Tuesday, March 15, 2011

ನೆನಪಿನಾಳದಿಂದ!

ಆಗಷ್ಟೇ MCA  ಮುಗಿಸಿ ಬೆಂಗಳೂರು ಸೇರಿದ್ದೇ.. ದಿನಾ ಬೆಳಿಗ್ಗೆ ಎದ್ದು ಕೆಲಸ ಹುಡುಕುವುದೇ ಕೆಲಸ!. ಎಷ್ಟೇ ಕಷ್ಟ ಪಟ್ಟರೂ ಉಹುಂ ಒಂದೇ ಒಂದು ಕೆಲಸ ಸಿಕ್ಕಿರಲಿಲ್ಲ. ಕೊನೆಗೂ ಅದೊಂದು ಕಾಲೇಜ್ ನವರು ಕರೆದು ಇಲ್ಲಿ ಒಂದಷ್ಟು ಕಲ್ಸಪ್ಪ ಅಂತ ಹೇಳಿದ್ರು ನೋಡಿ, ಖುಷಿಯಿಂದ ಉಬ್ಬಿ ಬಿಟ್ಟಿದ್ದೆ. ಏನೋ ಒಂದು ಕೆಲಸ ಸಿಗ್ತಲ್ಲ ಅನ್ನೋದಕ್ಕಿಂತ ತೆಗೆದು ಕೊಂಡಿದ್ದ ಎಜುಕೇಶನ್ ಲೋನ್ ಕಟ್ಟೋಕೆ ಸ್ವಲ್ಪ ದುಡ್ಡು ಬರತ್ತಲ್ಲ ಅಂತ ಸಮಾಧಾನ ಪಟ್ಟಿದ್ದೆ. ಆಗ ನನಗೆ ಸಿಕ್ಕಿದ್ದು ಬರೋಬ್ಬರಿ ಆರು ಸಾವಿರ ರೂಪಾಯಿ ಸಂಬಳದ ಕೆಲಸ. ಸರಿ ನೋಡೇ ಬಿಡೋಣ ಅಂತ ಕೆಲಸಕ್ಕೆ ಸೇರಿದ್ದೆ.
"ನಿನ್ನ ಮೊದಲ್ನೇ ಕೆಲಸ ಪಾರ್ಟಿ ಏನೂ ಕೊಡೋಲ್ವ" ಅಂತ ನನ್ನ ಹತ್ತಿರದ ಸಂಬಧಿಕರೊಬ್ಬರು ಗಂಟು ಬಿದ್ದಿದ್ದರು. ಸರಿ ಅದೂ ಒಂದು ಆಗಿಬಿಡಲಿ ಅಂತ ಅದೊಂದು ಸುಮುಹೂರ್ತದಲ್ಲಿ ಬನ್ನಿ ಹೋಗೋಣ ಅಂತ ಹೋಟೆಲ್ ಒಂದಕ್ಕೆ ಕರೆದುಕೊಂಡು ಹೋದೆ. ಅವರೋ ಹೆಂಡತಿ ಮಕ್ಕಳನ್ನೆಲ್ಲ ಕರೆದು ಕೊಂಡು ಬಂದೆ ಬಿಟ್ರು. ನಮ್ಮ ಕಾಲೇಜ್ ಸಮಯದಲ್ಲೆಲ್ಲ ಪಾರ್ಟಿ ಅಂದ್ರೆ ಹೆಚ್ಚಿಗೆ ಅಂದ್ರೆ ೨೦೦-೩೦೦ ರೂಪಾಯಿಗೆ ಮುಗ್ಯೋದು (೮-೧೦ ವರ್ಷಗಳ ಹಿಂದಿನ ಮಾತು ಬಿಡಿ). ಇಲ್ಲಿ ಹೆಚ್ಚಂದರೆ ೧೦೦೦ ರುಪಾಯಿ ಆದೀತು. ಹಾಗಂತ ಲೆಕ್ಕಾಚಾರ ಹಾಕಿದ್ದೆ. ಸರಿ ನಮ್ಮ ಪಾರ್ಟಿ ಶುರು ಆಗಿಯೇ ಬಿಟ್ಟಿತು. ಬಂದಿದ್ದ ನನ್ನ ಸಂಬಧಿಕ ಆತನ ಹೆಂಡತಿ ಮತ್ತು ಇಬ್ಬರು ಮಕ್ಕಳು, ನಾನು ಮತ್ತು ನನ್ನ ಜೊತೆಗಿದ್ದದ್ದು ನನ್ನ ಸ್ನೇಹಿತ ಸದಾನಂದ.
