Friday, October 29, 2010

ಸುಮ್ನೆ ತಮಾಷೆಗೆ - ೪ (ದೀಪಾವಳಿ ವಿಶೇಷ!)

ಪಟಾಕಿ

ದಿನವೂ ಪ್ರೀತಿಸುವ ನನಗೆ
ಪ್ರೇಮಿಗಳ ದಿನ ಬೇಕಾಗಿಲ್ಲ!
ಬಾಯಿ ಬಿಟ್ಟರೆ ಪಟಾಕಿ ಬಿಡುವ ನನಗೆ
ದೀಪಾವಳಿಯೂ ಬೇಕಾಗಿಲ್ಲಾ!!!

-----------------------------------------------------------------------------------------------------------------------------------
ದೀಪಾ-ವಳಿ
ನಮ್ಮ ಓಣಿಗೆ ಹೊಸದಾಗಿ ಬಂದಿದ್ದ
ದೀಪಾಳ ಹಿಂದೆ ಓಣಿ ಹುಡುಗರ ಹಾವಳಿ..
ಅದಕ್ಕೆ ನಮ್ಮ ಕೇರಿಯಲ್ಲಿ ದಿನವೂ
ದೀಪಾ-(ಹಾ)-ವಳಿ!!!

---------------------------------------------------------------------------------------------------------------------------------
ಯಮ ದೀಪ !
ದೀಪಾವಳಿಯ ಮುನ್ನಾ ದಿನ
ಯಮ ಧರ್ಮರಾಯನಿಗೆ
ಯಮದೀಪವಿಟ್ಟೆ!
ಎಣ್ಣೆ ಮುಗಿದು ಯಮನಿಗೆ ದಾರಿ
ಕಾಣದಾದಾಗ, ಮುಂದೆ ಹೋಗು ಅಂತ
ಮೊಂಬತ್ತಿ ಕೊಟ್ಟೆ!!!!
--------------------------------------------------------------------------------------------------------------------------------
(ದುರಾ)ದೃಷ್ಟ!!

ಜಿಪುಣಾಗ್ರೆಸರ ಆತ
ದೀಪಾವಳಿಗೂ  ಪಟಾಕಿ ತರಲಿಲ್ಲ !
ಇದನ್ನು ಕಂಡ ಆತನ ಪ್ರೇಯಸಿ
ತೆಗೋ ಎಂದು ಆತನತ್ತ ಪಟಾಕಿ ಎಸೆದಳು..!!
ಆತನ ದುರಾದೃಷ್ಟಕ್ಕೆ
ಅದಕ್ಕೆ ಬೆಂಕಿಯೂ ಹಚ್ಚಿದ್ದಳು!!!
--------------------------------------------------------------------------------------------------------------------------------
ಗೋರೆ ಉವಾಚ:
ಗಂಡ ಹೆಂಡಿರ ಜಗಳದ ಕೊನೆಗೆ ಬರುವ ನಿರ್ಧಾರಗಳಲ್ಲಿ  ಮೂರು ವಿಧಗಳಿರುತ್ತವೆ.. ಒಂದು ಗಂಡನ ನಿರ್ಧಾರ, ಎರಡನೆದ್ದು ಹೆಂಡತಿಯ ನಿರ್ಧಾರ, ಮತ್ತು ಮೂರನೆಯದು ಸರಿಯಾದ ನಿರ್ಧಾರ..!!!

Friday, September 3, 2010

ಸುಮ್ನೆ ತಮಾಷೆಗೆ-೩ !!!

ನ್ಯಾಯ

ನ್ಯಾಯಕ್ಕೆ ಕಣ್ಣಿಲ್ಲ
ಅಂತ ಗೊತ್ತಿದ್ದ  ನಮ್ಮ ಮಂತ್ರಿವರ್ಯರು ,
ಮೀಸಲಾತಿಯಲ್ಲಿ
ಕುರುಡನನ್ನು
ಲೋಕಾಯುಕ್ತರನ್ನಾಗಿಸಿದರು !!!

ಕವಿ

ರವಿ ಕಾಣದ್ದನ್ನು ಕವಿ ಕಂಡ
ಅನ್ನೋ ಮಾತು ಕೇಳಿ
ರವಿ ಅನ್ನೋ ನಾನು ಕವಿಯಾಗ ಹೊರಟೆ..
ಮುಂದೆಲ್ಲಾ ಕತ್ತಲು
ಏನೂ ಕಾಣಿಸಲೇ ಇಲ್ಲ..!!

ಬೇವು - ಬೆಲ್ಲ
ನಾನ್ಯಾವತ್ತು ಸಿಹಿಯಾಗಿರಬೇಕು ಅಂತ
ಸಿಕ್ಕಾಪಟ್ಟೆ ಸಿಹಿ ತಿಂದೆ..
ದೇಹ ಸಿಹಿಯಾಯಿತು
ಮನಸು ಕಹಿಯಾಯಿತು!!!

ಗೋರೆ ಉವಾಚ :
ಜೀವನ ಅಂದ್ರೆ ಇಷ್ಟೇ.. ಮಕ್ಕಳಿಗೆ ಮೊದಲ ೨-೩ ವರ್ಷ ಹೇಗೆ ನಡೆಯೋದು, ಹೇಗೆ ಮಾತಾಡೋದು ಅಂತ ಕಲಿಸುತ್ತಾ  ಕಳೆಯುತ್ತೇವೆ... ಮುಂದಿನ ೧೬ ವರ್ಷ "ಸುಮ್ನೆ ಕೂತ್ಕೋ", "ಮಾತಾಡಬೇಡ" ಅನ್ನುತ್ತಾ ಕಳೆಯುತ್ತೇವೆ!!!

Friday, August 13, 2010

ಆ ಸಿಗರೇಟು ಮತ್ತು ಇ-ಸಿಗರೇಟು !!!

ಸಿಗರೇಟು.. ಜೀವನದಲ್ಲಿ ಒಮ್ಮೆಯಾದರೂ ಸೇದದವರು ತುಂಬಾ ವಿರಳ.. ಒಂದು ತುದಿ ಬಾಯಿಗಿಟ್ಟು ಇನ್ನೊಂದು ತುದಿಗೆ ಬೆಂಕಿ ಹಚ್ಚಿ, ಬುಸ್ಸ್ಸ್ ಬುಸ್ಸ್ಸ್ ಅಂತ ಹೊಗೆ ಬಿಡೋದು ಅಂದ್ರೆ ಅದೇನೋ ಮಜಾ.. ಆದರೆ ಇದನ್ನೇ ಸೇದಿ ಸೇದಿ ಮುಂದೊಂದು ದಿನ ಕ್ಯಾನ್ಸೆರ್ ನಂಥ ಕಾಯಿಲೆ ಬಂದಾಗ ಭೀಕರ ಸಜಾ!!! ಇಂತಹ ಕಾಯಿಲೆಯಿಂದ ದೂರವಾಗಲು, ಸಿಗರೇಟು ತ್ಯಜಿಸಲೇ ಬೇಕು.. ಆದರೆ ಇದು ಸಾಧ್ಯವಾಗುತ್ತಿಲ್ಲವೇ..? ಅಂಥ್ವರಿಗಾಗಿಯೇ ಬಂದಿದೆ ಇ-ಸಿಗರೇಟು.... ಈಗ ಆ ಸಿಗರೇಟು ಬಿಟ್ಟು ಹಾಕಿ ಇ - ಸಿಗರೇಟು ಶುರು ಹಚ್ಚಿ...


ಏನಿದು ಇ- ಸಿಗರೇಟು?

ಇ-ಸಿಗರೇಟು ಅಂದರೆ ಎಲೆಕ್ಟ್ರೋನಿಕ್ ಸಿಗರೇಟು.. ಅರೆ ಅಂದರೆ ಇದಕ್ಕೆ ಕರೆಂಟ್ ಬೇಕಾ? ಹೌದು .. ಬೆಚ್ಚಿ ಬೀಳಬೇಡಿ . ಇ-ಸಿಗರೇಟು ಉರಿಯೋದು ಒಂದು ಚಿಕ್ಕ ಬ್ಯಾಟರಿ ಇಂದಾಗಿ.. ಇದನ್ನು ತಯಾರಿಸುವವರು ಇದು ತಂಬಾಕು ಸಿಗರೆಟ್ ನಂತೆ ಹಾನಿಕಾರಿಯಲ್ಲ.. ಇದರಿಂದ ಬರುವ ಹೊಗೆ ಪರಿಸರಕ್ಕಾಗಲಿ, ಅಕ್ಕ ಪಕ್ಕಾ ದವರಿಗಾಗಲಿ ಯಾವುದೇ ಹಾನಿಯುಂಟು ಮಾಡುವುದಿಲ್ಲ  ಎಂದು ಹೇಳಿಕೊಳ್ಳುತ್ತಾರೆ.. ಇದರ ಬಗ್ಗೆ ಮುಂದೆ ನೋಡೋಣ .. ಈಗ ಇ-ಸಿಗರೇಟು ಅಂದರೆ ಹೇಗಿರುತ್ತೆ ಸ್ವಲ್ಪ ನೋಡೋಣ..

ಈ ಮೇಲಿನ ಚಿತ್ರ ದಲ್ಲಿರುವುದೇ ಇ-ಸಿಗರೇಟು.. ನೋಡಲು ಸಾಮಾನ್ಯ  ಸಿಗರೇಟಿನಂತೆ ಕಾಣಿಸುವ ಇದು ಸಾಮಾನ್ಯ ಸಿಗರೆಟಲ್ಲ.. ಇದರಲ್ಲಿ ತಂಬಾಕು ಇಲ್ಲ.. ಬೆಂಕಿ ಹಚ್ಚುವ ಅವಶ್ಯಕತೆ ಇಲ್ಲ..  ಆದರೂ ಸೇದಬಹುದು.. ಹೊಗೆ ಬರುತ್ತೆ.. ಥೇಟು ಸಿಗರೇಟು ಸೇದಿದ ಅನುಭವ ಕೊಡುತ್ತೆ..  ಅಷ್ಟೇ ಅಲ್ಲ ಇದನ್ನು ನೋ ಸ್ಮೋಕಿಂಗ್ ಜಾಗದಲ್ಲೂ  ಸೇದಬಹುದಂತೆ..!!! ಅಕ್ಕ ಪಕ್ಕದವರಿಗೆ ಯಾವುದೇ ತೊಂದರೆಯಿಲ್ಲ!!!

ಹಾಗಾದರೆ ಇದರಲ್ಲೇನಿದೆ?

ಮೇಲಿನ ಚಿತ್ರದಲ್ಲಿರೋದೆ ಇ-ಸಿಗರೇಟಿನ ಭಾಗಗಳು..
A . ಎಲ್ ಇ ಡಿ (ಇದು ಉರಿದಾಗ ಸಿಗರೇಟಿನ ತುದಿಯ ಕೆಂಡದಂತೆ ಕಾಣಿಸುತ್ತೆ)
B . ಬ್ಯಾಟರಿ (ಹಾಗು ಕೆಲವು circuit  ಗಳು ಇದರೋಳಗಿವೆ)
C . ಬಿಸಿಯಾಗಿಸುವ ಭಾಗ
D . ಬಾಯಿಯೋಳಗಿಡುವ ಫಿಲ್ಟರ್ (Cratridge )

ಹೇಗೆ ಕೆಲಸ ಮಾಡುತ್ತದೆ?

  ಈ ಇ-ಸಿಗರೇಟಿನ ಫಿಲ್ಟರ್ ಭಾಗವನ್ನು ಬಾಯಿಯಲ್ಲಿಟ್ಟು ಎಳೆದಾಗ ಇದರಲ್ಲಿರೋ ಸೇನ್ಸೆರ್ ಗಾಳಿಯ ಒತ್ತಡ ಅರಿತು ಬಿಸಿಯಾಗಿಸುವ ಭಾಗಕ್ಕೆ ಎಲೆಕ್ಟ್ರೋನಿಕ್ ಸಿಗ್ನಲ್  ಕಳಿಸುತ್ತೆ.. ಆಗ ಈ ಭಾಗ ಬಿಸಿಯಾಗಿ ಫಿಲ್ಟರ್ (Cratridge ) ಒಳಗಿರುವ ಅಲ್ಪ  ನಿಕೋ ಟೀನ್ ನ (ಅಥವಾ ನಿಕೋಟಿನ್ ಇಲ್ಲದ) ದ್ರವ ಪದಾರ್ಥವನ್ನು ಆವಿಯನ್ನಾಗಿಸುತ್ತದೆ.. ಕೆಲವು ಇ-ಸಿಗರೆಟುಗಳಲ್ಲಿ ಒಂದು ಚಿಕ್ಕ ಬಟನ್ ಒತ್ತಿ ಬಿಸಿಯಾಗಿಸುವ ಭಾಗವನ್ನು ಶುರು ಮಾಡಬೇಕಾಗುತ್ತೆ... ಹಾಗೆ ಇದರ ತುದಿಯಲ್ಲಿ ಒಂದು ಎಲ್ ಇ ಡಿ  ಲೈಟು ಉರಿದು , ಸಿಗರೇಟಿನ ಅನುಭವ ನೀಡುತ್ತೆ..

ಇದರ ಬಾಯಿಯೋಳಗಿಡುವ ಫಿಲ್ಟರ್ ಅನ್ನು ಪ್ಲಾಸ್ಟಿಕ್ ನಿಂದ ತಯಾರಿಸಿರುತ್ತಾರೆ.. ಇದರಲ್ಲಿ ಉಷ್ಣತೆಗೆ ಆವಿಯಾಗುವ ವಿವಿಧ ರುಚಿಯ ನಿಕೋಟಿನ್ ಯುಕ್ತ ದ್ರವವನ್ನು ತುಂಬಿಸಿರುತ್ತಾರೆ.. ಈ ದ್ರವವೇ ಉಷ್ತ್ನತೆಗೆ ಆವಿಯಾಗಿ ಹೊಗೆ ಬರುವಂತೆ ಮಾಡುವುದು.. ಇದು ಮುಗಿದಾಗ ಇದನ್ನು ಮತ್ತೆ ತುಂಬಿಸಬಹುದು ಅಥವಾ ಹೊಸ cratridge ಹಾಕಬಹುದು..

ಮತ್ತೆ ಇದರ ಬ್ಯಾಟರಿ ರೀ-ಚಾರ್ಜ್ ಮಾಡುವಂಥದ್ದು.. ಕೆಳಗೆ ನೋಡಿ ಇದನ್ನ ಹೇಗೆ ಚಾರ್ಜ್ ಮಾಡುತ್ತಾರೆ ಅಂತ.. (ಇನ್ನೊಂದು ತುದಿಯನ್ನು ಯು ಎಸ ಬಿ ಹೊಲ್ದೆರ್ ಗೆ ಹಾಕಬೇಕು :))..

ಗಮನಿಸಿ: ಇದರಲ್ಲಿ ಹಾಕುವ ದ್ರವ ಪದಾರ್ಥ ನಿಕೋಟಿನ್ ಯುಕ್ತ ಅಥವಾ ನಿಕೋಟಿನ್ ಇಲ್ಲದೆ ಕೂಡ ಸಿಗುತ್ತದೆ..
ಬೇರೆ ಬೇರೆ ಬಗೆಯ cratridge ಗಳು ಮತ್ತು ಅವುಗಳಲ್ಲಿರುವ ಪದಾರ್ಥಗಳು ಕೆಳಗಿನಂತಿವೆ..


ಇದರ ಒಂದು cratridge ೭೦-೮೦ ಬಾರಿ ಸೇದಲು ಸಾಕಾಗುತ್ತೆ.. ಹಾಗೆ ಬ್ಯಾಟರಿ ಮುಗಿದಿದೆ ಹಾಗೂ ಚಾರ್ಜ್ ಆಗಿದೆ ಅನ್ನೋ ಸೂಚನೆ ಕೊಡೊ ಲೈಟ್ ಬತೇರಿ ಮೇಲೆ ಇವೆ...

ಆರೋಗ್ಯದ ಮೇಲೆ ಇದರ ಪರಿಣಾಮ:

 ಇದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಇಲ್ಲ ಅಂತ ಇದರ ತಯಾರಕರು ಹೇಳಿಕೊಂಡಿದ್ದರೂ ಅದು ಸಾಬೀತಾಗಿಲ್ಲ.. ಇದರ ಮೇಲೆ ಇನ್ನೂ ಅಧ್ಯನ ನಡೆಯುತ್ತಲೇ ಇದೆ.. ಈಗಾಗಲೇ ಇದರ ಮೇಲೆ ಕೆಲವು ದೇಶಗಳು ನಿರ್ಬಂಧ ಹೇರಿವೆ..
ಅಮೆರಿಕಾದ ಸಂಸ್ಥೆ ಯೊಂದು NJoy  ಮತ್ತು Smoking Everywhere ಅನ್ನೋ ಕಂಪೆನಿಗಳ ಇ-ಸಿಗರೆಟ್ ಮೇಲೆ ಅಧ್ಯಯನ ಮಾಡಿ ಇದರಲ್ಲಿ ಮಾರಕ ರಾಸಾಯನಿಕಗಳು ಹಾಗು ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ನಿಕೋಟಿನ್  ಇದೆ ಎಂದು ಪತ್ತೆ ಹಚ್ಚಿದೆ..
ಆದರೆ ಇದನ್ನು ಕಂಪನಿ ಅಲ್ಲ ಗಳೆದಿದೆ.. ಕೆಲವೊಂದು ಸಂಸ್ಥೆ ಗಳು ಈಗಾಗಲೇ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಇನ್ನು ಕೆಲವು ಇದು ಕೂಡ ಹಾನಿಕಾರಕ ಹಾಗೂ ಬಿಡಿಸಲಾಗದ ವ್ಯಸನ ಎಂದು ದೂರಿವೆ..
ಕೆನಡ ಕೂಡ ಇ-ಸಿಗರೆಟ್ ಅಷ್ಟೊಂದು ಉತ್ತಮವಲ್ಲ ಅಂತ ಹೇಳಿದೆ..ಇದರಿಂದಾಗಿ ತಂಬಾಕಿನ ವಿಷ ದೇಹದ ಮೇಲೆ ಪರಿಣಾಮ ಬೀರಬಹುದು (ಫುಡ್ Poisoning  ಥರ) ಹಾಗು ಇದನ್ನು ಉಪಯೋಗಿಸುವವರು ಇದಕ್ಕೆ ದಾಸರಾಗಬಹುದು ಅನ್ನೋ ಎಚ್ಚರಿಕೆ ಕೂಡ ನೀಡಿದೆ.. ಅದೇ ರೀತಿ ನ್ಯೂಜೀ ಲ್ಯಾಂಡ್ ನ ಕೆಲವು ವಿಜ್ಞಾನಿಗಳು ಇದರ ದುಷ್ಪರಿಣಾಮಗಳ ಬಗ್ಗೆ ಅಧ್ಯನ ನಡೆಸುತ್ತಲೇ ಇದ್ದಾರೆ..
 ಭಾರತ ದಲ್ಲಿ ಕೂಡ ಇದು ಸಿಗುತ್ತೆ.. ಭಾರತದಲ್ಲಿ ಸಿಗದ್ದೇನು ಅಲ್ಲವೇ? ಅದು ಎಸ್ಟೆ ಕೆಟ್ಟದಾದರೂ, ಲಂಚ ಪಡೆದು ಮಾರುಕಟ್ಟೆಗೆ ಬಿಡಲು ಅನುಮತಿ ನೀಡುವ ಬ್ರ್ಹಷ್ಟರು ನಮ್ಮಲ್ಲಿ ಬೇಕಾದಷ್ಟಿದ್ದಾರೆ...ಅಂದ ಹಾಗೆ ಇದರ ಬೆಲೆ ಸುಮಾರು ೧೫೦೦ ರುಪಾಯಿಯಿಂದ ೪೦೦೦ ರುಪಾಯಿವರೆಗಿದೆ..




                                        
ಇದು ಕೂಡ ಒಂದು ಮಾದರಿಯ ಇ-ಸಿಗರೆಟ್

ಏನೇ ಇರಲಿ ಇದರ ತಯಾರಕರು ಮಾತ್ರ ಇದು ಸುರಕ್ಷಿತ, ಸಿಗರೇಟು ಸೇವನೆಯ ಅಭ್ಯಾಸ ಬಿಡಿಸಿ ನಿಮ್ಮ ಆರೋಗ್ಯ ಕಾಪಾಡುತ್ತದೆ ಹಾಗೂ ಹಣ ಉಳಿಸುತ್ತದೆ ಅಂತ ಪ್ರಚಾರ ಮಾಡಿಕೊಂಡಿವೆ..


ಸೂಚನೆ: ಈ ಲೇಖನ ನಮ್ಮೆಲ್ಲರ ಮಾಹಿತಿಗಾಗಿ ಅಷ್ಟೇ.. ಯಾರಾದರು ಇ-ಸಿಗರೆಟ್ ಸೇದಿ , ಆರೋಗ್ಯ ಅಥವಾ ಅವರ ಹವ್ಯಾಸ, ಜೀವನದ ಮೇಲೆ ದುಷ್ಪರಿಣಾಮಗಳಾದರೆ  ಅದಕ್ಕೆ ನಾನು ಜವಾಬ್ದಾರನಲ್ಲ :D  


ಗೋರೆ ಉವಾಚ :
ವಿದ್ಯುತ್ತೆ ಕಾಣದ ಆ ಹಳ್ಳಿಗೆ ವಿದ್ಯುತ್ ಬಂದಿತ್ತು.. ಜನ ಖುಷಿಯಿಂದ ಕುಣಿಯುತ್ತಿದ್ದರೆ ಪಕ್ಕದಲ್ಲಿ ಒಂದು ನಾಯಿ ಸಹ ಡಾನ್ಸ್ ಮಾಡತೊಡಗಿತು.. ಅದನ್ನು ನೋಡಿದ ಹಳ್ಳಿಯ ಮುಖಂಡ ಅಚ್ಚರಿಯಿಂದ ನಾಯಿಯ ಬಳಿ ಸಾಗಿ ಕೇಳಿದ " ನಾಯಿ, ನಮಗೆ ವಿದ್ಯುತ್ ಬಂತು ಅದಕ್ಕೆ  ಸಂತೋಷ ದಿಂದ ಕುಣೀತಾ ಇದ್ದಿವಿ, ನೀನ್ಯಾಕೆ ಕುಣಿತಿದ್ದಿಯಾ?" .. ಆತನನ್ನೊಮ್ಮೆ ದುರುಗುಟ್ಟಿ ನೋಡಿದ ನಾಯಿ "ನಿಮ್ಮ ವಿದ್ಯುತ್ ಜೊತೆ ಕಂಬನೂ ಊರಿಗೆ ಬಂದಿದ್ಯಲ್ಲ" ಅಂತ ಹೇಳಿ ತನ್ನ ಡಾನ್ಸ್ ಮುಂದುವರೆಸಿತು!!

Monday, June 14, 2010

ವಿಚಿತ್ರ ಪ್ರಾಣಿ!!!

ದಿಸ್ಕಾವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ geography  ಇಂತಹ ಚಾನೆಲ್ ನೋಡೋದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಇದರಲ್ಲಿ ತೋರಿಸೋ ಚಿತ್ರ ವಿಚಿತ್ರ ಪ್ರಾಣಿಗಳನ್ನ ನೋಡೋದು ಅಂದ್ರೆ ತುಂಬಾ ಇಷ್ಟ.. ಅವುಗಳ ಜೀವನ ಶೈಲಿ, ಬದುಕೋ ರೀತಿ, ವಿಚಿತ್ರ ಎನ್ನಿಸುವ ರೂಪ, ಪ್ರಕೃತಿಗೆ ಅವು ಹೊಂದುಕೊಳ್ಳುವ ಬಗೆಗಳು... ಇವನ್ನೆಲ್ಲಾ ಮೊನ್ನೆ ನೋಡುತ್ತಾ ಕೂತಿದ್ದೆ... ಅದ್ಯಾವುದೋ ಪ್ರಾಣಿಯೊಂದನ್ನು ನೋಡುತ್ತಿದ್ದ ನಾನು "ಒಹ್, ಈ ಪ್ರಾಣಿ ವಿಚಿತ್ರವಾಗಿದೆ " ಅಂತ ಉದ್ಗರಿಸಿದೆ...
"ಏನು?? ವಿಚಿತ್ರನಾ?? ಏನ್ ವಿಚಿತ್ರ? ಬಹುಶ ಭೂಮಿಯ ಮೇಲೆ ಅದರಲ್ಲೂ ಈ ಭಾರತ ದೇಶದಲ್ಲಿರೋ  ಮನುಷ್ಯ ನಷ್ಟು ವಿಚಿತ್ರ ಪ್ರಾಣಿ ಇನ್ನೊಂದಿಲ್ಲ" ಹಾಗಂತ ಸದಾನಂದ ಮೆಲ್ಲನೆ ಗೊಣಗಿದ್ದು ಕೇಳಿಸಿತು..
"ಯಾಕೆ ಏನಾಯಿತು? ಮನುಷ್ಯ  ಅದರಲ್ಲೋ ಭಾರತೀಯ ವಿಚಿತ್ರ ಅಂತ ಯಾಕೆ ಅನ್ನಿಸುತ್ತೆ ನಿಂಗೆ?" ಆತನಿಗೆ ಕೇಳಿದ್ದೆ ತಡ ಆತ ದೊಡ್ಡ ಭಾಷಣವೇ ಶುರು ಮಾಡಿದ್ದ...
"ಮತ್ತಿನ್ನೇನು.. ಇಲ್ಲಿ ಎಲ್ಲವೂ ಹುಚ್ಚು..
ಮನುಷ್ಯನಿಗೆ ಅತೀ ಅಗತ್ಯವಾದ ಪೋಲೀಸು , ಅಂಬು ಲೆನ್ಸ್  ಬರೋಕೆ ಗಂಟೆಗಟ್ಟಲೆ ಕಾಯಬೇಕು.. ಅದೇ ಪಿಜ್ಜಾ ಅನ್ನೋ ದರಿದ್ರ ೩೦ ನಿಮಿಷಗಳಲ್ಲಿ ಮನೆಗೆ ಬರುತ್ತೆ..
ಇಲ್ಲಿ  ಕಾರ್ ಸಾಲಕ್ಕೆ ಬಡ್ಡಿ ಕೇವಲ ೮%, ಅದೇ ಶಿಕ್ಷಣ ಸಾಲಕ್ಕೆ ೧೨%..
ಅಕ್ಕಿಗೆ ೪೦ ರುಪಾಯಿ, ಸಿಮ್ ಕಾರ್ಡು ಉಚಿತ...
ಕಾಲಿಗೆ ಹಾಕೋ ಚಪ್ಲಿನ ಹವಾನಿಯಂತ್ರಿತ ಶೋ ರೂಂ ಗಳಲ್ಲಿ ಮಾರ್ತಾರೆ, ಅದೇ ನಾವು ತಿನ್ನೋ ತರಕಾರಿ ಫೂಟ್ಪಾತಿನಲ್ಲಿ...
ಕುಡಿಯೋ ನಿಂಬೆ ಶರಬತ್ತಿಗೆ ರಾಸಾಯನಿಕ ಪದಾರ್ಥ, ಅದೇ ಬಟ್ಟೆ ಒಗೆಯೋ ಪೌಡರ್ ಶುದ್ಧ ನಿಂಬೆಯದ್ದು....
ನಿಂಗೆ ಇದೆಲ್ಲ ವಿಚಿತ್ರ ಮನುಷ್ಯರ ಥರಾ ಅನ್ಸಲ್ವಾ? ಮನುಷ್ಯ ಒಂದು ಪ್ರಾಣಿ ಅಂತ ಹೇಳೋದಾದ್ರೆ, ನಾವೇ ಎಲ್ಲಕ್ಕಿಂತ ವಿಚಿತ್ರ ಅಲ್ವಾ??"
 ಹಾಗಂತ ಆತ ಕೇಳಿದ್ದಕ್ಕೆ "ಆಲೋಚಿಸಬೇಕಾದ ವಿಚಾರ" ಅಂದಷ್ಟೇ ಹೇಳಿ ಸುಮ್ಮನಾದೆ..!!

(ಕೆಳಗಿನ ಕಾಲೋಮ್ "ಶಂಭುಲಿಂಗ" ಅವರ  ಕೊನೆಖಿಡಿ  ಕಾಲಂ ನೋಡಿದ ಮೇಲೆ , ನಾನೂ ಇಂಥದ್ದೇ ಒಂದು ಕಾಲಂ ಪ್ರತಿ ಬರಹದ ಕೆಳಗೆ  ಮಾಡಬೇಕು ಅಂತ ತೀರ್ಮಾನಿಸಿದ್ದು)

ಗೋರೆ ಉವಾಚ (ಕದ್ದಿದ್ದು)
ಮಲ್ಲಿಕಾ ಶೆರಾವತ್ ಮಿಕ್ಸಿಯಲ್ಲಿ  ಅದೇನೋ ಮಾಡುತ್ತಿರೋದು ನೋಡಿ ಮನೆ ಕೆಲಸದವ ಕೇಳಿದ " ಮೇಡಂ , ಜೂಸ್ ಮಾಡ್ತಾ ಇದ್ದೀರಾ??"
ಅದಕ್ಕೆ ಮಲ್ಲಿಕಾ ಶೆರಾವತ್ ಹೇಳಿದಳು " ಇಲ್ಲ ಮಾರಾಯಾ.. ನನ್ನ ಬಟ್ಟೆ ಒಗಿತಾ ಇದ್ದೇನೆ!!"

Tuesday, May 11, 2010

ಸುಮ್ನೆ ತಮಾಷೆಗೆ!! - ೨

ಕಥೆ
ನಾನೊಂದು ಕಥೆ ಬರೆದೆ
ಓದಿ ಅಭಿಪ್ರಾಯ ಹೇಳು ಅಂತ ಗೆಳೆಯನಿಗೆ ಕೊಟ್ಟೆ
ಆತ ಕಥೆಗಾರನಾದ!!
-------------------------------------------------------------------------------------------------------------
ಗುರುತು
ಭಾರತದಲ್ಲಿರುವವರು
ಭಾರತದವರು,
ಅಮೇರಿಕಾ ದಲ್ಲಿರುವವರು
ಅಮೇರಿಕಾದವರು,
ಆಸ್ಟ್ರೇಲಿಯಾದಲ್ಲಿರುವವರು
ಆಸ್ತ್ರೆಲಿಯಾದವರು,
ಮಲಬಾರ್ ನಲ್ಲಿರುವವರು
ಮಲ-ಬಾರದವರು!!!
-------------------------------------------------------------------------------------------------------------
ಅಡ್ಡ-ನಾಮ
ಹುಡುಗನಾದರೆ ಬೆಳ್ಳ,
ಹುಡುಗಿಯಾದರೆ ಬೆಳ್ಳಿ,
ಹಾಗಂತ ನನಗೆ ಹೇಳಿದ್ದು
ಬೆಳ್ಳುಳ್ಳಿ!!!
-------------------------------------------------------------------------------------------------------------

Wednesday, April 7, 2010

ಮತ್ತೆ ಭೂತದ ಬೆನ್ನು ಹತ್ತಿ!!!

ಭಾಗ ಒಂದು ಇಲ್ಲಿ ಓದಿ..

