ಅತ್ಯಂತ ಸುಂದರವಾದ ಮರಳಿನ ಗಡಿಯಾರ... ಹಾಗೂ ಹೀಗೂ ಮಾತನಾಡಿ ಆ ಗಡಿಯಾರದ ರೇಟು ೫ ಸಾವಿರ ಅಂತ ಮಾತನಾಡಿಯಾಯಿತು.. " ಸಾರ್ ನೀವು ನಾಳೆ ಬಂದು ತಗೊಂಡು ಹೋಗಿ , ನನ್ನ ಮಗನಲ್ಲೂ ಒಂದು ಮಾತು ಕೇಳಬೇಕು.. ಯಾವ್ದಕ್ಕೂ ನೀವು ನಾಳೆಬನ್ನಿ" ಅಂತ ಆ ಆಸಾಮಿ ಹೇಳಿದ್ದಕ್ಕೆ ಸರಿ ಅಂತ ಹೇಳಿ ಅಲ್ಲಿಂದ ಹೊರಬಂದೆ...
ಮನೆಗೆ ಬಂದವನೇ, ಮನೆಯನ್ನೆಲ್ಲ ಸ್ವಚ್ಚ ಗೊಳಿಸಿದೆ.. ಯಾವ್ಯಾವುದನ್ನು ಎಲ್ಲೆಲ್ಲಿ ಇಡಬೇಕೂ ಅಂತ ಯೋಚಿಸಿ ಎಲ್ಲವನ್ನೂ ಜೋಡಿಸಿ ಇಡತೊಡಗಿದೆ.. ಕೋಣೆಗೆ ಎಲ್ಲವನ್ನೂ ಜೋಡಿಸಿ ನನ್ನ ಕನಸಿನ ಮರಳಿನ ಗಡಿಯಾರವನ್ನು ಟಿವಿ ಸ್ಟ್ಯಾಂಡ್ ಮೇಲೆ ಇಡುವುದೇ ಚಂದವೆನ್ನಿಸಿತು ... ನಾಳೆಯಿಂದ ನನ್ನ ಮನೆಯ ಚಂದವೇ ಬೇರೆ..!!! ಎಷ್ಟೊಂದು ಸುಂದರವಾದ ಮರಳಿನ ಗಡಿಯಾರ ... ಆಹಾ.. ಮನಸ್ಸು ಉಲ್ಲಾಸಗೊಂಡಿತ್ತು...
ಇಷ್ಟಕ್ಕೂ ಈ ಮರಳಿನ ಗಡಿಯಾರದ ವಿಷಯ ಹೇಳುತ್ತೇನೆ ಕೇಳಿ..ಈಗ ಇರುವ ಆಧಾರಗಳ ಪ್ರಕಾರ ಈ ಗಡಿಯಾರವನ್ನು ಕಂಡುಹಿಡಿದದ್ದು ಮೊದಲು ೧೪ ನೆ ಶತಮಾನದಲ್ಲಿ.. ೩ನೆ ಮತ್ತು ಹನ್ನೊಂದನೇ ಶತಮಾನ ಅನ್ನುವ ವಾದ ಇದ್ದರೂ ಅದಕ್ಕೆ ತಕ್ಕ ದಾಖಲೆಗಳಿಲ್ಲ...ಆಗಿನ ಕಾಲದಲ್ಲಿ ಈ ಗಡಿಯಾರಗಳನ್ನು ಬೇರೆ ಬೇರೆ ಪ್ರಕಾರಕ್ಕೆ ಬಳಸಿಕೊಳ್ಳಲಾಗುತ್ತಿತ್ತು.. ಕೆಲಸ ಮಾಡಲು, ಶಿಪ್ ಗಳಲ್ಲಿ, ಆ ನಂತರ ಶಿಪ್ ಅಥವಾ ವಾಹನಗಳ ವೇಗವಳೆಯಲು.. ಹೀಗೆ.. ಆಗೆಲ್ಲ ಮರಳಿನ ಗಡಿಯಾರಗಳು ೩೦ ನಿಮಿಷದ್ದಾಗಿರುತ್ತಿದ್ದವು.. ಬರ್ತಾ ಬರ್ತಾ ಇದರಲ್ಲಿ ಸಂಶೋಧನೆಗಳಾಗಿ ೧ ನಿಮಿಷದಿಂದ ೧ ಘಂಟೆಯವರೆಗಿನ ಮರಳಿನ ಗಡಿಯಾರಗಳು ಬಂದವು...
ಮರಳಿನ ಗಡಿಯಾರದಲ್ಲಿ ಎರಡು ಗಾಜಿನ ಬೌಲ್ ಗಳಿರುತ್ತವೆ .. ಇವು ಒಂದರ ಮೇಲೊಂದು ಇದ್ದು ನಡುವೆ ಮರಳು ಹರಿಯಲು ಚಿಕ್ಕ ಕೊಳವೆಯಿರುತ್ತದೆ... ಈ ಮೇಲಿನ ಗಾಜಿನಿಂದ ಮರಳು ಎಲ್ಲಾ ಕೆಳಗಿನ ಬೌಲ್ ಗೆ ಬಂದಾಗ ಮತ್ತೆ ಅದನ್ನು ಉಲ್ಟಾ ಮಾಡಲಾಗುತ್ತದೆ..