ಅದೇನೇನು ತಿಂದರೋ ಬಿಟ್ರೋ ನನಗಂತೂ ಒಂದೂ ಗೊತ್ತಾಗಲಿಲ್ಲ.. ಬೆಂಗಳೂರಿಗೆ ನಾವು ಹೊಸತು. ಹೋಟೆಲ್  ಮೆನು ನಲ್ಲಿದ್ದ ಐಟಂ ಗಳು ಏನೆಂದೇ ನನಗೆ ಅರ್ಥವಾಗದೆ ಒಂದು ಮಸಾಲೆ ದೋಸೆ ತಿಂದು ನಾನು ನನ್ನ ಸ್ನೇಹಿತ ತಣ್ಣಗೆ ಕೂತು ಬಿಟ್ವಿ. ಅದ್ದೋ ಇದೂ ಆಗಿ ಕೊನೆಗೂ ಬಿಲ್ಲು ಬರುವ ಸಮಯ ಬಂತು ನೋಡಿ.
ಒಂದು ಕ್ಷಣ ನಾನು ಬೆಚ್ಚಿ ಬಿದ್ದೆ!. ಬರೋಬ್ಬರಿ ೧೬೦೦ ರೂಪಾಯಿ ಬಿಲ್ಲು! ಮೆಲ್ಲನೆ ನನ್ನ ಜೇಬಿನಿಂದ ದುಡ್ಡು ತೆಗೆದು ಎನಿಸಿದೆ. ಇದ್ದಿದ್ದು ೧೦೦೦ ಅಷ್ಟೇ. ಮೆಲ್ಲನೆ ಸದಾನಂದನಲ್ಲಿ "ದುಡ್ದೆಷ್ಟಿದೆ" ಅಂತ ಕೇಳಿದೆ. ಆತನಲ್ಲಿ ಇದ್ದಿದ್ದು ೨೦೦ ರೂಪಾಯಿ ಅಷ್ಟೇ. ಮುಗಿದೇ ಹೋಯ್ತು. ಇವತ್ತು ಇನ್ನು ಇಲ್ಲಿ ಮಾನ ಮರ್ಯಾದೆ ಎಲ್ಲಾ ಹರಾಜು ಗ್ಯಾರೆಂಟಿ. ಅದ್ಯಾಕೋ ಇದನ್ನೆಲ್ಲಾ ಅನುಭವಿಸಿರದ ನಾನು ಮೆಲ್ಲನೆ ಬೆವರತೊಡಗಿದ್ದೆ. ಅಷ್ಟರಲ್ಲಿ ಸದಾನಂದ ಮೆಲ್ಲನೆ ಮೇಲೆದ್ದ. ಈಗ ಬರ್ತೀನಿ ಅಂದವನೇ ಅಲ್ಲಿಂದ ಎದ್ದು ಹೋಗಿ ಬಿಟ್ಟ. ಎಲ್ಲಿಗೆ ಏನು ಅಂತ ಏನೂ ತಿಳಿಯದ ನಾನು ಅವಕ್ಕಾಗಿಬಿಟ್ಟೆ. ಒಂದು ಗ್ಲಾಸಿಗೆ ನೀರು ಬಗ್ಗಿಸಿ ಮೆಲ್ಲನೆ ಕುಡಿಯತೊಡಗಿದೆ. ೫ ನಿಮಿಷ ೧೦ ನಿಮಿಷ ಕಳೆದರೂ ಸದಾನಂದನ ಪತ್ತೆಯಿಲ್ಲ.
ಏನ್ ಮಾಡ್ಲಿ. ಪಕ್ಕದಲ್ಲೇ ಇದ್ದ ನನ್ನ ಸಂಬಧಿಕರಲ್ಲೇ ದುಡ್ಡು ಕೇಳಲೇ. ಏನೋ ಒಂದು ಸುಳ್ಳು ಹೇಳಲೇ? ದುಡ್ಡು ಮರ್ತು ಬಂದೆ, ಇಲ್ಲ ಏಟಿಎಂ ಕಾರ್ಡ್ ಮರ್ತು ಬಂದೆ, ಏನಂತ ಹೇಳಲಿ. ಮನಸ್ಸಿನಲ್ಲೇ ಆಲೋಚನೆಗಳ ಓಟ. ಎಲ್ಲಕ್ಕಿಂತ ಹೆಚ್ಚಾಗಿ ಮಾನ ಮರ್ಯಾದೆ ಎಲ್ಲ ಹರಾಜಯಿತಲ್ಲ ಅನ್ನೋ ಸಂಕಟ. ಮತ್ತೆ ಈ ಸದಾನಂದ ನಡು ನೀರಲ್ಲಿ ಕೈ ಕೊಟ್ಟು ಒಡಿ ಬಿಟ್ನಲ್ಲ ಅನ್ನೋ ಸಿಟ್ಟು. ನಾನು ಪೂರ್ತಿ ಬೆವರಿನಿಂದ ಒದ್ದೆ ಯಾಗಿದ್ದೆ. ಇಲ್ಲ ಇನ್ಯಾವ ದಾರಿಯೂ ಉಳಿದಿಲ್ಲ. ಅವರನ್ನ ದುಡ್ಡು ಕೇಳಲೇ ಬೇಕು ಇಲ್ಲಾ ಹೋಟೆಲ್ ನಲ್ಲಿ ಪಾತ್ರೆ ತೊಳೆಯಲೇ ಬೇಕು. ಒಂದು ನಿರ್ಧಾರಕ್ಕೆ ಬಂದೆ. ದುಡ್ಡು ಮರ್ತು  ಬಂದೆ ಅಂತ ಹೇಳಿ ಪಾರ್ಟಿಗೆ ಬಂದವರಲ್ಲೇ ೭೦೦ ರೂಪಾಯಿ ತಗೊಂಡು ಏನಾದ್ರು ಮಾಡಿ ನಾಳೆ ವಾಪಸು ಕೊಡೋದು ಅಂತ ತೀರ್ಮಾನಿಸಿದೆ. ಇನ್ನೇನು ಕೇಳೋಣ ಅಂತ ಹೊರದೊವಷ್ಟ್ರಲ್ಲಿ ನಮ್ಮ ಸದಾನಂದ ಬಂದೆ ಬಿಟ್ಟ!!!
ನೇರವಾಗಿ ಬಂದು ನನ್ನ ಪಕ್ಕ ಕೂತವನೆ , ಮೆಲ್ಲನೆ ನನ್ನ ಕೈಗೆ ಒಂದಷ್ಟು ದುಡ್ಡು ಮೆಲ್ಲನೆ ಇಟ್ಟು ಬಿಟ್ಟ. ಬಗ್ಗಿ ಎಣಿಸಿದೆ. ೧೦೦೦ ರೂಪಾಯಿ. ಎಲ್ಲಿಂದ ಬಂತು, ಹೇಗೆ ಬಂತು ಕೇಳೋವಷ್ಟು ಸಮಯವಿಲ್ಲ. ನನ್ನಲ್ಲಿದ್ದ ದುಡ್ಡು , ಸದಾನಂದ ಕೊಟ್ಟ ದುಡ್ಡು ಎರಡೂ ಸೇರಿಸಿ ಬಿಲ್ಲು ಪಾವತಿಸಿದವನೇ ಅಲ್ಲಿಂದ ಎದ್ದು ಬಂದೆ. ಎಷ್ಟೇ ಕೇಳಿದರೂ ದುಡ್ಡು ಎಲ್ಲಿಂದ ಬಂತು, ಉಹುಂ ಸದಾನಂದ ಬಾಯಿ ಬಿಡಲೇ ಇಲ್ಲ. ನಮ್ಮ ರೂಂ ಸೇರಿಕೊಂಡೆವು.
ದುಡ್ಡು ಎಲ್ಲಿಂದ ಬಂತು ನಾನು ಸದಾನಂದನಲ್ಲಿ ಕೇಳುತ್ತಲೇ ಇದ್ದೆ. ಆತನಿಗೆ ಇದ್ದಿದ್ದು ಆಗ ೩೫೦೦ ರೂಪಾಯಿ ಸಂಬಳ. ಅದು ಬೇರೆ ತಿಂಗಳ ಕೊನೆ. ಆತನಲ್ಲಿ ಅಷ್ಟು ದುಡ್ಡು ಇರೋದಕ್ಕೆ ಸಾಧ್ಯವೇ ಇಲ್ಲ. ಕೊನೆಗೂ ನನ್ನ ಕಾಟ ತಾಳದಾದಾಗ ಸದಾನಂದ ಮೆಲ್ಲನೆ ತನ್ನ ಕೈ ತೋರಿಸಿದ. ನಾನು ಒಂದು ಕ್ಷಣ ಅವಕ್ಕಾದೆ.! ಆತನ ಬೆರಳಲ್ಲಿದ್ದ ಚಿನ್ನದ ಉಂಗುರ ಕಾಣೆಯಾಗಿತ್ತು. ಆತ ಮಧ್ಯದಲ್ಲಿ ಎದ್ದು ಹೋಗಿದ್ದು ಎಲ್ಲಿಗೆ ಅಂತ ಆಗ ನನಗೆ ಅರ್ಥವಾಗಿತ್ತು. ಆತ, ತನ್ನ ಕೈಯಲ್ಲಿದ್ದ ಉಂಗುರವನ್ನೇ ಅಲ್ಲೇ ಎಲ್ಲೊ ಮಾರವಾಡಿಯ ಗಿರವಿ ಅಂಗಡಿಯಲ್ಲಿ ಅಡವಿಟ್ಟು ದುಡ್ಡು ತಂದಿದ್ದ. !! ನಾನು ಮಾತೆ ಬರದೆ ಮೂಕನಾಗಿದ್ದೆ.
ಅಂಥಾ ನನ್ನ ಗೆಳೆಯ ಮೊನ್ನೆ ಹಸೆ ಮಣೆ ಏರಿದ್ದಾನೆ. ಮದುವೆಗೆ ನಾನೂ ಹೋಗಿದ್ದೆ. ಆತನ ಕೈಯಲ್ಲಿ ೩-೪ ಉಂಗುರಗಳು ಆವತ್ತು ಹೊಳೆಯುತ್ತಿದ್ದವು. ಯಾಕೋ ಎಲ್ಲವೂ ಇವತ್ತು ನೆನಪಾಯಿತು.