"ಆವತ್ತೇ ನನಗೆ ಗೊತ್ತಾಗಿ  ಹೋಗಿತ್ತು ಇದು ನನ್ನ ಬೆನ್ನು ಬಿಡೋದಿಲ್ಲ ಅಂತ"  ಕುಮಾರ ತನ್ನ ಮಾತು ಮುಂದುವರಿಸಿದ..
"ಜ್ಯೋತಿಷಿ ಪಕ್ಕಾ ಹೇಳಿದ್ದ.. ನಿನ್ನ ಮನೆಯಲ್ಲಾಗಲೀ ಆಜು ಬಾಜಿನಲ್ಲಾಗಲಿ ಮಾಟ ಮಾಡಿ, ಭೂತವನ್ನು ಬಂಧಿಸಿ ಇಡಲಾಗಿದೆ ಅಂತ.. ತುಂಬಾ ಹುಡುಕಿದೆ ಆದ್ರೆ ಏನೂ ಸಿಗಲಿಲ್ಲ..ಸಾಮಾನ್ಯವಾಗಿ ಇಂಥದ್ದೆಲ್ಲಾ ತಾಮ್ರದ ತಗಡಿನಲ್ಲಿ ಮಂತ್ರಿಸಿ, ಅಥವಾ ತೆಂಗಿನಕಾಯಿ, ನಿಂಬೆ ಹಣ್ಣು ಮಂತ್ರಿಸಿ ಮಾಡುತ್ತಾರಂತೆ, ಮಾಟದ ಪ್ರಭಾವ ದಿಂದ ಹೊರ ಬರಬೇಕಾದರೆ ಅದನ್ನು ನಮ್ಮ ಜಾಗದಿಂದ ದೂರ ಎಸೆಯಬೇಕು.. ಆವತ್ತಿಂದ ಹುಡುಕಿ ಹುಡುಕಿ ಸಾಕಾಯಿತು..ನನಗೇನೂ ಸಿಗಲಿಲ್ಲ...  ಪೂಜೆ ಹವನ ಎಲ್ಲಾ ಮಾಡಿಸ್ದೆ.. ಇಗೀಗ ನನ್ನ ಮಗಳು ಸಹ ಮಂಕಾಗಿರುತ್ತಾಳೆ.. ಮಾತೆ ಆಡೋದಿಲ್ಲ .. ಅವಳಿಗೆ ಏನಾದ್ರು ಆದ್ರೆ ಅಂತ ಹೆದರಿಕೆ." ಒಂದು ಕ್ಷಣ ಕುಮಾರ ಮಾತು ನಿಲ್ಲಿಸಿದ..
"ಇದು ೨೧ನೆ ಶತಮಾನ.. ಮಾಟ ಮಂತ್ರ ಇದ್ಯೋ ಇಲ್ವೋ ನಂಗೊತ್ತಿಲ್ಲ.. ದರಬೆಸಿ ಜನಗಳಿಗಿಂತ ದೊಡ್ಡ ಭೂತಾನೂ ಇರಲಿಕ್ಕಿಲ್ಲ,,, ಆದರೆ ನೀನೇನೂ ಹೆದರಬೇಡ... ಇದಕ್ಕೊಂದು ಪರಿಹಾರ ಇದೆ.." ನನ್ನ ಮಾತು ಕೇಳುತ್ತಿದ್ದ ಕುಮಾರ ನೆಟ್ಟಗಾದ... ಆತನಲ್ಲಿ ಕುತೂಹಲ ಮೂಡಿತು.. ಏನಾದರೂ ಮಾಡಿ ಈ ಮಾಟ-ಭೂತದಿಂದ ಹೊರ ಬಂದರೆ ಸಾಕು ಅನ್ನುವಂತಿತ್ತು ಆತನ ನೋಟ.. ಏನೆ ಹೇಳಿದರೂ ಮಾಡಲು ತಯಾರಾದಂತೆ ಅನ್ನಿಸಿತು...
"ನನಗೆ ಗೊತ್ತಿರೋ ಒಬ್ರು ಇದ್ದಾರೆ.. ಅವರಲ್ಲಿ ಇದಕ್ಕೆ ಖಂಡಿತಾ ಪರಿಹಾರ ಸಿಗಬಹುದು.. ಯಾವುದಕ್ಕೂ ನಾನು ಅವರನ್ನು ಭೇಟಿಯಾಗಿ ೨ ದಿನದಲ್ಲಿ ಇಲ್ಲಿಗೆ ಬರುತ್ತೇನೆ.. ಯಾವುದೇ ಭೂತವೇ ಇರಲಿ ಅದ್ರ ಬೆನ್ನು ಹತ್ತೋದು ಅಂದ್ರೆ ನಂಗೆ ತುಂಬಾ ಇಷ್ಟ" ಹಾಗಂತ ಹೇಳಿ ಹೊರಡಲನುವಾದೆ..
ತಾನೂ ಬರುತ್ತೇನೆ ಅಂದ ಕುಮಾರನಿಗೆ ಬೇಡ ಅಂತ ಹೇಳಿ ಅಲ್ಲಿಂದ ಎದ್ದು ಬಂದೆ..

ಛೆ.. ಹೇಗಿದ್ದ ಕುಮಾರ ಹೇಗಾದ? ಆ ಪೋಲಿ ಕುಮಾರ ಇವತ್ತು ಪೋಲಿಯೋ ಬಡಿದಂತೆ ಮಂಕಾಗಿದ್ದಾನೆ.. ಮಾಟ ಮಂತ್ರ, ಭೂತ ಎಲ್ಲಾ ಇದೆಯೋ ಇಲ್ಲವೋ, ಆದರೆ ಅದು ಇದೆ ಮತ್ತು ಅದು ನನ್ನ ಮೇಲೆ ದಾಳಿ ಮಾಡುವಂತೆ ಯಾರೋ ಮಾಡಿದ್ದಾರೆ  ಅನ್ನೋ ಹೆದರಿಕೆಯೇ ಆತನನ್ನು ಅರ್ಧ ಕೊಂದು ಹಾಕಿತ್ತು.. ಆಮೇಲೆ ನಡೆದ ಕೆಲವೊಂದು ಘಟನೆಗಳು , ಬೆಂಕಿಗೆ ತುಪ್ಪ ಸುರಿದಂತೆ ಆತನ ಹೆದರಿಕೆಯನ್ನು ಇಮ್ಮಡಿಗೊಳಿಸಿದ್ದವು..  ಆತ ಇದೆ ಗುಂಗಿನಲ್ಲಿ ತನ್ನ ಕೆಲಸ ಎಲ್ಲಾ ಬಿಟ್ಟು ಜ್ಯೋತಿಷಿ ಗಳ ಹಿಂದೆ ಬಿದ್ದಿದ್ದ.. ಬಿ ಪಿ ಹೆಚ್ಚಿತ್ತು.. ಆಡಲು ಬರುತ್ತಿದ್ದ ಮಗುವಿಗೆ ಬಯ್ಯುವುದು ಸಾಮಾನ್ಯವಾಗಿತ್ತು... ಮಗು ಮಂಕಾಗದೆ ಇನ್ನೇನಾಗುತ್ತೆ.?.. ಭೂತದ ಬೆನ್ನು ಹತ್ತಲು ನಾನು ತಯಾರಾದೆ!!