ಕೊಳವೆಯ ಅಳತೆ,ಮರಳಿನ ಸೈಜ್, ಅದರ ಆಂಗಲ್ ಮತ್ತು ಮರಳಿನ ಹರಳಿನ ಅಳತೆ ಮೇಲೆ ಈ ಗಡಿಯಾರಗಳು ವಿವಿಧ ಟೈಮ್ ತೋರಿಸುತ್ತವೆ... ಮರಳಿಗೆ ಬದಲಾಗಿ ಕೋಳಿಮೊಟ್ಟೆಯ ಚಿಪ್ಪಿನ ಹುಡಿಯನ್ನೂ ಅಥವಾ ಮಾರ್ಬಲ್ ಹುಡಿಯನ್ನೂ ಸಹ ಉಪಯೋಗಿಸಬಹುದು...
ಹಳೆಯ ಕಾಲದ ಒಂದು ಗಡಿಯಾರ.. ಇದು ೧೫ ನಿಮಿಷದ್ದು
ಹಳೆಯ ಕಾಲದ ಕೆಲವು ಮರಳಿನ ಗಡಿಯಾರಗಳು..
ಮರಳಿನ ಗಡಿಯಾರವನ್ನು Hourglass ,sand timer ,egg timer ಅಂತಾನೂ ಕರೀತಾರೆ..
ಈಗ ಈ ಮರಳಿನ ಗಡಿಯಾರ ಚಂದಕ್ಕಾಗಿ ಮನೆಯಲ್ಲಿ ಉಪಯೋಗಿಸಿದರೆ ಇದರ ಇತರ ಉಪಯೋಗಗಳು ಈ ರೀತಿ ಇವೆ..
ಅಡುಗೆ ಮನೆಯಲ್ಲಿ, ಆಟಗಳಲ್ಲಿ, ಸಂಗೀತ ಅಥವಾ ಇನ್ನಿತರ ಯಾವುದೇ ಕಲಿಯುವಿಕೆಯ ಅಭ್ಯಾಸಕ್ಕಾಗಿ ಹೀಗೆ...
ಕೆಲವು ನೂತನ ಮಾದರಿಯ ಮರಳು ಗಡಿಯಾರಗಳು..
ಹಾ..ಪುರಾಣ ಸಾಕು ಈಗ ವಿಷಯಕ್ಕೆ ಬರುತ್ತೇನೆ...
ಇಂತಿಪ್ಪ , ನಾನು ಆ ಮರಳಿನ ಗಡಿಯಾರ ಪಡೆಯಲು ಮರುದಿನ ಆತನ ಮನೆಯತ್ತ ಸಾಗಿದೆ... ಅಪ್ಪ ಮಗ ಇಬ್ಬರೂ ಇದ್ದರು.. "ಜೇಬಿನಿಂದ ೫ ಸಾವಿರ ತೆಗೆದವನೇ, "ತಗೊಳ್ಳಿ ಸಾರ್ , ನಾನು ಗಡಿಯಾರ ತೆಗೆದುಕೊಂಡು ಹೋಗಲು ಬಂದೆ" .. ಅಪ್ಪ ಮಗ ಇಬ್ಬರೂ ಮುಖ ಮುಖ ನೋಡಿಕೊಂಡರು..ನನಗ್ಯಾಕೋ ಅನುಮಾನ ಹುಟ್ಟಿತು..ಅರೆ ಇದ್ಯಾಕೆ ಹಿಂಗಾಡ್ತಿದ್ದಾರೆ? "ಸಾರೀ ಸಾರ್.. ನಿನ್ನೆಯಷ್ಟೇ ನಾನು ಇದನ್ನೊಂದು ಹಳೆಯ ವಸ್ತು ಸಂಗ್ರಹಾಲಯಕ್ಕೆ ಒಂದಕ್ಕೆ ೪೫೦೦೦ ಕ್ಕೆ ಮಾರಿದ್ದೇನೆ.. ಬೇಜಾರು ಮಾಡ್ಕೋಬೇಡಿ ಸಾರ್...ಒಂದು ವೇಳೆ ಅದಕ್ಕಿಂತ ಜಾಸ್ತಿ ಕೊಡ್ತೀರಾದ್ರೆ ನಾನು ನಿಮಗೆ ಕೊಡ್ತೀನಿ.." ಮಗ ಮಾತಾಡುತ್ತಲೇ ಇದ್ದ... ಯಾಕೋ ನನ್ನ ಟೈಮ್ ಸರಿ ಇಲ್ಲ ಅಂದುಕೊಂಡು ಮನೆಯತ್ತ ಬಂದೆ.. ಈಗ ಪಕ್ಕದಲ್ಲೇ ಇದ್ದ ಗಡಿಯಾರದ ಅಂಗಡಿಯೊಂದರಿಂದ ಅಜಂತಾ ಗಡಿಯಾರವೊಂದನ್ನು ಖರೀದಿಸಿ ಟಿವಿ ಸ್ಟ್ಯಾಂಡ್ ಮೇಲೆ ಇಟ್ಟಿದ್ದೇನೆ !!