ಗಮನಿಸಿ: ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಬ್ಲಾಗ್ ಕಡೆ ತಲೆ ಹಾಕದೆ ತುಂಬಾ ದಿನವಾಯಿತು. ನಿಮ್ಮೆಲ್ಲರ ಲೇಖನಗಳನ್ನು ಒಂದೊಂದಾಗಿ ಓದಬೇಕು. ನಾನೂ ಒಂದಷ್ಟು ಬರೀಬೇಕು. ಎಂದಿನಂತೆ ನಿಮ್ಮ ಪ್ರೋತ್ಸಾಹ ವಿರಲಿ. ಇಷ್ಟು ದಿನ ಕಾಣೆಯಾಗಿದ್ದಕ್ಕೆ ಕ್ಷಮೆಯಿರಲಿ.

ಗೋರೆ ಉವಾಚ: ರಸ್ತೆಗಳಿಗೆ ಮತ್ತು ಹುಡುಗಿಯರಿಗೆ ಸಾಮ್ಯತೆ ಇದೆ. ಎರಡರಲ್ಲೂ , ಉಬ್ಬು ತಗ್ಗುಗಳು, ತಿರುವುಗಳು ಹೆಚ್ಚು. ಹಾಗೆಯೇ ಅಪಾಯವೂ ಸಹ.!!

11 comments:

Unknown said...

Buzz mitra ShivaShankara ಯಳವತ್ತಿ kotta pratikriye..
ShivaShankara ಯಳವತ್ತಿ - ಸದಾನಂದ ನಿಮ್ಮ ಉತ್ತಮ ಗೆಳೆಯ. ಈ ಸ್ನೇಹ ಚಿರಕಾಲವಿರಲಿ.