ಆತನ ಮನೆಗೆ ಮಾಡಿದ್ದ ಮಾಟ ತೆಗೆಸಲು ನಾನು ತಯಾರಾದೆ.. ಭೂತ ಓಡಿಸುವ ಬಗ್ಗೆ ಕೆಲವು ಬೇಕಾದ ಮಾಹಿತಿ ಕಲೆ ಹಾಕಿದೆ.. ಬೇಕಾದ ಸಿದ್ಧತೆ ಎಲ್ಲಾ ಮಾಡಿಕೊಂಡು ೨ ದಿನಗಳ ನಂತರ ನಾನು ಆತನ ಮನೆಯತ್ತ ಹೆಜ್ಜೆ ಹಾಕಿದೆ.. ಕೆಲವೊಂದು ಮಾತುಗಳ ನಂತರ ನಾನು ಆತನ ಮನೆಯೆಲ್ಲ ಒಮ್ಮೆ ಸುತ್ತು ಹಾಕಿದೆ.. ಮಲಗುವ ಕೋಣೆಯಲ್ಲಿ ಮಂಚವನ್ನು ಉತ್ತರ ದಿಕ್ಕಿನ ಕಡೆ ಹಾಕಲಾಗಿತ್ತು.. ಉತ್ತರ ದಿಕ್ಕಿಗೆ ಯಾಕೆ ತಲೆಹಾಕಿ ಮಲಗಬಾರದು ಅನ್ನೋ ಕಥೆ ನಮ್ಮ ಪುರಾಣಗಳಲ್ಲಿದೆ.. ಆದರೆ ಉತ್ತರ ದಿಕ್ಕಿನಲ್ಲಿ ಅಯಸ್ಕಾಂತೀಯ  ಶಕ್ತಿ ಹೆಚ್ಚು ಇದ್ದು ಅದು ನಮ್ಮ ಮೆದುಳಿನ ಮೇಲೆ ಪರಿಣಾಮ ಬೀರಬಹುದು ಅಂತ ಎಲ್ಲೊ ವಿಜ್ಞಾನ ಓದಿದ್ದು ನೆನಪಾಯಿತು.. ಕುಮಾರನಿಗೆ ಹೇಳಿ ಮಂಚವನ್ನು ಪೂರ್ವ ದಿಕ್ಕಿನ ಕಡೆ ತಿರುಗಿಸಿದೆ..ತೆಗೆದು ಕೊಂಡು ಹೋಗಿದ್ದ ಫೆಂಗ್ ಶುಇ ಅಂತ ಕರೆಯೋ ಕರ್ಕಶ ಶಬ್ದ ಮಾಡೋ ಸಾಮಾನೊಂದನ್ನು  ಚಾವಡಿಯಲ್ಲಿ ನೇತು ಹಾಕಿದೆ..
"ಮೊದಲಿಗೆ ಮಾಟ ಮಾಡಿದ ಅನುಭವ ನಿಮಗೆ ಹೇಗಾಯಿತು?" ಕುಮಾರನಿಗೆ ಪ್ರಶ್ನೆ ಹಾಕುತ್ತಿದ್ದಂತೆ, ಕುಮಾರ ಮತ್ತು ಆತನ ಹೆಂಡತಿ ನನ್ನನ್ನು ಒಬ್ಬ ಮಾಂತ್ರಿಕನನ್ನು ನೋಡುವಂತೆ ಬೆರಗು ಕಣ್ಣುಗಳಿಂದ ನೋಡತೊಡಗಿದರು.."ದನ ಒಂದು ಸತ್ತು ಹೋಯಿತು.. ಏನು ಅಂತ ಬಲಿಮೆ (ಭವಿಷ್ಯ) ಕೇಳಿದೆವು.. ಆಗ ತಿಳಿಯಿತು" ಕುಮಾರನ ಹೆಂಡತಿ ಹೇಳುತ್ತಿದ್ದಂತೆ, ಅವರಿಬ್ಬರನ್ನೂ ದನಗಳನ್ನು ಕಟ್ಟುತ್ತಿದ್ದ ಹಟ್ಟಿಯ ಬಳಿ ಹೋಗುವಂತೆ ಹೇಳಿದೆ..
"ಅಂದರೆ ಮಾಟ ಮಾಡಿದ್ದು ಇಲ್ಲೇ ಎಲ್ಲೊ ಇರಬೇಕು.. ಇಲ್ಲಿಂದ ಪ್ರಾರಂಭವಾಗಿದೆ.. ಈಗ ಹುಡುಕಿ.. ಹಟ್ಟಿಯ ಸಂದಿ ಸಂದಿಗಳನ್ನು ಹುಡುಕಿ.." ಹಾಗಂತ ಹೇಳಿ ನಾನು ಹೊರಬಂದೆ.. ಕುಮಾರ ಮತ್ತು ಆತನ ಹೆಂಡತಿ ಹುಡುಕಿದ್ದೇ ಹುಡುಕಿದ್ದು.. ಅಲ್ಲೇನಿದೆ ಮಣ್ಣಾಂಗಟ್ಟಿ ಸಿಗೋಕೆ.. ಬರುತ್ತಿದ್ದ ನಗು ತಡೆದುಕೊಂಡು ಕುಮಾರನ ಪುಟಾಣಿ ಮಗಳ ಜೊತೆ ಆಟವಾಡತೊಡಗಿದೆ... ಸುಮಾರು ಅರ್ಧ ಘಂಟೆ ಕಳೆಯಿತು..
"ಇಲ್ಲಿ , ಇಲ್ಲಿ ಏನೋ ಇದೆ!!!" ಕುಮಾರ ಕಿಟಾರನೆ ಕಿರುಚಿಕೊಂಡಿದ್ದು ನೋಡಿ ಥಟ್ಟನೆ ಅತ್ತ ಓಡಿದೆ..

ಹೌದು ಅಲ್ಲೇನೋ ವಸ್ತುವೊಂದು ಹಟ್ಟಿಯ ಸಂದಿಯಲ್ಲಿತ್ತು.. ಕುಮಾರ ಅದನ್ನು ಹೊರ ತೆಗೆದಿದ್ದ.. ಪ್ಲಾಸ್ಟಿಕ್ ನಲ್ಲಿ ಕಟ್ಟಲಾಗಿದೆ.. ಆತನ ಕೈಯಿಂದ ಅದನ್ನು ತೆಗೆದುಕೊಂಡು ಮೆಲ್ಲನೆ ಬಿಚ್ಚಿದೆ.. ಪ್ಲಾಸ್ಟಿಕ್ ಗೆ ಮಣ್ಣೆಲ್ಲ ಅಂಟಿಕೊಂಡಿತ್ತು.. ಒಳಗಡೆ ನೋಡಿದವನೇ ಬೆಚ್ಚಿಬಿದ್ದೆ!!! ಅದರಲ್ಲಿತ್ತು ಒಂದು ತಾಮ್ರದ ತಗಡು, ಅದರ ತುಂಬಾ ಕುಂಕುಮ..!!!
