Friday, July 24, 2009

ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ

ಎರಡು ವರ್ಷಕ್ಕೆ ಹಿಂದೆ ಶುಕ್ರವಾರ ಬಂತೆಂದರೆ ಮತ್ತೆ ಕೇಳಬೇಕೆ... ನಾವೊಂದು ಎಂಟುಜನರ ಗುಂಪು ಗುರು ಗಾರ್ಡನ್ ಅನ್ನೋ ಅಡ್ಡದಲ್ಲಿ ೭-೭.೩೦ ಯಹಾಗೆ ಪ್ರತ್ಯಕ್ಷ ರಾಗಿ ಬಿಡುತ್ತಿದ್ದೆವು... ನಾವು ಬರುತ್ತೇವೆ ಎಂದು ತಿಳಿದಿದ್ದ ಗಾರ್ಡೆನ್ ಮಂದಿಯೂ ನಮಗೆ ಟೇಬಲ್ ಕಾಯ್ದಿರಿಸುತ್ತಿದ್ದರು... ತಂಪಾದ ಬಿಯರು...... ಹುಹ್ ಆ ದಿನಗಳು !!!!!!!
ನಮ್ಮಲ್ಲೊಬ್ಬ ನಿದ್ದ ಸದಾನಂದ ಅಂತ... ನನ್ನ ಭಾರಿ ಚಡ್ಡಿ ದೋಸ್ತು... ನಾನೆಂದರೆ ಆತನಿಗೆ ಏನೋ ನಂಬಿಕೆ, ಪ್ರೀತಿ...
ಆತನಿಗೆ ಶನಿವಾರವೂ ಆಫೀಸ್... ಆದರೆ ನಮಗೆ ಮಾತ್ರ ರಜೆ ಇದ್ದ ಕಾರಣ ಆತನೂ ನಮ್ಮ ಜೊತೆ ಬಂದಾಗಲೆಲ್ಲಾ ಮರುದಿನ ಆಫೀಸ್ ಗೆ ಚಕ್ಕರ್....ಕಾರಣ ಹಿಂದಿನ ದಿನದ ಹಂಗೋವೆರ್, ಆಫೀಸ್ ನಲ್ಲಿ ಪ್ರತಿಸಾರಿಯೂ ಆತ ಕೊಡುತ್ತಿದ್ದ ಕಾರಣ ತಾಯಿಗೆ ಹುಷಾರ್ ಇರ್ಲಿಲ್ಲ ಸಾರ್... ಅಂತ... ಆತ ಸುಳ್ಳು ಹೇಳುತ್ತಿದ್ದಿದ್ದು ನಿಜ, ಆದರೆ ತಾಯಿ ಯನ್ನು ತುಂಬ ಪ್ರೀತಿಸುತ್ತಿದ್ದ... ಅದು ಮಾತ್ರ ಖರೆ...
ಆವತ್ತೂ ಶುಕ್ರವಾರ , ಪ್ರತಿಸಾರಿಯಂತೆ ಅಂದೂ ಗಡದ್ದು ಪಾರ್ಟಿ ಮಾಡಿದ್ದೆವು... ಮರುದಿನ ಬೆಳಿಗ್ಗೆ ಸದಾನಂದನ ತಾಯಿ ಗೆ ಏನೋ ಹುಶಾರಿಲ್ಲವಾಗಿತ್ತು !!!! ಹಾಗಂತ ಆತ ಆಫೀಸ್ ಗೆ ಫೋನ್ ಹೊಡೆದದ್ದೂ ಆಯಿತು... ಆ ಕಡೆಯಿಂದ ಅದ್ಯಾವ ಪರಿ ಮಂಗಳಾರ್ಚನೆ ಆಯಿತೋ ಗೊತ್ತಿಲ್ಲ.... ಅಂತೂ ಇಂತೂ ಆತ ಆಫೀಸಿಗೆ ಹೋಗಲೇ ಬೇಕಾಯಿತು...ಆವತ್ತು ಆಕಾಶದಲ್ಲಿ ಭಾರಿ ಮೋಡ ಈಗಲೋ ಆಗಲೋ ಮಳೆ ಬರಿಸಲು ತಯಾರಾಗಿತ್ತು.. ಮದ್ಧ್ಯಾನ್ನ ಸುಮಾರು ಹನ್ನೆರಡು ಗಂಟೆ ಹೊತ್ತಿಗೆ ನನ್ನ ಫೋನ್ ರಿಂಗ್ ಆಗಿತ್ತು.. ಯಾರೆಂದು ನೋಡಿದರೆ ಸದಾನಂದ... ಏನಪ್ಪಾ ಅಂದೇ... "ತಾಯಿಗೆ ಹುಷಾರಿಲ್ಲ ಈಗ ತಾನೆ ಫೋನ್ ಮಾಡಿದ್ರು, ಎದೆ ನೋಯ್ತಿದೆಯಂತೆ, ಪ್ಲೀಸ್ ಆಸ್ಪತ್ರೆಗೆ ಬೇಗ ಕರ್ಕೊಂಡು ಹೋಗು... ಗೊತ್ತಲ್ಲ ನಾನು ತಾಯಿಗೆ ಹುಷಾರಿಲ್ಲ ಅಂದ್ರೆ ನನ್ನ ಇವತ್ತು ಕೆಲಸದಿಂದ ತೆಗ್ದೆ ಹಾಕ್ತಾರೆ " ಹಾಗಂತ ಆತ ಹೇಳುತ್ತಿದ್ದಂತೆ ಬೈಕ್ ಹೊರಗೆ ಎಳೆದು ಹಾಕಿದವನೇ ಆತನ ಮನೆಯತ್ತ ಧಾವಿಸಿದೆ... ಆತನ ತಾಯಿ ಎದೆ ನೋವು ಅಂದು ಒಂದು ಕಡೆ ಕೂತು ಬಿಟ್ಟಿದ್ದರು... ಅಲ್ಲಿಂದಲೇ ಒಂದು ಆಟೋ ದಲ್ಲಿ ಅವರನ್ನ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆ... ಹಾರ್ಟ್ ಅಟ್ಯಾಕ್ ಆಗಿದೆ ಅಂದು ICU ನಲ್ಲಿ ಸೇರಿಸಿದೆವು... ಪ್ರತಿ ಅರ್ಧ ಗಂಟೆಗೆ ಒಮ್ಮೆ ಸದಾನಂದ ಫೋನ್ ಮಾಡುತ್ತಲೇ ಇದ್ದ... ೫ ಗಂಟೆಯ ಹೊತ್ತಿಗೆ ಆಕೆ ಮತ್ತೆ ನಗುವುದನ್ನು ನೋಡಿ ನನಗೆ ಸಮಾಧಾನವಾಗಿತ್ತು...ಸುಮಾರು ಆರು ಗಂಟೆಯ ಹೊತ್ತಿಗೆ ಆತನ ಅಮ್ಮನಿಗೆ ಏನಾದರು ಕುಡಿಯಲು ಕೊಡೋಣ ಎಂದು ಹೊರಗೆ ಹೋಗಿ ಜೂಸ್ ತಂದು ಆಕೆಯ ವಾರ್ದಿನತ್ತ ಹೆಜ್ಜೆ ಹಾಕಿದೆ... ಸದಾನಂದನ ತಾಯಿ ಕಣ್ಣು ಮಿಟುಕಿಸದೆ ನನ್ನನ್ನೇ ನೋಡುತ್ತಿದ್ದರು... ಒಂದು ಸಲ ಗಾಭರಿಯಿಂದ ನೋಡಿದೆ.. ಹತ್ತಿರ ಬಂದ ಡಾಕ್ಟರ "ಸಾರೀ ಸಾರ್" ಅಂದ... ತಲೆ ಗಿರ್ರನೆ ತಿರುಗತೊಡಗಿತು...ಕೈಯಲ್ಲಿದ್ದ ಜೂಸ್ ಲೋಟ ಧಡಾರನೆ ನೆಲಕ್ಕುರುಳಿತು... ಸದಾನಂದ ನ ಫೋನ್ ಬರುತ್ತಲೇ ಇತ್ತು...
ಈಗಲೋ ಆಗಲೋ ಮಳೆ ಬರುವಂತಿದ್ದ ಆವತ್ತು ಯಾಕೋ ಮತ್ತೆ ಮಳೆ ಯಾಗಲೇ ಇಲ್ಲ...