ShivaShankara ಯಳವತ್ತಿ yavarige dhanyavaadagalu..

sunaath said...

ರವಿಕಾಂತ,
ಬಹಳ ದಿನಗಳ ಮೇಲೆ ನಿಮ್ಮ ಭೆಟ್ಟಿ.
ಮನ ಕರಗುವ ಘಟನೆಯನ್ನು ಹೇಳಿದ್ದೀರಿ.

Subrahmanya said...

ರವಿಕಾಂತರೆ,

ನೆನೆಪುಗಳೇ ಹಾಗೆ, ಸಂದರ್ಭ ನೋಡಿಕೊಂಡು ಮರುಕಳಿಸುತ್ತವೆ !. ಹೃದಯ ತುಂಬಿ ಬಂತು.

ಗೋರೆ ಉವಾಚ ..:-)

shivu.k said...

ಸರ್,
ಅಂಥ ಒಳ್ಳೆಯ ಗೆಳೆಯರು ಸಿಕ್ಕಿದ್ದು ನಿಮ್ಮ ಅದೃಷ್ಟ. ನಿಮ್ಮ ಸ್ನೇಹ ಚಿರಕಾರವಿರಲಿ...ಅವರ ಮದುವೆಗೆ ಶುಭಾಶಯಗಳು.

ಸುಧೇಶ್ ಶೆಟ್ಟಿ said...

ಗೋರೆಯವರೇ.....

ಭರ್ಜರಿಯಾಗಿ ಮರು ಎ೦ಟ್ರಿ ಕೊಟ್ಟಿದ್ದೀರಿ :P

ಮನತು೦ಬಿ ಬ೦ತು ಬರಹ ಓದಿ.... ಆಪತ್ಕಾಲದಲ್ಲಿ ಆಗುವವನೇ ನಿಜವಾದ ಗೆಳೆಯ ಅ೦ತ ಸದಾನ೦ದ ನಿರೂಪಿಸಿದ್ದಾರೆ ನಿಮ್ಮ ಗೆಳೆತನದಲ್ಲಿ... ನೀವು ಅದೃಷ್ಟವ೦ತರು.

shridhar said...

touching ... friend in need is a friend in deed ..
Happy friendship

PARAANJAPE K.N. said...

ಇ೦ತಹ ಅನುಭವ ಆದಾಗ ಆಗುವ ಕಷ್ಟ ಊಹಿಸಬಲ್ಲೆ. ನಿಮ್ಮ ಮಿತ್ರರಿಗೆ ಸದಾ ಆನ೦ದ ಪ್ರಾಪ್ತವಾಗಲಿ. ಯಾಕೆ ಇಷ್ಟು ದಿನ ಬ್ಲಾಗಿನಿ೦ದ ದೂರವಿದ್ದಿರಿ ಸ್ವಾಮಿ ?

Unknown said...

ಸದಾನಂದನಂಥವರು ಈ ಭೂಮಿಯಲ್ಲಿ ಸಿಗುವುದು ಬಹಳ ಅಪರೂಪ. ಅಂಥವರ ಗೆಳೆತನ ನಿಮಗೆ ಸಿಕ್ಕೆದೆ ಎಂದಮೇಲೆ ನೀವು ಬಹಳ ಪುಣ್ಯವಂತರು. ನಿಮ್ಮ ಸ್ನೇಹ ಚಿರಕಾಲವಿರಲೆಂದು ಆಶಿಸುತ್ತೇನೆ. ನಿಮ್ಮ ಚುಟುಕಗಳು, ಹಾಸ್ಯದ ಉಲ್ಲೇಖನಗಳನ್ನು ನೋಡಿ, ನಿಮ್ಮನ್ನು ಮತ್ತೆ ಭೇಟಿಯಾಗಬೇಕೆಂದು ಅನಿಸುತ್ತಿದೆ.

ಇಂತಿ ನಿಮ್ಮ ಶಿಷ್ಯ
ಶ್ರೀಪಾದ

Udaya said...

really touching story..

Unknown said...

Excellent Kannada

Nitin Katageri said...

ಓದಿ ತುಂಬಾ ಖುಷಿಯಾಯಿತು. ಧನ್ಯವಾದಗಳು