಕೈ ತೋರಿಸಿದ ಕಡೆ ನೋಡಿದ ನಾವು ಬೆಚ್ಚಿ ಬಿದ್ದೆವು!!

ಅದೇ ಬಸ್ಸ್ಟ್ಯಾಂಡ್ ನಲ್ಲಿ ಒಂದು ಹೆಣ ಹಗ್ಗಕ್ಕೆ ನೇತಾಡುತ್ತಿತ್ತು !!!!

                                                                                        ....ಮುಂದುವರೆಯುವುದು ...


ಗೋರೆ ಉವಾಚ :

ಅದೃಷ್ಟದಲ್ಲಿ ನಂಬಿಕೆಯಿಡಿ .. ಇಲ್ಲದಿದ್ದರೆ ನಿಮ್ಮ ವೈರಿಗಳ ಗೆಲುವನ್ನ ನೀವು ವಿವರಿಸಲಾಗದು !!!

2 comments:

ಶಿವಪ್ರಕಾಶ್ said...

channagide ondu ratri...
waiting for next episode.. :)

sunaath said...

OMG!