"ಅಪ್ಪಾ , ಅಮ್ಮನಿಗೆ ಅಷ್ಟೊಂದ್ ಕೂದ್ಲು ಇದೆ , ನಂಗೂ ಇಷ್ಟೊಂದ್ ಕೂದ್ಲಿದೆ , ನಿಂಗೆ ಮಾತ್ರ ಕಮ್ಮಿ ಯಾಕೇ ?"
ಮಗಳು ಕೇಳಿದಾಗ ಮೆಲ್ಲನೆ ಕಣ್ಣು ಬಿಟ್ಟೆ .. "ನಂಗೆ ಮಾತ್ರ ಅಲ್ಲ , ನಿನ್ನ ತಮ್ಮಂಗೂ ಕೂದ್ಲು ಕಮ್ಮಿ ನೋಡು " ೫ ತಿಂಗಳ ಮಗನನ್ನು ತೋರಿಸಿದೆ ..
"ಹೌದಾ .. ಹುಡುಗ್ರಿಗೆ ಕೂದ್ಲು ಕಮ್ಮಿನಾ " ಕೇಳಿದ ಮಗಳು ಟಿವಿ ನೋಡುವುದರಲ್ಲಿ ಮಗ್ನಳಾದಳು ..
ಆದರೂ ಮಧ್ಯೆ ಮಧ್ಯೆ ಬರುತ್ತಿದ್ದ ಜಾಹೀರಾತುಗಳಲ್ಲಿ ನಿಸರ್ಗಾಲಯ , ಇಂದುಲೇಖಾ ಮುಂತಾದ ಕೇಶತೈಲಗಳ ಜಾಹಿರಾತು ಬರುತ್ತಿದ್ದಂತೆ ತಿರುಗಿ ನನ್ನ ತಲೆ ನೋಡುತ್ತಿದ್ದಳು ..
--------------------------------------------------------------------------------------------------------------------
"ಅಪ್ಪಾ , ತಮ್ಮನಿಗೆ ನನ್ ಥರಾನೇ ಕೂದ್ಲು ಬರ್ತಿದೆ ನೋಡು " ಮಗಳು ಖುಷಿಯಾಗಿದ್ದಳು .. ೧೦ ತಿಂಗಳ ತಮ್ಮನಿಗೂ ಕೂದಲು ಒತ್ತಾಗಿ ಬೆಳೆಯುತ್ತಿದೆ .. ಮತ್ತೆ ನನ್ನ ತಲೆ ನೋಡಿದವಳೇ "ನಿಂಗ್ಯಾಕೆ ಕೂದ್ಲು ಬೆಳೀತಿಲ್ಲ ? ಹುಡುಗ್ರಿಗೆ ಕಮ್ಮಿ ಕೂದ್ಲು ಅಂದ್ಯಲ್ಲ , ಮತ್ತೆ ತಮ್ಮನಿಗೆ ಅಷ್ಟೊಂದು ಕೂದ್ಲು ಬರ್ತಿದೆ " ..
"ನಿನ್ನ ಅಮ್ಮ ತಲೆ ತಿಂದೂ ತಿಂದೂ ಹೀಗಾಗಿದೆ ಪುಟ್ಟಿ " ಅಂದೆ
"ಏನೂ ??" ಒಳಗಿಂದ ಬಂದ ಧ್ವನಿ ದೊಡ್ಡದಾಗಿಯೇ ಇತ್ತು ..
ನಾನು ಸುಮ್ಮನಾದೆ .. ಬಾಂಡ್ಲಿಯಾಗಿದ್ದ ತಲೆ ಒಮ್ಮೆ ನೇವರಿಸಿಕೊಂಡೆ ..
ಅಡುಗೆ ಮನೆಯಲ್ಲಿರೋ ಬಾಂಡ್ಲಿಯಲ್ಲಿ ಎಣ್ಣೆ ನಿಲ್ಲುತ್ತೆ ಆದರೆ ನಮ್ಮ ಬಾಂಡ್ಲಿ ????
"ನೀನೂ ನಿಸರ್ಗಾಲಯ , ಇಂದುಲೇಖಾ ಹಚ್ಚು " ಮಗಳು ಸಲಹೆ ಕೊಟ್ಟಳು ..
"ಅದೆಲ್ಲ ಸುಮ್ನೆ ಸುಳ್ಳು , ಅದ್ರಿಂದ ಕೂದ್ಲು ಬರಲ್ಲ"..