ಪೂರ್ತಿ ಬಿಚ್ಚಲು ಧೈರ್ಯ ಸಾಲದೇ ಹಾಗೆ ಮತ್ತೆ ಕಟ್ಟಿದೆ.. "ದೂರ ದೂರಕ್ಕೆ ಎಸೆದು ಬಾ.. ಪೀಡೆ ತೊಲಗಲಿ.. ಹೋಗು.. ಬೇಗ ಹೋಗು.. ಯಾರಿಗೂ ತಿಳಿಯದಂತೆ ,ಯಾರ ಕೈಗೂ ಸಿಗದಂತಹ ಜಾಗಕ್ಕೆ ಎಸೆದು ಬಾ.."  ಬೆವರಿನಿಂದ ಒದ್ದೆಯಾಗಿದ್ದ ನಾನು ನಡುಗುವ ಧ್ವನಿಯಲ್ಲಿ ಕುಮಾರನಿಗೆ ಆಜ್ಞಾಪಿಸಿದೆ.. ಹಿಂದೂ ಮುಂದು ನೋಡದೆ, ನನ್ನ ಕೈಯಿಂದ ಪೊಟ್ಟಣ ತೆಗೆದುಕೊಂದವನೇ ತೋಟದತ್ತ ಓಡಿದ ಕುಮಾರ.. ಆತನ ತೋಟ ದಾಟಿದರೆ ಇರುವುದೇ ಕಪಿಲಾ ನದಿ.. ಅಲ್ಲಿಯೇ ಬಿಸಾಕುತ್ತೇನೆ ಅಂತ ಹೇಳಿ ಒಂದೇ ಓಟ ಕಿತ್ತ... ಅರ್ಧ ಘಂಟೆಯೊಳಗೆ ಎಲ್ಲವೂ ಮುಗಿದು ನಾನು ಹೊರಡಲನುವಾದೆ.. ಈ ವಿಷಯ ಯಾರಿಗೂ ಹೇಳಬಾರದು ಎಂದೂ, ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಆರಾಮ ವಾಗಿರಬೇಕೆಂದು ಹೇಳಿ ನಾನು ಅಲ್ಲಿಂದ ಹೊರ ಬಂದೆ..ಕುಮಾರ ಮತ್ತು ಆತನ ಪತ್ನಿಯ ಮುಖದಲ್ಲಿ ಮಂದಹಾಸವಿತ್ತು.. ಕೆಲವು ದಿನಗಳ ನಂತರ ಆತ ತನ್ನ ಮನೆಯಲ್ಲಿ ಸತ್ಯನಾರಾಯಣ ಪೂಜೆ ,ಅದೂ ಇದೂ ಅಂತ ಕೆಲವೊಂದು ಪೂಜೆ ಮಾಡಿಸಿದ್ದ.. ನಾನೂ ಹೋಗಿ ಪ್ರಸಾದ ಸ್ವೀಕರಿಸಿ ಬಂದಿದ್ದೆ.. ಕುಮಾರನ ಸಂಸಾರ ಉಲ್ಲಾಸದಿಂದ ಇದ್ದಿದ್ದು ನೋಡಿ ಖುಷಿಯಾಯಿತು...
ಹಾಗಿರಲು, ಮೊನ್ನೆ ಕುಮಾರ ಫೋನ್ ಮಾಡಿದ್ದ.. ಕ್ಷೇಮ ಸಮಾಚಾರ ಮುಗಿದು "ನೀನು ಮಾಯವಾಗೋದು ಯಾವಾಗ" ಅಂತ ಆತನಿಗೆ ಕೇಳಿದೆ .. ಯಾಕೆ ಅಂದ.. ಅಲ್ಲ ನೀನು ಅಷ್ಟೊಂದು ಸಪೂರ ಆಗ್ಬಿಟ್ಟಿದ್ದೆ, ಹೀಗೆ ಆದ್ರೆ ಒಂದು ದಿನ ನೀನು ಮಾಯ ಆಗ್ಲೇ ಬೇಕಲ್ಲ ಅಂತ ನಕ್ಕೆ.. "ಇಲ್ವೋ ನಾನೀಗ ೬೫ ಕಿಲೋ ಗೊತ್ತ.." ಅಂತ ಪಕ ಪಕನೆ ನಕ್ಕ.. ಅದೇ ಕೆಲವೊಂದು ಪೋಲಿ ಜೋಕ್  ಮಾಡಿದ.. ಅಡಿಕೆ ಹೇಗಿತ್ತು ಈ ವರ್ಷ ಅಂತ ಕೇಳಿದ್ದಕ್ಕೆ "ಹೇಗಿರುತ್ತೆ?? ಪ್ರತಿ ಸಲದಂತೆ ಕೆಂಪಗೆ, ದುಂಡಗೆ ಹಾಗೆ ಇದೆ " ಅಂತ ಮತ್ತೆ ನಗಲು ಶುರು ಹಚ್ಚಿದ.. ಕುಮಾರ ಹಿಂದಿನಂತೆ ಆಗಿದ್ದು ನನಗೆ ಸಮಾಧಾನ ತಂದಿತ್ತು..ಮಾಟ ಮಂತ್ರ ಎಲ್ಲಾ ತೊಲಗಿ ಹೋಗಿದೆ ಅಂತ ಆತನಿಗೆ ಖಾತ್ರಿಯಾಗಿ ನಿರುಮ್ಮಳನಾಗಿದ್ದ... ಮಗಳನ್ನು ಈ ವರ್ಷ ಶಾಲೆಗೆ ಸೇರಿಸಬೇಕೆಂದು, ಇನ್ನೊಂದು ನಾಮಕರಣದ ಊಟಕ್ಕೆ  ನಾನು ಇನ್ನು ಕೆಲವೇ ತಿಂಗಳುಗಳಲ್ಲಿ ಆತನ ಮನೆಗೆ ಹೋಗಬೇಕಾಗುತ್ತೆ ಅಂತ ತಿಳಿದು ಸಂತೋಷವಾಯಿತು.. ಹಾಗೆ ಮಾತು ಮುಗಿಸಿದ ನಾನು,
ಆವತ್ತು ಹಟ್ಟಿಯಲ್ಲಿ ಸಿಕ್ಕಿದ್ದ ತಾಮ್ರದ ತಗಡನ್ನು ನಾನೇ ಶೆಣೈ ಅವರ ಅಂಗಡಿಯಿಂದ ತಂದಿದ್ದೆಂದೂ , ಅದರಲ್ಲಿ ಕುಂಕುಮ ಹಾಕಿ ಮಡಚಿ ಹಟ್ಟಿಯ ಹತ್ತಿರ ಹೋದಾಗ ಅವರಿಬ್ಬರಿಗೂ ತಿಳಿಯದಂತೆ ನಾನೇ ಇಟ್ಟಿದ್ದೆಂದೂ  , ಅದನ್ನೇ ಅವರಿಗೆ ಸಿಗುವಂತೆ ಮಾಡಿ ಮಾಟ ಎಲ್ಲಾ ಹೋಯ್ತು ಅನ್ನೋ ನಂಬಿಕೆ ಬರುವಂತೆ ಮಾಡಿದ್ದೆಂದೂ ,   ಕುಮಾರನಿಗೆ ಹೇಳಲೇ ಇಲ್ಲ!!!!!

--ಮುಗಿಯಿತು.

Monday, April 5, 2010

ಭೂತದ ಬೆನ್ನುಹತ್ತಿ !!!

ಕುಮಾರ ..!! ಕಾಲೇಜ್ ನಲ್ಲಿರುವಾಗ ನಮ್ಮ ಜೊತೆ ಗೆಳೆಯರ ಪೈಕಿ ಈತನೂ ಒಬ್ಬ... ನಮ್ಮ ಗುಂಪಿನಲ್ಲಿ ಅತ್ಯಂತ ಪೋಲಿ ಹುಡುಗ ಅಂದ್ರೆ ಈತನೇ.. ಯಾರಿಗಾದರೂ ಕಾಮೆಂಟ್ ಹೊಡೆಯೋದು, ತಮಾಷೆ ಮಾಡೋದು, ಲೈನ್ ಹೊಡೆಯೋದು ಎಲ್ಲದರಲ್ಲೂ ಮುಂದು.. ನಮ್ಮ ಕಾಲೇಜ್ ಗೆ ಬರುತ್ತಿದ್ದ ಮಿನಿ ಸ್ಕರ್ಟ್ ಹುಡುಗಿಯರಿಗೆ ಚೂಡಿದಾರ್ ಹಾಕಿಕೊಂಡು ಬರುವಂತೆ ಮಾಡಿದ್ದು ಈತನೇ... ಹೇಗೆ ಅಂತೀರಾ? ಯಾರಾದರೂ ಹುಡುಗೀರು ಮಿನಿ ಸ್ಕರ್ಟ್ ಹಾಕಿಕೊಂಡು ಬಂದರೆ ಮುಗೀತು ಈತ "ಉಫ್ಫ್" "ಉಫ್ಫ್" ಅಂತ ಗಾಳಿ ಬಿಡಲು ಪ್ರಾರಂಭಿಸುತ್ತಿದ್ದ.. ಏನಯ್ಯಾ ಇದು ಅಂತ ಒಮ್ಮೆ ಕೇಳಿದ್ದಕ್ಕೆ  "ಏನಿಲ್ಲಾ, ಅಷ್ಟೊಂದು ಚಿಕ್ಕ ಸ್ಕರ್ಟ್ ಹಾಕಿಕೊಂಡಿದ್ದಾಳಲ್ಲ, ಎಲ್ಲಿಯಾದರೂ ಗಾಳಿಗೆ ಮೇಲೆ ಹಾರುತ್ತೋ ನೋಡೋಣ" ಅಂತ ಹೇಳಿ ಪೋಲಿ ನಗು ಬೀರಿದ್ದ.. ಇದನ್ನು ತಿಳಿದ ಹುಡುಗೀರು ಮಿನಿ ಸ್ಕರ್ಟ್ ತೊಡೊದನ್ನೇ    ನಿಲ್ಲಿಸಿದರು...!!! ಇದೊಂದು sample  ಅಷ್ಟೇ ಆತನ ಪೋಲಿ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತೆ.. ತುಂಬಾ ಚಟುವಟಿಕೆಯ ಮನುಷ್ಯ .. ನೋಡಲೂ ಸುಮಾರಾಗಿದ್ದ.. ಕಾಲೇಜ್ ಮುಗಿಸಿ ಅಪ್ಪ ಮಾಡಿಟ್ಟಿದ್ದ ೧೦-೧೨ ಎಕರೆ ಯಷ್ಟಿದ್ದ ಜಮೀನಿನಲ್ಲಿ  ಕೃಷಿ ಮಾಡಿಕೊಂಡು ಹಾಯಾಗಿದ್ದ.. ಮದುವೆಯೂ ಆಗಿ ೨೦೦೫ ರ ಹೊತ್ತಿಗೆ ಒಂದು ಮಗು ಕೂಡ ಆಗಿತ್ತು... ಆದರೆ....
ಅದು ೨೦೦೯ ಜನವರಿನೋ ಫೆಬ್ರುವರಿನೋ ಸರಿಯಾಗಿ ನೆನಪಿಲ್ಲ , ಒಂದು ಸಾರಿ ಊರಿಗೆ ಹೋಗಿದ್ದ ನಾನು ಕುಮಾರನನ್ನು ಭೇಟಿಯಾದೆ.. ಆತನನ್ನು ನೋಡಿದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.. ಈತನೇ ಕುಮಾರನಾ? ನಂಬಲಿಕ್ಕೆ ಆಗಲಿಲ್ಲ.. ಆತನ ದೇಹ ಅಸ್ತಿಪಂಜರದಂತೆ ಆಗಿ ಹೋಗಿತ್ತು... ಆತನೇ ತುಂಬಾ ಪ್ರೀತಿಯಿಂದ ಬೆಳೆಸಿದ್ದ ತೋಟ ನೀರಿಲ್ಲದೆ ಕೆಂಪಗಾಗಿತ್ತು..."ಏನಯ್ಯ ಇದು" ಅಂದೆ... ಯಾರಿಗಾದರೂ ತಮಾಷೆ ಮಾಡುತ್ತಾ ಅಷ್ಟೊಂದು ಉಲ್ಲಾಸದಿಂದಿದ್ದ ಹಿಂದಿನ ಕುಮಾರ ಮಾತೆ ಆಡಲಿಲ್ಲ.. ನನಗೆ ಗಾಬರಿಯಾಯಿತು.. ಎಷ್ಟಾದರೂ ನನ್ನ ಸ್ನೇಹಿತನಲ್ಲವೇ.. "ಏನಾದರೂ ಖಾಯಿಲೇನಾ" ಮತ್ತೆ ಕೇಳಿದೆ.. ಇಲ್ಲಪ್ಪ ಅಂದ.. ಮತ್ತಿನ್ನೇನು ಹೀಗಾಗಿದ್ದಿಯಾ? ಅಂತ ಕೇಳಿದ್ದಕ್ಕೆ ಮನೆಗೆ ಬಾ ಮಾತಾಡೋಣ ಅಂತ ಕರೆದುಕೊಂಡು ಹೋದ... ನಾವು ಮನೆಗೆ ಹೋಗುತ್ತಿದ್ದಂತೆ ಅಲ್ಲೇ ಅಂಗಳದಲ್ಲಿದ್ದ ಆತನ ೩.೫ ವರ್ಷದ ಮಗಳು ಮನೆಯೊಳಕ್ಕೆ ಓಡಿಹೋದಳು.. ಆತನ ಮನೆಯನ್ನೊಮ್ಮೆ ವೀಕ್ಷಿಸಿದೆ... ಹಿಂದಿನ ಸೊಬಗಿಲ್ಲ.. ಆತನ ಮನೆ ಮುಂದೆ ಇದ್ದ ಎರಡು ಭಯಂಕರ ನಾಯಿಗಳ ಶಬ್ದವಿಲ್ಲ... ಆತನ ಹೆಂಡತಿಯೂ ಸೊರಗಿ ಹೋಗಿದ್ದಳು.. ನನಗೇನೂ ಅರ್ಥವಾಗದೆ ಆತನ ಮನೆಯ ಬದಿಯಲ್ಲಿದ್ದ ದನಗಳ ಹಟ್ಟಿಯ ಕಡೆ ವೀಕ್ಷಿಸಿದೆ.. ೧೦-೧೨ ರಷ್ಟಿದ್ದ ದನ ಎಮ್ಮೆ ಯಾವುದೂ ಇರಲಿಲ್ಲ..ಉಹುಂ ಒಂದೇ ಒಂದು ದನವಾಗಲಿ ಎಮ್ಮೆಯಾಗಲಿ ಇಲ್ಲ.. ಏನಿದೆಲ್ಲಾ.. ನನಗೆ ಅರ್ಥವಾಗದೆ ಮೆಲ್ಲನೆ ಕುರ್ಚಿಯಲ್ಲಿ ಕೂತೆ.. ಮನಸ್ಸಿನಲ್ಲಿ ಏನೇನೊ ಕಲ್ಪನೆಗಳು... ಏನಾದರೂ ಖಾಯಿಲೆ ಬಂದಿರಬಹುದೇ..? ಅಥವಾ ಈತನ ಅಪ್ಪನಂತೆ ಈತನೂ ಕುಡಿತದ ದಾಸನಾಗಿ ಬಿಟ್ಟನೇ? ಅಪ್ಪನ ಕುಡಿತ ಬಿಡಿಸಲು ಶತಾಯ ಗತಾಯ ಯತ್ನಿಸಿದ್ದ ಕುಮಾರನೇ ಹೀಗೆ ಮಾಡಿಯಾನೆ?.. ನಾನು ಸುಮ್ಮನೆ ಗರಬಡಿದಂತೆ ಕುಳಿತೆ ಇದ್ದೆ.. ಆತ ಕಾಫಿ ತಂದುಕೊಟ್ಟ.. ನನಗೆ ತಡೆಯಲಾಗಲಿಲ್ಲ... "ಏನೋ ಇದು , ಇದೇನು ಎಲ್ಲಾ ಹೀಗಾಗಿ ಹೋಗಿದೆ? ಏನಾದ್ರು ತೊಂದ್ರೆನಾ.. ಕೃಷಿಯಲ್ಲಿ ಏನಾದರೂ ಲೋಸ್ಸ್ ಆಯ್ತಾ.." ಆತ ಒಂದು ಕ್ಷಣ ಆತನ ಹೆಂಡತಿಯ ಮುಖ ನೋಡಿದ.. ಆಕೆಯ ಕಣ್ಣುಗಳು ಆಗಲೇ ಒದ್ದೆಯಾಗಿದ್ದವು..."ಇಲ್ಲ ಗೋರೆ.. ಈಗೆ ೮ ತಿಂಗಳ ಹಿಂದಿನಿಂದ ಇದು ಪ್ರಾರಂಭವಾಯಿತು" ಅಂದ..

ಅರ್ಥವಾಗದೆ ಆತನ ಮುಖ ನೋಡಿದೆ.. "ಈಗ್ಗೆ ೮ ತಿಂಗಳ ಹಿಂದೆ ನಮ್ಮ ಹಟ್ಟಿಯಲ್ಲಿ ೨ ದನಗಳು ಸತ್ತು ಹೋದವು.. ಆಮೇಲೆ  ಒಂದು ನಾಯಿ.. ಹೀಗೆ ೨-೩ ತಿಂಗಳಲ್ಲಿ ೪-೫ ಜೀವಗಳು ಒಂದೊಂದಾಗಿ ಹೋಗಿಬಿಟ್ವು.. ಏನೆಂದೇ ಅರ್ಥವಾಗಲಿಲ್ಲ.. ಗೋ- ಡಾಕ್ಟರ ಸಹ ಕಾರಣ ತಿಳಿಯದೆ ಹಿಂದುರಿಗಿದ...ಎಲ್ಲಾ ಸಾಯೋದು ಬೇಡ ಅಂತ ಎಲ್ಲಾ ದನ-ಕರು ಮಾರಿಬಿಟ್ಟೆ.. ನಾನೇ ತುಂಬಾ ಜ್ಯೋತಿಷಿ ಗಳ ಬಳಿ ಹೋದೆ.. ಆಮೇಲೆ ತಿಳೀತು ನೋಡು" ಆತ ಮಾತು ನಿಲ್ಲಿಸಿದ..
"ಏನು ಏನಂತ ತಿಳೀತು"
"ಕುಂದಾಪುರದ ಹತ್ತಿರ ಒಬ್ಬ ಜ್ಯೋತಿಷಿ ಇದ್ದಾನೆ , ತುಂಬಾ ತಿಳಿದವನು..ತುಂಬಾ ಫೇಮಸ್ ... ಆತನ ಬಳಿ ಪ್ರಶ್ನೆ ಕೇಳಿದೆ. ಆಗ್ಲೇ ನನಗೆ ಈ ವಿಷಯ ತಿಳಿದದ್ದು.. ಪರಿಹಾರಕ್ಕಾಗಿ ತುಂಬಾ ಖರ್ಚು ಮಾಡಿದೆ ಆದರೆ ಯಾವುದೇ ಉಪಯೋಗ ಆಗ್ಲಿಲ್ಲ.."
ಆತನ ಮುಖವನ್ನೇ ಗಮನಿಸಿದೆ.. ಇಷ್ಟು ಮಾತಿಗೆ ಆತ ಬೆವರತೊಡಗಿದ್ದ .!!
"ಯಾರೋ , ಯಾರೋ ನಮಗೆ ಮಾಟ ಮಾಡಿದ್ದಾರಂತೆ!!!"  ಕುಮಾರ ಗಕ್ಕನೆ ತನ್ನ ಮಾತು ನಿಲ್ಲಿಸಿದ..
"ಏನು? ಮಾಟ?? "  ನಾನು ಒಂದು ಕ್ಷಣ ಬೆಚ್ಚಿಬಿದ್ದೆ!!!!

--ಮುಂದುವರೆಯುವುದು..