"ಸುಳ್ಳಾ ?? ಸುಳ್ಳು ಹೇಳಿದ್ರೆ ಪನಿಶ್ಮೆಂಟ್ ಇದೆ ಅಂತ ನೀನೆ ತಾನೇ ಹೇಳಿದ್ದು ... ಅವ್ರಿಗೆ ಯಾರು ಪನಿಷಮೆಂಟ್ ಕೊಡ್ತಾರೆ ? ಏನ್ ಪನಿಶ್ಮೆಂಟ್ ಕೊಡ್ತಾರೆ ?"...
ನಾನು ಮತ್ತೆ ನನ್ನ ತಲೆ ಮೇಲೆ ಕೈ ಆಡಿಸಿದೆ !!!
---------------------------------------------------------------------------------------------------------------------
---------------------------------------------------------------------------------------------------------------------
"ಹಾಕ್ಷಿ " ಮಗಳು ಜೋರಾಗಿ ಸೀನುತ್ತಿದ್ದಳು ... ಮಳೆಯಲ್ಲಿ ಇಬ್ಬರೂ ಗಡದ್ದಾಗಿ ಆಟ ಆಡಿದ್ದರ ಫಲ ..ಶೀತವಾಗಿತ್ತು .. ಅಷ್ಟೊಂದು ಬೆಳೆದ ಕೂದಲು ಎಷ್ಟೇ ಒರೆಸಿಕೊಂಡರೂ , ಪೂರ್ತಿ ಒಣಗಿಸುವುದು ಕಷ್ಟ ಕಷ್ಟ .. ಆದರೆ ನನಗೆ ? ನೀರು ತಲೆಯ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ .. ಶೀತದಿಂದ ಪಾರಾಗಿದ್ದೆ :)
"ಅಪ್ಪಾ , ಅವ್ರೆಲ್ಲ ಯಾಕೆ ಬೆಂಕಿ ಹಾಕ್ತಿದ್ದಾರೆ " ಟಿವಿ ಮುಂದೆ ಕೂತಿದ್ದ ಮಗಳು ಕೇಳಿದಳು
"ಅದೇನೋ ಕಾವೇರಿ ಗಲಾಟೆ " ಅಂತ ನಂಗೆ ಗೊತ್ತಿದ್ದಷ್ಟು ಹೇಳಿದೆ
"ನೀರಿಗೂ ಜಗಳಾನಾ " ?? ನಾನು ಟಿವಿ ಆರಿಸಿದೆ ..
ಮರುದಿನ ಟಿವಿ ಹಾಕುವಾಗ , ಬೆಂಕಿ ಹಚ್ಚಿದ್ದ ವಾಹನಗಳಿಗೆ ನೀರು ಸುರಿದು ಬೆಂಕಿ ನಂದಿಸುತ್ತಿದ್ದರು ...
"ವೆರಿ ಗುಡ್ , ನಿನ್ನೆ ಬೆಂಕಿ ಹಾಕಿದ್ರಲ್ಲ ಅವ್ರೆಲ್ಲ ಬ್ಯಾಡ್ , ನೀರು ಹಾಕಿ ನಂದಿಸ್ತಾರಲ್ಲ ಇವರು ಗುಡ್ " ಮಗಳು ಕಾಮೆಂಟರಿ ಕೊಡುತ್ತಲೇ ಇದ್ದಳು ..
"ಅಪ್ಪಾ , ಬೆಂಕಿ ನಂದಿಸ್ತಾ ಇದ್ದಾರಲ್ಲ ಇದೂ ಕಾವೇರಿ ನೀರಾ "
"ಇಲ್ಲ ಪುಟ್ಟಿ , ಅಷ್ಟೊಂದು ಕಾವೇರಿ ನೀರು ಇದ್ದಿದ್ರೆ ಜಗಳಾನೇ ಆಗ್ತಿರ್ಲಿಲ್ಲ ... ಬಹುಶ ಇದು ಸಪುತೀ (SPT ) ನೀರು ಇರಬಹುದು "
"ಸಪುತೀ ಅಂದ್ರೆ "
"ಸಕಲ ಪುಕುಳಿ ತೀರ್ಥ "
"ಅಂದ್ರೆ "???
ನಾನು ಮತ್ತೆ ತಲೆ ನೇವರಿಸಿಕೊಂಡೆ
---------------------------------------------------------------------------------------------------------------------
ಗೋರೆ ಉವಾಚ :
ಹಾಳಾಗಿ ಮೂಲೆಯಲ್ಲಿ ಬಿದ್ದಿರುವ ಗಡಿಯಾರ ಸಹ ದಿನಕ್ಕೆರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ !!